ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಕೃತಜ್ಞರಾಗಿದ್ದು ಆಶೀರ್ವಾದ ಪಡೆಯಿರಿ

ಯೆಹೋವನಿಗೆ ಕೃತಜ್ಞರಾಗಿದ್ದು ಆಶೀರ್ವಾದ ಪಡೆಯಿರಿ

‘ಯೆಹೋವನಿಗೆ ಕೃತಜ್ಞತೆ ಸಲ್ಲಿಸಿ. ಆತನು ಒಳ್ಳೆಯವನು.’—ಕೀರ್ತ. 106:1.

1. ಯೆಹೋವನಿಗೆ ನಾವೇಕೆ ಕೃತಜ್ಞರಾಗಿರಬೇಕು?

‘ಪ್ರತಿಯೊಂದು ಒಳ್ಳೆಯ ದಾನ, ಪ್ರತಿಯೊಂದು ಪರಿಪೂರ್ಣ ವರವನ್ನು’ ಕೊಡುವ ಯೆಹೋವನಿಗೆ ನಾವು ಕೃತಜ್ಞರಾಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. (ಯಾಕೋ. 1:17) ನಮ್ಮ ಪ್ರೀತಿಯ ಕುರುಬನಾಗಿ ಆತನು ಕೋಮಲತೆಯಿಂದ ನಮ್ಮ ದೈಹಿಕ ಹಾಗೂ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುತ್ತಾನೆ. (ಕೀರ್ತ. 23:1-3) ಇಕ್ಕಟ್ಟಿನ ಸಮಯದಲ್ಲಿ “ಆಶ್ರಯದುರ್ಗವಾಗಿದ್ದು” ನಮ್ಮನ್ನು ಕಾಪಾಡಿದ್ದಾನೆ! (ಕೀರ್ತ. 46:1) “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವದು” ಎಂದು ಕೀರ್ತನೆಗಾರ ಬರೆದ ಮಾತನ್ನು ನಾವೆಲ್ಲರೂ ಮನದಾಳದಿಂದ ಒಪ್ಪಿಕೊಳ್ಳಲು ಅನೇಕ ಕಾರಣಗಳಿವೆ.—ಕೀರ್ತ. 106:1.

2015ರ ನಮ್ಮ ವರ್ಷ ವಚನ: ಯೆಹೋವನಿಗೆ ಕೃತಜ್ಞತೆ ಸಲ್ಲಿಸಿ.

2, 3. (ಎ) ನಮಗೆ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಉಡಾಫೆ ಮನೋಭಾವ ಅಪಾಯಕಾರಿ ಏಕೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸುವೆವು?

2 ಕೃತಜ್ಞತೆ ಸಲ್ಲಿಸುವ ವಿಷಯವನ್ನು ನಾವೀಗ ಪರಿಗಣಿಸುವುದು ಪ್ರಾಮುಖ್ಯವೇಕೆ? ಬೈಬಲಲ್ಲಿ ಈಗಾಗಲೇ ಹೇಳಿರುವಂತೆ ಈ ಕಡೇ ದಿವಸಗಳಲ್ಲಿ ಕೃತಜ್ಞತೆಯಿಲ್ಲದ ಜನರು ಹೆಚ್ಚಾಗಿದ್ದಾರೆ. (2 ತಿಮೊ. 3:2) ತಮಗೆ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಅನೇಕರಿಗೆ ಉಡಾಫೆ. ಈಗಿನ ವಾಣಿಜ್ಯ ಜಗತ್ತು ಜಾಹೀರಾತುಗಳಿಂದ ಮಿಲ್ಯಾಂತರ ಜನರ ತಲೆ ಕೆಡಿಸಿದೆ. ಜನರಲ್ಲಿ ಇನ್ನೂ ಬೇಕು ಅನ್ನೊ ಮನೋಭಾವ ಹೆಚ್ಚಾಗುತ್ತಿದೆಯೇ ಹೊರತು ಇದ್ದದರಲ್ಲೇ ತೃಪ್ತರಾಗಿರೋಣ ಎಂಬ ಯೋಚನೆಯೇ ಇಲ್ಲ. ಈ ರೀತಿಯ ಕೃತಘ್ನ ಮನೋಭಾವದ ಸೋಂಕು ನಮಗೂ ತಗಲಬಹುದು. ಪ್ರಾಚೀನ ಇಸ್ರಾಯೇಲ್ಯರಂತೆ  ನಾವು ಸಹ ಕೃತಜ್ಞತೆಯಿಲ್ಲದವರಾಗಿ ಯೆಹೋವನೊಟ್ಟಿಗಿನ ಅಮೂಲ್ಯ ಸಂಬಂಧಕ್ಕೆ ಬೆಲೆಕೊಡದೇ ಇರುವ ಸಾಧ್ಯತೆ ಇದೆ. ಆತನಿಂದ ನಮಗೆ ಸಿಕ್ಕಿರುವ ಆಶೀರ್ವಾದಗಳ ಕಡೆಗೆ ಕೃತಜ್ಞತೆಯೂ ಕಡಿಮೆಯಾಗಬಹುದು.—ಕೀರ್ತ. 106:7, 11-13.

3 ಅಲ್ಲದೆ ಕಷ್ಟತೊಂದರೆಗಳು ಬಂದಾಗ ನಮಗೆ ಏನಾಗಬಹುದೆಂದು ನೋಡಿ. ನಾವೆಷ್ಟು ದುಃಖದಲ್ಲಿ ಮುಳುಗಿ ಹೋಗಬಹುದೆಂದರೆ ಆಶೀರ್ವಾದಗಳ ಮೇಲಿನ ನಮ್ಮ ನೋಟ ಮಂಜಾಗಬಹುದು. (ಕೀರ್ತ. 116:3) ಹಾಗಾಗಿ ಕೃತಜ್ಞತಾಭಾವವನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳುವುದು ಹೇಗೆ? ನಮಗೆ ತುಂಬ ನೋವುಂಟುಮಾಡುವ ಕಷ್ಟತೊಂದರೆಗಳ ಸುಳಿಯಲ್ಲಿ ಸಿಲುಕಿದಾಗಲೂ ಸಕಾರಾತ್ಮಕವಾಗಿರಲು ಯಾವುದು ನೆರವಾಗುವುದು? ನೋಡೋಣ.

