ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಫೆಬ್ರವರಿ 2015

ಜಪಾನೀ ಜನರಿಗೆ ಅಚ್ಚರಿಯ ಉಡುಗೊರೆ

ಜಪಾನೀ ಜನರಿಗೆ ಅಚ್ಚರಿಯ ಉಡುಗೊರೆ

ಏಪ್ರಿಲ್‌ 28, 2013ರಂದು ಜಪಾನಿನ ನಗೊಯ ನಗರದಲ್ಲಿ ಒಂದು ವಿಶೇಷ ಕೂಟ ನಡೆಯಿತು. ಅಲ್ಲಿ ನೆರೆದಿದ್ದ ಮತ್ತು ಇಂಟರ್‌ನೆಟ್‌ ಮೂಲಕ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿದವರ ಒಟ್ಟು ಸಂಖ್ಯೆ 2,10,000! ಭಾಷಣ ಕೊಡುತ್ತಿದ್ದ ಆಡಳಿತ ಮಂಡಲಿಯ ಸದಸ್ಯರಾದ ಆ್ಯಂಥನಿ ಮಾರಿಸ್‌ ಒಂದು ಪ್ರಕಟಣೆ ಮಾಡಿದಾಗ ಎಲ್ಲರ ಮುಖದಲ್ಲೂ ಆಶ್ಚರ್ಯ! ಯಾಕಿರಬಹುದು? ಜಪಾನೀ ಭಾಷೆಯ ಒಂದು ಹೊಸ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು. ಅದರ ಶೀರ್ಷಿಕೆ, “ಬೈಬಲ್‌—ಮತ್ತಾಯನು ಬರೆದ ಶುಭಸಂದೇಶ.” ನೆರೆದಿದ್ದವರಿಗೆ ಖುಷಿಯೋ ಖುಷಿ! ಎಷ್ಟೋ ಹೊತ್ತಿನ ವರೆಗೆ ಚಪ್ಪಾಳೆ ಹೊಡಿಯುತ್ತಲೇ ಇದ್ದರು.

ಜಪಾನೀ ಭಾಷೆಯ ನೂತನ ಲೋಕ ಭಾಷಾಂತರ ಬೈಬಲಿನಿಂದ ಮತ್ತಾಯನ ಸುವಾರ್ತೆಯ ಪ್ರತ್ಯೇಕವಾದ ಮರು ಮುದ್ರಣವೇ ಈ ಹೊಸ ಪುಸ್ತಕ. 128 ಪುಟಗಳ ಈ ಪುಸ್ತಕ ತುಂಬ ವಿಶೇಷವಾಗಿದೆ. ಸಹೋದರ ಮಾರಿಸ್‌ ಹೇಳಿದರು “ಜಪಾನಿನ ಹೆಚ್ಚಿನ ಜನರಿಗೆ ಇದು ಬೇಕು.” ಈ ಪುಸ್ತಕದಲ್ಲಿ ಅಂಥದ್ದೇನಿದೆ? ಇದನ್ನು ತಯಾರು ಮಾಡಿದ ಉದ್ದೇಶ ಏನು? ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ? ನೋಡೋಣ ಬನ್ನಿ.

