ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಸೆಪ್ಟೆಂಬರ್ 2014

‘ಇದೇ ಸತ್ಯ’ ಎಂದು ನಿಮಗೆ ಮನವರಿಕೆ ಆಗಿದೆಯಾ? ಏಕೆ?

‘ಇದೇ ಸತ್ಯ’ ಎಂದು ನಿಮಗೆ ಮನವರಿಕೆ ಆಗಿದೆಯಾ? ಏಕೆ?

‘ದೇವರ ಉತ್ತಮವಾದ, ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳಿ.’—ರೋಮ. 12:2.

1. ಯುದ್ಧದ ಸಮಯದಲ್ಲಿ ಕ್ರೈಸ್ತಪ್ರಪಂಚದ ಪಾದ್ರಿಗಳು ಹೇಗೆ ಪ್ರತಿಕ್ರಿಯಿಸಿದರು?

ನಿಜ ಕ್ರೈಸ್ತರು ಯುದ್ಧ ಮಾಡಿ ಬೇರೆ ದೇಶದ ಜನರನ್ನು ಕೊಲ್ಲಬೇಕೆಂಬುದು ದೇವರ ಚಿತ್ತವೊ? ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಕಳೆದ 100 ವರ್ಷಗಳಲ್ಲಿ ಮಾಡಿರುವುದು ಇದನ್ನೇ. ಕ್ಯಾಥೊಲಿಕ್‌ ಸೇನಾ ಪಾದ್ರಿಗಳು ಸೈನಿಕರನ್ನು ಮತ್ತವರ ಶಸ್ತ್ರಗಳನ್ನು ಆಶೀರ್ವದಿಸಿ ವೈರಿ ದೇಶದ ಕ್ಯಾಥೊಲಿಕರ ವಿರುದ್ಧ ಯುದ್ಧಕ್ಕೆ ಕಳುಹಿಸಿದ್ದಾರೆ. ಪ್ರಾಟೆಸ್ಟೆಂಟ್‌ ಸೇನಾ ಪಾದ್ರಿಗಳೂ ಹೀಗೆ ಮಾಡಿದ್ದಾರೆ. ಆ ಯುದ್ಧಗಳಲ್ಲಿ ನಡೆದ ಮಾರಣಹೋಮಕ್ಕೆ ಎರಡನೇ ಮಹಾಯುದ್ಧವೇ ಸಾಕ್ಷಿ.

2, 3. ಯೆಹೋವನ ಸಾಕ್ಷಿಗಳು ಎರಡನೇ ಮಹಾಯುದ್ಧ ಹಾಗೂ ನಂತರದ ಸಮಯದಲ್ಲಿ ಯಾವ ನಿಲುವನ್ನು ಕಾಪಾಡಿಕೊಂಡರು? ಏಕೆ?

2 ಆ ಯುದ್ಧದ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಏನು ಮಾಡಿದರು? ಐತಿಹಾಸಿಕ ದಾಖಲೆ ತೋರಿಸುವುದೇನೆಂದರೆ ಸಾಕ್ಷಿಗಳು ತಟಸ್ಥರಾಗಿದ್ದು ಯಾವುದೇ ಪಕ್ಷವನ್ನು ಬೆಂಬಲಿಸಲಿಲ್ಲ. ಅವರ ಈ ನಿಲುವಿಗೆ ಆಧಾರವೇನಾಗಿತ್ತು? ಪ್ರಧಾನವಾಗಿ ಯೇಸುವಿನ ಮಾದರಿ ಮತ್ತು ಬೋಧನೆಗಳು. ಯೇಸು ಹೇಳಿದ್ದು: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:35) ಈ ಸಾಕ್ಷಿಗಳು ಪೌಲನು ಕೊರಿಂಥದ ಕ್ರೈಸ್ತರಿಗೆ ಬರೆದ ಮಾತುಗಳಲ್ಲಿರುವ ತತ್ವಗಳನ್ನು ನೆನಪಿಗೆ ತಂದು ತಮ್ಮ ಸನ್ನಿವೇಶಕ್ಕೆ ಅನ್ವಯಿಸಿಕೊಂಡರು.—2 ಕೊರಿಂಥ 10:3, 4 ಓದಿ.