‘ಯೆಹೋವನೇ ನೀನು ಮಾಡಿದ ಅದ್ಭುತಕಾರ್ಯಗಳು ಅಸಂಖ್ಯಾತ’

4. ನಾವು ಹೇಗೆ ಕೃತಜ್ಞತಾಭಾವವನ್ನು ಕಾಪಾಡಿಕೊಳ್ಳಬಹುದು?

4 ಕೃತಜ್ಞತಾಭಾವ ಬೆಳೆಸಿಕೊಂಡು ಕಾಪಾಡಿಕೊಳ್ಳಬೇಕಾದರೆ ಯೆಹೋವನು ನಮಗೆ ಕೊಟ್ಟಿರುವ ಆಶೀರ್ವಾದಗಳನ್ನು ಜ್ಞಾಪಿಸಿಕೊಂಡು ಕೃತಜ್ಞತೆಯಿಂದ ಧ್ಯಾನಿಸಬೇಕು. “ಆತನ ಕೃಪೆ” ಅಥವಾ ನಿಷ್ಠಾವಂತ ಪ್ರೀತಿಯ ಕೃತ್ಯಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕು. ಕೀರ್ತನೆಗಾರನು ಹೀಗೇ ಮಾಡಿದಾಗ ಯೆಹೋವನ ಅನೇಕ ಅದ್ಭುತಕಾರ್ಯಗಳ ಬಗ್ಗೆ ಮೂಕವಿಸ್ಮಿತನಾದನು.ಕೀರ್ತನೆ 40:5; 107:43 ಓದಿ.

5. ಕೃತಜ್ಞತಾಭಾವ ಬೆಳೆಸಿಕೊಳ್ಳುವ ವಿಷಯದಲ್ಲಿ ಅಪೊಸ್ತಲ ಪೌಲನಿಂದ ಏನನ್ನು ಕಲಿಯಬಹುದು?

5 ಕೃತಜ್ಞತಾಭಾವ ಬೆಳೆಸಿಕೊಳ್ಳುವ ವಿಷಯದಲ್ಲಿ ಅಪೊಸ್ತಲ ಪೌಲನಿಂದ ಬಹಳಷ್ಟನ್ನು ಕಲಿಯಬಹುದು. ತನಗೆ ಸಿಕ್ಕಿದ ಆಶೀರ್ವಾದಗಳ ಬಗ್ಗೆ ಪೌಲ ಧ್ಯಾನಿಸಿದನೆಂದು ತೋರುತ್ತದೆ. ಅವನು ಆಗಿಂದಾಗ್ಗೆ ಹೇಳಿರುವ ಹೃತ್ಪೂರ್ವಕ ಕೃತಜ್ಞತೆಯ ಮಾತುಗಳಿಂದ ಇದು ತಿಳಿದುಬರುತ್ತದೆ. ಹಿಂದೆ “ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ” ಆಗಿದ್ದ ತನ್ನ ತಪ್ಪಾದ ನಡತೆಯ ಹೊರತೂ ದೇವರು ಮತ್ತು ಕ್ರಿಸ್ತನು ಕರುಣೆ ತೋರಿಸಿ ತನಗೆ ಶುಶ್ರೂಷೆಯನ್ನು ದಯಪಾಲಿಸಿದ್ದಕ್ಕಾಗಿ ಪೌಲ ಕೃತಜ್ಞತೆ ಹೇಳಿದ. (1 ತಿಮೊಥೆಯ 1:12-14 ಓದಿ.) ತನ್ನ ಜೊತೆ ಕ್ರೈಸ್ತರಿಗಾಗಿ ಸಹ ತುಂಬ ಕೃತಜ್ಞನಾಗಿದ್ದ. ಅವರ ಉತ್ತಮ ಗುಣಗಳಿಗಾಗಿ ಮತ್ತು ನಂಬಿಗಸ್ತ ಸೇವೆಗಾಗಿ ಯೆಹೋವನಿಗೆ ಅನೇಕಬಾರಿ ಕೃತಜ್ಞತೆ ಸಲ್ಲಿಸಿದ. (ಫಿಲಿ. 1:3-5, 7; 1 ಥೆಸ. 1:2, 3) ಅಷ್ಟೇ ಅಲ್ಲ ಪೌಲ ಕಷ್ಟಕರ ಪರಿಸ್ಥಿತಿಗಳಲ್ಲಿ ಇದ್ದಾಗೆಲ್ಲಾ ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಸಹೋದರರಿಂದ ಬೆಂಬಲ ಸಿಕ್ಕಿದಾಗ ತಡಮಾಡದೆ ಯೆಹೋವನಿಗೆ ಕೃತಜ್ಞತೆ ಹೇಳಿದ. (ಅ. ಕಾ. 28:15; 2 ಕೊರಿಂ. 7:5-7) ಆದ್ದರಿಂದಲೇ ಪೌಲನ ಬರಹಗಳಲ್ಲಿ ಕ್ರೈಸ್ತರಿಗೆ ಹೀಗೆ ಉತ್ತೇಜಿಸಲಾಗಿದೆ: “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ . . . ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ . . . ಆಧ್ಯಾತ್ಮಿಕ ಹಾಡುಗಳಿಂದಲೂ . . . ಗಾನಮಾಡಿರಿ.”—ಕೊಲೊ. 3:15-17.

