ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಸಂಗ್ರಹಾಲಯ

ಅರುಣೋದಯದ ನಾಡಲ್ಲಿ ಬೆಳಕು ಹರಿಯುತ್ತದೆ

ಅರುಣೋದಯದ ನಾಡಲ್ಲಿ ಬೆಳಕು ಹರಿಯುತ್ತದೆ

ಟೊಕಿಯೋದಲ್ಲಿ ಸಾರ್ವಜನಿಕ ಭಾಷಣದ ಆಮಂತ್ರಣ ಪತ್ರಗಳನ್ನು ಬಳಸಲಾಯಿತು. ಒಸಾಕ ನಗರದಲ್ಲಿ ಅವುಗಳನ್ನು ಏರ್‌ಪ್ಲೇನ್‌ಗಳಿಂದ ಚದುರಿಸಲಾಯಿತು

ಜಪಾನ್‍ನಲ್ಲಿ ಹುಟ್ಟಿ ಅಮೆರಿಕಾದಲ್ಲಿ ನೆಲೆಸಿದ್ದ ಪಿಲ್‌ಗ್ರಿಮ್‌ (ಸಂಚರಣಾ ಮೇಲ್ವಿಚಾರಕ) ಒಬ್ಬರು ಸೆಪ್ಟೆಂಬರ್‌ 6, 1926ರಂದು ಜಪಾನ್‌ಗೆ ಮಿಷನರಿಯಾಗಿ ಹಿಂದಿರುಗಿದರು. ದ ವಾಚ್‌ ಟವರ್‌ ಪತ್ರಿಕೆಯ ಚಂದಾದಾರರೊಬ್ಬರು ಇವರನ್ನು ಸ್ವಾಗತಿಸಿದರು. ಈ ಚಂದಾದಾರರು ಕೋಬಿಯಲ್ಲಿ ಬೈಬಲ್‌ ಅಧ್ಯಯನದ ಗುಂಪೊಂದನ್ನು ಆರಂಭಿಸಿದ್ದರು. ಆ ನಗರದಲ್ಲಿ ಜನವರಿ 2, 1927ರಂದು ಬೈಬಲ್‌ ವಿದ್ಯಾರ್ಥಿಗಳ ಮೊದಲ ಸಮ್ಮೇಳನ ಜರುಗಿತು. ಒಟ್ಟು 36 ಮಂದಿ ಹಾಜರಾಗಿದ್ದು 8 ಮಂದಿ ದೀಕ್ಷಾಸ್ನಾನ ಪಡೆದರು. ಇದೊಂದು ಒಳ್ಳೇ ಆರಂಭವಾಗಿದ್ದರೂ 6 ಕೋಟಿ ಜನರಿದ್ದ ಜಪಾನ್‌ ದೇಶದಲ್ಲಿ ಈ ಚಿಕ್ಕ ಗುಂಪು ಹೇಗೆ ಬೈಬಲ್‌ ಸತ್ಯದ ಬೆಳಕನ್ನು ಹರಡಿಸಲಿತ್ತು?

