ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು

ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು

“ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ.” —1 ಪೇತ್ರ 1:15.

1, 2. (ಎ) ನಡವಳಿಕೆಯ ವಿಷಯದಲ್ಲಿ ದೇವಜನರಿಂದ ಏನನ್ನು ಅಪೇಕ್ಷಿಸಲಾಗುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ?

ಯಾಜಕಕಾಂಡ ಪುಸ್ತಕದಲ್ಲಿ ಒತ್ತಿ ಹೇಳಿರುವಂಥ ಪರಿಶುದ್ಧತೆಗೂ ಕ್ರೈಸ್ತರಾಗಿ ನಮ್ಮ ನಡವಳಿಕೆ ಪರಿಶುದ್ಧವಾಗಿರುವುದಕ್ಕೂ ಸಂಬಂಧವಿದೆ. ಇದನ್ನು ತೋರಿಸಲು ಯೆಹೋವನು ಅಪೊಸ್ತಲ ಪೇತ್ರನನ್ನು ಪ್ರೇರಿಸಿದನು. (1 ಪೇತ್ರ 1:14-16 ಓದಿ.) ಅಭಿಷಿಕ್ತ ಕ್ರೈಸ್ತರು ಮತ್ತು “ಬೇರೆ ಕುರಿಗಳು” ನಡವಳಿಕೆಗೆ ಸಂಬಂಧಪಟ್ಟ ಕೆಲವು ವಿಷಯಗಳಲ್ಲಿ ಮಾತ್ರ ಅಲ್ಲ ಬದಲಿಗೆ ನಡವಳಿಕೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳಲ್ಲೂ ಪವಿತ್ರರಾಗಿರಬೇಕು. ಇದಕ್ಕಾಗಿ ಅವರು ತಮ್ಮಿಂದಾದುದೆಲ್ಲವನ್ನೂ ಮಾಡಬೇಕೆಂದು ‘ಪವಿತ್ರನಾದ’ ಯೆಹೋವನು ಅಪೇಕ್ಷಿಸುತ್ತಾನೆ.—ಯೋಹಾ. 10:16.

2 ಯಾಜಕಕಾಂಡ ಪುಸ್ತಕದಲ್ಲಿರುವ ಆಧ್ಯಾತ್ಮಿಕ ರತ್ನಗಳ ಹೆಚ್ಚಿನ ಪರಿಶೀಲನೆ ತುಂಬ ಪ್ರಯೋಜನಕರ. ನಾವು ಕಲಿಯಲಿರುವ ವಿಷಯಗಳನ್ನು ಅನ್ವಯಿಸುವುದರಿಂದ ನಮ್ಮೆಲ್ಲಾ ನಡತೆಯಲ್ಲಿ ಪರಿಶುದ್ಧರಾಗಿರಲು ಸಹಾಯವಾಗುವುದು. ರಾಜಿಮಾಡಿಕೊಳ್ಳುವುದರ ಬಗ್ಗೆ ನಮ್ಮ ನೋಟ ಏನಾಗಿರಬೇಕು? ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವುದರ ಬಗ್ಗೆ ಯಾಜಕಕಾಂಡ ಪುಸ್ತಕ ಏನನ್ನು ಕಲಿಸುತ್ತದೆ? ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಯಜ್ಞಗಳ ಕುರಿತ ವಿಷಯದಿಂದ ನಾವೇನು ಕಲಿಯಬಲ್ಲೆವು? ಎಂಬ ಪ್ರಶ್ನೆಗಳನ್ನು ನಾವೀಗ ಪರಿಗಣಿಸೋಣ.

ರಾಜಿಮಾಡಿಕೊಳ್ಳಬೇಡಿ!

3, 4. (ಎ) ಬೈಬಲ್‍ನಲ್ಲಿರುವ ಆಜ್ಞೆ ಮತ್ತು ತತ್ವಗಳ ವಿಷಯದಲ್ಲಿ ಕ್ರೈಸ್ತರು ರಾಜಿಮಾಡಿಕೊಳ್ಳಬಾರದು ಏಕೆ? (ಬಿ) ನಾವು ಕೇಡಿಗೆ ಕೇಡು ಮಾಡಬಾರದು, ಮನಸ್ಸಲ್ಲಿ ದ್ವೇಷ ಇಟ್ಟುಕೊಳ್ಳಬಾರದು ಏಕೆ?

3 ನಾವು ಯೆಹೋವನನ್ನು ಮೆಚ್ಚಿಸಬೇಕಾದರೆ ಆತನು ಕೊಟ್ಟಿರುವ ಆಜ್ಞೆ ಮತ್ತು ತತ್ವಗಳಿಗೆ ಯಾವಾಗಲೂ ಅಂಟಿಕೊಂಡಿರಬೇಕು. ಅವುಗಳ ವಿಷಯದಲ್ಲಿ ರಾಜಿಮಾಡಿಕೊಳ್ಳುವಂಥ ಅಪವಿತ್ರ ಮನೋಭಾವ ನಮ್ಮಲ್ಲಿರಬಾರದು. ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ ನಿಜ. ಹಾಗಿದ್ದರೂ ಅದರಲ್ಲಿರುವ ವಿಷಯಗಳಿಂದ ದೇವರ ದೃಷ್ಟಿಯಲ್ಲಿ  ಯಾವುದು ಸ್ವೀಕಾರಾರ್ಹ, ಯಾವುದು ಅಲ್ಲ ಎಂದು ತಿಳಿದುಬರುತ್ತದೆ. ಉದಾಹರಣೆಗೆ ಇಸ್ರಾಯೇಲ್ಯರಿಗೆ ಈ ಆಜ್ಞೆ ಕೊಡಲಾಗಿತ್ತು: “ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.”—ಯಾಜ. 19:18.

4 ನಾವು ಕೇಡಿಗೆ ಕೇಡು ಮಾಡಬಾರದು, ಮನಸ್ಸಲ್ಲಿ ದ್ವೇಷ ಇಟ್ಟುಕೊಳ್ಳಬಾರದು ಎಂದು ಯೆಹೋವನು ಅಪೇಕ್ಷಿಸುತ್ತಾನೆ. (ರೋಮ. 12:19) ದೈವಿಕ ಆಜ್ಞೆ ಮತ್ತು ತತ್ವಗಳನ್ನು ನಾವು ಕಡೆಗಣಿಸುವಾಗ ಪಿಶಾಚನಿಗೆ ಬಹಳ ಸಂತೋಷವಾಗುತ್ತದೆ. ಜೊತೆಗೆ ಅದು ಯೆಹೋವನ ಹೆಸರಿಗೆ ಮಸಿ ಬಳಿಯುತ್ತದೆ. ಯಾರಾದರೂ ಬೇಕುಬೇಕೆಂದೇ ನಮ್ಮನ್ನು ನೋಯಿಸಿರುವಲ್ಲಿ ಅವರ ಬಗ್ಗೆ ದ್ವೇಷ ಹೊತ್ತಿರುವ ಪಾತ್ರೆಗಳಾಗದಿರೋಣ. “ಮಣ್ಣಿನ ಪಾತ್ರೆ”ಗಳಾಗಿರುವ ನಮಗೆ ಶುಶ್ರೂಷೆ ಎಂಬ ನಿಕ್ಷೇಪವನ್ನು ಹೊರುವ ಸುಯೋಗವನ್ನು ಯೆಹೋವನು ಕೊಟ್ಟಿದ್ದಾನೆ. (2 ಕೊರಿಂ. 4:1, 7) ಇಂಥ ಪಾತ್ರೆಗಳಲ್ಲಿ ಆ್ಯಸಿಡ್‍ನ೦ತಿರುವ ದ್ವೇಷ ಯಾಕಿರಬೇಕು ಹೇಳಿ?