ಧ್ಯಾನ ಮತ್ತು ಪ್ರಾರ್ಥನೆ ಕೃತಜ್ಞತಾಭಾವ ಕಾಪಾಡಿಕೊಳ್ಳಲು ಸಹಾಯಕಗಳು

6. ಯೆಹೋವನಿಂದ ಸಿಕ್ಕಿರುವ ಯಾವ ಆಶೀರ್ವಾದಕ್ಕಾಗಿ ನೀವು ಕೃತಜ್ಞರು?

6 ಕೃತಜ್ಞತಾಭಾವ ಬೆಳೆಸಿಕೊಳ್ಳುವುದರಲ್ಲಿ ಮತ್ತು ತೋರಿಸುವುದರಲ್ಲಿ ಪೌಲನ ಮಾದರಿಯನ್ನು ಹೇಗೆ ಅನುಕರಿಸಬಹುದು? ಅವನಂತೆ ನಾವೂ ಯೆಹೋವನು ವೈಯಕ್ತಿಕವಾಗಿ ನಮಗೆ ಮಾಡಿರುವ ವಿಷಯಗಳ ಬಗ್ಗೆ ಧ್ಯಾನಿಸಬೇಕು. (ಕೀರ್ತ. 116:12) ಯೆಹೋವನಿಂದ ಬಂದಿರುವ ಯಾವ ಆಶೀರ್ವಾದಗಳಿಗಾಗಿ ನೀವು ಕೃತಜ್ಞರು? ಯೆಹೋವ ಮತ್ತು ನಿಮ್ಮ ನಡುವೆ ಇರುವ ಅಮೂಲ್ಯ ಸಂಬಂಧಕ್ಕಾಗಿಯಾ? ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನೀವಿಟ್ಟಿರುವ ನಂಬಿಕೆಯಿಂದಾಗಿ ಸಿಗುವ ಕ್ಷಮಾಪಣೆಗಾಗಿಯಾ? ಬೇರೆಬೇರೆ ಕಷ್ಟತೊಂದರೆಗಳು ಬಂದಾಗ ನಿಮ್ಮಲ್ಲಿ ಧೈರ್ಯ ತುಂಬಿ ಆಸರೆಯಾಗಿ ನಿಂತ ನಿರ್ದಿಷ್ಟ ಸಹೋದರ ಸಹೋದರಿಯರಿಗಾಗಿನಾ? ನಿಮ್ಮ ಪ್ರೀತಿಯ ಸಂಗಾತಿ ಮತ್ತು ಮುದ್ದು ಮಕ್ಕಳ ಬಗ್ಗೆಯಂತೂ ಖಂಡಿತ ಹೇಳುವಿರಿ. ನಿಮ್ಮನ್ನು ತುಂಬ ಪ್ರೀತಿಸುವ ತಂದೆಯಾದ ಯೆಹೋವನಿಂದ ನಿಮಗೆ ಸಿಕ್ಕಿರುವ ಇಂಥ ಆಶೀರ್ವಾದಗಳ ಬಗ್ಗೆ ಧ್ಯಾನಿಸಲು ಸಮಯ ಮಾಡಿಕೊಳ್ಳಿ. ಆಗ ನಿಮ್ಮ ಹೃದಯದಲ್ಲಿ ಕೃತಜ್ಞತೆ ತುಂಬುತ್ತದೆ. ಇವೆಲ್ಲದಕ್ಕಾಗಿ ಒಂದೂ ದಿನ ಬಿಡದೆ ಯೆಹೋವನಿಗೆ ಧನ್ಯವಾದ ಹೇಳುತ್ತೀರಿ.—ಕೀರ್ತನೆ 92:1, 3 ಓದಿ.

7. (ಎ) ಕೃತಜ್ಞತೆ ಸಲ್ಲಿಸುವ ಪ್ರಾರ್ಥನೆಗಳನ್ನು ನಾವು ಮಾಡಬೇಕು ಏಕೆ? (ಬಿ) ಇದರಿಂದ ಏನು ಪ್ರಯೋಜನ?

7 ನಮಗೆ ಸಿಕ್ಕಿರುವ ಆಶೀರ್ವಾದಗಳು ನಮ್ಮ ಹೃದಮನದಲ್ಲಿ ಬೇರೂರಿದ್ದರೆ ಯೆಹೋವನಿಗೆ ಪ್ರಾರ್ಥನೆಯ ಮೂಲಕ ಕೃತಜ್ಞತೆ ತಿಳಿಸಲು ಸಿದ್ಧರಿರುತ್ತೇವೆ. (ಕೀರ್ತ. 95:2; 100:4, 5) ಅನೇಕರು ಏನಾದರೂ ಬೇಕಿದ್ದಾಗ ಮಾತ್ರ ಪ್ರಾರ್ಥನೆ ಮಾಡುತ್ತಾರೆ. ಆದರೆ ನಾವು ಹಾಗೆ  ಮಾಡಬಾರದು. ಯೆಹೋವನು ನಮಗೆ ಕೊಟ್ಟಿರುವ ವಿಷಯಗಳಿಗಾಗಿ ಧನ್ಯವಾದ ಹೇಳಿದರೆ ಆತನಿಗೆ ತುಂಬ ಸಂತೋಷವಾಗುತ್ತದೆ. ಕೃತಜ್ಞತೆ ತುಂಬಿದ ಮನತಟ್ಟುವ ಪ್ರಾರ್ಥನೆಗಳು ಬೈಬಲ್‍ನಲ್ಲಿವೆ. ಹನ್ನ, ಹಿಜ್ಕೀಯರ ಪ್ರಾರ್ಥನೆಗಳು ಇದಕ್ಕೆ ಉದಾಹರಣೆ. (1 ಸಮು. 2:1-10; ಯೆಶಾ. 38:9-20) ಕೃತಜ್ಞತಾಭಾವ ತೋರಿಸಿದ ಇಂಥ ನಂಬಿಗಸ್ತ ಸೇವಕರನ್ನು ಅನುಕರಿಸಿರಿ. ನಿಮಗಿರುವ ಆಶೀರ್ವಾದಗಳಿಗಾಗಿ ಪ್ರಾರ್ಥನೆ ಮೂಲಕ ಯೆಹೋವನಿಗೆ ಕೃತಜ್ಞತೆ ಸಲ್ಲಿಸಿ. (1 ಥೆಸ. 5:17, 18) ಹೀಗೆ ಮಾಡಿದರೆ ಪ್ರಯೋಜನಗಳು ಬಹಳ. ನಿಮ್ಮಲ್ಲಿ ಉಲ್ಲಾಸ ತುಂಬುವುದು. ಯೆಹೋವನಿಗಾಗಿ ಪ್ರೀತಿ ಗಾಢವಾಗುವುದು. ಆತನೊಂದಿಗಿನ ಆಪ್ತತೆ ಹೆಚ್ಚುವುದು.—ಯಾಕೋ. 4:8.

