“[ಪ್ರೀತಿಯ] ಜ್ವಾಲೆಯು ಉರಿಯುವ ಬೆಂಕಿಯಂತೆ. ಅದು ಯೆಹೋವನ ಜ್ವಾಲೆಯಂತೆ.”—ಪರಮ ಗೀತ 8:6, ನೂತನ ಲೋಕ ಭಾಷಾಂತರ.

1, 2. ಪರಮಗೀತ ಪುಸ್ತಕದಿಂದ ಯಾರು ಪ್ರಯೋಜನ ಪಡೆಯಬಲ್ಲರು? ಏಕೆ? (ಶೀರ್ಷಿಕೆ ಚಿತ್ರ ನೋಡಿ.)

ಅದೊಂದು ಮದುವೆ ದಿನ. ಮದುವೆ ಗಂಡುಹೆಣ್ಣು ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಾರೆ. ಅವರ ಮಧ್ಯೆ ಇರುವ ಪ್ರೀತಿ ಅಲ್ಲಿ ನೆರೆದುಬಂದವರಿಗೆ ಕಾಣಿಸುತ್ತಿದೆ. ಅವರಿಬ್ಬರು ಕೋಮಲವಾಗಿ ಕೈ ಹಿಡಿದಿರುವುದನ್ನು ಮದುವೆ ಭಾಷಣ ಕೊಟ್ಟ ಸಹೋದರ ಗಮನಿಸುತ್ತಾನೆ. ಸಹೋದರನ ಮನಸ್ಸಲ್ಲಿ ಈ ಪ್ರಶ್ನೆಗಳು ಬರುತ್ತವೆ: ‘ವರ್ಷಗಳು ಕಳೆದಂತೆ ಇವರ ಪ್ರೀತಿ ಹೆಚ್ಚಾಗಬಹುದಾ? ನಿಧಾನವಾಗಿ ಕಡಿಮೆಯಾಗಬಹುದಾ?’ ಗಂಡ ಹೆಂಡತಿ ಮಧ್ಯೆ ನಿಜ ಪ್ರೀತಿ ಇದ್ದರೆ ಎಂಥ ದೊಡ್ಡ ಸಮಸ್ಯೆ ಬಂದರೂ ಅವರು ಬೇರೆಬೇರೆ ಆಗುವುದಿಲ್ಲ. ಆದರೆ ಅನೇಕರ ದಾಂಪತ್ಯದಲ್ಲಿ ಸಂತೋಷ ಕಡಿಮೆಯಾಗುತ್ತಾ, ಕಡೆಗೊಂದು ದಿನ ಅವರ ಸಂಬಂಧ ಮುರಿದು ಬೀಳುತ್ತದೆ. ಆದ್ದರಿಂದ ನಿಮಗೂ ಈ ಪ್ರಶ್ನೆ ಬರಬಹುದು: ‘ಪ್ರೀತಿ ನಿಜವಾಗಲೂ ಶಾಶ್ವತವಾಗಿ ಉಳಿಯುತ್ತದಾ?’

2 ರಾಜ ಸೊಲೊಮೋನನ ಕಾಲದಲ್ಲೂ ನಿಜ ಪ್ರೀತಿ ಅಪರೂಪ ಆಗಿತ್ತು. ಯಾಕೆ? “ಸಹಸ್ರ ಪುರುಷರಲ್ಲಿ ಯೋಗ್ಯನೊಬ್ಬನನ್ನು ಕಂಡಿದ್ದರೂ ಕಂಡಿರಬಹುದು; ಸಹಸ್ರಸ್ತ್ರೀಯರಲ್ಲಿ ಯೋಗ್ಯಳೊಬ್ಬಳನ್ನೂ ಕಂಡಿಲ್ಲ. ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ; ಇದನ್ನು ಮಾತ್ರ ಕಂಡೆನು” ಎಂದು ಸೊಲೊಮೋನನೇ ಹೇಳಿದ್ದಾನೆ. (ಪ್ರಸಂ. 7:26-29) ಇಸ್ರಾಯೇಲ್ಯರ ಮಧ್ಯೆ ಬಾಳನನ್ನು ಆರಾಧಿಸುತ್ತಿದ್ದ ಅನೈತಿಕ ಪರದೇಶಿ ಸ್ತ್ರೀಯರಿದ್ದರು. ಹಾಗಾಗಿ ಇಸ್ರಾಯೇಲ್ಯ ಸ್ತ್ರೀಪುರುಷರ  ನಡತೆಯೂ ಹಾಳಾಗಿ ಹೋಗಿತ್ತು. ಹೀಗಾಗುವುದಕ್ಕಿಂತ 20 ವರ್ಷ ಮುಂಚೆಯೇ ಸೊಲೊಮೋನ ಒಂದು ಗಂಡುಹೆಣ್ಣಿನ ನಡುವೆ ಇದ್ದ ನಿಜ ಪ್ರೀತಿಯ ಬಗ್ಗೆ ಕವಿತೆ ಬರೆದಿದ್ದನು. ನಮಗೆ ಮದುವೆಯಾಗಿರಲಿ ಇಲ್ಲದಿರಲಿ ನಿಜ ಪ್ರೀತಿ ಅಂದರೇನು, ಅದನ್ನು ಹೇಗೆ ತೋರಿಸಬೇಕು ಎಂದು ತಿಳಿಯಲು ಪರಮಗೀತ ಪುಸ್ತಕ ಸಹಾಯ ಮಾಡುತ್ತದೆ.

ನಿಜ ಪ್ರೀತಿ ಸಾಧ್ಯ!