ತುಂಬ ಹುರುಪಿದ್ದ ಸಾಹಸೀ ಬೈಬಲ್‌ ವಿದ್ಯಾರ್ಥಿಗಳು ಮೇ 1927ರಲ್ಲಿ ಸಾರ್ವಜನಿಕ ಸಾಕ್ಷಿಕಾರ್ಯದ ಅಭಿಯಾನವೊಂದನ್ನು ಶುರುಮಾಡಿದರು. ಅದರಲ್ಲಿ ಅವರು ಬೈಬಲ್‌ ಭಾಷಣಗಳ ಸರಮಾಲೆಯ ಬಗ್ಗೆ ಜಾಹೀರುಪಡಿಸಿದರು. ಒಸಾಕ ನಗರದಲ್ಲಿ ಮೊದಲನೇ ಭಾಷಣವನ್ನು ಏರ್ಪಡಿಸಲಾಗಿತ್ತು. ಇದನ್ನು ಜಾಹೀರುಪಡಿಸಲಿಕ್ಕಾಗಿ ಸಹೋದರರು ಇಡೀ ನಗರದಲ್ಲಿ ದಾರಿ ಮಗ್ಗುಲುಗಳಲ್ಲಿ ಫಲಕಗಳನ್ನಿಟ್ಟರು. ಜೊತೆಗೆ ದೊಡ್ಡ ಜಾಹೀರಾತು ಫಲಕಗಳನ್ನು ಬಳಸಿದರು. 3,000ದಷ್ಟು ಆಮಂತ್ರಣ ಪತ್ರಗಳನ್ನು ಗಣ್ಯ ವ್ಯಕ್ತಿಗಳಿಗೂ ಕಳುಹಿಸಿದರು. 1,50,000ದಷ್ಟು ಕರಪತ್ರಗಳನ್ನು ವಿತರಿಸಿದರು. ಒಸಾಕದ ಪ್ರಮುಖ ದಿನಪತ್ರಿಕೆಗಳಲ್ಲೂ ಈ ಭಾಷಣದ ಜಾಹೀರಾತು ಕೊಟ್ಟರು. 4,00,000ದಷ್ಟು ಟ್ರೈನ್‌ ಟಿಕೆಟ್‌ಗಳ ಮೇಲೆ ಭಾಷಣದ ಬಗ್ಗೆ ಮಾಹಿತಿಯನ್ನು ಅಚ್ಚೊತ್ತಿಸಿದರು. ಭಾಷಣ ನಡೆಯಲಿದ್ದ ದಿನದಂದು 2 ಏರ್‌ಪ್ಲೇನ್‌ಗಳು ಇಡೀ ನಗರದ ಮೇಲೆ ಹಾರಾಡಿ 1,00,000 ಕರಪತ್ರಗಳನ್ನು ಮೇಲಿನಿಂದ ಚದುರಿಸಿದವು. ಇದೆಲ್ಲದರ ಪರಿಣಾಮವಾಗಿ ಒಸಾಕಾದ ಅಸಾಹಿ ಹಾಲ್‍ನಲ್ಲಿ ಸುಮಾರು 2,300 ಜನ “ದ ಕಿಂಗ್‍ಡಮ್‌ ಆಫ್‌ ಗಾಡ್ ಇಸ್‌ ಎಟ್‌ ಹ್ಯಾಂಡ್” (ದೇವರ ರಾಜ್ಯ ಹತ್ತಿರದಲ್ಲಿದೆ) ಎಂಬ ಆ ಭಾಷಣ ಕೇಳಲು ಕೂಡಿಬಂದರು. ಆದರೆ ಹಾಲ್‍ನಲ್ಲಿ ಜಾಗವಿಲ್ಲದ ಕಾರಣ ಹೆಚ್ಚುಕಡಿಮೆ 1,000ದಷ್ಟು ಜನರನ್ನು ವಾಪಸ್‌ ಕಳುಹಿಸಬೇಕಾಯಿತು. ಭಾಷಣ ಮುಗಿದ ನಂತರ 600ಕ್ಕಿಂತ ಹೆಚ್ಚು ಮಂದಿ ಪ್ರಶ್ನೋತ್ತರ ಚರ್ಚೆಗಾಗಿ ಉಳಿದರು. ಮುಂದಿನ ತಿಂಗಳುಗಳಲ್ಲಿ ಕ್ಯೋಟೊ ಮತ್ತು ಜಪಾನ್‍ನ ಪಶ್ಚಿಮ ದಿಕ್ಕಿನಲ್ಲಿದ್ದ ನಗರಗಳಲ್ಲೂ ಸಾರ್ವಜನಿಕ ಬೈಬಲ್‌ ಭಾಷಣಗಳನ್ನು ಕೊಡಲಾಯಿತು.

ಅಕ್ಟೋಬರ್‌ 1927ರಲ್ಲಿ ಬೈಬಲ್‌ ವಿದ್ಯಾರ್ಥಿಗಳು ಟೊಕಿಯೋದಲ್ಲಿ ಭಾಷಣಗಳನ್ನು ಏರ್ಪಡಿಸಿದರು. ಆಮಂತ್ರಣ ಪತ್ರಗಳನ್ನು ಪುನಃ ಗಣ್ಯ ವ್ಯಕ್ತಿಗಳಿಗೆ ವಿತರಿಸಲಾಯಿತು. ಜಪಾನ್‍ನ ಪ್ರಧಾನಿ, ಸಂಸತ್ತಿನ ಸದಸ್ಯರು, ಧಾರ್ಮಿಕ ಹಾಗೂ ಮಿಲಿಟರಿ ಅಧಿಕಾರಿಗಳಿಗೂ ಕೊಡಲಾಯಿತು. ಭಿತ್ತಿಪತ್ರಗಳನ್ನು ಬಳಸಲಾಯಿತು. ದಿನಪತ್ರಿಕೆಗಳಲ್ಲಿ ಜಾಹೀರಾತು ಕೊಡಲಾಯಿತು. 7,10,000 ಕರಪತ್ರಗಳನ್ನೂ ಬಳಸಲಾಯಿತು. ಟೊಕಿಯೋದಲ್ಲಿ ಕೊಡಲಾದ ಮೂರು ಭಾಷಣಗಳಿಗೆ ಹಾಜರಾದವರ ಒಟ್ಟು ಸಂಖ್ಯೆ 4,800.