ಯೆಹೋವನಿಂದ ಬಂದಿರುವ ಯಾವ ಆಶೀರ್ವಾದಗಳಿಗಾಗಿ ನೀವು ಕೃತಜ್ಞರು? (ಪ್ಯಾರ 6, 7 ನೋಡಿ)

8. ಯೆಹೋವನು ನಮಗೇನೆಲ್ಲಾ ಮಾಡಿದ್ದಾನೋ ಅದರ ಕಡೆಗೆ ಕೃತಜ್ಞತೆ ಕಡಿಮೆಯಾಗಲು ಕಾರಣಗಳೇನಿರಬಹುದು?

8 ಯೆಹೋವನ ಒಳ್ಳೇತನದ ಕಡೆಗೆ ಕೃತಜ್ಞತೆ ಕಳೆದುಕೊಳ್ಳುವ ಅಪಾಯದ ಬಗ್ಗೆ ನಾವೇಕೆ ಎಚ್ಚರವಾಗಿರಬೇಕು? ಏಕೆಂದರೆ ನಾವು ಕೃತಘ್ನರಾಗುವ ಸಾಧ್ಯತೆ ಇದೆ. ಇದನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ಪರಿಗಣಿಸಿ: ನಮ್ಮ ಮೂಲ ಹೆತ್ತವರಾದ ಆದಾಮಹವ್ವ ಪರದೈಸ್‍ನಲ್ಲಿದ್ದಾಗ ಅವರ ಎಲ್ಲ ಅಗತ್ಯಗಳನ್ನು ಪೂರೈಸಲಾಗಿತ್ತು. ಅವರು ಅಲ್ಲಿ ಶಾಂತಿಯಿಂದ ಅನಂತಕಾಲ ಬದುಕಬಹುದಿತ್ತು. (ಆದಿ. 1:28) ಆದರೆ ಅವರು ಈ ಆಶೀರ್ವಾದಗಳಿಗೆ ಬೆಲೆಕೊಡಲಿಲ್ಲ. ಅತಿಯಾಸೆಯಿಂದ ಇನ್ನೂ ಹೆಚ್ಚನ್ನು ಬಯಸಿದರು. ಹೀಗೆ ಇದ್ದದ್ದೆಲ್ಲವನ್ನೂ ಕಳೆದುಕೊಂಡರು. (ಆದಿ. 3:6, 7, 17-19) ನಾವಿಂದು ಕೃತಘ್ನ ಲೋಕದಲ್ಲಿ ಜೀವಿಸುತ್ತಿದ್ದೇವೆ. ಹಾಗಾಗಿ ಯೆಹೋವನು ನಮಗಾಗಿ ಏನೆಲ್ಲಾ ಮಾಡಿದ್ದಾನೊ ಅದಕ್ಕಾಗಿ ಕೃತಜ್ಞತೆ ಕಳಕೊಳ್ಳುವ ಸಾಧ್ಯತೆ ಇದೆ. ಯೆಹೋವನ ಜೊತೆ ನಮ್ಮ ಸ್ನೇಹವನ್ನು ನಾವು ತುಂಬ ಮಾಮೂಲಾಗಿ ಎಣಿಸಬಹುದು. ಲೋಕವ್ಯಾಪಕ ಸಹೋದರತ್ವದ ಭಾಗವಾಗಿರುವ ಸುಯೋಗ ನಮಗೆ ಅಷ್ಟೇನೂ ದೊಡ್ಡದನಿಸಲಿಕ್ಕಿಲ್ಲ. ಬೇಗನೆ ಗತಿಸಿಹೋಗಲಿರುವ ಈ ಲೋಕದಲ್ಲೇ ನಾವು ಮುಳುಗಿ ಹೋಗಬಹುದು. (1 ಯೋಹಾ. 2:15-17) ಈ ಸುಳಿಯಲ್ಲಿ ಸಿಲುಕಿ ತಳಮುಟ್ಟುವ ಬದಲು ನಮಗಿರುವ ಆಶೀರ್ವಾದಗಳ ಬಗ್ಗೆ ಧ್ಯಾನಿಸೋಣ. ಆತನ ಜನರಾಗುವಂಥ ಸುಯೋಗ ಕೊಟ್ಟಿರುವುದಕ್ಕೆ ಪ್ರತಿದಿನ ಯೆಹೋವನಿಗೆ ಧನ್ಯವಾದ ಹೇಳೋಣ.—ಕೀರ್ತನೆ 27:4 ಓದಿ.