3. ಗಂಡುಹೆಣ್ಣಿನ ನಡುವೆ ನಿಜ ಪ್ರೀತಿ ಸಾಧ್ಯ ಏಕೆ?

3 ನೂತನ ಲೋಕ ಭಾಷಾಂತರದಲ್ಲಿ ಪರಮಗೀತ 8:6 ಹೀಗನ್ನುತ್ತದೆ: “[ಪ್ರೀತಿಯ] ಜ್ವಾಲೆಯು ಉರಿಯುವ ಬೆಂಕಿಯಂತೆ. ಅದು ಯೆಹೋವನ ಜ್ವಾಲೆಯಂತೆ.” ಪ್ರೀತಿಯನ್ನು ಯಾಕೆ “ಯೆಹೋವನ ಜ್ವಾಲೆ”ಗೆ ಹೋಲಿಸಲಾಗಿದೆ? ಏಕೆಂದರೆ ಯೆಹೋವನ ಅತಿ ದೊಡ್ಡ ಗುಣ ಪ್ರೀತಿ. ಆತನು ನಮ್ಮನ್ನು ಸೃಷ್ಟಿಸಿದಾಗ ತನ್ನ ಪ್ರೀತಿಯನ್ನು ಅನುಕರಿಸುವ ಸಾಮರ್ಥ್ಯ ಕೊಟ್ಟನು. (ಆದಿ. 1:26, 27) ಮೊದಲ ಮನುಷ್ಯ ಆದಾಮನನ್ನು ಸೃಷ್ಟಿಸಿದ ಮೇಲೆ ಯೆಹೋವನು ಅವನಿಗೆ ಸುಂದರ ಹೆಂಡತಿಯನ್ನು ಕೊಟ್ಟನು. ಆದಾಮನಿಗೆ ಎಷ್ಟು ಖುಷಿ ಆಯಿತೆಂದರೆ ತನ್ನ ಭಾವನೆಗಳನ್ನು ವರ್ಣಿಸದೇ ಇರಲು ಅವನಿಂದ ಆಗಲಿಲ್ಲ. ಹವ್ವಳಿಗೂ ಆದಾಮನ ಕಡೆಗೆ ಅದೇ ಆಪ್ತ ಭಾವನೆ ಇತ್ತು. ಎಷ್ಟೆಂದರೂ ಯೆಹೋವನು ಹವ್ವಳನ್ನು ಸೃಷ್ಟಿ ಮಾಡಿದ್ದು ಆದಾಮನಿಂದ ತಾನೇ! (ಆದಿ. 2:21-23) ಹೀಗೆ ಗಂಡುಹೆಣ್ಣಿನ ನಡುವೆ ನಿಜವಾದ ಹಾಗೂ ಶಾಶ್ವತ ಪ್ರೀತಿ ಇರುವಂತೆ ಆರಂಭದಿಂದಲೇ ಯೆಹೋವನು ಸಾಧ್ಯ ಮಾಡಿದನು.

4, 5. ಪರಮಗೀತ ಪುಸ್ತಕದಲ್ಲಿರುವ ಕಥೆಯನ್ನು ಚುಟುಕಾಗಿ ಹೇಳಿ.

4 ಗಂಡುಹೆಣ್ಣಿನ ನಡುವಿನ ಪ್ರೀತಿಯನ್ನು ಪರಮಗೀತ ಪುಸ್ತಕದಲ್ಲಿ ತುಂಬ ಚೆನ್ನಾಗಿ ವರ್ಣಿಸಲಾಗಿದೆ. ಶೂನೇಮ್‌ ಅಥವಾ ಶೂಲಮ್‌ ಎಂಬ ಹಳ್ಳಿಯ ಹುಡುಗಿ ಮತ್ತು ಕುರುಬನ ನಡುವಿನ ಪ್ರೇಮದ ಕುರಿತ ಗೀತೆ ಅದು. ಇವರ ಕಥೆ ಹೀಗಿದೆ: ರಾಜ ಸೊಲೊಮೋನ ಮತ್ತು ಅವನ ಸೈನಿಕರು ಪಾಳೆಯ ಹೂಡಿದ್ದ ಜಾಗದ ಹತ್ತಿರದಲ್ಲೇ ಈ ಹುಡುಗಿಯ ಅಣ್ಣಂದಿರ ದ್ರಾಕ್ಷೆ ತೋಟ ಇತ್ತು. ಅವಳು ಅಲ್ಲಿ ಕೆಲಸ ಮಾಡುತ್ತಿದ್ದಳು. ಸೊಲೊಮೋನ ಅವಳನ್ನು ನೋಡಿ ಪಾಳೆಯಕ್ಕೆ ಕರಕೊಂಡು ಬರುವಂತೆ ಸೇವಕರಿಗೆ ಹೇಳಿದನು. ಅವಳು ಬಂದ ಮೇಲೆ ಅವಳ ಸೌಂದರ್ಯವನ್ನು ಹೊಗಳಿ ಆಕೆಗೆ ಉಡುಗೊರೆಗಳನ್ನೂ ಕೊಟ್ಟನು. ಆದರೆ ಈ ಹಳ್ಳಿ ಹುಡುಗಿ ಕುರುಬನನ್ನು ಪ್ರೀತಿಸುತ್ತಿದ್ದಳು. ಅವನ ಜೊತೆಯೇ ಇರುತ್ತೇನೆಂದು ಹಠಹಿಡಿದಳು. (ಪರಮ. 1:4-14) ಅವಳನ್ನು ಹುಡುಕಿಕೊಂಡು ಕುರುಬನು ಪಾಳೆಯಕ್ಕೆ ಬಂದನು. ಅಲ್ಲಿ ಇಬ್ಬರೂ ತಮ್ಮ ಪ್ರೇಮವನ್ನು ಸೊಗಸಾದ ಮಾತುಗಳಲ್ಲಿ ವ್ಯಕ್ತಪಡಿಸಿದರು.—ಪರಮ. 1:15-17.