ಇದರ ವಿಶೇಷತೆ

ಈ ಪುಸ್ತಕದ ವಿನ್ಯಾಸವನ್ನು ನೋಡಿ ಎಲ್ಲರ ಕಣ್ಣರಳಿತು. ಯಾಕೆ? ಜಪಾನೀ ಭಾಷೆಯ ಬರಹ ಹೇಗಿದೆ ಅಂದರೆ ಅದರ ಅಕ್ಷರಗಳನ್ನು ಎಡದಿಂದ ಬಲಕ್ಕೂ ಬರೆಯಬಹುದು, ಮೇಲಿಂದ ಕೆಳಕ್ಕೂ ಬರೆಯಬಹುದು. ಜಪಾನೀ ಭಾಷೆಯಲ್ಲಿ ಇಲ್ಲಿಯವರೆಗೆ ಬಂದ ನಮ್ಮ ಅನೇಕ ಪುಸ್ತಕ ಪತ್ರಿಕೆಗಳಲ್ಲಿ ಅಕ್ಷರಗಳನ್ನು ಎಡದಿಂದ ಬಲಕ್ಕೆ ಮುದ್ರಿಸಲಾಗಿತ್ತು. ಆದರೆ ಈ ಹೊಸ ಪುಸ್ತಕದಲ್ಲಿ ಅಕ್ಷರಗಳು ಮೇಲಿಂದ ಕೆಳಕ್ಕೆ ಇವೆ. ಇದೇ ಶೈಲಿಯನ್ನು ಜಪಾನಿನ ವಾರ್ತಾಪತ್ರಿಕೆಗಳಲ್ಲೂ ಪ್ರಸಿದ್ಧ ಪುಸ್ತಕಗಳಲ್ಲೂ ಬಳಸುತ್ತಾರೆ. ಜಪಾನಿನವರಿಗೆ ಹಾಗೆ ಇದ್ದರೇನೇ ಓದಲು ಸುಲಭ. ಅಷ್ಟೇ ಅಲ್ಲದೆ ಈ ಹೊಸ ಪುಸ್ತಕದಲ್ಲಿ ಯಾವುದೇ ಪುಟದಲ್ಲಿ ತಲೆಬರಹ ಇಲ್ಲ. ಬದಲಾಗಿ ಆಯಾ ಭಾಗಗಳಿಗೆ ಉಪಶೀರ್ಷಿಕೆಗಳನ್ನು ಕೊಡಲಾಗಿದೆ. ಹಾಗಾಗಿ ಮುಖ್ಯ ಅಂಶವನ್ನು ಸಲೀಸಾಗಿ ಗುರುತಿಸಬಹುದು.

ಸಹೋದರ—ಸಹೋದರಿಯರು ಈ ಹೊಸ ಪುಸ್ತಕದಿಂದ ತುಂಬ ಪ್ರಯೋಜನ ಪಡಕೊಂಡರು. 80ರ ಪ್ರಾಯದ ಸಹೋದರಿ ಹೇಳುತ್ತಾರೆ: “ಈ ಮುಂಚೆ ಬೈಬಲಿನಲ್ಲಿ ಮತ್ತಾಯ ಪುಸ್ತಕವನ್ನು ನಾನು ಸುಮಾರು ಸಾರಿ ಓದಿದ್ದೇನೆ. ಆದರೆ ಈ ಹೊಸ ಪುಸ್ತಕದ ಶೈಲಿ ಮತ್ತು ಉಪಶೀರ್ಷಿಕೆಗಳನ್ನು ವಚನಗಳ ಮಧ್ಯೆ ಕೊಟ್ಟಿರೋದು ತುಂಬ ಇಷ್ಟ ಆಯಿತು. ಈಗ ಯೇಸುವಿನ ಪರ್ವತ ಪ್ರಸಂಗ ನನಗೆ ಇನ್ನೂ ಚೆನ್ನಾಗಿ ಅರ್ಥ ಆಯಿತು.” ಯುವ ಸಹೋದರಿಯೊಬ್ಬಳು ಹೇಳುತ್ತಾಳೆ: “ನಾನು ಒಂದೇ ಸಾರಿಗೆ ಈ ಹೊಸ ಪುಸ್ತಕವನ್ನು ಓದಿ ಮುಗಿಸಿದೆ. ನನಗೆ ಹಳೆಯ ಶೈಲಿ ರೂಢಿಯಾಗಿಬಿಟ್ಟಿತ್ತು. ಆದರೆ ಈ ಹೊಸ ಶೈಲಿ ಜಪಾನಿನವರಿಗೆ ತುಂಬ ಇಷ್ಟ.”

ಜಪಾನೀ ಜನರಿಗೆಂದೇ ತಯಾರಿಸಿದ್ದು

ಬೈಬಲಿನ ಈ ಒಂದೇ ಪುಸ್ತಕದಿಂದ ಜಪಾನೀ ಜನರಿಗೆ ಹೇಗೆ ಸಹಾಯವಾಗುತ್ತದೆ? ಅಲ್ಲಿ ಹೆಚ್ಚಿನವರಿಗೆ ಬೈಬಲ್‌ ಬಗ್ಗೆ ಅಷ್ಟೇನೂ ಗೊತ್ತಿಲ್ಲದಿದ್ದರೂ ಅದನ್ನು ಓದಲು ಇಷ್ಟಪಡುತ್ತಾರೆ. ಬೈಬಲನ್ನು ಎಂದೂ ನೋಡದವರಿಗೆ ಈಗ ಆ ಪವಿತ್ರ ಗ್ರಂಥದ ಒಂದು ಭಾಗವನ್ನು ನೋಡುವ ಮತ್ತು ಓದುವ ಸೌಭಾಗ್ಯ ಸಿಕ್ಕಿದೆ.