ಕಷ್ಟತೊಂದರೆಗಳನ್ನು ಎದುರಿಸುವಾಗ

9. ತುಂಬ ನೋವು ತರುವ ಕಷ್ಟತೊಂದರೆಗಳು ಬಂದಾಗ ನಮಗಿರುವ ಆಶೀರ್ವಾದಗಳ ಬಗ್ಗೆ ಯೋಚಿಸಬೇಕು ಏಕೆ?

9 ಕೃತಜ್ಞತಾಭಾವ ನಮ್ಮಲ್ಲಿದ್ದರೆ ತುಂಬ ನೋವು ತರುವ ಕಷ್ಟತೊಂದರೆಗಳು ಬಂದರೂ ಅವನ್ನು ಎದುರಿಸಬಹುದು. ದಾಂಪತ್ಯದ್ರೋಹ, ಮಾರಣಾಂತಿಕ ಕಾಯಿಲೆ, ಆತ್ಮೀಯರೊಬ್ಬರ ಸಾವು ಅಥವಾ ನೈಸರ್ಗಿಕ ವಿಪತ್ತಿನಂಥ ಕಷ್ಟತೊಂದರೆಗಳಿಂದ ಬದುಕೇ ತಲೆಕೆಳಗಾಗಬಹುದು. ಇಂಥ ಸನ್ನಿವೇಶಗಳು ತಟ್ಟನೆ ಎದುರಾದಾಗ ಏನು ಮಾಡಬೇಕೆಂದು ತೋಚಲಿಕ್ಕಿಲ್ಲ ನಿಜ. ಆದರೆ ನಮಗಿರುವ ಆಶೀರ್ವಾದಗಳ ಬಗ್ಗೆ ಇಂಥ ಸಮಯಗಳಲ್ಲಿ ಯೋಚಿಸಿದರೆ ತುಂಬ ಸಾಂತ್ವನ, ಬಲ ಸಿಗುತ್ತದೆ. ಕೆಲವೊಂದು ನಿಜ ಜೀವನ ಅನುಭವಗಳನ್ನು ನಾವೀಗ ನೋಡೋಣ.

10. ಐರಿನಾ ತನ್ನ ಆಶೀರ್ವಾದಗಳ ಬಗ್ಗೆ ಧ್ಯಾನಿಸಿದ್ದರಿಂದ ಯಾವ ಪ್ರಯೋಜನ ಸಿಕ್ಕಿದೆ?

 10 ಐರಿನಾ * ಎಂಬವಳು ಉತ್ತರ ಅಮೆರಿಕದಲ್ಲಿ ರೆಗ್ಯುಲರ್‌ ಪಯನೀಯರ್‌. ಇವಳ ಗಂಡ ಒಬ್ಬ ಹಿರಿಯನಾಗಿದ್ದ. ಆದರೆ ಅವನು ದಾಂಪತ್ಯದ್ರೋಹ ಮಾಡಿ ಐರಿನಾ ಮತ್ತು ಅವರ ಮೂವರು ಮಕ್ಕಳನ್ನು ಬಿಟ್ಟುಹೋದ. ಇಷ್ಟಾದರೂ ಐರಿನಾ ತನ್ನ ನಂಬಿಗಸ್ತ ಸೇವೆಯನ್ನು ಮುಂದುವರಿಸಲು ಯಾವುದು ಸಹಾಯಮಾಡಿತು? ಅವಳ ಮಾತಲ್ಲೇ ಕೇಳಿ: “ಯೆಹೋವನು ನನ್ನಲ್ಲಿ ತೋರಿಸಿದ ವೈಯಕ್ತಿಕ ಕಾಳಜಿಗಾಗಿ ನಾನು ಕೃತಜ್ಞಳು. ನನಗೆ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಪ್ರತಿದಿನ ಧ್ಯಾನಿಸುತ್ತೇನೆ. ನಮ್ಮನ್ನು ಸಂರಕ್ಷಿಸುವ ತಂದೆಯಾದ ಯೆಹೋವನು ನನ್ನನ್ನು ತಿಳಿದಿರುವುದು, ಪ್ರೀತಿಸುತ್ತಿರುವುದು ಎಂಥ ಸುಯೋಗ ಎಂದು ಆಗ ಗ್ರಹಿಸುತ್ತೇನೆ. ಆತನು ಯಾವತ್ತೂ ನನ್ನ ಕೈಬಿಡುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು.” ಐರಿನಾಳ ಬದುಕಲ್ಲಿ ಅನೇಕ ಸನ್ನಿವೇಶಗಳು ಸಿಡಿಲಿನಂತೆ ಬಡಿದರೂ ಖುಷಿಖುಷಿಯಾಗಿರುವ ಸ್ವಭಾವ ಅವಳಿಗೆ ಅದೆಲ್ಲವನ್ನು ನಿಭಾಯಿಸಲು ಸಹಾಯ ಮಾಡಿದೆ. ಅವಳು ಅನೇಕರಿಗೆ ಪ್ರೋತ್ಸಾಹದ ಚಿಲುಮೆಯೂ ಆಗಿದ್ದಾಳೆ.

11. ಕ್ಯು೦ಗ್‌-ಸೂಕ್‍ಗೆ ಮಾರಣಾಂತಿಕ ಕಾಯಿಲೆಯನ್ನು ನಿಭಾಯಿಸಲು ಯಾವುದು ಸಹಾಯ ಮಾಡಿದೆ?