5 ಸೊಲೊಮೋನ ಯೆರೂಸಲೇಮಿಗೆ ವಾಪಸ್‌ ಹೋದಾಗ ಈ ಯುವತಿಯನ್ನು ಜೊತೆಯಲ್ಲಿ ಕರಕೊಂಡು ಹೋದನು. ಕುರುಬ ಅವಳನ್ನು ಹಿಂಬಾಲಿಸಿ ಹೋದನು. (ಪರಮ. 4:1-5, 8, 9) ಸೊಲೊಮೋನ ಏನೇ ಹೇಳಿದರೂ, ಏನೇ ಮಾಡಿದರೂ ಕುರುಬನ ಮೇಲೆ ಆ ಯುವತಿಗಿದ್ದ ಪ್ರೀತಿ ಕಿಂಚಿತ್ತೂ ಕಮ್ಮಿಯಾಗಲಿಲ್ಲ. (ಪರಮ. 6:4-7; 7:1-10) ಆದ್ದರಿಂದ ಅವಳು ಮನೆಗೆ ಹೋಗುವಂತೆ ಸೊಲೊಮೋನ ಬಿಟ್ಟನು. ಆಗ ಅವಳು ತನ್ನ ಇನಿಯನಿಗೆ “ಪ್ರಾಯದ ಎರಳೆ” ಹಾಗೆ ಓಡೋಡಿ ಬರುವಂತೆ ಹೇಳಿದಳು.—ಪರಮ. 8:14.

6. ಪರಮಗೀತ ಪುಸ್ತಕದಲ್ಲಿ ಯಾರು ಮಾತಾಡುತ್ತಿದ್ದಾರೆಂದು ತಿಳಿಯಲು ಯಾಕೆ ಕಷ್ಟವಾಗಬಹುದು?

6 ಪರಮಗೀತ ಪುಸ್ತಕದಲ್ಲಿರುವ ಹಾಡು ತುಂಬ ಸುಂದರವಾದದ್ದು. ಅದಕ್ಕೆ ಅದನ್ನು “ಪರಮ” ಗೀತ ಎಂದು ಹೇಳಿರುವುದು. (ಪರಮ. 1:1) ಆದರೆ ಈ ಗೀತೆಯಲ್ಲಿನ ಪಾತ್ರಧಾರಿಗಳ ಮಾತು ಬರುವ ಮುಂಚೆ ಸೊಲೊಮೋನ ಅವರ ಹೆಸರುಗಳನ್ನು ಕೊಟ್ಟಿಲ್ಲ. ಹೀಗೆ ಹೆಚ್ಚು ವಿವರ ಕೊಡದೇ ಆ ಗೀತೆಯ ಕಾವ್ಯಾತ್ಮಕ ಶೈಲಿಯನ್ನು ಉಳಿಸಿದ್ದಾನೆ. ಗೀತೆಯಲ್ಲಿ ಹೆಸರುಗಳು ಇಲ್ಲದಿದ್ದರೂ ಯಾರು ಮಾತಾಡುತ್ತಿದ್ದಾರೆಂದು ಅದರ ಪದಗಳಿಂದ ಗೊತ್ತಾಗುತ್ತದೆ.

“ನಿನ್ನ ಲಾಲನೆಯು ದ್ರಾಕ್ಷಾರಸಕ್ಕಿಂತಲೂ ಮೇಲು”

7, 8. ಕುರುಬ ಮತ್ತು ಯುವತಿ ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದರು? ಉದಾಹರಣೆಗಳನ್ನು ಕೊಡಿ.

7 ಆ ಯುವತಿ ಮತ್ತು ಕುರುಬನು ತಮ್ಮ ಪ್ರೀತಿಯನ್ನು ಸುಂದರ ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ. ಅವರು ಬಳಸಿದ “ಲಾಲನೆ” ಅಥವಾ ಪ್ರೀತಿಯ ಕೆಲವೊಂದು ಮಾತುಗಳು ನಮಗೆ ಒಂಥರಾ ಅನಿಸಬಹುದು.  (ಪರಮ. 1:2) ಏಕೆಂದರೆ ಅವುಗಳನ್ನು ಬರೆದದ್ದು 3,000 ವರ್ಷಗಳ ಹಿಂದೆ. ಅವರ ಸಂಸ್ಕೃತಿ ನಮ್ಮದ್ದಕ್ಕಿಂತ ತುಂಬ ಭಿನ್ನವಾಗಿತ್ತು. ಆದರೂ ಈ ಜೋಡಿಯ ಭಾವನೆಗಳು ನಮಗೆ ಅರ್ಥವಾಗುತ್ತವೆ. ಉದಾಹರಣೆಗೆ ಕುರುಬನು ಯುವತಿಯ ಕಣ್ಣುಗಳನ್ನು ‘ಪಾರಿವಾಳಗಳ’ ಕಣ್ಣುಗಳಿಗೆ ಹೋಲಿಸುತ್ತಾನೆ. ಇದರರ್ಥ ಅವಳ ಕಣ್ಣುಗಳಲ್ಲಿ ತೋರಿಬರುತ್ತಿದ್ದ ದಯೆಯನ್ನು ಅವನು ಪ್ರೀತಿಸಿದನು. (ಪರಮ. 1:15) ಯುವತಿ ಸಹ ಕುರುಬನ ಕಣ್ಣುಗಳು ಪಾರಿವಾಳದಂತೆ ಸುಂದರ ಎಂದು ಹೇಳುತ್ತಾಳೆ. (ಪರಮ ಗೀತ 5:12 ಓದಿ.) ಅವನ ಕಣ್ಣುಗಳು ಶುಭ್ರ ಹಾಲಿನಲ್ಲಿ ಸ್ನಾನ ಮಾಡುತ್ತಿರುವ ನೀಲಿ-ಬೂದು ಬಣ್ಣದ ಪಾರಿವಾಳಗಳಂತೆ ಅವಳಿಗೆ ಕಂಡುಬಂದವು.