3 ನಿಜ ಕ್ರೈಸ್ತರು ತಮ್ಮ ಮನಸ್ಸಾಕ್ಷಿಯನ್ನು ಬೈಬಲಿಗನುಸಾರ ತರಬೇತುಗೊಳಿಸಿರುತ್ತಾರೆ. ಆದ್ದರಿಂದ ಯುದ್ಧದಲ್ಲಾಗಲಿ ಯುದ್ಧಾಭ್ಯಾಸದಲ್ಲಾಗಲಿ ಅವರು  ಪಾಲ್ಗೊಳ್ಳುವುದಿಲ್ಲ. ಈ ಕ್ರೈಸ್ತ ನಿಲುವನ್ನು ಬಿಟ್ಟುಕೊಡದೇ ಇದ್ದ ಕಾರಣ ಸಾವಿರಾರು ಸಾಕ್ಷಿಗಳನ್ನು ಹಿಂಸಿಸಲಾಗಿದೆ. ಆಬಾಲವೃದ್ಧ, ಸ್ತ್ರೀಪುರುಷರು ಎನ್ನದೇ ಅನೇಕರನ್ನು ಶ್ರಮಶಿಬಿರ ಮತ್ತು ಜೈಲಿಗೆ ಹಾಕಲಾಯಿತು. ಜರ್ಮನಿಯಲ್ಲಿ ನಾಜಿ ಆಡಳಿತ ಇದ್ದಾಗ ಕೆಲವು ಸಾಕ್ಷಿಗಳನ್ನು ಕೊಲ್ಲಲಾಯಿತು ಸಹ. ಹೀಗೆ ಯುರೋಪಿನಲ್ಲಿ ಭಯಾನಕ ಹಿಂಸೆ ಇದ್ದರೂ ಸಾಕ್ಷಿಗಳು ಯೆಹೋವನ ರಾಜ್ಯದ ಬಗ್ಗೆ ಸುವಾರ್ತೆ ಸಾರುವ ತಮ್ಮ ನೇಮಕವನ್ನು ಮರೆಯಲಿಲ್ಲ. ಸಾಕ್ಷಿಗಳು ಜೈಲಿನಲ್ಲಿರಲಿ, ಸೆರೆಶಿಬಿರದಲ್ಲಿರಲಿ, ಗಡೀಪಾರು ಮಾಡಲ್ಪಟ್ಟಿರಲಿ ನಂಬಿಗಸ್ತರಾಗಿ ಸುವಾರ್ತೆ ಸಾರಿದರು. * ವರ್ಷಗಳ ನಂತರ 1994ರಲ್ಲಿ ರುವಾಂಡದಲ್ಲಿ ನಡೆದ ಸಾಮೂಹಿಕ ಹತ್ಯೆಯಲ್ಲಿ ಅಲ್ಲಿನ ಸಾಕ್ಷಿಗಳು ಕೈಜೋಡಿಸಲಿಲ್ಲ. ಹಿಂದೆ ಅಸ್ತಿತ್ವದಲ್ಲಿದ್ದ ಯುಗೋಸ್ಲಾವಿಯ ದೇಶ ಇಬ್ಭಾಗವಾದಾಗ ಬಾಲ್ಕನ್‌ ದೇಶಗಳಲ್ಲಾದ ಸಂಘರ್ಷದಲ್ಲಿ ನಡೆದ ರಕ್ತಪಾತದಲ್ಲೂ ಅವರು ಭಾಗವಹಿಸಲಿಲ್ಲ.

4. ಯೆಹೋವನ ಸಾಕ್ಷಿಗಳ ತಾಟಸ್ಥ್ಯ ಬೇರೆ ಜನರನ್ನು ಹೇಗೆ ಪ್ರಭಾವಿಸಿದೆ?

4 ಜಗತ್ತಿನಾದ್ಯಂತ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳ ತಾಟಸ್ಥ್ಯವನ್ನು ಗಮನಿಸಿದ್ದಾರೆ. ಸಾಕ್ಷಿಗಳಿಗೆ ಯೆಹೋವನ ಮೇಲೆ ಮತ್ತು ನೆರೆಯವರ ಮೇಲೆ ಅಪ್ಪಟ ಪ್ರೀತಿ ಇದೆ ಎಂದವರು ಮನಗಂಡಿದ್ದಾರೆ. ಇನ್ನೊಂದು ಮಾತಿನಲ್ಲಿ, ಸಾಕ್ಷಿಗಳು ನಿಜ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದಾರೆಂದು ಅವರು ಮನಗಂಡಿದ್ದಾರೆ. ಆದರೆ ನಮ್ಮ ಆರಾಧನೆಯಲ್ಲಿನ ಇನ್ನೂ ಕೆಲವು ವಿಷಯಗಳು ಜನರಿಗೆ ಯೆಹೋವನ ಸಾಕ್ಷಿಗಳೇ ನಿಜ ಕ್ರೈಸ್ತರೆಂದು ಮನಗಾಣಿಸಿದೆ.

ಇತಿಹಾಸದಲ್ಲೇ ಬೃಹತ್‌ ಶೈಕ್ಷಣಿಕ ಕೆಲಸ

5. ಕ್ರಿಸ್ತನ ಆರಂಭದ ಹಿಂಬಾಲಕರು ಯಾವ ಬದಲಾವಣೆಗೆ ಹೊಂದಿಕೊಳ್ಳಬೇಕಿತ್ತು?