11 ಏಷ್ಯದಲ್ಲಿ ವಾಸಿಸುತ್ತಿರುವ ಕ್ಯು೦ಗ್‌-ಸೂಕ್‌ ಎಂಬ ಸಹೋದರಿ ಗಂಡನ ಜೊತೆ 20 ವರ್ಷ ಪಯನೀಯರ್‌ ಸೇವೆ ಮಾಡಿದ್ದಾರೆ. ಈ ಸಹೋದರಿಗೆ ಶ್ವಾಸಕೋಶ ಕ್ಯಾನ್ಸರ್‌ ಇದೆ ಎಂದು ಇದ್ದಕ್ಕಿದ್ದಂತೆ ಒಂದು ದಿನ ಪತ್ತೆಹಚ್ಚಲಾಯಿತು. ಅವರಿನ್ನು 3-6 ತಿಂಗಳು ಮಾತ್ರ ಉಳಿಯುತ್ತಾರೆಂದು ಹೇಳಲಾಯಿತು. ಸಹೋದರಿ ಮತ್ತವರ ಗಂಡ ಈ ಮುಂಚೆ ಕೆಲವು ಚಿಕ್ಕದ್ದಾದ, ಕೆಲವು ದೊಡ್ಡದ್ದಾದ ಕಷ್ಟಪರೀಕ್ಷೆಗಳನ್ನು ಎದುರಿಸಿದ್ದರು. ಆದರೆ ಯಾವತ್ತೂ ಆರೋಗ್ಯದ ವಿಷಯದಲ್ಲಿ ಅವರಿಗೆ ಅಂಥ ದೊಡ್ಡ ಸಮಸ್ಯೆ ಆಗಿರಲಿಲ್ಲ. ಅವರು ಹೇಳಿದ್ದು: “ಈ ಆರೋಗ್ಯದ ಸಮಸ್ಯೆ ನನ್ನನ್ನು ಪೂರ್ತಿ ಅಲುಗಾಡಿಸಿಬಿಟ್ಟಿತು. ಎಲ್ಲ ಕಳಕೊಂಡುಬಿಟ್ಟೆ ಅಂತ ನನಗನಿಸಿತು. ತುಂಬ ಹೆದರಿಹೋದೆ.” ಕ್ಯು೦ಗ್‌-ಸೂಕ್‍ಗೆ ಯಾವುದು ಸಹಾಯಮಾಡಿದೆ? ಅವರನ್ನುವುದು: “ಪ್ರತಿ ರಾತ್ರಿ ಮಲಗುವ ಮುಂಚೆ ನಾನು ಮಹಡಿಗೆ ಹೋಗಿ ಅವತ್ತಿನ ದಿನ ಯೆಹೋವನು ನನಗಾಗಿ ಮಾಡಿರುವ ಐದು ವಿಷಯಗಳಿಗೆ ಧನ್ಯವಾದ ಹೇಳುತ್ತಾ ಗಟ್ಟಿಯಾದ ಧ್ವನಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆಗ ನನ್ನ ಮನಸ್ಸು ನಿರಾಳವಾಗುತ್ತದೆ. ಯೆಹೋವನ ಮೇಲೆ ನನಗಿರುವ ಪ್ರೀತಿಯನ್ನು ಮಾತಲ್ಲಿ ವ್ಯಕ್ತಪಡಿಸುತ್ತೇನೆ.” ಪ್ರತಿ ರಾತ್ರಿ ಹೀಗೆ ಮಾಡುವುದರಿಂದ ಅವರಿಗೆ ಯಾವ ಪ್ರಯೋಜನವಾಗಿದೆ? ಅವರು ಹೀಗನ್ನುತ್ತಾರೆ: “ಕಷ್ಟಗಳು ಬಂದಾಗ ಯೆಹೋವನು ನಮಗೆ ಬೇಕಾದ ಬಲ ಕೊಡುತ್ತಾನೆ ಮತ್ತು ನಮ್ಮ ಬದುಕಲ್ಲಿ ಕಷ್ಟತೊಂದರೆಗಳಿಗಿಂತ ಆಶೀರ್ವಾದಗಳೇ ಹೆಚ್ಚು ಎಂದು ಮನಗಂಡಿದ್ದೇನೆ.”

ಬದುಕುಳಿದ ಒಬ್ಬ ತಮ್ಮ ಜಾನ್‍ನೊಂದಿಗೆ ಶೆರಿಲ್‌ (ಪ್ಯಾರ 13 ನೋಡಿ)

12. ಹೆಂಡತಿಯನ್ನು ಕಳೆದುಕೊಂಡ ಜೇಸನ್‌ ಹೇಗೆ ಸಾಂತ್ವನ ಪಡೆದರು?