5. ಆರೋನನ ಇಬ್ಬರು ಪುತ್ರರ ಸಾವಿನ ಕುರಿತ ವೃತ್ತಾಂತದಿಂದ ನಾವೇನು ಕಲಿಯಬಲ್ಲೆವು? (ಶೀರ್ಷಿಕೆ ಚಿತ್ರ ನೋಡಿ.)

5 ಆರೋನನ ಕುಟುಂಬದಲ್ಲಿ ನಡೆದ ಮನಕಲಕುವ ಘಟನೆಯೊಂದು ಯಾಜಕಕಾಂಡ 10:1-11ರಲ್ಲಿ ದಾಖಲಾಗಿದೆ. ಸ್ವರ್ಗದಿಂದ ಬೆಂಕಿ ಹೊರಟುಬಂದು ಆರೋನನ ಪುತ್ರರಾದ ನಾದಾಬ್ ಅಬೀಹುರನ್ನು ದೇವ ಗುಡಾರದಲ್ಲೇ ನಾಶಮಾಡಿದಾಗ ಆ ಕುಟುಂಬಕ್ಕೆ ನಿಂತ ನೆಲ ಕುಸಿದಂತಾಗಿರಬಹುದು. ಆದರೆ ಅವರ ಸಾವಿಗೆ ಕುಟುಂಬದವರು ಶೋಕಿಸಬಾರದಿತ್ತು. ಆರೋನ ಮತ್ತವನ ಕುಟುಂಬಕ್ಕೆ ಇದು ನಂಬಿಕೆಯ ಎಂಥಾ ಪರೀಕ್ಷೆಯಾಗಿತ್ತೆಂದು ಊಹಿಸಿ! ನಿಮ್ಮ ಕುಟುಂಬದವರು ಅಥವಾ ಇತರರು ಬಹಿಷ್ಕಾರ ಆಗಿರುವುದಾದರೆ ಅವರ ಜೊತೆ ಸಹವಾಸ ಮಾಡದೆ ಇರುವ ಮೂಲಕ ಪವಿತ್ರರಾಗಿ ಉಳಿಯುತ್ತೀರಾ?—1 ಕೊರಿಂಥ 5:11 ಓದಿ.

6, 7. (ಎ) ಸಾಕ್ಷಿಯಲ್ಲದ ಕುಟುಂಬದವರ ಮದುವೆಯಲ್ಲಿ ಭಾಗವಹಿಸಬೇಕಾ ಬೇಡವಾ ಎಂದು ನಿರ್ಣಯಿಸುವಾಗ ಯಾವ ಗಂಭೀರ ಅಂಶಗಳ ಬಗ್ಗೆ ನಾವು ಯೋಚಿಸಬೇಕು? (ಪಾದಟಿಪ್ಪಣಿ ನೋಡಿ.) (ಬಿ) ಅಂಥ ಮದುವೆಗಳ ಬಗ್ಗೆ ಇರುವ ನಮ್ಮ ನಿಲುವನ್ನು ಸಾಕ್ಷಿಯಲ್ಲದ ಸಂಬಂಧಿಕರಿಗೆ ಹೇಗೆ ವಿವರಿಸಬಹುದು?

6 ಆರೋನ ಮತ್ತವನ ಕುಟುಂಬಕ್ಕೆ ಬಂದಂಥ ಅದೇ ರೀತಿಯ ನಂಬಿಕೆಯ ಪರೀಕ್ಷೆ ನಮಗೆ ಬರದಿರಬಹುದು. ಆದರೆ ಈ ಸನ್ನಿವೇಶ ತಕ್ಕೊಳ್ಳಿ. ಚರ್ಚಲ್ಲಾಗುವ ಅಥವಾ ಸ್ಥಳೀಯ ಧಾರ್ಮಿಕ ಸಂಪ್ರದಾಯದ ಪ್ರಕಾರ ನಡೆಸಲಾಗುವ ಮದುವೆಗೆ ಸಾಕ್ಷಿಯಲ್ಲದ ಸಂಬಂಧಿಕರು ನಿಮ್ಮನ್ನು ಕರೆದರೆ, ಭಾಗವಹಿಸಲು ಕೇಳಿದರೆ ಆಗೇನು ಮಾಡುತ್ತೀರಾ? ನಾವು ಹೋಗಬಾರದೆಂದು ಹೇಳುವ ಯಾವುದೇ ನೇರ ಆಜ್ಞೆ ಬೈಬಲ್‍ನಲ್ಲಿಲ್ಲ. ಆದರೆ ಈ ವಿಷಯದಲ್ಲಿ ನಿರ್ಣಯಮಾಡಲು ಯಾವುದಾದರೂ ಬೈಬಲ್‌ ತತ್ವಗಳು ಇವೆಯಾ? *

7 ಇಂಥ ಸಂದರ್ಭಗಳಲ್ಲಿ ಯೆಹೋವನ ಮುಂದೆ ಪವಿತ್ರರಾಗಿ ಉಳಿಯುವ ನಮ್ಮ ದೃಢನಿರ್ಧಾರ ಸಾಕ್ಷಿಯಲ್ಲದ ನಮ್ಮ ಸಂಬಂಧಿಕರಿಗೆ ಅರ್ಥವಾಗದಿರಬಹುದು. (1 ಪೇತ್ರ 4:3, 4) ನಾವು ಅವರ ಮನನೋಯಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಸೌಮ್ಯವಾಗಿ ಆದರೂ ನೇರವಾಗಿ ಅವರೊಂದಿಗೆ ಇದರ ಬಗ್ಗೆ ಮಾತಾಡಬೇಕು. ಆದಷ್ಟು ಸಮಯ ಮುಂಚೆಯೇ ಇದನ್ನು ಮಾಡುವುದು ಒಳ್ಳೇದು. ಮದುವೆಗೆ ಕರೆದದ್ದಕ್ಕೆ ತುಂಬ ಖುಷಿಯಾಯಿತು, ಧನ್ಯವಾದ ಎಂದು ಅವರಿಗೆ ಹೇಳಬಹುದು. ಇದರಲ್ಲಿ ಧಾರ್ಮಿಕ ಆಚಾರ-ವಿಚಾರಗಳು ಸೇರಿರುವುದರಿಂದ ನಾವು ಪಾಲ್ಗೊಳ್ಳುವುದಿಲ್ಲ ಮತ್ತು ಇದು ಆ ವಿಶೇಷ ದಿನದಂದು ಅವರ ಸಂತೋಷಕ್ಕೆ ಧಕ್ಕೆ ತಂದು ಅವರಿಗೂ ನೆರೆದು ಬಂದವರಿಗೂ ಮುಜುಗರ ಉಂಟು ಮಾಡಬಹುದೆಂದು ವಿವರಿಸಿ. ಇದು ನಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳದೇ ಇರುವ ಒಂದು ವಿಧ.

ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಿರಿ!

8. ಯಾಜಕಕಾಂಡ ಪುಸ್ತಕ ಯೆಹೋವನ ಪರಮಾಧಿಕಾರವನ್ನು ಹೇಗೆ ಎತ್ತಿ ತೋರಿಸುತ್ತದೆ?

8 ಯಾಜಕಕಾಂಡ ಪುಸ್ತಕ ಯೆಹೋವನ ಪರಮಾಧಿಕಾರವನ್ನು ಎತ್ತಿ ತೋರಿಸುತ್ತದೆ. ಈ ಪುಸ್ತಕದಲ್ಲಿರುವ ಆಜ್ಞೆಗಳು ಯೆಹೋವನಿಂದ ಬಂದವುಗಳಾಗಿವೆ ಎಂದು ಅದರಲ್ಲಿ 30ಕ್ಕಿಂತಲೂ ಹೆಚ್ಚು ಬಾರಿ ತಿಳಿಸಲಾಗಿದೆ. ಈ ಆಜ್ಞೆಗಳು ಯೆಹೋವನಿಂದ ಬಂದದ್ದು ಎಂದು ಮೋಶೆ ಒಪ್ಪಿಕೊಂಡು ಆತನು ಹೇಳಿದಂತೆಯೇ ಮಾಡಿದನು. (ಯಾಜ. 8:4, 5) ನಾವು ಸಹ, ನಮ್ಮ ಪರಮಾಧಿಕಾರಿಯಾದ ಯೆಹೋವನು ಏನು ಹೇಳುತ್ತಾನೋ ಅದನ್ನು ಯಾವಾಗಲೂ ಮಾಡಬೇಕು. ಇದಕ್ಕಾಗಿ ನಮಗೆ ದೇವರ ಸಂಘಟನೆಯ ಬೆಂಬಲ ಇದೆ. ಆದರೆ ನಾವು ಒಬ್ಬರೇ ಇರುವಾಗ ನಂಬಿಕೆಯ ಪರೀಕ್ಷೆ ಬರಬಹುದು. ಯೇಸುವಿಗೂ ಅರಣ್ಯದಲ್ಲಿ ಹೀಗೇ ಆಗಿತ್ತು. (ಲೂಕ 4:1-13) ದೇವರ ಪರಮಾಧಿಕಾರದ ಮೇಲೆ ನಮ್ಮ ಲಕ್ಷ್ಯ ಇಟ್ಟು ಆತನಲ್ಲಿ ಭರವಸೆಯಿಟ್ಟರೆ ನಾವು ರಾಜಿಮಾಡಿಕೊಳ್ಳುವಂತೆ ಮಾಡಲು ಯಾರಿಂದಲೂ ಆಗುವುದಿಲ್ಲ.  ಭಯ ಎಂಬ ಉರುಲಿಗೆ ನಾವು ಸಿಕ್ಕಿಬೀಳುವುದಿಲ್ಲ.—ಜ್ಞಾನೋ. 29:25.

9. ಎಲ್ಲಾ ದೇಶಗಳಲ್ಲೂ ದೇವಜನರು ಏಕೆ ದ್ವೇಷಕ್ಕೆ ಗುರಿಯಾಗುತ್ತಾರೆ?

9 ನಾವು ಕ್ರಿಸ್ತನ ಹಿಂಬಾಲಕರೂ ಯೆಹೋವನ ಸಾಕ್ಷಿಗಳೂ ಆಗಿರುವುದರಿಂದ ಅನೇಕ ದೇಶಗಳಲ್ಲಿ ನಮ್ಮನ್ನು ಹಿಂಸಿಸಲಾಗುತ್ತದೆ. ಇದೇನು ಅನಿರೀಕ್ಷಿತ ವಿಷಯ ಅಲ್ಲ. ಏಕೆಂದರೆ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದ್ದನು: “ಜನರು ನಿಮ್ಮನ್ನು ಸಂಕಟಕ್ಕೆ ಒಪ್ಪಿಸಿ ಕೊಲ್ಲುವರು ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗುವಿರಿ.” (ಮತ್ತಾ. 24:9) ಇಂಥ ದ್ವೇಷದ ಮಧ್ಯೆಯೂ ನಾವು ರಾಜ್ಯ ಸುವಾರ್ತೆಯನ್ನು ಸಾರುತ್ತೇವೆ ಮತ್ತು ಯೆಹೋವನ ಮುಂದೆ ಪವಿತ್ರ ನಿಲುವನ್ನು ಕಾಪಾಡಿಕೊಳ್ಳುತ್ತೇವೆ. ನಾವು ಪ್ರಾಮಾಣಿಕರು, ಶಾರೀರಿಕ ಮತ್ತು ನೈತಿಕವಾಗಿ ಶುದ್ಧರು, ನಿಯಮಪಾಲಕ ಪ್ರಜೆಗಳು ಆಗಿದ್ದೇವೆ. ಹಾಗಿದ್ದರೂ ನಮ್ಮನ್ನೇಕೆ ಇಷ್ಟು ದ್ವೇಷಿಸಲಾಗುತ್ತದೆ? (ರೋಮ. 13:1-7) ಏಕೆಂದರೆ ನಾವು ಯೆಹೋವನನ್ನು ನಮ್ಮ ಪರಮಾಧಿಕಾರಿಯನ್ನಾಗಿ ಸ್ವೀಕರಿಸಿದ್ದೇವೆ! ನಾವು “ಆತನೊಬ್ಬನಿಗೇ” ಪವಿತ್ರ ಸೇವೆಯನ್ನು ಸಲ್ಲಿಸುತ್ತೇವೆ ಮತ್ತು ಯಾವುದೇ ಕಾರಣಕ್ಕೂ ಆತನ ನೀತಿಯುತ ಆಜ್ಞೆ ಹಾಗೂ ತತ್ವಗಳನ್ನು ರಾಜಿಮಾಡಿಕೊಳ್ಳುವುದಿಲ್ಲ.—ಮತ್ತಾ. 4:10.

