ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಡಿಸೆಂಬರ್ 2014

ಅವರಿಗೆ ‘ಆ ಮಾರ್ಗ ತಿಳಿದಿತ್ತು’

ಅವರಿಗೆ ‘ಆ ಮಾರ್ಗ ತಿಳಿದಿತ್ತು’

ಗೈ ಹಾಲಸ್‌ ಪಿಯರ್ಸ್‌ರವರು ಮಾರ್ಚ್ 18, 2014ರ ಮಂಗಳವಾರದಂದು ತಮ್ಮ ಭೂಜೀವಿತವನ್ನು ಮುಗಿಸಿದರು. ಅವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿದ್ದರು. ಕ್ರಿಸ್ತನ ಪುನರುತ್ಥಿತ ಸಹೋದರರಲ್ಲಿ ಒಬ್ಬರಾಗುವ ಅವರ ನಿರೀಕ್ಷೆಯು ನೆರವೇರಿದಾಗ ಅವರಿಗೆ 79 ವರ್ಷ.—ಇಬ್ರಿ. 2:10-12; 1 ಪೇತ್ರ 3:18.

ಅಮೆರಿಕದಲ್ಲಿರುವ ಕ್ಯಾಲಿಫೋರ್ನಿಯಾದ ಆಬರ್ನ್‌ನಲ್ಲಿ 1934 ನವೆಂಬರ್‌ 6ರಂದು ಗೈ ಪಿಯರ್ಸ್‌ ಜನಿಸಿದರು. 1955ರಲ್ಲಿ ಅವರಿಗೆ ದೀಕ್ಷಾಸ್ನಾನವಾಯಿತು. 1977ರಲ್ಲಿ ಪೆನ್ನೀ ಎಂಬ ಸಹೋದರಿಯನ್ನು ವಿವಾಹವಾದರು. ಸಹೋದರ ಪಿಯರ್ಸ್‌ ಒಬ್ಬ ಆದರ್ಶ ಪತಿ ಮತ್ತು ತಂದೆಯಾಗಿದ್ದರು. ತಮ್ಮ ಮಕ್ಕಳನ್ನಷ್ಟೇ ಅಲ್ಲ ಇತರರನ್ನೂ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದರು. 1982ರಲ್ಲಿ ಅವರು ಮತ್ತವರ ಪತ್ನಿ ಪಯನೀಯರ್‌ ಸೇವೆ ಆರಂಭಿಸಿದರು. 1986ರಿಂದ 11 ವರ್ಷಗಳ ವರೆಗೆ ಅಮೆರಿಕದಲ್ಲಿ ಸಂಚರಣ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು.

1997ರಲ್ಲಿ ಸಹೋದರ ಪಿಯರ್ಸ್‌ ಮತ್ತವರ ಪತ್ನಿ ಅಮೆರಿಕದ ಬೆತೆಲ್‌ ಕುಟುಂಬದ ಸದಸ್ಯರಾದರು. ಅಲ್ಲಿ ಸಹೋದರ ಪಿಯರ್ಸ್‌ ಸರ್ವಿಸ್‌ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡಿದರು. ನಂತರ 1998ರಲ್ಲಿ ಆಡಳಿತ ಮಂಡಲಿಯ ಪರ್ಸನಲ್‌ ಕಮಿಟಿಗೆ ಸಹಾಯಕರಾಗುವ ನೇಮಕವನ್ನು ಪಡೆದರು. 1999, ಅಕ್ಟೋಬರ್‌2ರಂದು ನಡೆದ ವಾಚ್‌ ಟವರ್‌ ಬೈಬಲ್‌ ಆ್ಯಂಡ್ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದಲ್ಲಿ ಸಹೋದರ ಪಿಯರ್ಸ್‌ ಆಡಳಿತ ಮಂಡಲಿಯ ಸದಸ್ಯರಾಗಿದ್ದಾರೆಂದು ಪ್ರಕಟನೆ ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ, ಅವರು ಪರ್ಸನಲ್‌, ರೈಟಿಂಗ್‌, ಪಬ್ಲಿಷಿಂಗ್‌ ಮತ್ತು ಕೋಆರ್ಡಿನೇಟರ್ಸ್‌ ಕಮಿಟಿಯಲ್ಲಿ ಕೆಲಸ ಮಾಡಿದ್ದರು.

ಅವರು ಸ್ನೇಹಮಯಿ, ತಾವೂ ನಕ್ಕು ಸುತ್ತಲಿದ್ದವರನ್ನೂ ನಗಿಸುತ್ತಿದ್ದರು. ಆದ್ದರಿಂದಲೇ ವಿವಿಧ ಹಿನ್ನೆಲೆಯ, ಸಂಸ್ಕೃತಿಯ ಜನರು ಅವರ ಜೊತೆ ಇರಲು ಇಷ್ಟಪಡುತ್ತಿದ್ದರು. ಅವರು ಪ್ರೀತಿಪರ, ದೀನ ವ್ಯಕ್ತಿಯಾಗಿದ್ದರು. ನೀತಿ ನಿಯಮ ಮತ್ತು ಮೂಲತತ್ವಗಳಿಗೆ ನಿಷ್ಠರಾಗಿದ್ದರು. ಯೆಹೋವನ ಮೇಲೆ ಅಚಲ ನಂಬಿಕೆ ಇಟ್ಟಿದ್ದರು. ಈ ಎಲ್ಲಾ ಗುಣಗಳು ಇತರರನ್ನು ಅವರ ಕಡೆಗೆ ಸೆಳೆಯುತ್ತಿದ್ದವು. ಒಂದು ಪಕ್ಷ ಸೂರ್ಯ ಹುಟ್ಟದೇ ಇರಬಹುದು, ಆದರೆ ಯೆಹೋವನು ಕೊಟ್ಟಿರುವ ಮಾತು ತಪ್ಪದೆ ನೆರವೇರುತ್ತದೆಂದು ಸಹೋದರ ಪಿಯರ್ಸ್‌ ಬಲವಾಗಿ ನಂಬಿದ್ದರು. ಈ ವಿಷಯವನ್ನು ಇಡೀ ಜಗತ್ತಿಗೆ ಸಾರಿ ಹೇಳಬೇಕೆಂಬ ಉತ್ಕಟ ಬಯಕೆ ಅವರಿಗಿತ್ತು.