8 ಯುವತಿ ಮತ್ತು ಕುರುಬ ಒಬ್ಬರಿನ್ನೊಬ್ಬರ ರೂಪವನ್ನು ಮಾತ್ರ ಹೊಗಳಲಿಲ್ಲ. ಗುಣಗಳನ್ನೂ ಹೊಗಳಿದರು. ಉದಾಹರಣೆಗೆ ಯುವತಿಯು ದಯೆಯಿಂದ ಬೇರೆಯವರ ಜೊತೆ ಮಾತಾಡುವುದನ್ನು ಕುರುಬ ತುಂಬ ಇಷ್ಟಪಡುತ್ತಿದ್ದ. (ಪರಮ ಗೀತ 4:7, 11 ಓದಿ.) ಅದಕ್ಕೇ “ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಹಾಲೂ ನಿನ್ನ ನಾಲಿಗೆಯೊಳಗಿವೆ” ಎಂದು ಹೇಳಿದನು. ಅವಳ ಮಾತುಗಳು ಕುರುಬನಿಗೆ ಹಾಲುಜೇನಿನಷ್ಟು ಚೆನ್ನಾಗಿದ್ದವು, ಸಿಹಿಯಾಗಿದ್ದವು. ಕುರುಬನು “ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ” ಎಂದು ಹೇಳಿದಾಗ ಬರೀ ಅವಳ ಹೊರಗಿನ ಸೌಂದರ್ಯವನ್ನು ವರ್ಣಿಸುತ್ತಿರಲಿಲ್ಲ, ಅವಳಲ್ಲಿದ್ದ ಅಮೂಲ್ಯ ಗುಣಗಳ ಬಗ್ಗೆಯೂ ಹೇಳುತ್ತಿದ್ದನು.

9. (ಎ) ಗಂಡಹೆಂಡತಿಯ ಪ್ರೀತಿಯಲ್ಲಿ ಏನೆಲ್ಲ ಒಳಗೂಡಿದೆ? (ಬಿ) ಗಂಡಹೆಂಡತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಏಕೆ ಪ್ರಾಮುಖ್ಯ?

9 ಯೆಹೋವನ ಸೇವಕರಾಗಿರುವ ದಂಪತಿಗಳಿಗೆ ಮದುವೆ ಎಂದರೆ ಕಾಗದದ ಮೇಲಿರುವ ಒಪ್ಪಂದ ಮಾತ್ರ ಅಲ್ಲ. ಗಂಡಹೆಂಡತಿ ಒಬ್ಬರನ್ನೊಬ್ಬರು ನಿಜವಾಗಲೂ ಪ್ರೀತಿಸುತ್ತಾರೆ, ಅದನ್ನು ವ್ಯಕ್ತಪಡಿಸುತ್ತಾರೆ. ಅದು ಎಂಥ ಪ್ರೀತಿ ಆಗಿರಬೇಕು? ಬೈಬಲ್‌ ಕಲಿಸುವಂತೆ ಎಲ್ಲರ ಮೇಲೆ ಇರಬೇಕಾದ ನಿಸ್ವಾರ್ಥ ಪ್ರೀತಿ ಆಗಿರಬೇಕಾ? (1 ಯೋಹಾ. 4:8) ಕುಟುಂಬದವರ ಮೇಲಿರುವಂಥ ಸ್ವಾಭಾವಿಕ ಪ್ರೀತಿ ಆಗಿರಬೇಕಾ? ಇಬ್ಬರು ಸ್ನೇಹಿತರ ಮಧ್ಯೆ ಇರುವಂಥ ಆಪ್ತತೆ ಆಗಿರಬೇಕಾ? (ಯೋಹಾ. 11:3) ಅಥವಾ ಗಂಡುಹೆಣ್ಣಿನ ನಡುವಿನ ಪ್ರೇಮ ಆಗಿರಬೇಕಾ? (ಜ್ಞಾನೋ. 5:15-20) ಈ ಎಲ್ಲ ರೀತಿಯ ಪ್ರೀತಿ ಗಂಡಹೆಂಡತಿಯಾಗಿ ನಿಮ್ಮ ಮಧ್ಯೆ ಇರಬೇಕು. ಅದೇ ನಿಜ ಪ್ರೀತಿ. ಈ ಪ್ರೀತಿಯನ್ನು ನಿಮ್ಮ ಮಾತು ಮತ್ತು ಕ್ರಿಯೆಗಳಲ್ಲಿ ತೋರಿಸಿ. ನಿಮಗೆ ಕೆಲಸ ಎಷ್ಟೇ ಇರಲಿ ಇದನ್ನು ಮಾಡುವುದು ತುಂಬ ಮುಖ್ಯ. ಆಗ ನಿಮ್ಮ ದಾಂಪತ್ಯದಲ್ಲಿ ಸಂತೋಷ ಇರುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಗಂಡುಹೆಣ್ಣಿಗೆ ಒಬ್ಬರಿನ್ನೊಬ್ಬರ ಪರಿಚಯ ಆಗುವುದು ಮದುವೆಯ ನಂತರವೇ. ಸಮಯ ಕಳೆದಂತೆ ಒಬ್ಬರಿನ್ನೊಬ್ಬರ ಪರಿಚಯ ಆಗುತ್ತಾ ಹೋದಂತೆ ಅವರ ಪ್ರೀತಿ ಹೆಚ್ಚಾಗುತ್ತದೆ. ಈ ಪ್ರೀತಿಯನ್ನು ಅವರಿಬ್ಬರು ಮಾತಲ್ಲಿ ವ್ಯಕ್ತಪಡಿಸಬೇಕು. ಹೀಗೆ ಅವರಿಬ್ಬರು ಹತ್ತಿರವಾಗುವರು ಮತ್ತು ಅವರ ದಾಂಪತ್ಯ ಬಲಗೊಳ್ಳುವುದು.