10. ತನ್ನ ತಾಟಸ್ಥ್ಯವನ್ನು ಬಿಟ್ಟುಕೊಟ್ಟದ್ದರಿಂದ ಒಬ್ಬ ಸಹೋದರನಿಗೆ ಯಾವ ಪರಿಸ್ಥಿತಿ ಎದುರಾಯಿತು?

10 ಜೊತೆಗೆ ನಾವು ‘ಈ ಲೋಕದ ಭಾಗವಲ್ಲ.’ ಆದ್ದರಿಂದ ಲೋಕದ ಯುದ್ಧಗಳು ಮತ್ತು ರಾಜಕೀಯ ವಿಷಯಗಳಲ್ಲಿ ನಾವು ತಟಸ್ಥರು. ಅಂದರೆ ಯಾವುದೇ ಪಕ್ಷ ವಹಿಸುವುದಿಲ್ಲ. (ಯೋಹಾನ 15:18-21; ಯೆಶಾಯ 2:4 ಓದಿ.) ಆದರೆ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಕೆಲವರು ತಮ್ಮ ತಾಟಸ್ಥ್ಯವನ್ನು ಬಿಟ್ಟುಕೊಟ್ಟಿದ್ದಾರೆ. ಹೀಗೆ ಮಾಡಿದವರಲ್ಲಿ ಅನೇಕರು ಪಶ್ಚಾತ್ತಾಪಪಟ್ಟು ನಮ್ಮ ಕರುಣಾಮಯಿ ತಂದೆಯಾದ ಯೆಹೋವನೊಂದಿಗೆ ತಮ್ಮ ಸಂಬಂಧವನ್ನು ಪುನಃ ಬೆಸೆದುಕೊಂಡಿದ್ದಾರೆ. (ಕೀರ್ತ. 51:17) ಕೆಲವರು ಪಶ್ಚಾತ್ತಾಪಪಡಲಿಲ್ಲ. ಉದಾಹರಣೆಗೆ ಎರಡನೇ ಮಹಾ ಯುದ್ಧದ ಸಮಯದಲ್ಲಿ ಹಂಗೇರಿ ದೇಶದಲ್ಲಿ ಅನ್ಯಾಯವಾಗಿ ನಮ್ಮ ಸಹೋದರರನ್ನು ಜೈಲುಗಳಿಗೆ ಹಾಕಲಾಗಿತ್ತು. ಇವರಲ್ಲಿ 45ಕ್ಕಿಂತ ಕಡಿಮೆ ವಯಸ್ಸಿನ 160 ಮಂದಿಯನ್ನು ಒಂದು ಪಟ್ಟಣದಲ್ಲಿ ಒಟ್ಟುಸೇರಿಸಲಾಯಿತು. ಅಲ್ಲಿ ಅವರಿಗೆ ಮಿಲಿಟರಿ ಸೇವೆಯನ್ನು ಸ್ವೀಕರಿಸುವಂತೆ ಅಧಿಕಾರಿಗಳು ಆಜ್ಞೆಯಿತ್ತರು. ಆದರೆ ನಮ್ಮ ಸಹೋದರರು ನಂಬಿಗಸ್ತರಾಗಿದ್ದು ತಾಟಸ್ಥ್ಯವನ್ನು ಬಿಟ್ಟುಕೊಡಲಿಲ್ಲ. ಅವರಲ್ಲಿ 9 ಮಂದಿ ಮಾತ್ರ ಮಿಲಿಟರಿ ಪ್ರಮಾಣ ವಚನ ಸ್ವೀಕರಿಸಿ ಸೇನೆಯ ಸಮವಸ್ತ್ರ ಧರಿಸಿದರು. ತಮ್ಮ ತಾಟಸ್ಥ್ಯ ಬಿಟ್ಟುಕೊಟ್ಟವರಲ್ಲಿ ಒಬ್ಬನಿಗೆ ಎರಡು ವರ್ಷ ಆದ ಮೇಲೆ ನಂಬಿಗಸ್ತ ಸಾಕ್ಷಿಗಳನ್ನು ಗುಂಡಿಕ್ಕಿ ಕೊಲ್ಲುವ ನೇಮಕ ಕೊಡಲಾಗಿತ್ತು. ಆ ಸಾಕ್ಷಿಗಳಲ್ಲಿ ಅವನ ಸ್ವಂತ ಅಣ್ಣನೂ ಇದ್ದ! ಆದರೆ ಈ ಶಿಕ್ಷೆಯನ್ನು ರದ್ದು ಮಾಡಲಾಯಿತು.

ಅತ್ಯುತ್ತಮವಾದದ್ದನ್ನೇ ಯೆಹೋವನಿಗೆ ಕೊಡಿ!

11, 12. ಇಸ್ರಾಯೇಲ್ಯರು ಅರ್ಪಿಸಿದ ಯಜ್ಞಗಳಿಂದ ನಾವೇನು ಕಲಿಯಬಹುದು?

11 ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲ್ಯರು ಕೆಲವು ನಿರ್ದಿಷ್ಟ ಯಜ್ಞಗಳನ್ನು ಅರ್ಪಿಸಬೇಕಿತ್ತು. (ಯಾಜ. 9:1-4, 15-21) ಅವು ದೋಷವಿಲ್ಲದ್ದಾಗಿರಬೇಕಿತ್ತು ಏಕೆಂದರೆ ಅವು ಯೇಸುವಿನ ಪರಿಪೂರ್ಣ ಯಜ್ಞವನ್ನು ಸೂಚಿಸುತ್ತಿದ್ದವು. ಯಾವುದೇ ಯಜ್ಞವನ್ನು ಅರ್ಪಿಸಲಿ, ಅದನ್ನರ್ಪಿಸಲು ನಿರ್ದಿಷ್ಟವಾದ ವಿಧಾನ ಇರುತ್ತಿತ್ತು. ಉದಾಹರಣೆಗೆ ನವಜಾತ ಶಿಶುವಿದ್ದ ತಾಯಿಯಿಂದ ಏನನ್ನು ಅಪೇಕ್ಷಿಸಲಾಗುತ್ತಿತ್ತೆಂದು ಯಾಜಕಕಾಂಡ 12:6ರಲ್ಲಿ ನೋಡಿ: “ಗಂಡುಮಗುವನ್ನು ಹೆತ್ತರೂ ಹೆಣ್ಣುಮಗುವನ್ನು ಹೆತ್ತರೂ ಅವಳ ಶುದ್ಧೀಕರಣದ ದಿನಗಳು ಪೂರೈಸಿದಾಗ ಅವಳು ಸರ್ವಾಂಗಹೋಮಕ್ಕಾಗಿ ಒಂದು ವರುಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಪಾರಿವಾಳದ ಮರಿಯನ್ನು ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.” ಧರ್ಮಶಾಸ್ತ್ರದಲ್ಲಿ ದೇವರು ಅವಶ್ಯಪಡಿಸಿದಂಥ ವಿಷಯಗಳು ನಿರ್ದಿಷ್ಟವಾಗಿದ್ದರೂ ಅದರಲ್ಲಿ ಆತನ ಪ್ರೀತಿ ತುಂಬಿದ ನ್ಯಾಯಸಮ್ಮತತೆ ಎದ್ದುಕಾಣುತ್ತಿತ್ತು. ಒಂದುವೇಳೆ ತಾಯಿಗೆ ಕುರಿಯನ್ನು ಯಜ್ಞವಾಗಿ ಕೊಡಲು ಆಗದಿದ್ದರೆ ಎರಡು ಬೆಳವಕ್ಕಿಗಳನ್ನು ಅಥವಾ ಪಾರಿವಾಳದ ಮರಿಗಳನ್ನು ಕೊಡಬಹುದಿತ್ತು. (ಯಾಜ. 12:8) ಬೆಲೆಬಾಳುವ ಯಜ್ಞ ಅರ್ಪಿಸುತ್ತಿದ್ದವರನ್ನು ಯೆಹೋವನು ಮಾನ್ಯಮಾಡಿದ ಹಾಗೆಯೇ ಈ ಬಡ ಆರಾಧಕಳನ್ನು ಯೆಹೋವನು ಪ್ರೀತಿಸಿ ಅವಳ ಯಜ್ಞವನ್ನು ಮಾನ್ಯಮಾಡುತ್ತಿದ್ದನು. ಇದರಿಂದ ನಾವೇನು ಕಲಿಯಬಹುದು?