ಮತ್ತಾಯ ಪುಸ್ತಕವನ್ನೇ ಯಾಕೆ ಮುದ್ರಿಸಲಾಯಿತು? ಜಪಾನಿನ ತುಂಬ ಜನರಿಗೆ ಬೈಬಲ್‌ ಅಂದ ತಕ್ಷಣ ನೆನಪಾಗೋದು ಯೇಸು ಕ್ರಿಸ್ತ. ಹಾಗಾಗಿಯೇ ಯೇಸುವಿನ ವಂಶಾವಳಿ, ಜನನ, ಸುಪ್ರಸಿದ್ಧ ಪರ್ವತ ಪ್ರಸಂಗ, ಕಡೇ ದಿವಸಗಳ ಕುರಿತು ಆತನು ಮುನ್ನುಡಿದ ವಿಷಯಗಳ ಬಗ್ಗೆ ಇರುವ ಮತ್ತಾಯ ಪುಸ್ತಕವನ್ನು ಆರಿಸಿಕೊಳ್ಳಲಾಯಿತು. ಈ ವಿಷಯಗಳೆಂದರೆ ಜಪಾನಿನ ಜನರಿಗೆ ತುಂಬ ಆಸಕ್ತಿ.

 ಜಪಾನಿನ ಎಲ್ಲ ಪ್ರಚಾರಕರು ಖುಷಿಖುಷಿಯಾಗಿ ಈ ಹೊಸ ಪುಸ್ತಕವನ್ನು ಮನೆ-ಮನೆ ಸೇವೆಯಲ್ಲಿ, ಪುನರ್ಭೇಟಿಗಳಲ್ಲಿ ಕೊಡುತ್ತಿದ್ದಾರೆ. ಒಬ್ಬ ಸಹೋದರಿ ಹೇಳುತ್ತಾರೆ: “ದೇವರ ವಾಕ್ಯವಾದ ಬೈಬಲನ್ನು ಮೊದಲಿಗಿಂತ ಈಗ ಹೆಚ್ಚು ಜನರಿಗೆ ಕೊಡಲು ನನ್ನಿಂದ ಆಗುತ್ತಿದೆ. ನಾನು ಈ ಪುಸ್ತಕ ಬಿಡುಗಡೆಯಾದ ಅದೇ ದಿನ ಅದನ್ನು ಒಬ್ಬರಿಗೆ ಕೊಟ್ಟೆ!”

ಜನರ ಪ್ರತಿಕ್ರಿಯೆ

ಪ್ರಚಾರಕರು ಈ ಪುಸ್ತಕವನ್ನು ಜನರಿಗೆ ಹೇಗೆ ಪರಿಚಯಿಸುತ್ತಾರೆ? ‘ಇಕ್ಕಟ್ಟಾದ ಬಾಗಿಲು’ “ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ” “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ” ಎಂಬ ವಾಕ್ಯಗಳು ಜಪಾನಿನ ಹೆಚ್ಚಿನ ಜನರಿಗೆ ಚಿರಪರಿಚಿತ. (ಮತ್ತಾ 6:34; 7:6, 13) ಈ ಮಾತುಗಳನ್ನು ಹೇಳಿದ್ದು ಯೇಸು ಎಂದು ತಿಳಿಸಿದಾಗ ಅವರಿಗೆ ಆಶ್ಚರ್ಯ. ಅದನ್ನು ಮತ್ತಾಯ ಪುಸ್ತಕದಿಂದ ತೆರೆದು ತೋರಿಸಿದಾಗ, “ನನಗೆ ಒಂದು ಸಲವಾದರೂ ಬೈಬಲ್‌ ಓದಬೇಕಂತ ಆಸೆಯಿತ್ತು” ಅನ್ನುತ್ತಾರೆ.