5 ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರ ಮಹತ್ವವನ್ನು ಯೇಸು ತನ್ನ ಶುಶ್ರೂಷೆಯ ಆರಂಭದಿಂದಲೇ ಒತ್ತಿ ಹೇಳುತ್ತಾ ಬಂದನು. ಜಾಗತಿಕ ಮಟ್ಟದಲ್ಲಿ ಆಗಲಿದ್ದ ಈ ಕೆಲಸಕ್ಕೆ ಅಡಿಪಾಯ ಹಾಕಲು ಯೇಸು 12 ಮಂದಿ ಶಿಷ್ಯರನ್ನು ಆರಿಸಿದನು. ನಂತರ 70 ಮಂದಿ ಶಿಷ್ಯರಿಗೆ ತರಬೇತಿ ನೀಡಿದನು. (ಲೂಕ 6:13; 10:1) ಸುವಾರ್ತೆಯನ್ನು ಮೊದಲು ಯೆಹೂದ್ಯರಿಗೆ ಸಾರಲು ಶಿಷ್ಯರನ್ನು ಸನ್ನದ್ಧಗೊಳಿಸಲಾಗಿತ್ತು. ಆದರೆ ನಂತರ ಸುನ್ನತಿಯಾಗದ ಬೇರೆ ಜನಾಂಗದವರಿಗೂ ಸಾರಬೇಕಿತ್ತು. ಇದು ಹುರುಪಿನ ಯೆಹೂದಿ ಶಿಷ್ಯರಲ್ಲಿ ಅಚ್ಚರಿ ಹುಟ್ಟಿಸಿತು. ಅವರಿಗಿದು ದೊಡ್ಡ ಬದಲಾವಣೆಯಾಗಿತ್ತು!—ಅ. ಕಾ. 1:8.

6. ಯೆಹೋವನು ಪಕ್ಷಪಾತ ತೋರಿಸುವುದಿಲ್ಲವೆಂದು ಪೇತ್ರ ಹೇಗೆ ತಿಳಿದುಕೊಂಡನು?

6 ಅಪೊಸ್ತಲ ಪೇತ್ರನನ್ನು ಸುನ್ನತಿಯಾಗದ ಅನ್ಯಜನಾಂಗದವನಾದ ಕೊರ್ನೇಲ್ಯನ ಮನೆಗೆ ಕಳುಹಿಸಲಾಯಿತು. ದೇವರು ಪಕ್ಷಪಾತ ತೋರಿಸುವುದಿಲ್ಲವೆಂದು ಪೇತ್ರನು ಆಗ ತಿಳಿದುಕೊಂಡನು. ನಂತರ ಕೊರ್ನೇಲ್ಯ ಮತ್ತವನ ಕುಟುಂಬದವರು ದೀಕ್ಷಾಸ್ನಾನ ಪಡೆದರು. ಕ್ರೈಸ್ತ ಧರ್ಮ ಹೊಸದಾದ ದೊಡ್ಡ ಕ್ಷೇತ್ರಕ್ಕೆ ವಿಸ್ತರಣೆಯಾಗುತ್ತಿತ್ತು. ಎಲ್ಲಾ ಜನಾಂಗದ ಜನರು ಸತ್ಯಕ್ಕೆ ಕಿವಿಗೊಟ್ಟು ಅದನ್ನು ಸ್ವೀಕರಿಸಬಹುದಿತ್ತು. (ಅ. ಕಾ. 10:9-48) ಇಡೀ ಜಗತ್ತೇ ಸುವಾರ್ತೆ ಸಾರುವ ಕ್ಷೇತ್ರವಾಗಿಬಿಟ್ಟಿತು.

7, 8. ಜನರಿಗೆ ಸುವಾರ್ತೆಯನ್ನು ತಲಪಿಸಲು ಯೆಹೋವನ ಸಂಘಟನೆ ಏನು ಮಾಡಿದೆ? (ಶೀರ್ಷಿಕೆ ಚಿತ್ರ ನೋಡಿ.)

7 ಆಧುನಿಕ ದಿನದಲ್ಲಿ ಯೆಹೋವನ ಸಾಕ್ಷಿಗಳ ಮಧ್ಯೆ ಮುಂದಾಳತ್ವ ವಹಿಸುವವರು ಜಗತ್ತಿನಾದ್ಯಂತ ಸುವಾರ್ತೆಯನ್ನು ಸಾರುವ ಮತ್ತು ಬೋಧಿಸುವ ಕೆಲಸವನ್ನು ಹುರುಪಿನಿಂದ ಪ್ರವರ್ಧಿಸಿದ್ದಾರೆ. ಇಂದು ಸುಮಾರು 80 ಲಕ್ಷದಷ್ಟು ಹುರುಪಿನ ಸಾಕ್ಷಿಗಳು ಕ್ರಿಸ್ತನ ಸಂದೇಶವನ್ನು ಹಬ್ಬಿಸಲು ತಮ್ಮಿಂದಾದ್ದೆಲ್ಲವನ್ನು ಮಾಡುತ್ತಿದ್ದಾರೆ. ಇದನ್ನು 600ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾಡುತ್ತಿದ್ದಾರೆ ಮತ್ತು ಈ ಸಂಖ್ಯೆ ಹೆಚ್ಚಾಗುತ್ತಾ ಇದೆ. ಯೆಹೋವನ ಸಾಕ್ಷಿಗಳು ಮನೆಮನೆ ಹಾಗೂ ಬೀದಿ ಸಾಕ್ಷಿಕಾರ್ಯಕ್ಕಾಗಿ ಹೆಸರುವಾಸಿ. ಕೆಲವೊಮ್ಮೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮೇಜು ಅಥವಾ ತಳ್ಳುಬಂಡಿ ಇಟ್ಟು ಸಾಹಿತ್ಯ ಪ್ರದರ್ಶಿಸುವ ಮೂಲಕವೂ ಸಾಕ್ಷಿಕಾರ್ಯದಲ್ಲಿ ತೊಡಗುತ್ತಾರೆ.