10. ಪ್ರೀತಿಯನ್ನು ವ್ಯಕ್ತಪಡಿಸುವುದು ಇನ್ಯಾವ ರೀತಿಯಲ್ಲಿ ದಾಂಪತ್ಯವನ್ನು ಬಲಗೊಳಿಸುತ್ತದೆ?

10 ದಂಪತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ಅವರ ಬಂಧ ಇನ್ನೊಂದು ರೀತಿಯಲ್ಲೂ ಬಲಗೊಳ್ಳುತ್ತದೆ. ಸೊಲೊಮೋನ ಬರೆದ ಗೀತೆಯಲ್ಲಿ ಯುವತಿಗೆ “ಬೆಳ್ಳಿಯ ತಿರುಪಿನ ಜಡೆ ಬಂಗಾರಗಳನ್ನು” ಕೊಡುತ್ತೇನೆ ಎಂದು ಹೇಳಿದನು. ಅವಳನ್ನು “ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು” ಎಂದು ವರ್ಣಿಸಿ ಹೊಗಳಿದನು. (ಪರಮ. 1:9-11; 6:10) ಆದರೆ ಯುವತಿ ಈಗಾಗಲೇ ಕುರುಬನನ್ನು ನಿಜವಾಗಿ ಪ್ರೀತಿಸುತ್ತಿದ್ದಳು. ಆ ಕುರುಬನಿಗೆ ನಿಷ್ಠಳಾಗಿ ಉಳಿಯಲು ಯುವತಿಗೆ ಯಾವುದು ಸಹಾಯಮಾಡಿತು? ಅವನಿಂದ ದೂರವಿದ್ದಾಗ ಅವಳಿಗೆ ಸಮಾಧಾನ ತಂದದ್ದು ಯಾವುದು? (ಪರಮ ಗೀತ 1:2, 3 ಓದಿ.) ಅವನ ಪ್ರೀತಿಯ ಮಾತುಗಳು ಅವಳಿಗೆಷ್ಟು ಖುಷಿ ತರುತ್ತಿತ್ತೆಂದು ನೆನಪಿಸಿಕೊಂಡಳು. ಆ ಮಾತುಗಳು ‘ದ್ರಾಕ್ಷಾರಸಕ್ಕಿಂತಲೂ ಮೇಲಾಗಿದ್ದವು.’ ಅವಳು ಸೊಲೊಮೋನನ ಅರಮನೆಯಲ್ಲಿದ್ದಾಗ ಕುರುಬನ ಮಾತುಗಳು ತಲೆಗೆ ಹಾಕುವ ‘ಸುಗಂಧ ತೈಲದಂತೆ’ ಅವಳಿಗೆ ಸಮಾಧಾನ ಕೊಟ್ಟವು. (ಕೀರ್ತ. 23:5; 104:15) ಹಾಗೆಯೇ ಗಂಡಹೆಂಡತಿ ಸಹ ತಮ್ಮ ಪ್ರೀತಿಯನ್ನು ಮಾತುಗಳಲ್ಲಿ ಆಗಾಗ ವ್ಯಕ್ತಪಡಿಸುವುದು ತುಂಬ ಮುಖ್ಯ. ಈ ಮಾತುಗಳ ಸವಿನೆನಪು ಅವರಿಬ್ಬರ ಮಧ್ಯೆ ಇರುವ ಪ್ರೀತಿ ಗಾಢವಾಗಿ ಉಳಿಯಲು ನೆರವಾಗುತ್ತದೆ. ಅವರ ದಾಂಪತ್ಯವನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡುತ್ತದೆ.

 ‘ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಸಬೇಡಿ’

11. ಸೊಲೊಮೋನನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಶೂಲಮ್‍ನ ಯುವತಿ ಹೇಳಿದ ಮಾತುಗಳಿಂದ ನಾವೇನು ಕಲಿಯಬಲ್ಲೆವು?