12 “ಸ್ತೋತ್ರಯಜ್ಞವನ್ನು” ದೇವರಿಗೆ ಅರ್ಪಿಸುವಂತೆ ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹಿಸಿದನು. (ಇಬ್ರಿ. 13:15) ನಮ್ಮ ತುಟಿಗಳು ಯೆಹೋವನ ಪರಿಶುದ್ಧ ಹೆಸರಿನ ಬಹಿರಂಗ ಪ್ರಕಟನೆ ಮಾಡಬೇಕು. ನಮ್ಮ ಸಹೋದರ ಸಹೋದರಿಯರಲ್ಲಿ ಕಿವುಡರಾಗಿರುವವರು ಸನ್ನೆ ಭಾಷೆ ಬಳಸಿ ಯೆಹೋವನಿಗೆ ಅಂಥ ಸ್ತುತಿ ಸಲ್ಲಿಸುತ್ತಿದ್ದಾರೆ. ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿರುವ ಕ್ರೈಸ್ತರು ಟೆಲಿಫೋನ್‌ ಹಾಗೂ ಪತ್ರಗಳ ಮೂಲಕ ಸಾಕ್ಷಿಕೊಡುತ್ತಾರೆ, ತಮ್ಮನ್ನು ನೋಡಿಕೊಳ್ಳುವವರಿಗೆ ಮತ್ತು ನೋಡಲು ಬಂದವರಿಗೆ ಯೆಹೋವನ  ಬಗ್ಗೆ ತಿಳಿಸುತ್ತಾರೆ. ಹೀಗೆ ಆತನಿಗೆ ಸ್ತುತಿ ಸಲ್ಲಿಸುತ್ತಾರೆ. ಯೆಹೋವನ ಹೆಸರನ್ನು ಇತರರಿಗೆ ತಿಳಿಯಪಡಿಸುವ ಮೂಲಕ ಮತ್ತು ಸುವಾರ್ತೆ ಸಾರುವ ಮೂಲಕ ನಾವು ಕೊಡುವ ಸ್ತೋತ್ರಯಜ್ಞ ನಮ್ಮ ಆರೋಗ್ಯ ಮತ್ತು ಸಾಮರ್ಥ್ಯಕ್ಕೆ ಹೊಂದಿಕೆಯಲ್ಲಿರಬೇಕು. ಅದು ನಮ್ಮಲ್ಲಿರುವುದರಲ್ಲೇ ಅತ್ಯುತ್ತಮವಾದದ್ದು ಆಗಿರಬೇಕು.—ರೋಮ. 12:1; 2 ತಿಮೊ. 2:15.

13. ನಾವು ಸೇವೆಯಲ್ಲಿ ಕಳೆದ ಸಮಯವನ್ನು ವರದಿಸಬೇಕು ಏಕೆ?

13 ನಮ್ಮ ಸ್ತೋತ್ರಯಜ್ಞಗಳನ್ನು ಯೆಹೋವನ ಮೇಲಿನ ಪ್ರೀತಿಯಿಂದ ಇಷ್ಟಪೂರ್ವಕವಾಗಿ ಅರ್ಪಿಸುತ್ತೇವೆ. (ಮತ್ತಾ. 22:37, 38) ಹಾಗಿದ್ದರೂ ನಾವು ಮಾಡಿದ ಸೇವೆಯ ಬಗ್ಗೆ ವರದಿಸಬೇಕೆಂದು ಕೇಳಿಕೊಳ್ಳಲಾಗಿದೆ. ಈ ಏರ್ಪಾಡಿನ ಬಗ್ಗೆ ನಮಗೆ ಯಾವ ನೋಟವಿರಬೇಕು? ಪ್ರತಿ ತಿಂಗಳು ನಾವು ಕೊಡುವ ವರದಿ ನಮಗಿರುವ ದೇವಭಕ್ತಿಯನ್ನು ತೋರಿಸುತ್ತದೆ. (2 ಪೇತ್ರ 1:7) ವರದಿಯಲ್ಲಿ ತುಂಬ ತಾಸುಗಳನ್ನು ಹಾಕಬೇಕು ಎನ್ನುವ ಕಾರಣಕ್ಕೆ ಮಾತ್ರ ಸೇವೆಯಲ್ಲಿ ತುಂಬ ಸಮಯ ಕಳೆಯಬೇಕು ಎಂದು ನೆನಸಬಾರದು. ಆರೋಗ್ಯ ಸಮಸ್ಯೆ ಮತ್ತು ವೃದ್ಧಾಪ್ಯದಿಂದಾಗಿ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗದವರು 15 ನಿಮಿಷ ಸೇವೆ ಮಾಡಿದರೂ ಅದನ್ನು ವರದಿಸಬಹುದು. ಈ ಕೆಲವೇ ನಿಮಿಷಗಳನ್ನು ಯೆಹೋವನು ತುಂಬ ಮಾನ್ಯಮಾಡುತ್ತಾನೆ. ಈ ರಾಜ್ಯ ಪ್ರಚಾರಕರು ತಮ್ಮಲ್ಲಿರುವುದರಲ್ಲೇ ಅತ್ಯುತ್ತಮವಾದದ್ದನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಎಂದು ಆತನು ವೀಕ್ಷಿಸುತ್ತಾನೆ. ತನ್ನ ಸಾಕ್ಷಿಗಳಾಗಿ ಸೇವೆ ಮಾಡುವುದನ್ನು ಅವರು ತುಂಬ ಅಮೂಲ್ಯವಾದದ್ದಾಗಿ ಎಣಿಸುತ್ತಾರೆಂದೂ ಯೆಹೋವನು ನೆನಪಿಡುತ್ತಾನೆ. ಇಸ್ರಾಯೇಲ್ಯರಲ್ಲಿ ಕೆಲವರಿಗೆ ಅವರ ಸನ್ನಿವೇಶದಿಂದಾಗಿ ದುಬಾರಿ ಯಜ್ಞಗಳನ್ನು ಅರ್ಪಿಸಲು ಆಗುತ್ತಿರಲಿಲ್ಲ. ಇಂದೂ ಯೆಹೋವನ ಸೇವಕರಲ್ಲಿ ಕೆಲವರಿಗೆ ತಾವು ಮಾಡುವ ಸೇವೆಯಲ್ಲಿ ಇತಿಮಿತಿಗಳಿವೆ. ಆದರೂ ಅವರು ಎಷ್ಟನ್ನು ಮಾಡಿರುತ್ತಾರೋ ಅಷ್ಟನ್ನು ವರದಿಸಬಹುದು. ನಮ್ಮ ವೈಯಕ್ತಿಕ ವರದಿಯನ್ನು ಭೌಗೋಳಿಕ ವರದಿಯೊಂದಿಗೆ ಸೇರಿಸಲಾಗುತ್ತದೆ. ಇದು ನಮ್ಮ ಸಂಘಟನೆಗೆ ಸುವಾರ್ತೆ ಸಾರುವ ಕೆಲಸಕ್ಕೆ ಯಾವೆಲ್ಲಾ ಏರ್ಪಾಡುಗಳನ್ನು ಮಾಡಬೇಕೆಂದು ಯೋಜಿಸಲು ಸಹಾಯಮಾಡುತ್ತದೆ. ಆದ್ದರಿಂದ ನಾವು ನಮ್ಮ ಸೇವೆಯನ್ನು ವರದಿಸಬೇಕು.