8 ಬೈಬಲ್‌ ಮತ್ತು ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸಲು 2,900ಕ್ಕಿಂತಲೂ ಹೆಚ್ಚು ಭಾಷಾಂತರಕಾರರು ವಿಶೇಷ ತರಬೇತಿ ಪಡೆದಿದ್ದಾರೆ. ಪ್ರಧಾನ ಭಾಷೆಗಳಲ್ಲಿ ಮಾತ್ರವಲ್ಲ ಪ್ರಸಿದ್ಧವಲ್ಲದ ನೂರಾರು ಭಾಷೆಗಳಲ್ಲೂ ಭಾಷಾಂತರ ಮಾಡುತ್ತಾರೆ. ಪ್ರಸಿದ್ಧವಲ್ಲದಿದ್ದರೂ ಈ ಭಾಷೆಗಳನ್ನು ಲಕ್ಷಾಂತರ ಜನರು ಮಾತಾಡುತ್ತಾರೆ. ಉದಾಹರಣೆಗೆ, ಸ್ಪೇನ್‍ನಲ್ಲಿ ಕ್ಯಾಟಲೊನಿಯ ಎಂಬಲ್ಲಿನ ಲಕ್ಷಾಂತರ ನಿವಾಸಿಗಳ ಮಾತೃಭಾಷೆ ಕ್ಯಾಟಲನ್‌. ಇದನ್ನವರು ದಿನನಿತ್ಯವೂ ಬಳಸುತ್ತಾರೆ. ಇತ್ತೀಚೆಗೆ ಆಂಡೋರ, ಆಲಿಕಾಂಟಿ, ಬೆಲರಿಕ್‌ ದ್ವೀಪಗಳು ಮತ್ತು ವೆಲೆನ್ಸಿಯ ಎಂಬ ಸ್ಥಳಗಳಲ್ಲಿ ಕ್ಯಾಟಲನ್‌ ಭಾಷೆ ಮತ್ತದರ ಭಿನ್ನ ರೂಪಗಳ ಬಳಕೆ ಹೆಚ್ಚಾಗಿದೆ. ಈಗ ಯೆಹೋವನ ಸಾಕ್ಷಿಗಳು ಕ್ಯಾಟಲನ್‌ ಭಾಷೆಯಲ್ಲಿ  ಬೈಬಲ್‌ ಸಾಹಿತ್ಯವನ್ನು ತಯಾರಿಸುತ್ತಿದ್ದಾರೆ. ಈ ಭಾಷೆಯಲ್ಲಿ ಕ್ರೈಸ್ತ ಕೂಟಗಳು ಸಹ ನಡೆಯುತ್ತವೆ. ಇದು ಕ್ಯಾಟಲೊನಿಯನ್‌ ಜನರಿಗೆ ತುಂಬ ಸಂತೋಷ ತಂದಿದೆ.

9, 10. ಎಲ್ಲಾ ಜನರ ಆಧ್ಯಾತ್ಮಿಕ ಅಗತ್ಯಗಳ ಬಗ್ಗೆ ದೇವರ ಸಂಘಟನೆ ಆಸಕ್ತಿ ವಹಿಸುತ್ತಿದೆ ಎಂದು ಯಾವುದು ತೋರಿಸುತ್ತದೆ?

9 ಹೀಗೆ ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸುವ ಮತ್ತು ಜನರ ಸ್ವಂತ ಭಾಷೆಯಲ್ಲಿ ಬೋಧಿಸುವ ಕೆಲಸ ಭೌಗೋಳಿಕವಾಗಿ ನಡೆಯುತ್ತಿದೆ. ಮೆಕ್ಸಿಕೊ ದೇಶದ ರಾಷ್ಟ್ರಭಾಷೆ ಸ್ಪ್ಯಾನಿಷ್‌. ಆದರೆ ಅಲ್ಲಿ ಬೇರೆ ಭಾಷೆಗಳನ್ನಾಡುವ ಮೂಲನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಭಾಷೆಗಳಲ್ಲೊಂದು ಮಾಯಾ ಭಾಷೆ. ಮೆಕ್ಸಿಕೊ ದೇಶದ ಬ್ರಾಂಚ್‌ ಆಫೀಸ್‌ ಮಾಯಾ ಭಾಷಾಂತರ ತಂಡವನ್ನು ಇನ್ನೊಂದು ಪ್ರದೇಶಕ್ಕೆ ನೇಮಿಸಿತು. ಅಲ್ಲಿ ಭಾಷಾಂತರಕಾರರು ತಮ್ಮ ಭಾಷೆಯನ್ನು ದಿನಾಲೂ ಮಾತಾಡಲು, ಕೇಳಲು ಆಗುತ್ತಿದೆ. ಹೀಗೆ ಜನರಿಗೆ ಸುಲಭವಾಗಿ ಅರ್ಥವಾಗುವಂಥ ವಿಧದಲ್ಲಿ ಭಾಷಾಂತರಿಸಲು ಸಾಧ್ಯವಾಗುತ್ತಿದೆ. ಇನ್ನೊಂದು ಉದಾಹರಣೆ ನೇಪಾಳಿ ಭಾಷೆ. ಸುಮಾರು 2,90,00,000 ಜನಸಂಖ್ಯೆ ಇರುವ ಈ ದೇಶದಲ್ಲಿ 120ಕ್ಕಿಂತಲೂ ಹೆಚ್ಚು ಭಾಷೆಗಳಿವೆ. 1 ಕೋಟಿಗಿಂತ ಹೆಚ್ಚು ಜನರ ಮಾತೃಭಾಷೆ ನೇಪಾಳಿ. ಇನ್ನೂ ಅನೇಕರಿಗೆ ಅದು ಮಾತೃಭಾಷೆ ಅಲ್ಲದಿದ್ದರೂ ತಮ್ಮ ವ್ಯವಹಾರಗಳಲ್ಲಿ ಅದನ್ನು ಬಳಸುತ್ತಾರೆ. ನಮ್ಮ ಬೈಬಲ್‌ ಸಾಹಿತ್ಯ ನೇಪಾಳಿ ಭಾಷೆಯಲ್ಲೂ ಲಭ್ಯವಿದೆ.