12 ಆಫ್ರಿಕಾ ದೇಶದ ಬ್ರಾಂಚ್‌ ಆಫೀಸಿನಲ್ಲಿ ಸೇವೆ ಮಾಡುತ್ತಿರುವ ಜೇಸನ್‍ರ ಉದಾಹರಣೆ ನೋಡಿ. ಇವರು 30ಕ್ಕೂ ಹೆಚ್ಚು ವರ್ಷಗಳಿಂದ ಪೂರ್ಣ ಸಮಯ ಸೇವೆಯಲ್ಲಿದ್ದಾರೆ. ಅವರನ್ನುವುದು: “ನನ್ನ ಹೆಂಡತಿ ತೀರಿಕೊಂಡು 7 ವರ್ಷ ಆಯಿತು. ಅವಳನ್ನು ಕಳೆದುಕೊಂಡ ನೋವು ನನ್ನನ್ನು ಕಿತ್ತು ತಿನ್ನುತ್ತಿತ್ತು. ಕ್ಯಾನ್ಸರ್‌ನಿಂದಾಗಿ ಅವಳು ಅನುಭವಿಸಿದ ನೋವನ್ನು ನೆನಪಿಸಿಕೊಂಡೇ ಬದುಕುತ್ತಿದ್ದರೆ ತುಂಬ ಕುಗ್ಗಿ ಹೋಗಿಬಿಡುತ್ತಿದ್ದೆ.” ಈ ನೋವನ್ನು ನಿಭಾಯಿಸಲು ಜೇಸನ್‌ರಿಗೆ ಸಹಾಯ ಮಾಡಿದ್ದೇನು? ಅವರನ್ನುವುದು: “ಒಮ್ಮೆ ನನಗೆ ಆಕೆಯ ಜೊತೆ ಕಳೆದ ಸುಂದರ ಕ್ಷಣಗಳು ನೆನಪಾದವು. ಆ ನೆನಪುಗಳನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳಿದೆ. ಆಗ ನನ್ನಲ್ಲಿ ಒಂದು ರೀತಿಯ ಪ್ರಶಾಂತತೆ ಮೂಡಿತು. ಆ ಸವಿನೆನಪುಗಳು ಮನಸ್ಸಿಗೆ ಬಂದಾಗೆಲ್ಲ ಯೆಹೋವನಿಗೆ ಧನ್ಯವಾದ ಹೇಳುತ್ತೇನೆ. ಇದು ನಾನು ಯೋಚಿಸುವ ರೀತಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ನನ್ನ ಹೆಂಡತಿಯನ್ನು ಕಳೆದುಕೊಂಡ ನೋವು ನನ್ನಲ್ಲಿ ಇನ್ನೂ ಇದೆ ನಿಜ. ಆದರೆ ಯೆಹೋವನ ಮೇಲೆ ಆಳವಾದ ಪ್ರೀತಿಯಿದ್ದ ಪತ್ನಿ ಜೊತೆ ಮಾಡಿದ ಸೇವೆಗಾಗಿ ಮತ್ತು ಅವಳೊಂದಿಗೆ ನಡೆಸಿದ ಒಳ್ಳೇ ಜೀವನಕ್ಕಾಗಿ ದೇವರಿಗೆ ನಾನು ಆಭಾರಿ. ಈ ರೀತಿಯ ಸಕಾರಾತ್ಮಕ ಯೋಚನೆ ನನಗೆ ತುಂಬ ಸಹಾಯಮಾಡಿದೆ.”

“ಯೆಹೋವನು ನನ್ನ ದೇವರು ಅಂತ ಹೇಳಲು ನನಗೆ ತುಂಬ ಖುಷಿಯಾಗುತ್ತದೆ.”—ಶೆರಿಲ್‌

13. ಕುಟುಂಬದಲ್ಲಿ ಹೆಚ್ಚಿನವರನ್ನು ಕಳಕೊಂಡ ದುಃಖವನ್ನು ನಿಭಾಯಿಸಲು ಶೆರಿಲ್‌ಗೆ ಯಾವುದು ಸಹಾಯ ಮಾಡಿತು?

13 ಹೈಯಾನ್‌ ಮಹಾ ತೂಫಾನು 2013ರಲ್ಲಿ ಫಿಲಿಪೀನ್ಸ್‌ಗೆ ಬಡಿಯಿತು. ಆಗ ಶೆರಿಲ್‌ ಎಂಬ ಹುಡುಗಿಗೆ ಬರೀ 13 ವರ್ಷ. ಅವಳು ಎಲ್ಲವನ್ನೂ ಕಳೆದುಕೊಂಡಳು. ಅವಳಂದದ್ದು: “ನಾವಿದ್ದ ಮನೆ ಕೊಚ್ಚಿಕೊಂಡು ಹೋಯಿತು. ನನ್ನ ಕುಟುಂಬದಲ್ಲಿ ಹೆಚ್ಚಿನವರು ಸತ್ತು ಹೋದರು.” ಅವಳ ಅಪ್ಪಅಮ್ಮ, 3 ಮಂದಿ ಒಡಹುಟ್ಟಿದವರನ್ನು ಕಳಕೊಂಡರೂ ಅವಳ ಮನಸ್ಸಲ್ಲಿ ಕೋಪ, ನಿರಾಶೆ ಇಲ್ಲ. ಯಾಕೆ? ಅವಳಲ್ಲಿ ಕೃತಜ್ಞತಾಭಾವ ಇರುವುದರಿಂದಲೇ. ತಾನೇನು ಕಳಕೊಂಡಳೊ ಅದರ ಬಗ್ಗೆ ಅಲ್ಲ, ತನಗಿರುವ ಆಶೀರ್ವಾದಗಳ  ಬಗ್ಗೆ ಯಾವಾಗಲೂ ಯೋಚಿಸುತ್ತಾಳೆ. “ನಮ್ಮ ಸಹೋದರರು ಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಮಾಡಿದರು. ಸಾಂತ್ವನ ಕೊಟ್ಟರು. ನನಗೋಸ್ಕರ ಲೋಕದಲ್ಲಿರುವ ಎಲ್ಲಾ ಸಹೋದರ ಸಹೋದರಿಯರು ಪ್ರಾರ್ಥಿಸುತ್ತಾ ಇದ್ದರೆಂದು ಗೊತ್ತಿತ್ತು.” ಅವಳು ಮುಂದುವರಿಸಿ ಹೇಳಿದ್ದು: “ಯೆಹೋವನು ನನ್ನ ದೇವರು ಅಂತ ಹೇಳಲು ನನಗೆ ತುಂಬ ಖುಷಿಯಾಗುತ್ತದೆ. ಏಕೆಂದರೆ ನನಗೇನು ಬೇಕೊ ಅದನ್ನು ಆತನು ಕೊಡುತ್ತಾನೆ.” ನಮಗಿರುವ ಆಶೀರ್ವಾದಗಳ ಬಗ್ಗೆ ಯೋಚಿಸುತ್ತಾ ಇದ್ದರೆ ನಾವು ದುಃಖದಲ್ಲಿ ಮುಳುಗಿಹೋಗುವುದಿಲ್ಲ. ತುಂಬ ನೋವು ಕೊಡುವ ಯಾವುದೇ ಸನ್ನಿವೇಶ ಬಂದರೂ ಕೃತಜ್ಞತಾಭಾವ ಇದ್ದರೆ ಅದನ್ನು ನಿಭಾಯಿಸಲು ಆಗುತ್ತದೆ.—ಎಫೆ. 5:20; ಫಿಲಿಪ್ಪಿ 4:6, 7 ಓದಿ.