ಹುರುಪಿನ ಕಾಲ್ಪೋರ್ಟರರು

Katsuo and Hagino Miura

ಕಾಲ್ಪೋರ್ಟರರು (ಪಯನೀಯರರು) ಪ್ರತಿಯೊಂದು ಮನೆಗೆ ಹೋಗಿ ರಾಜ್ಯ ಸಂದೇಶ ಮುಟ್ಟಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದರು. ಜಪಾನ್‍ನ ಮೊದಲ ಕಾಲ್ಪೋರ್ಟರರುಗಳಲ್ಲಿ ಒಬ್ಬರಾದ ಮಾಟ್ಸು ಇಶಿ ಮತ್ತು ಅವರ ಗಂಡ ಜಿಸೊ ಸೇರಿ ಜಪಾನ್‍ನ ಮುಕ್ಕಾಲು ಭಾಗದಷ್ಟು ಕ್ಷೇತ್ರವನ್ನು ಆವರಿಸಿದರು. ಜಪಾನ್‍ನ ಉತ್ತರ ಭಾಗದಲ್ಲಿರುವ ಸಪೊರೊದಿಂದ ಹಿಡಿದು ಸೆಂಡಾಯ್‌, ಟೊಕಿಯೋ, ಯೊಕೊಹಾಮ, ನಗೊಯ, ಒಸಾಕ, ಕ್ಯೊಟೊ, ಒಕೊಯಾಮ ಮತ್ತು ಟೊಕುಶಿಮಾ ನಗರಗಳಲ್ಲಿ ಸುವಾರ್ತೆ ಸಾರಿದರು. ಕಿಮೊನೊಗಳನ್ನು ಧರಿಸಿಕೊಂಡು ಸಹೋದರಿ ಇಶಿ ಮತ್ತು ವೃದ್ಧ ಸಹೋದರಿ ಸಾಕಿಕೊ ಟನಕ ಉಚ್ಚ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ಅಧಿಕಾರಿಗಳಲ್ಲಿ ಒಬ್ಬರು ದ ಹಾರ್ಪ್‌ ಆಫ್‌ ಗಾಡ್ ಮತ್ತು ಡೆಲಿವರೆನ್ಸ್‌ ಪುಸ್ತಕಗಳ ಒಟ್ಟು 600 ಪ್ರತಿಗಳನ್ನು ವಿನಂತಿಸಿದರು. ಅವರು ಈ ಪುಸ್ತಕಗಳನ್ನು ಜೈಲ್‍ನ ಗ್ರಂಥಾಲಯಗಳಲ್ಲಿ ಇಡಲು ಬಯಸಿದರು.

ಸಹೋದರಿ ಇಶಿಯವರಿಂದ ಕಟ್ಸುವೊ ಮತ್ತು ಹಾಗಿನೊ ಮೆಯುರಾ ಎಂಬವರು ಪುಸ್ತಕಗಳನ್ನು ಸ್ವೀಕರಿಸಿ ಅದರಲ್ಲಿರುವ ಸತ್ಯವನ್ನು ಬೇಗನೆ ಗ್ರಹಿಸಿದರು. 1931ರಲ್ಲಿ ಅವರ ದೀಕ್ಷಾಸ್ನಾನವಾಯಿತು. ಅವರೂ  ಕಾಲ್ಪೋರ್ಟರರಾದರು. ಹರುಯೀಚಿ ಮತ್ತು ಟಾನೆ ಯಮಡ ಎಂಬ ದಂಪತಿ ಮತ್ತವರ ಇನ್ನಿತರ ಬಂಧುಗಳು 1930ಕ್ಕಿಂತ ಸ್ವಲ್ಪ ಮುಂಚೆ ರಾಜ್ಯ ಸಂದೇಶವನ್ನು ಸ್ವೀಕರಿಸಿದರು. ಯಮಡ ದಂಪತಿ ಕಾಲ್ಪೋರ್ಟರ್‌ ಸೇವೆ ಆರಂಭಿಸಿದರು. ಅವರ ಮಗಳು ಯುಕಿಕೊ ಟೊಕಿಯೋದ ಬೆತೆಲ್‍ನಲ್ಲಿ ಸೇವೆ ಮಾಡಲು ಹೋದಳು.