10 ಯೆಹೋವನ ಸಂಘಟನೆ ಭೌಗೋಳಿಕವಾಗಿ ಭಾಷಾಂತರ ತಂಡಗಳಿಗೆ ಬೆಂಬಲ ಕೊಡುತ್ತಿದೆ. ಸುವಾರ್ತೆಯನ್ನು ಇಡೀ ಲೋಕದಲ್ಲಿ ಸಾರಬೇಕೆಂಬ ನೇಮಕವನ್ನು ಸಂಘಟನೆ ತುಂಬ ಗಂಭೀರವಾಗಿ ಪರಿಗಣಿಸುತ್ತದೆಂದು ಇದು ತೋರಿಸುತ್ತದೆ. ಕೋಟಿಗಟ್ಟಲೆ ಕರಪತ್ರಗಳು, ಕಿರುಹೊತ್ತಗೆಗಳು, ಪತ್ರಿಕೆಗಳನ್ನು ಲೋಕದಾದ್ಯಂತ ಅಭಿಯಾನಗಳ ಮೂಲಕ ಹಂಚಲಾಗುತ್ತಿದೆ. ಅದೂ ಉಚಿತವಾಗಿ. ಈ ಕೆಲಸದ ಖರ್ಚುವೆಚ್ಚಗಳು ಭರ್ತಿಯಾಗುತ್ತಿರುವುದು ಯೆಹೋವನ ಸಾಕ್ಷಿಗಳ ಸ್ವಯಂ ಪ್ರೇರಿತ ದೇಣಿಗೆಗಳಿಂದ. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಕೊಟ್ಟ ನಿರ್ದೇಶನವನ್ನು ಅವರು ಪಾಲಿಸುತ್ತಾರೆ.—ಮತ್ತಾ. 10:8.

ಲೋ ಜರ್ಮನ್‌ ಭಾಷೆಯ ಸಾಹಿತ್ಯ ಸಿದ್ಧಪಡಿಸುತ್ತಿರುವ ಭಾಷಾಂತರ ತಂಡ (ಪ್ಯಾರ 10 ನೋಡಿ)

ಪರಾಗ್ವೆ ದೇಶದಲ್ಲಿ ಲೋ ಜರ್ಮನ್‌ ಭಾಷೆಯ ಸಾಹಿತ್ಯ ತುಂಬ ಉಪಯುಕ್ತ (ಶೀರ್ಷಿಕೆ ಚಿತ್ರವನ್ನೂ ನೋಡಿ)

11, 12. ಯೆಹೋವನ ಸಾಕ್ಷಿಗಳು ಭೌಗೋಳಿಕವಾಗಿ ಮಾಡುತ್ತಿರುವ ಸಾರುವ ಕೆಲಸ ಬೇರೆಯವರ ಮೇಲೆ ಯಾವ ಒಳ್ಳೇ ಪ್ರಭಾವ ಬೀರಿದೆ?

11 ತಮ್ಮ ಕೆಲಸಕ್ಕೆ ಬದ್ಧರಾದ ಕ್ರೈಸ್ತ ಬೋಧಕರೂ, ಸೌವಾರ್ತಿಕರೂ ಆಗಿರುವ ಯೆಹೋವನ ಸಾಕ್ಷಿಗಳಿಗೆ ತಮಗೆ ಸಿಕ್ಕಿರುವುದು ಸತ್ಯ ಎಂದು ಎಷ್ಟು ಮನವರಿಕೆ ಆಗಿದೆ ಎಂದರೆ ಇತರ ದೇಶಗಳ ಹಾಗೂ ಸಂಸ್ಕೃತಿಯ ಜನರಿಗೆ ಸಾರಲಿಕ್ಕಾಗಿ ದೊಡ್ಡ ತ್ಯಾಗಗಳನ್ನು ಸಹ ಮಾಡುತ್ತಾರೆ. ಕ್ರೈಸ್ತರ ಈ ಪ್ರಾಮುಖ್ಯ ಕೆಲಸ ಮಾಡಲಿಕ್ಕಾಗಿ ಅವರಲ್ಲಿ ಅನೇಕರು ತಮ್ಮ ಜೀವನವನ್ನು ಸರಳೀಕರಿಸಿದ್ದಾರೆ, ಬೇರೆ ಭಾಷೆ ಕಲಿತಿದ್ದಾರೆ, ಬೇರೆ ಸಂಸ್ಕೃತಿಗೆ ಹೊಂದಿಸಿಕೊಂಡಿದ್ದಾರೆ. ಸಾರುವ ಮತ್ತು ಬೋಧಿಸುವ ಈ ಅಂತಾರಾಷ್ಟ್ರೀಯ ಕೆಲಸ, ಯೆಹೋವನ ಸಾಕ್ಷಿಗಳು ಕ್ರಿಸ್ತ ಯೇಸುವಿನ ನಿಜ ಹಿಂಬಾಲಕರು ಎನ್ನುವುದನ್ನು ಅನೇಕರಿಗೆ ಮನಗಾಣಿಸಿರುವ ಇನ್ನೊಂದು ಅಂಶ.