“ನಾನು ಯೆಹೋವನಲ್ಲಿ ಉಲ್ಲಾಸಿಸುವೆನು”

14. ನಮಗೆ ಯಾವ ರೋಮಾಂಚಕ ನಿರೀಕ್ಷೆ ಇದೆ? (ಶೀರ್ಷಿಕೆ ಚಿತ್ರ ನೋಡಿ.)

14 ಇತಿಹಾಸದಲ್ಲಿ ಯೆಹೋವನ ಜನರು ಅವರಿಗೆ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ಇಸ್ರಾಯೇಲ್ಯರಿಗೆ ಕೆಂಪು ಸಮುದ್ರದ ಬಳಿ ಫರೋಹ ಮತ್ತವನ ಸೈನ್ಯದಿಂದ ಬಿಡುಗಡೆ ಸಿಕ್ಕಿದಾಗ ಅವರು ಯೆಹೋವನಿಗೆ ಸ್ತುತಿ, ಕೃತಜ್ಞತೆ ತುಂಬಿದ ಹಾಡುಗಳಿಂದ ಆನಂದ ವ್ಯಕ್ತಪಡಿಸಿದರು. (ವಿಮೋ. 15:1-21) ಇಂದು ನಮಗಿರುವ ಅತಿ ದೊಡ್ಡ ಆಶೀರ್ವಾದ ಏನೆಂದರೆ ನಮಗೆ ತುಂಬ ನೋವು ಸಂಕಟ ತರುವ ತೊಂದರೆಗಳಿಂದ ಬಿಡುಗಡೆ ಸಿಗಲಿದೆ ಎಂಬ ನಿಶ್ಚಿತ ನಿರೀಕ್ಷೆ. (ಕೀರ್ತ. 37:9-11; ಯೆಶಾ. 25:8; 33:24) ಯೆಹೋವನು ತನ್ನೆಲ್ಲಾ ವೈರಿಗಳನ್ನು ನುಚ್ಚುನೂರು ಮಾಡಿ ಶಾಂತಿ ಮತ್ತು ನೀತಿ ತುಂಬಿದ ಹೊಸ ಲೋಕಕ್ಕೆ ನಮ್ಮನ್ನು ಸ್ವಾಗತಿಸುವಾಗ ಹೇಗಿರುತ್ತದೆಂದು ಕಲ್ಪಿಸಿಕೊಳ್ಳಿ. ಯೆಹೋವನಿಗೆ ಕೃತಜ್ಞತೆ ಹೇಳಲು ಎಂಥ ಒಳ್ಳೇ ಸಂದರ್ಭ ಅದಾಗಿರುತ್ತದಲ್ಲವಾ?—ಪ್ರಕ. 20:1-3; 21:3, 4.

15. ಇಸವಿ 2015ರಲ್ಲಿ ಏನು ಮಾಡಲು ದೃಢನಿರ್ಧಾರ ಮಾಡಿದ್ದೀರಿ?

15 ನಾವು 2015ರಲ್ಲಿ ಯೆಹೋವನಿಂದ ಎಣಿಸಲಾಗದ ಆಧ್ಯಾತ್ಮಿಕ ಆಶೀರ್ವಾದಗಳನ್ನು ಎದುರುನೋಡುತ್ತಿದ್ದೇವೆ. ಕಷ್ಟಸಂಕಟಗಳು ಬರುವುದೇ ಇಲ್ಲ ಎಂದೇನಿಲ್ಲ. ಆದರೆ ಒಂದಂತೂ ನಿಜ. ಯಾವುದೇ ಕಷ್ಟಸಂಕಟ ಬಂದರೂ ಯೆಹೋವನು ಮಾತ್ರ ಎಂದಿಗೂ ನಮ್ಮ ಕೈಬಿಡುವುದಿಲ್ಲ. (ಧರ್ಮೋ. 31:8; ಕೀರ್ತ. 9:9, 10) ನಂಬಿಗಸ್ತಿಕೆಯಿಂದ ಆತನ ಸೇವೆ ಮಾಡಲು ನಮಗೇನೆಲ್ಲಾ ಬೇಕೊ ಅದನ್ನೆಲ್ಲಾ ಒದಗಿಸುವುದನ್ನು ಮುಂದುವರಿಸುವನು. ಆದ್ದರಿಂದ ಪ್ರವಾದಿ ಹಬಕ್ಕೂಕನಿಗಿದ್ದ ಈ ಮನೋಭಾವವನ್ನು ಬೆಳೆಸಿಕೊಳ್ಳುವ ದೃಢನಿರ್ಧಾರ ಮಾಡೋಣ: “ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.” (ಹಬ. 3:17, 18) ನಮಗಿರುವ ಆಶೀರ್ವಾದಗಳನ್ನು ಈ ವರ್ಷ ಪೂರ್ತಿ ಹರ್ಷದಿಂದ ನೆನಸೋಣ. 2015ರ ವರ್ಷ ವಚನದ ಮಾತುಗಳನ್ನು ಪಾಲಿಸೋಣ: ‘ಯೆಹೋವನಿಗೆ ಕೃತಜ್ಞತೆ ಸಲ್ಲಿಸಿ. ಆತನು ಒಳ್ಳೆಯವನು.’—ಕೀರ್ತ. 106:1.

^ ಪ್ಯಾರ. 10 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.