11 ನಿಮಗೆ ಮದುವೆಯಾಗುವ ಯೋಚನೆ ಇದ್ದರೆ ಶೂಲಮ್‍ನ ಯುವತಿಯಿಂದ ಏನು ಕಲಿಯಬಲ್ಲಿರಿ? ಅವಳಿಗೆ ರಾಜ ಸೊಲೊಮೋನನ ಮೇಲೆ ಸ್ವಲ್ಪವೂ ಪ್ರೀತಿ ಹುಟ್ಟಲಿಲ್ಲ. ಅರಮನೆಯಲ್ಲಿದ್ದ ಸ್ತ್ರೀಯರಿಗೆ ತನ್ನಲ್ಲಿ ‘ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬೇಡಿ’ ಎಂದು ದೃಢವಾಗಿ ಹೇಳಿದಳು ಸಹ. (ಪರಮ. 2:7; 3:5) ಹಾಗಾಗಿ ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ‘ಇವನೇ/ಇವಳೇ ನನಗೆ ಸರಿಯಾದ ಜೋಡಿ’ ಎಂದು ನೆನಸಿ ಪ್ರೀತಿ ಬೆಳೆಸಿಕೊಳ್ಳಬೇಡಿ. ನೀವು ನಿಜವಾಗಿ ಪ್ರೀತಿಸಬಹುದಾದ ವ್ಯಕ್ತಿ ಸಿಗುವ ವರೆಗೂ ತಾಳ್ಮೆಯಿಂದ ಕಾದು ಮದುವೆಯಾಗಿ. ಅದೇ ವಿವೇಕ.

12. ಶೂಲಮ್‍ನ ಯುವತಿ ಕುರುಬನನ್ನು ಏಕೆ ಪ್ರೀತಿಸಿದಳು?

12 ಆ ಯುವತಿ ಕುರುಬನನ್ನು ಏಕೆ ಪ್ರೀತಿಸಿದಳು? ಅವನು “ಜಿಂಕೆಯಂತೆ” ಸುಂದರನು ಎಂದು ಹೇಳಿದಳು. ಅವನ ಕೈಗಳೆಷ್ಟು ಬಲಿಷ್ಠ ಆಗಿದ್ದವೆಂದರೆ ಅವುಗಳನ್ನು ‘ಬಂಗಾರದ ಸಲಾಕಿಗಳು’ ಎಂದು ಕರೆದಳು. ಅವನ ಕಾಲುಗಳು ಎಷ್ಟು ಸುಂದರ, ಗಟ್ಟಿಮುಟ್ಟಾಗಿದ್ದವೆಂದರೆ “ಚಂದ್ರಕಾಂತಸ್ತಂಭ”ಗಳಿಗೆ ಹೋಲಿಸಿದಳು. ಕುರುಬ ನೋಡಲು ಚೆನ್ನಾಗಿದ್ದದ್ದು ಮಾತ್ರವಲ್ಲ ಅವನಿಗೆ ಯೆಹೋವನ ಮೇಲೆ ಪ್ರೀತಿಯಿತ್ತು ಮತ್ತು ಅವನಲ್ಲಿ ಅಮೂಲ್ಯ ಗುಣಗಳಿವೆ ಎಂದು ಅವಳಿಗೆ ಗೊತ್ತಿತ್ತು. ಆದ್ದರಿಂದಲೇ ಅವನು ಅವಳಿಗೆ ವಿಶೇಷವಾಗಿದ್ದ. ಅವನನ್ನು “ಉದ್ಯಾನ ವೃಕ್ಷಗಳಲ್ಲಿ ಸೇಬು” ಎಂದು ಕರೆದಳು.—ಪರಮ. 2:3, 9; 5:14, 15.

13. ಶೂಲಮ್‍ನ ಯುವತಿಯನ್ನು ಕುರುಬ ಪ್ರೀತಿಸಿದ್ದೇಕೆ?

13 ಶೂಲಮ್‍ನ ಯುವತಿ ನೋಡಲು ತುಂಬ ಚೆನ್ನಾಗಿದ್ದಳು. “ಅರುವತ್ತು ಮಂದಿ ರಾಣಿಯರೂ ಎಂಭತ್ತು ಜನ ಉಪಪತ್ನಿಯರೂ ಲೆಕ್ಕವಿಲ್ಲದ ಯುವತಿಯರೂ” ಇದ್ದರೂ ಸೊಲೊಮೋನ ಇವಳ ಅಂದಕ್ಕೆ ಮನಸೋತಿದ್ದ. ಕುರುಬ ಸಹ ಅವಳನ್ನು ಪ್ರೀತಿಸಿದ್ದು ರೂಪ ನೋಡಿ ಮಾತ್ರನಾ? ಇಲ್ಲ. ಅವಳಿಗೂ ಯೆಹೋವನ ಮೇಲೆ ಪ್ರೀತಿಯಿತ್ತು ಮತ್ತು ಅಮೂಲ್ಯ ಗುಣಗಳಿದ್ದವು. ಉದಾಹರಣೆಗೆ ಅವಳಲ್ಲಿ ದೀನ ಗುಣ ಇತ್ತು. ತನ್ನನ್ನು “ಬೈಲಿನ ನೆಲಸಂಪಿಗೆ”ಯಂಥ ಸಾಮಾನ್ಯ ಹೂವಿಗೆ ಹೋಲಿಸಿಕೊಂಡಳು. ಆದರೆ ಕುರುಬನಿಗೆ ಅವಳು ತುಂಬ ವಿಶೇಷವಾಗಿದ್ದಳು. ಅದಕ್ಕೆ ಅವನು ಅವಳನ್ನು “ಮುಳ್ಳುಗಳ ಮಧ್ಯದಲ್ಲಿನ ತಾವರೆ”ಗೆ ಹೋಲಿಸಿದನು.—ಪರಮ. 2:1, 2; 6:8.

14. ನೀವು ಮದುವೆ ಆಗಬೇಕೆಂದಿದ್ದರೆ ಕುರುಬ ಮತ್ತು ಯುವತಿಯಿಂದ ಏನು ಕಲಿಯಬಹುದು?