 12 ಸಾಕ್ಷಿಗಳು ಇದನ್ನೆಲ್ಲಾ ಯಾಕೆ ಮಾಡುತ್ತಾರೆಂದರೆ ತಮಗೆ ಸಿಕ್ಕಿರುವುದು ಸತ್ಯ ಎಂದವರಿಗೆ ಮನವರಿಕೆ ಆಗಿದೆ. ತಮ್ಮ ಬಳಿ ಸತ್ಯ ಇದೆ ಎಂದು ಲಕ್ಷಾಂತರ ಸಾಕ್ಷಿಗಳಿಗೆ ಮನಗಾಣಿಸಿರುವ ಇನ್ನೂ ಕೆಲವು ವಿಷಯಗಳಾವುವು?ರೋಮನ್ನರಿಗೆ 14:17, 18 ಓದಿ.

ಸಾಕ್ಷಿಗಳು ಯಾಕೆ ನಂಬುತ್ತಾರೆ?

13. ಸಾಕ್ಷಿಗಳು ಹೇಗೆ ತಮ್ಮ ಸಂಘಟನೆಯನ್ನು ಶುದ್ಧವಾಗಿಟ್ಟಿದ್ದಾರೆ?

13 ತಮಗೆ ಸತ್ಯ ಸಿಕ್ಕಿದೆಯೆಂದು ಮನವರಿಕೆಯಾಗಿರುವ ಇಂದಿನ ನಂಬಿಗಸ್ತ ಕ್ರೈಸ್ತರಿಂದ ಇದನ್ನು ತಿಳಿಯಬಹುದು. ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಒಬ್ಬರು ತಮ್ಮ ಭಾವನೆಯನ್ನು ಹೀಗೆ ಹಂಚಿಕೊಂಡರು: “ಯೆಹೋವನ ಸಂಘಟನೆ ನೈತಿಕವಾಗಿ ಶುದ್ಧವಾಗಿರಲು ಮತ್ತು ಯಾವುದೇ ಮಲಿನ ಹತ್ತದಂತೆ ನೋಡಿಕೊಳ್ಳಲು ಎಲ್ಲಾ ಕ್ರಮವನ್ನು ತೆಗೆದುಕೊಳ್ಳುತ್ತದೆ. ಬುದ್ಧಿವಾದ, ಶಿಸ್ತಿನ ಅಗತ್ಯ ಯಾರಿಗಿದ್ದರೂ ಸರಿಯೇ ಅದನ್ನು ಕೊಡಲಾಗುತ್ತದೆ.” ಈ ಉನ್ನತ ನೈತಿಕ ಮಟ್ಟವನ್ನು ಹೇಗೆ ಪಾಲಿಸಲಾಗುತ್ತದೆ? ದೇವರ ವಾಕ್ಯದಲ್ಲಿರುವ ಮಟ್ಟಗಳನ್ನು ಹಾಗೂ ಯೇಸು ಮತ್ತವನ ಶಿಷ್ಯರ ಮಾದರಿಯನ್ನು ಅನುಸರಿಸುವುದರಿಂದ. ಆದ್ದರಿಂದಲೇ ಆಧುನಿಕ ಸಮಯದಲ್ಲಿ ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸಲಿಲ್ಲ ಎಂಬ ಕಾರಣಕ್ಕೆ ಕ್ರೈಸ್ತ ಸಭೆಯಿಂದ ಬಹಿಷ್ಕಾರಗೊಂಡ ಯೆಹೋವನ ಸಾಕ್ಷಿಗಳ ಸಂಖ್ಯೆ ತುಂಬ ಕಡಿಮೆ. ಅಧಿಕಾಂಶ ಮಂದಿ ಶುದ್ಧ, ಆದರ್ಶಪ್ರಾಯ ಜೀವನ ನಡೆಸುತ್ತಾರೆ. ಇವರಲ್ಲಿ ಕೆಲವರು ಸಾಕ್ಷಿಗಳಾಗುವ ಮುಂಚೆ ದೇವರಿಗೆ ಮೆಚ್ಚಿಕೆಯಾಗದಂಥ ಜೀವನ ನಡೆಸುತ್ತಿದ್ದರೂ ಈಗ ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.—1 ಕೊರಿಂಥ 6:9-11 ಓದಿ.