ದೊಡ್ಡ ಮತ್ತು ಚಿಕ್ಕ “ಜೇಹು” ಬಂಡಿಗಳು

ದೊಡ್ಡ ಜೇಹು ಬಂಡಿಯಲ್ಲಿ 6 ಮಂದಿ ಪಯನೀಯರರು ಇರಬಹುದಿತ್ತು

ಹಿಂದೆಯೆಲ್ಲಾ ವಾಹನಗಳು ತುಂಬ ದುಬಾರಿಯಾಗಿದ್ದವು. ರಸ್ತೆಗಳೂ ಚೆನ್ನಾಗಿರಲಿಲ್ಲ. ಹಾಗಾಗಿ ಕಜುಮಿ ಮಿನೌರಾ ಮತ್ತು ಇತರ ಯುವ ಕಾಲ್ಪೋರ್ಟರರು ಸೇರಿ ಇಂಜಿನ್‌ ಇಲ್ಲದೆ ಚಲಿಸುವ ಮನೆಯಂತೆ ಕಾಣುವ ಬಂಡಿಗಳನ್ನು ಬಳಸಿದರು. ಈ ಬಂಡಿಗಳಲ್ಲಿ ಅವರು ವಾಸ ಕೂಡ ಮಾಡಬಹುದಿತ್ತು. ಅವುಗಳಿಗೆ “ಜೇಹು” (ಯೇಹು) ಎಂಬ ಅಡ್ಡಹೆಸರಿಟ್ಟರು. ಅಂದರೆ ವೇಗವಾಗಿ ರಥ ಓಡಿಸುತ್ತಿದ್ದ ಸಾರಥಿ ಮತ್ತು ಮುಂದೆ ಇಸ್ರಾಯೇಲಿನ ರಾಜನಾದಂಥ ಯೇಹುವಿನ ಹೆಸರು ಇಟ್ಟರು. (2 ಅರ. 10:15, 16) ಮೂರು ದೊಡ್ಡ ಜೇಹು ಬಂಡಿಗಳು (ಗ್ರೇಟ್‌ ಜೇಹು) ಇದ್ದವು. ಅವುಗಳ ಅಳತೆ 7.2 ಅಡಿ ಉದ್ದ, 6.2 ಅಡಿ ಅಗಲ, 6.2 ಅಡಿ ಎತ್ತರ. ಪ್ರತಿಯೊಂದು ಬಂಡಿಯಲ್ಲಿ 6 ಮಂದಿ ಪಯನೀಯರರು ಇರಬಹುದಿತ್ತು. ಜಪಾನ್‌ ಬ್ರಾಂಚ್‌ 11 ಚಿಕ್ಕ ಜೇಹು ಬಂಡಿಗಳನ್ನು (ಬೇಬಿ ಜೇಹು) ತಯಾರಿಸಿತು. ಅವುಗಳಲ್ಲಿ ಇಬ್ಬರು ಪ್ರಯಾಣಿಸಬಹುದಿತ್ತು ಮತ್ತು ಅವುಗಳನ್ನು ಸೈಕಲ್‌ ಸಹಾಯದಿಂದ ಎಳೆಯಬೇಕಿತ್ತು. ಕಿಚಿ ಇವಾಸಾಕಿ ಎಂಬವರು ಜೇಹು ಬಂಡಿಗಳನ್ನು ತಯಾರಿಸಲು ಸಹಾಯ ಮಾಡಿದರು. ಅವರು ಹೇಳುವುದು: “ಪ್ರತಿಯೊಂದು ಜೇಹು ಬಂಡಿಯಲ್ಲಿ ಒಂದು ಟೆಂಟ್‌ ಇರುತ್ತಿತ್ತು (ಬಂಡಿಯನ್ನು ಮುಚ್ಚಲು ಬಳಸುತ್ತಿದ್ದರು). ಜೊತೆಗೆ ಬೆಳಕಿಗಾಗಿ ಕಾರ್‌ ಬ್ಯಾಟರಿ ಸಹ ಇರುತ್ತಿತ್ತು.” ಈ ಜೇಹು ಬಂಡಿಗಳನ್ನು ಕಾಲ್ಪೋರ್ಟರರು ಉತ್ತರದ ಹಾಕ್ಕಾಯಿಡೊಯಿಂದ ದಕ್ಷಿಣದ ಕ್ಯುಶುವಿನ ವರೆಗೆ ಪರ್ವತಗಳ ಮೇಲೆ ಕೆಳಗೆ, ಕಣಿವೆಗಳಲ್ಲಿ ಎಳೆದುಕೊಂಡು ಹೋಗುತ್ತಿದ್ದರು. ಹೀಗೆ ಅವರು ಇಡೀ ಜಪಾನ್‍ನಲ್ಲಿ ಸತ್ಯದ ಬೆಳಕನ್ನು ಪ್ರಕಾಶಿಸಿದರು.