ಪ್ರಚಾರಕರು ಯಾರಿಗೆಲ್ಲ ಹೊಸ ಮತ್ತಾಯ ಪುಸ್ತಕ ಕೊಟ್ಟಿದ್ದರೋ ಅವರನ್ನು ಮತ್ತೆ ಭೇಟಿಯಾದರು. ಆ ಪುಸ್ತಕವನ್ನು ಕೂಡಲೇ ಓದಿದೆವೆಂದು ಮನೆಯವರು ಹೇಳಿದರು. ಪೂರ್ತಿಯಲ್ಲದಿದ್ದರೂ ಸ್ವಲ್ಪವಾದರೂ ಅವರು ಓದಿದ್ದರು. 60ರ ಪ್ರಾಯದಲ್ಲಿರುವ ವ್ಯಕ್ತಿಯೊಬ್ಬರು ಹೇಳಿದ್ದು: “ನಾನು ಇದನ್ನು ಮತ್ತೆ ಮತ್ತೆ ಓದಿದೆ. ಮನಸ್ಸಿಗೆ ನೆಮ್ಮದಿ ಸಿಕ್ಕಿತು. ದಯವಿಟ್ಟು ಬೈಬಲ್‌ ಬಗ್ಗೆ ನನಗೆ ಇನ್ನೂ ಹೆಚ್ಚು ಕಲಿಸಿ.”

ಸಾರ್ವಜನಿಕ ಸೇವೆಯಲ್ಲೂ ಈ ಪುಸ್ತಕವನ್ನು ನೀಡಲಾಗುತ್ತಿದೆ. ಹೀಗೆ ಸೇವೆ ಮಾಡುತ್ತಿರುವಾಗ ಒಬ್ಬ ಸಹೋದರಿ ಯುವ ಸ್ತ್ರೀಗೆ ಹೊಸ ಮತ್ತಾಯ ಪುಸ್ತಕವನ್ನು ಕೊಟ್ಟಳು. ಜೊತೆಗೆ ತನ್ನ ಇ-ಮೇಲ್‌ ವಿಳಾಸವನ್ನೂ ಕೊಟ್ಟಳು. ಒಂದು ತಾಸು ಆದ ಮೇಲೆ ಆ ಸ್ತ್ರೀಯಿಂದ ಇ-ಮೇಲ್‌ ಬಂತು. ‘ನಾನು ಆ ಪುಸ್ತಕದ ಕೆಲವು ಪುಟಗಳನ್ನು ಓದಿದೆ. ನನಗೆ ಇದರ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕೆಂಬ ಆಸೆಯಿದೆ’ ಎಂದು ಅವಳು ಬರೆದಿದ್ದಳು. ಒಂದು ವಾರದಲ್ಲೇ ಅವಳೊಂದಿಗೆ ಬೈಬಲ್‌ ಅಧ್ಯಯನ ಶುರು ಆಯಿತು, ಕೂಟಗಳಿಗೂ ಬರಲು ಆರಂಭಿಸಿದಳು.

“ಬೈಬಲ್‌—ಮತ್ತಾಯನು ಬರೆದ ಶುಭಸಂದೇಶ” ಪುಸ್ತಕದ ಹದಿನಾರು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಜಪಾನಿನಲ್ಲಿರುವ ಸಭೆಗಳಿಗೆ ಕಳುಹಿಸಲಾಯಿತು. ಪ್ರತಿ ತಿಂಗಳು ಸಾವಿರಾರು ಪುಸ್ತಕಗಳನ್ನು ಅವರು ಸೇವೆಯಲ್ಲಿ ಕೊಡುತ್ತಿದ್ದಾರೆ. ಆ ಪುಸ್ತಕದ ಪ್ರಕಾಶಕರ ಮನದಾಳದ ಮಾತನ್ನು ಮುನ್ನುಡಿಯಲ್ಲಿ ಹೀಗೆ ಕೊಟ್ಟಿದ್ದಾರೆ: “ಈ ಪುಸ್ತಕವು ಬೈಬಲಿನಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸಲಿ.”