14. (ಎ) ಬಹಿಷ್ಕಾರವಾದವರಲ್ಲಿ ಅನೇಕರು ಏನು ಮಾಡಿದ್ದಾರೆ? (ಬಿ) ಇದು ಯಾವ ಫಲಿತಾಂಶ ತಂದಿದೆ?

14 ಬೈಬಲಿನ ನಿರ್ದೇಶನದ ಮೇರೆಗೆ ಸಭೆಯಿಂದ ಬಹಿಷ್ಕಾರವಾದವರ ಕುರಿತೇನು? ಇವರಲ್ಲಿ ಸಾವಿರಾರು ಮಂದಿ ಅಕ್ರೈಸ್ತ ನಡವಳಿಕೆಗಾಗಿ ಪಶ್ಚಾತ್ತಾಪಪಟ್ಟಿದ್ದಾರೆ ಮತ್ತು ಪುನಃ ಸಭೆಗೆ ಮರಳಿದ್ದಾರೆ. ಅಂಥವರನ್ನು ಸ್ವಾಗತಿಸಲಾಗಿದೆ. (2 ಕೊರಿಂಥ 2:6-8 ಓದಿ.) ನಡತೆಯ ವಿಷಯದಲ್ಲಿ ಬೈಬಲ್‍ನಲ್ಲಿರುವ ಉನ್ನತ ಮಟ್ಟವನ್ನು ಎತ್ತಿಹಿಡಿದಿರುವ ಕಾರಣ ಕ್ರೈಸ್ತ ಸಭೆ ಶುದ್ಧವಾಗಿರಲು ಸಾಧ್ಯವಾಗಿದೆ. ಇದರಿಂದಾಗಿ ಸಭೆ ಮೇಲೆ ನಂಬಿಕೆ, ಭರವಸೆ ಹೆಚ್ಚಾಗುತ್ತದೆ. ಇಂದು ಅನೇಕ ಚರ್ಚುಗಳು ತಮ್ಮ ಜನರನ್ನು ‘ನಿಮಗೆ ಹೇಗೆ ಬೇಕೊ ಹಾಗಿರಿ’ ಎಂದು ಬಿಟ್ಟುಬಿಟ್ಟಿರುವಾಗ ಯೆಹೋವನ ಸಾಕ್ಷಿಗಳಾದರೊ ದೇವರ ಮಟ್ಟಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ವಿಷಯವೇ ಸಾಕ್ಷಿಗಳು ಸತ್ಯಕ್ಕೆ ತಕ್ಕಂತೆ ಬದುಕುವವರು ಎಂದು ಅನೇಕರಿಗೆ ಮನವರಿಕೆ ಮಾಡಿಸಿದೆ.

15. ತನಗೆ ಸತ್ಯ ಸಿಕ್ಕಿದೆಯೆಂದು ಒಬ್ಬ ಸಹೋದರನಿಗೆ ಯಾವುದು ಮನವರಿಕೆ ಮಾಡಿತು?

15 ತಮಗೆ ಸತ್ಯ ಸಿಕ್ಕಿದೆಯೆಂದು ಅನುಭವೀ ಸಾಕ್ಷಿಗಳು ನಂಬುವುದು ಏಕೆ? 54 ವರ್ಷದ ಒಬ್ಬ ಸಹೋದರ ಹೀಗೆ ವಿವರಿಸುತ್ತಾರೆ: “ನನ್ನ ಹದಿವಯಸ್ಸಿನಿಂದಲೂ ನನ್ನ ನಂಬಿಕೆಗೆ ಈ ಮೂರು ವಿಷಯಗಳು ಆಧಾರ ಎಂದು ನಂಬಿದ್ದೇನೆ: (1) ದೇವರಿದ್ದಾನೆ; (2) ಬೈಬಲ್‌ ಬಂದಿರುವುದು ಆತನಿಂದಲೇ; (3) ಇಂದು ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯನ್ನು ಆತನು ಬಳಸುತ್ತಿದ್ದಾನೆ ಮತ್ತು ಆಶೀರ್ವದಿಸುತ್ತಿದ್ದಾನೆ. ಈ ಎಲ್ಲಾ ವರ್ಷಗಳಲ್ಲಿ ನಾನು ಅಧ್ಯಯನ ಮಾಡುವಾಗಲೆಲ್ಲ ಈ ಮೂರು ವಿಷಯಗಳಿಗಾಗಿರುವ ಪುರಾವೆಯನ್ನು ಪರೀಕ್ಷಿಸಿ ಅದು ಬಲವಾದದ್ದಾಗಿದೆ ಎಂದು ಖಚಿತಪಡಿಸಿದ್ದೇನೆ. ಒಂದೊಂದರ ಪುರಾವೆಯೂ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ನನ್ನ ನಂಬಿಕೆಯನ್ನು ದೃಢ ಮಾಡುತ್ತಾ ಹೋಗಿದೆ. ನನಗೆ ಸಿಕ್ಕಿರುವುದು ನಿಜವಾಗಲೂ ಸತ್ಯ ಎಂಬ ಮನವರಿಕೆ ಈಗ ಆಳವಾಗಿ ಬೇರೂರಿ ನಿಂತಿದೆ.”