ಚಿಕ್ಕ ಜೇಹು ಬಂಡಿಯಲ್ಲಿ ಇಬ್ಬರು ಇರಬಹುದಿತ್ತು

ಕಾಲ್ಪೋರ್ಟರ್‌ ಆಗಿದ್ದ ಇಕೂಮಾಟ್ಸೂ ಒಟಾ ಹೇಳಿದ್ದು: “ನಾವು ಒಂದು ಪಟ್ಟಣಕ್ಕೆ ಬಂದಾಗ ನಮ್ಮ ಜೇಹು ಬಂಡಿಯನ್ನು ನದಿ ದಡದಲ್ಲಿ ಅಥವಾ ತೆರೆದ ಮೈದಾನದಲ್ಲಿ ನಿಲ್ಲಿಸುತ್ತಿದ್ದೆವು. ಪಟ್ಟಣದ ಗಣ್ಯ ವ್ಯಕ್ತಿಗಳನ್ನು ಉದಾಹರಣೆಗೆ ಮೇಯರನ್ನು ಭೇಟಿಮಾಡುತ್ತಿದ್ದೆವು. ನಂತರ ಮನೆಮನೆಗೆ ಹೋಗಿ ನಮ್ಮ ಸಾಹಿತ್ಯವನ್ನು ಪರಿಚಯಿಸುತ್ತಿದ್ದೆವು. ನಮ್ಮ ಕ್ಷೇತ್ರವನ್ನು ಆವರಿಸಿದ ನಂತರ ಬೇರೊಂದು ಪಟ್ಟಣಕ್ಕೆ ಹೋಗುತ್ತಿದ್ದೆವು.”

36 ಮಂದಿ ಬೈಬಲ್‌ ವಿದ್ಯಾರ್ಥಿಗಳು ಕೋಬಿಯಲ್ಲಿ ನಡೆಸಿದ ಆ ಮೊದಲ ಸಮ್ಮೇಳನದ ಸಮಯವನ್ನು “ಅಲ್ಪಕಾರ್ಯಗಳ ದಿನ” ಎಂದು ಕರೆಯಬಹುದು. (ಜೆಕ. 4:10) ಇದಾದ ಕೇವಲ 5 ವರ್ಷಗಳ ನಂತರ ಅಂದರೆ 1932ರಲ್ಲಿ ಜಪಾನ್‍ನಲ್ಲಿ ಸೇವೆಯ ವರದಿ ಸಲ್ಲಿಸುತ್ತಿದ್ದ ಕಾಲ್ಪೋರ್ಟರ್‌ ಮತ್ತು ಪ್ರಚಾರಕರ ಸಂಖ್ಯೆ 103ಕ್ಕೆ ತಲಪಿತ್ತು. ಇವರು ಆ ವರ್ಷ 14,000ಕ್ಕಿಂತ ಹೆಚ್ಚು ಪುಸ್ತಕಗಳನ್ನು ವಿತರಿಸಿದ್ದರು. ಇಂದು ಚೆನ್ನಾಗಿ ಯೋಜಿಸಲಾದ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಜಪಾನ್‍ನ ಮಹಾನಗರಗಳಲ್ಲಿ ಮಾಡಲಾಗುತ್ತಿದೆ. ಹತ್ತಿರಹತ್ತಿರ 2,20,000 ಮಂದಿ ಪ್ರಚಾರಕರು “ಅರುಣೋದಯದ ನಾಡಲ್ಲಿ” ಬೆಳಕನ್ನು ಪ್ರಕಾಶಿಸುತ್ತಿದ್ದಾರೆ.—ಜಪಾನ್‍ನ ನಮ್ಮ ಸಂಗ್ರಹಾಲಯದಿಂದ.

ಜಪಾನ್‌ ಬೆತೆಲಿನಲ್ಲಿ ಜೇಹು ಬಂಡಿಗಳನ್ನು ತಯಾರಿಸಿದ ಕಿಚಿ ಇವಾಸಾಕಿ ಬಿಡಿಸಿದ ಚಿತ್ರಗಳು