ಸಹೋದರ ಪಿಯರ್ಸ್‌ ಹಗಲಿರುಳೆನ್ನದೆ ಯೆಹೋವನ ಸೇವೆಯಲ್ಲಿ ತಲ್ಲೀನರಾಗಿದ್ದರು. ಬೆಳಗಿನ ಜಾವದಲ್ಲೇ ಎದ್ದು ಎಷ್ಟೋ ಸಾರಿ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರು. ಲೋಕವ್ಯಾಪಕ ಸಹೋದರರನ್ನು ಉತ್ತೇಜಿಸಲಿಕ್ಕಾಗಿ ದೂರದೂರ ಪ್ರದೇಶಗಳಿಗೆ ಪ್ರಯಾಣ ಮಾಡುತ್ತಿದ್ದರು. ಇಷ್ಟು ಕೆಲಸಗಳ ಮಧ್ಯೆಯೂ ಬೆತೆಲ್‌ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಮತ್ತು ತಮ್ಮ ಸಹವಾಸ, ಸಲಹೆ, ಸಹಾಯವನ್ನು ಬಯಸಿದವರೆಲ್ಲರಿಗೆ ತಪ್ಪದೆ ಸಮಯ ಕೊಡುತ್ತಿದ್ದರು. ಅವರು ಮಾಡುತ್ತಿದ್ದ ಅತಿಥಿ ಸತ್ಕಾರ, ಅವರ ಸ್ನೇಹ ಮತ್ತು ಬೈಬಲ್‍ನಿಂದ ಕೊಡುತ್ತಿದ್ದ ಉತ್ತೇಜನವನ್ನು ಜೊತೆ ಕ್ರೈಸ್ತರು ನೆನಪಿಸಿಕೊಳ್ಳುತ್ತಾರೆ.

ನಮ್ಮ ಆತ್ಮೀಯ ಸ್ನೇಹಿತರಾದ ಸಹೋದರ ಪಿಯರ್ಸ್‌ ತಮ್ಮ ಪತ್ನಿಯನ್ನು, ಆರು ಮಕ್ಕಳನ್ನು, ಮೊಮ್ಮಕ್ಕಳನ್ನು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ. ಜೊತೆಗೆ ಲೆಕ್ಕವಿಲ್ಲದಷ್ಟು ಆಧ್ಯಾತ್ಮಿಕ ಮಕ್ಕಳನ್ನೂ ಅಗಲಿದ್ದಾರೆ. ಮಾರ್ಚ್ 22, 2014ರ ಶನಿವಾರದಂದು ಬ್ರೂಕ್ಲಿನ್‌ ಬೆತೆಲ್‍ನಲ್ಲಿ ಸಹೋದರ ಪಿಯರ್ಸ್‌ರ ಶವಸಂಸ್ಕಾರ ನಡೆಯಿತು. ಆ ಸಮಯದಲ್ಲಿ ಆಡಳಿತ ಮಂಡಲಿಯ ಜೊತೆ ಸದಸ್ಯರಾದ ಮಾರ್ಕ್‌ ಸ್ಯಾ೦ಡರ್‌ಸನ್‌ ಭಾಷಣ ನೀಡಿದರು. ಆ ಭಾಷಣದಲ್ಲಿ ಅವರು ಸಹೋದರ ಪಿಯರ್ಸ್‌ರಿಗಿದ್ದ ಸ್ವರ್ಗೀಯ ನಿರೀಕ್ಷೆಯ ಬಗ್ಗೆ ತಿಳಿಸುತ್ತಾ ಯೇಸು ಹೇಳಿದ ಈ ಮಾತನ್ನು ಓದಿದರು: “ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಳಗಳಿವೆ. . . ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸುವುದಾದರೆ ಪುನಃ ಬಂದು ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು; ಆಗ ನಾನು ಇರುವಲ್ಲಿಯೇ ನೀವೂ ಇರುವಂತಾಗುವುದು. ನಾನು ಎಲ್ಲಿಗೆ ಹೋಗುತ್ತಿದ್ದೇನೋ ಆ ಮಾರ್ಗವು ನಿಮಗೆ ತಿಳಿದಿದೆ.”—ಯೋಹಾ. 14:2-4.

ಸಹೋದರ ಪಿಯರ್ಸ್‌ರ ಅಗಲುವಿಕೆಯಿಂದ ನಮಗೆ ಅತೀವ ದುಃಖವಾಗಿರುವುದೇನೋ ನಿಜ. ಆದರೆ ತಮ್ಮ ಶಾಶ್ವತ ‘ವಾಸಸ್ಥಾನಕ್ಕೆ’ ಹೋಗುವ ‘ಮಾರ್ಗವು ಅವರಿಗೆ ತಿಳಿದಿತ್ತು’ ಎನ್ನುವ ವಿಷಯ ನಮ್ಮೆಲ್ಲರಿಗೆ ಸಂತೋಷವನ್ನು ತರುತ್ತದೆ.