ನಮ್ಮ ಅಧ್ಯಯನ ರೂಢಿಗಳು ಮತ್ತು ಸ್ತೋತ್ರಯಜ್ಞಗಳು

14. ನಮ್ಮ ಅಧ್ಯಯನ ರೂಢಿಗಳನ್ನು ಏಕೆ ಪರಿಶೀಲಿಸಬೇಕೆಂದು ವಿವರಿಸಿ.

14 ನಾವು ಯಾಜಕಕಾಂಡ ಪುಸ್ತಕದ ಕೆಲವೊಂದು ಆಧ್ಯಾತ್ಮಿಕ ನಿಕ್ಷೇಪಗಳನ್ನು ಪರಿಶೀಲಿಸಿದೆವು. ‘ದೇವರ ಪ್ರೇರಿತ ವಾಕ್ಯದಲ್ಲಿ ಈ ಪುಸ್ತಕವನ್ನು ಏಕೆ ಸೇರಿಸಲಾಯಿತು ಎಂದು ನನಗೀಗ ಸರಿಯಾಗಿ ಅರ್ಥವಾಯಿತು’ ಎಂದು ನಿಮಗೀಗ ಅನಿಸುತ್ತಿರಬಹುದು. (2 ತಿಮೊ. 3:16) ನಿಮ್ಮನ್ನೇ ಪವಿತ್ರರಾಗಿಟ್ಟುಕೊಳ್ಳುವ ನಿಮ್ಮ ದೃಢನಿರ್ಧಾರ ಈಗ ಹೆಚ್ಚು ಬಲಗೊಂಡಿರಬೇಕು. ಯೆಹೋವನು ನಮ್ಮಿಂದ ಅತ್ಯುತ್ತಮವಾದದ್ದನ್ನು ಅವಶ್ಯಪಡಿಸುತ್ತಾನೆ ಮಾತ್ರವಲ್ಲ, ಅದನ್ನು ಪಡೆಯಲು ಆತನು ಯೋಗ್ಯನು ಸಹ. ನೀವೀಗ ಯಾಜಕಕಾಂಡ ಪುಸ್ತಕದಿಂದ ಏನನ್ನು ಕಲಿತಿರೋ ಅದರಿಂದಾಗಿ ಬೈಬಲಿನಲ್ಲಿರುವ ಇನ್ನಷ್ಟು ವಿಷಯಗಳನ್ನು ಕಲಿಯುವ ಆಸೆ ಹೆಚ್ಚಾಗಿರಬಹುದು. (ಜ್ಞಾನೋಕ್ತಿ 2:1-5 ಓದಿ.) ನಿಮ್ಮ ಅಧ್ಯಯನ ರೂಢಿಗಳು ಹೇಗಿವೆ ಎಂದು ಪ್ರಾರ್ಥನಾಪೂರ್ವಕವಾಗಿ ಪರಿಶೀಲಿಸಿ. ಹೀಗೆ ಕೇಳಿಕೊಳ್ಳಿ: ‘ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುತ್ತಿದ್ದೇನಾ? ಅಥವಾ ಟಿವಿ ಕಾರ್ಯಕ್ರಮಗಳು, ವಿಡಿಯೋ ಗೇಮ್ಸ್, ಕ್ರೀಡೆಗಳು, ಮತ್ತಿತ್ತರ ಹವ್ಯಾಸಗಳಿಗೆ ನಾನು ಕೊಡುತ್ತಿರುವ ಸಮಯ ಸತ್ಯದಲ್ಲಿ ಪ್ರಗತಿ ಮಾಡದ ಹಾಗೆ ನನ್ನನ್ನು ತಡೆಯುತ್ತಿವೆಯಾ?’ ಹೌದೆಂದು ನಿಮಗನಿಸಿದರೆ ಇಬ್ರಿಯ ಪುಸ್ತಕದಲ್ಲಿ ಪೌಲನು ಹೇಳಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೇದು.

ನಿಮ್ಮ ಜೀವನದಲ್ಲಿ ವೈಯಕ್ತಿಕ ಬೈಬಲ್‌ ಅಧ್ಯಯನ ಹಾಗೂ ಕುಟುಂಬ ಆರಾಧನೆಗೆ ಆದ್ಯತೆ ಕೊಡುತ್ತಿದ್ದೀರಾ? (ಪ್ಯಾರ 14 ನೋಡಿ)

15, 16. ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ನೇರವಾಗಿ ಮಾತಾಡಿದ್ದೇಕೆ?