14 ‘ಕರ್ತನಲ್ಲಿರುವವರನ್ನು ಮಾತ್ರ’ ಮದುವೆಯಾಗಬೇಕು ಎಂದು ಯೆಹೋವನು ತನ್ನ ಸೇವಕರಿಗೆ ಆಜ್ಞೆ ಕೊಟ್ಟಿದ್ದಾನೆ. (1 ಕೊರಿಂ. 7:39) ಆದ್ದರಿಂದ ನಾವು ದೀಕ್ಷಾಸ್ನಾನ ಆಗಿರುವ ಯೆಹೋವನ ಸೇವಕರನ್ನೇ ಬಾಳ ಸಂಗಾತಿಯಾಗಿ ಆಯ್ಕೆ ಮಾಡಬೇಕು ಅಥವಾ ಮದುವೆಯಾಗಬೇಕು. ಇದರಿಂದ ವೈವಾಹಿಕ ಜೀವನಕ್ಕೆ ಹೇಗೆ ಸಹಾಯವಾಗುವುದು? ಗಂಡಹೆಂಡತಿ ದಿನನಿತ್ಯ ಸಮಸ್ಯೆಗಳನ್ನಂತೂ ಎದುರಿಸಲೇಬೇಕಾಗುತ್ತದೆ.  ಆದರೆ ಅವರಿಬ್ಬರಿಗೂ ಯೆಹೋವನ ಜೊತೆ ಆಪ್ತ ಸಂಬಂಧ ಇದ್ದರೆ ಅವರ ವಿವಾಹ ಜೀವನದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ. ಆದ್ದರಿಂದ ನೀವು ಮದುವೆ ಆಗಬೇಕೆಂದಿರುವಲ್ಲಿ ಕುರುಬ ಮತ್ತು ಆ ಯುವತಿಯ ಮಾದರಿಯನ್ನು ಅನುಕರಿಸಿ. ಯಾರಲ್ಲಿ ಅಮೂಲ್ಯ ಗುಣಗಳಿವೆಯೊ ಯಾರು ಯೆಹೋವನನ್ನು ನಿಜವಾಗಿ ಪ್ರೀತಿಸುತ್ತಾರೊ ಅಂಥ ವ್ಯಕ್ತಿಯನ್ನೇ ಆಯ್ಕೆ ಮಾಡಿ.

ದೀಕ್ಷಾಸ್ನಾನ ಪಡೆದಿರದ ವ್ಯಕ್ತಿ ಮೇಲೆ ಕ್ರೈಸ್ತರು ಪ್ರೀತಿ ಬೆಳೆಸಿಕೊಳ್ಳುವುದಿಲ್ಲ, ಮದುವೆಯೂ ಆಗುವುದಿಲ್ಲ (ಪ್ಯಾರ 14 ನೋಡಿ)

“ನನ್ನ ಮದಲಗಿತ್ತಿಯು, ಅಗುಳಿಹಾಕಿದ ಉದ್ಯಾನ”

15. ಶೂಲಮ್‌ ಯುವತಿ ತೋರಿಸಿದ ನಿಷ್ಠೆಯಿಂದ ಅವಿವಾಹಿತ ಕ್ರೈಸ್ತ ಜೋಡಿಗಳು ಯಾವ ಪಾಠ ಕಲಿಯಬಹುದು?

15 ಪರಮ ಗೀತ 4:12 ಓದಿ. ಕುರುಬ ಶೂಲಮ್‌ ಯುವತಿಯನ್ನು “ಅಗುಳಿಹಾಕಿದ ಉದ್ಯಾನ” ಎಂದು ಯಾಕೆ ಕರೆದನು? ಅಗುಳಿಹಾಕಿದ ಅಥವಾ ಬೇಲಿ ಹಾಕಿದ ತೋಟದಲ್ಲಿ ಯಾರು ಬೇಕೊ ಅವರು ಒಳಗೆ ಹೋಗಲು ಆಗುವುದಿಲ್ಲ. ಆ ಯುವತಿಯೂ ಹಾಗೇ ಇದ್ದಳು. ಅವಳು ಕುರುಬನನ್ನು ಮಾತ್ರ ಪ್ರೀತಿಸುತ್ತಿದ್ದಳು. ಅವನನ್ನೇ ಮದುವೆಯಾಗಬೇಕು ಎಂದು ತೀರ್ಮಾನ ಮಾಡಿದ್ದರಿಂದ ರಾಜ ಅವಳ ಪ್ರೀತಿಯನ್ನು ಪಡೆಯಲು ಎಷ್ಟೇ ಪ್ರಯತ್ನಪಟ್ಟರೂ ಅವನಿಗೆ ಮರುಳಾಗಲಿಲ್ಲ, ಮನಸ್ಸು ಬದಲಾಯಿಸಲಿಲ್ಲ. ಅವಳು “ಕೋಟೆ”ಯಂತಿದ್ದಳು. ಸುಲಭವಾಗಿ ತೆರೆಯುವ ‘ಬಾಗಿಲಂತೆ’ ಇರಲಿಲ್ಲ. (ಪರಮ. 8:8-10) ಇಂದು ಸಹ ಮದುವೆಯಾಗಲು ತೀರ್ಮಾನಿಸಿರುವ ಕ್ರೈಸ್ತ ಜೋಡಿ ಒಬ್ಬರಿಗೊಬ್ಬರು ನಿಷ್ಠರಾಗಿರುತ್ತಾರೆ. ತಮ್ಮ ಪ್ರೀತಿಯನ್ನು ಬೇರೆಯವರಿಗೆ ಕೊಡದಂತೆ ಎಚ್ಚರ ವಹಿಸುತ್ತಾರೆ.

16. ನೀವು ಮದುವೆಯಾಗಲು ನಿರ್ಧರಿಸಿರುವ ವ್ಯಕ್ತಿಯನ್ನು ಭೇಟಿಯಾಗುತ್ತಿದ್ದರೆ ಪರಮಗೀತ ಪುಸ್ತಕದಿಂದ ಏನು ಕಲಿಯಬಹುದು?

16 ಕುರುಬನು ಆ ಯುವತಿಗೆ ಸ್ವಲ್ಪ ತಿರುಗಾಡಿಕೊಂಡು ಬರೋಣ ಬಾ ಎಂದು ಕರೆದನು. ಆದರೆ ಅವಳ ಅಣ್ಣಂದಿರು ಹೋಗಲು ಬಿಡಲಿಲ್ಲ. ದ್ರಾಕ್ಷೆತೋಟ ಕಾಯಲು ಅವಳನ್ನು ಕಳುಹಿಸಿದರು. ಅವಳ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ ಎಂದು ಇದರ ಅರ್ಥನಾ? ಅವರ ತಂಗಿ ಮತ್ತು ಕುರುಬ ಏನೊ ತಪ್ಪುಕೆಲಸ ಮಾಡಲು ಹೊರಟಿದ್ದಾರೆ ಎಂದವರು ನೆನಸಿದರಾ? ಇಲ್ಲ. ತಪ್ಪುಕೆಲಸಕ್ಕೆ ತಳ್ಳುವಂಥ ಸನ್ನಿವೇಶದಲ್ಲಿ ಇರದಂತೆ ಅವರ ತಂಗಿಯನ್ನು ಕಾಪಾಡಲು ಹೀಗೆ ಮಾಡಿದರು. (ಪರಮ. 1:6; 2:10-15) ನೀವು ಮದುವೆಯಾಗಲು ನಿರ್ಧರಿಸಿರುವ ವ್ಯಕ್ತಿಯನ್ನು ಭೇಟಿಯಾಗುತ್ತಿದ್ದರೆ ಲೈಂಗಿಕ ಅನೈತಿಕತೆಗೆ ನಡೆಸುವಂಥ ಯಾವುದೇ ಕೆಲಸಕ್ಕೆ ಕೈಹಾಕದಿರಲು ನೀವು ಹೇಗೆ ಎಚ್ಚರವಹಿಸಬಹುದು? ನಿಮ್ಮ ಸಂಬಂಧವನ್ನು ಶುದ್ಧವಾಗಿಡಲು ಏನೇನು ಮಾಡಬಾರದೆಂದು ಮೊದಲೇ ನಿರ್ಧರಿಸಿ. ಯಾರ ಕಣ್ಣಿಗೂ ಬೀಳದಂಥ ಸ್ಥಳಗಳಲ್ಲಿ ಇಬ್ಬರೇ ಇರಬೇಡಿ. ಒಬ್ಬರಿನ್ನೊಬ್ಬರ ಮೇಲೆ ನಿಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಾದರೂ ಅದನ್ನು ನೈತಿಕವಾಗಿ ಶುದ್ಧವಾದ ರೀತಿಯಲ್ಲಿ ಮಾತ್ರ ಮಾಡಿ.

17, 18. ಪರಮಗೀತ ಪುಸ್ತಕದ ಅಧ್ಯಯನ ನಿಮಗೆ ಹೇಗೆ ಸಹಾಯಮಾಡಿದೆ?

17 ದಾಂಪತ್ಯ ಶಾಶ್ವತವಾಗಿರಬೇಕು, ಗಂಡಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಯೆಹೋವನು ಬಯಸುತ್ತಾನೆ. ಮದುವೆಯಾದ ಹೊಸದರಲ್ಲಿ ಪ್ರೀತಿ ಇರುವುದು ಸಹಜ. ಆದರೆ ವಿವಾಹಬಂಧ ಕೊನೆವರೆಗೂ ಉಳಿಯಬೇಕಾದರೆ ಆ ಪ್ರೀತಿಯನ್ನು ಇಬ್ಬರೂ ಬಲವಾಗಿರಿಸಬೇಕು. ಅದು ಎಂದಿಗೂ ಆರಿಹೋಗದ ಬೆಂಕಿಯ ಜ್ವಾಲೆಯಂತಿರಬೇಕು.—ಮಾರ್ಕ 10:6-9.

18 ನಿಮಗೆ ಮದುವೆಯಾಗುವ ಆಸೆಯಿದ್ದರೆ ನೀವು ನಿಜವಾಗಿ ಪ್ರೀತಿಸಬಹುದಾದ ಸಂಗಾತಿಗಾಗಿ ಹುಡುಕಿ. ಅಂಥ ವ್ಯಕ್ತಿ ಸಿಕ್ಕಿದಾಗ ನಿಮ್ಮ ಪ್ರೀತಿಯನ್ನು ಯಾವಾಗಲೂ ಬಲವಾಗಿರಿಸಲು ಇಬ್ಬರೂ ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳಿ. ಪರಮಗೀತ ಪುಸ್ತಕದಿಂದ ನಾವು ಕಲಿತಂತೆ ನಿಜವಾದ, ಶಾಶ್ವತ ಪ್ರೀತಿ ಸಾಧ್ಯ. ಏಕೆಂದರೆ ಅದು “ಯೆಹೋವನ ಜ್ವಾಲೆ.”—ಪರಮ. 8:6, ನೂತನ ಲೋಕ ಭಾಷಾಂತರ.