15 ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಒಂದು ವಿಷಯವನ್ನು ನೇರವಾಗಿ ಹೇಳಿದನು. (ಇಬ್ರಿಯ 5:7, 11-14 ಓದಿ.) ಅವನು ಸುತ್ತಿ ಬಳಸಿ ಮಾತಾಡಲಿಲ್ಲ! ಅವರ “ಕಿವಿಗಳು ಮಂದ” ಆಗಿವೆಯೆಂದು ಹೇಳಿದನು. ಆದರೆ ಅವನದನ್ನು ಅಷ್ಟು ಖಡಕ್ಕಾಗಿ, ನೇರವಾಗಿ ಹೇಳಿದ್ದೇಕೆ? ಆಧ್ಯಾತ್ಮಿಕ ಹಾಲು ಕುಡಿಯುತ್ತಲೇ  ದಿನದೂಡುತ್ತಿದ್ದ ಆ ಕ್ರೈಸ್ತರ ವಿಷಯದಲ್ಲಿ ಯೆಹೋವನಿಗಿದ್ದ ಪ್ರೀತಿ ಹಾಗೂ ಚಿಂತೆಯನ್ನು ತೋರಿಸಲಿಕ್ಕಾಗಿ. ಕ್ರೈಸ್ತತ್ವದ ಮೂಲಭೂತ ಬೋಧನೆಗಳನ್ನು ತಿಳಿದಿರುವುದು ಪ್ರಾಮುಖ್ಯವೇನೊ ನಿಜ. ಆದರೆ ಕ್ರೈಸ್ತ ಪ್ರೌಢತೆಯತ್ತ ನಡೆಸುವ ಆಧ್ಯಾತ್ಮಿಕ ಬೆಳವಣಿಗೆ ಆಗಬೇಕಾದರೆ “ಗಟ್ಟಿಯಾದ ಆಹಾರ” ಸೇವಿಸುವುದು ಅಗತ್ಯ.

16 ಬೇರೆಯವರಿಗೆ ಬೋಧಿಸುವಷ್ಟರ ಮಟ್ಟಿಗೆ ಪ್ರಗತಿ ಮಾಡಬೇಕಾಗಿದ್ದ ಇಬ್ರಿಯ ಕ್ರೈಸ್ತರು ಇನ್ನೂ ಬೇರೆಯವರಿಂದ ಬೋಧಿಸಲ್ಪಡುವ ಹಂತದಲ್ಲೇ ಇದ್ದರು. ಏಕೆ? ಏಕೆಂದರೆ ಅವರು “ಗಟ್ಟಿಯಾದ ಆಹಾರ” ಸೇವಿಸುತ್ತಿರಲಿಲ್ಲ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಗಟ್ಟಿಯಾದ ಆಧ್ಯಾತ್ಮಿಕ ಆಹಾರದ ಬಗ್ಗೆ ನನಗೆ ಸರಿಯಾದ ಮನೋಭಾವ ಇದೆಯಾ? ನಾನದನ್ನು ಸೇವಿಸುತ್ತಿದ್ದೇನಾ? ಅಥವಾ ಪ್ರಾರ್ಥನೆ ಮತ್ತು ಗಾಢವಾದ ವೈಯಕ್ತಿಕ ಬೈಬಲ್‌ ಅಧ್ಯಯನವೆಂದರೆ ಮಾರು ದೂರ ಓಡುತ್ತೇನಾ? ನನ್ನ ಅಧ್ಯಯನ ರೂಢಿಗಳು ಸರಿಯಿಲ್ಲದಿರುವುದೇ ಇದಕ್ಕೆ ಕಾರಣವಾಗಿರಬಹುದಾ?’ ನಾವು ಜನರಿಗೆ ಸಾರಬೇಕು ಮಾತ್ರವಲ್ಲ ಅವರಿಗೆ ಬೋಧಿಸಿ, ಶಿಷ್ಯರನ್ನಾಗಿಯೂ ಮಾಡಬೇಕು.—ಮತ್ತಾ. 28:19, 20.

17, 18. (ಎ) ನಾವು ಗಟ್ಟಿಯಾದ ಆಧ್ಯಾತ್ಮಿಕ ಆಹಾರವನ್ನು ನಿಯಮಿತವಾಗಿ ಏಕೆ ಸೇವಿಸಬೇಕು? (ಬಿ) ಕ್ರೈಸ್ತ ಕೂಟಗಳಿಗೆ ಬರುವ ಮುಂಚೆ ಮದ್ಯಪಾನೀಯ ಸೇವಿಸುವುದರ ಬಗ್ಗೆ ನಮ್ಮ ನೋಟವೇನಾಗಿರಬೇಕು?

17 ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವುದು ನಮ್ಮಲ್ಲಿ ಅನೇಕರಿಗೆ ಸುಲಭವಾಗಿರಲಿಕ್ಕಿಲ್ಲ. ಅದನ್ನು ಮಾಡದಿದ್ದರೆ ನಾವೊಂದು ದೊಡ್ಡ ತಪ್ಪು ಮಾಡುತ್ತಿದ್ದೇವೆಂಬ ದೋಷಿಭಾವನೆಯನ್ನು ಯೆಹೋವನು ನಮ್ಮಲ್ಲಿ ಹುಟ್ಟಿಸಿ ನಾವು ಅಧ್ಯಯನ ಮಾಡುವಂತೆ ಒತ್ತಾಯ ಮಾಡುವುದಿಲ್ಲ ನಿಜ. ಹಾಗಿದ್ದರೂ ನಾವು ಗಟ್ಟಿಯಾದ ಆಧ್ಯಾತ್ಮಿಕ ಆಹಾರವನ್ನು ಸೇವಿಸುತ್ತಾ ಇರಬೇಕು. ನಾವು ಸತ್ಯಕ್ಕೆ ಬಂದು ಅನೇಕ ವರ್ಷಗಳೇ ಆಗಿರಲಿ, ತೀರ ಕಡಿಮೆ ಸಮಯವೇ ಆಗಿರಲಿ ಇದನ್ನು ಮಾಡಲೇಬೇಕು. ನಾವು ಪವಿತ್ರ ಮಾರ್ಗದಲ್ಲೇ ನಡೆಯುತ್ತಾ ಇರಬೇಕಾದರೆ ಇದು ಅತ್ಯಗತ್ಯ.

18 ನಾವು ಪವಿತ್ರರಾಗಿರಬೇಕಾದರೆ ಬೈಬಲು ಏನು ಹೇಳುತ್ತದೆಂದು ಜಾಗ್ರತೆಯಿಂದ ಪರಿಶೀಲಿಸಿ, ದೇವರು ಹೇಳಿದ್ದನ್ನು ಮಾಡಬೇಕು. ಆರೋನನ ಪುತ್ರರಾದ ನಾದಾಬ್ ಅಬೀಹುರ ಉದಾಹರಣೆ ತೆಗೆದುಕೊಳ್ಳಿ. ಅವರು ‘ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು’ ಸಮರ್ಪಿಸಿದರು. ಬಹುಶಃ ಆಗ ಅವರು ಮದ್ಯದ ನಶೆಯಲ್ಲಿದ್ದರು. ಹಾಗಾಗಿ ಯೆಹೋವನು ಅವರನ್ನು ಹತಿಸಿದನು. (ಯಾಜ. 10:1, 2) ಇದಾದ ನಂತರ ದೇವರು ಆರೋನನಿಗೆ ಏನಂದನೆಂದು ಗಮನಿಸಿ. (ಯಾಜಕಕಾಂಡ 10:8-11 ಓದಿ.) ಇದರರ್ಥ ನಾವು ಕ್ರೈಸ್ತ ಕೂಟಗಳಿಗೆ ಹೋಗುವ ಮುಂಚೆ ಯಾವುದೇ ಮದ್ಯಪಾನೀಯ ಕುಡಿಯಬಾರದೆಂದಾ? ಈ ಮುಂದಿನ ಅಂಶಗಳ ಬಗ್ಗೆ ಸ್ವಲ್ಪ ಯೋಚಿಸಿ: ನಾವೀಗ ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲ. (ರೋಮ. 10:4) ಕೆಲವು ದೇಶಗಳಲ್ಲಿ ನಮ್ಮ ಜೊತೆ ವಿಶ್ವಾಸಿಗಳು ಕೂಟಗಳಿಗೆ ಹೋಗುವ ಮುಂಚೆ ಊಟಮಾಡುವಾಗ ಮದ್ಯಪಾನೀಯ ಸೇವಿಸುತ್ತಾರೆ. ಆದರೆ ಅದು ಮಿತ ಪ್ರಮಾಣದ್ದಾಗಿರುತ್ತದೆ. ಪಸ್ಕ ಹಬ್ಬದಲ್ಲೂ ದ್ರಾಕ್ಷಾಮದ್ಯವನ್ನು ಬಳಸಲಾಗುತ್ತಿತ್ತು. ಸಂಧ್ಯಾ ಭೋಜನದ ಸಮಯದಲ್ಲಿ ಯೇಸು ತನ್ನ ಅಪೊಸ್ತಲರಿಗೆ ತನ್ನ ರಕ್ತವನ್ನು ಸೂಚಿಸುವ ದ್ರಾಕ್ಷಾಮದ್ಯವನ್ನು ಕುಡಿಯಲು ಕೊಟ್ಟನು. (ಮತ್ತಾ. 26:27) ವಿಪರೀತ ಕುಡಿತ ಮತ್ತು ಕುಡಿಕತನವನ್ನು ಬೈಬಲ್‌ ಖಂಡಿಸುತ್ತದೆ. (1 ಕೊರಿಂ. 6:10; 1 ತಿಮೊ. 3:8) ಅಲ್ಲದೆ, ಯಾವುದೇ ರೀತಿಯ ಪವಿತ್ರ ಸೇವೆಯಲ್ಲಿ ತೊಡಗುವ ಮುಂಚೆ ಮದ್ಯಪಾನೀಯ ಸೇವಿಸಲು ಅನೇಕ ಕ್ರೈಸ್ತರ ಮನಸ್ಸಾಕ್ಷಿ ಒಪ್ಪುವುದಿಲ್ಲ. ಹಾಗಿದ್ದರೂ ಎಲ್ಲಾ ದೇಶಗಳಲ್ಲಿ ಪರಿಸ್ಥಿತಿ ಒಂದೇ ತರ ಇರುವುದಿಲ್ಲ. ಮುಖ್ಯ ವಿಷಯವೇನೆಂದರೆ ಕ್ರೈಸ್ತರು ಯಾವುದು ಪವಿತ್ರ ಯಾವುದು ಅಪವಿತ್ರ ಎಂಬದನ್ನು ವಿವೇಚಿಸಲು ಶಕ್ತರಾಗಿರಬೇಕು. ಆಗ ಅವರ ನಡವಳಿಕೆ ದೇವರು ಮೆಚ್ಚುವಂಥ ಪವಿತ್ರ ನಡವಳಿಕೆ ಆಗಿರುತ್ತದೆ.

19. (ಎ) ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನದ ವಿಷಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡಬೇಕು? (ಬಿ) ಪವಿತ್ರರಾಗಿರುವ ವಿಷಯದಲ್ಲಿ ನಿಮ್ಮ ದೃಢತೀರ್ಮಾನವೇನು?

19 ದೇವರ ವಾಕ್ಯದಲ್ಲಿ ಹುಡುಕಿದರೆ ಇನ್ನೂ ಅನೇಕ ಆಧ್ಯಾತ್ಮಿಕ ರತ್ನಗಳು ನಿಮಗೆ ಸಿಗುವವು. ನಿಮ್ಮ ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನದ ಗುಣಮಟ್ಟವನ್ನು ಹೆಚ್ಚಿಸಲು ಲಭ್ಯವಿರುವ ಸಂಶೋಧನಾ ಸಾಧನಗಳನ್ನು ಬಳಸಿರಿ. ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತ ನಿಮ್ಮ ಜ್ಞಾನ ಹೆಚ್ಚಿಸಿ ಆತನಿಗೆ ಹತ್ತಿರವಾಗಿ. (ಯಾಕೋ. 4:8) ದೇವರಿಗೆ ಪ್ರಾರ್ಥಿಸಿ. ಕೀರ್ತನೆಗಾರನು ಹೀಗೆ ಹಾಡಿದನು: “ನನ್ನ ಕಣ್ಣು ತೆರೆ; ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು.” (ಕೀರ್ತ. 119:18) ಬೈಬಲಿನ ಆಜ್ಞೆಗಳು ಮತ್ತು ತತ್ವಗಳ ವಿಷಯದಲ್ಲಿ ಯಾವತ್ತೂ ರಾಜಿಮಾಡಿಕೊಳ್ಳಬೇಡಿ. ‘ಪವಿತ್ರನಾದ’ ಯೆಹೋವನ ಅತಿಶ್ರೇಷ್ಠ ಆಜ್ಞೆಗಳಿಗೆ ತಕ್ಕಂತೆ ನಡೆದುಕೊಳ್ಳಿ. “ದೇವರ ಸುವಾರ್ತೆಯನ್ನು ಪ್ರಕಟಿಸುವ ಪವಿತ್ರ ಕೆಲಸದಲ್ಲಿ” ಹುರುಪಿನಿಂದ ಪಾಲ್ಗೊಳ್ಳಿ. (1 ಪೇತ್ರ 1:15; ರೋಮ. 15:16) ಈ ತೊಂದರೆಗ್ರಸ್ತ ಕಡೇ ದಿವಸಗಳಲ್ಲಿ ಪವಿತ್ರರಾಗಿ ಉಳಿಯಿರಿ. ನಾವೆಲ್ಲರೂ ನಮ್ಮ ನಡವಳಿಕೆಯಲ್ಲಿ ಪವಿತ್ರರಾಗಿದ್ದು ನಮ್ಮ ಪವಿತ್ರ ದೇವರಾದ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯೋಣ.

^ ಪ್ಯಾರ. 6 ಮೇ 15, 2002 ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಲೇಖನ ನೋಡಿ.