16. ಸತ್ಯದ ಯಾವ ಅಂಶ ಒಬ್ಬ ಸಹೋದರಿಯನ್ನು ಪ್ರಭಾವಿಸಿದೆ?

16 ನ್ಯೂಯಾರ್ಕ್‍ನಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ  ಸೇವೆಸಲ್ಲಿಸುತ್ತಿರುವ ಒಬ್ಬ ವಿವಾಹಿತ ಸಹೋದರಿ ಯೆಹೋವನ ಸಂಘಟನೆಯ ಬಗ್ಗೆ ಹೇಳಿದ್ದು: “ಯೆಹೋವನ ಹೆಸರನ್ನು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಘೋಷಿಸುವ ಏಕೈಕ ಸಂಘಟನೆ ಇದು. ಘೋಷಿಸಲೇ ಬೇಕಲ್ಲವಾ? ಏಕೆಂದರೆ ಆ ದೈವಿಕ ಹೆಸರು ಬೈಬಲಲ್ಲಿ 7,000 ಬಾರಿ ಇದೆ! ನನಗೆ 2 ಪೂರ್ವಕಾಲವೃತ್ತಾಂತ 16:9ರಲ್ಲಿರುವ ‘ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ’ ಎಂಬ ಪ್ರೋತ್ಸಾಹದಾಯಕ ಮಾತುಗಳು ತುಂಬ ಇಷ್ಟ. ಯೆಹೋವನು ನನ್ನ ಕಡೆಗೆ ತನ್ನ ಪ್ರತಾಪ ಅಂದರೆ ಬಲ ತೋರಿಸಬೇಕಾದರೆ ನನ್ನ ಹೃದಯ ಯಥಾರ್ಥವಾಗಿರಬೇಕೆಂದು ಸತ್ಯ ನನಗೆ ತೋರಿಸಿಕೊಟ್ಟಿದೆ. ಯೆಹೋವನ ಜೊತೆ ನನಗಿರುವ ಸಂಬಂಧ ತುಂಬ ಅಮೂಲ್ಯವಾದದ್ದು. ದೇವರ ಬಗ್ಗೆ ಸಮಗ್ರ ಜ್ಞಾನ ಕೊಡುವುದರಲ್ಲಿ ಯೇಸುವಿಗಿರುವ ಪಾತ್ರವನ್ನು ಮಾನ್ಯಮಾಡುತ್ತೇನೆ. ಆ ಜ್ಞಾನ ನನ್ನನ್ನು ಪೋಷಿಸುತ್ತದೆ.”

17. ಹಿಂದೆ ನಾಸ್ತಿಕನಾಗಿದ್ದವನಿಗೆ ಯಾವುದರ ಬಗ್ಗೆ ಮನದಟ್ಟಾಗಿದೆ? ಏಕೆ?

17 ಹಿಂದೆ ನಾಸ್ತಿಕನಾಗಿದ್ದ ಒಬ್ಬನು ಹೀಗೆ ಒಪ್ಪಿಕೊಳ್ಳುತ್ತಾನೆ: “ನಾನು ಸೃಷ್ಟಿಕಾರ್ಯವನ್ನು ನೋಡುವಾಗ ಮಾನವರು ಜೀವನವನ್ನು ಆನಂದಿಸಬೇಕೆನ್ನುವುದು ದೇವರ ಇಚ್ಛೆ ಮತ್ತು ಈ ಕಾರಣಕ್ಕಾಗಿ ಕಷ್ಟ-ನೋವುಗಳೆಲ್ಲ ಮುಂದುವರಿಯುವಂತೆ ಬಿಡುವುದಿಲ್ಲವೆಂದು ನನಗೆ ಮನದಟ್ಟಾಗುತ್ತದೆ. ಲೋಕವು ಭಕ್ತಿಹೀನತೆ ಎಂಬ ಕೆಸರಿನಲ್ಲಿ ಇನ್ನಷ್ಟು ಆಳಕ್ಕೆ ಮುಳುಗುತ್ತಿರುವಾಗ ಯೆಹೋವನ ಜನರಾದರೊ ನಂಬಿಕೆ, ಹುರುಪು ಮತ್ತು ಪ್ರೀತಿಯಲ್ಲಿ ಮುಂದೊತ್ತುತ್ತಾ ಇದ್ದಾರೆ. ಇಂಥ ಆಧುನಿಕ ಅದ್ಭುತ ನಡೆಸಲು ಯೆಹೋವನ ಪವಿತ್ರಾತ್ಮಕ್ಕೆ ಮಾತ್ರ ಸಾಧ್ಯ.”1 ಪೇತ್ರ 4:1-4 ಓದಿ.

18. ಇಬ್ಬರು ಸಹೋದರರು ವ್ಯಕ್ತಪಡಿಸಿರುವ ಭಾವನೆಗಳ ಬಗ್ಗೆ ನಿಮಗೆ ಹೇಗನಿಸುತ್ತದೆ?

18 ತುಂಬ ವರ್ಷಗಳಿಂದ ಸತ್ಯದಲ್ಲಿರುವ ಸಾಕ್ಷಿಯೊಬ್ಬರು ತಮಗೆ ಸಿಕ್ಕಿರುವುದು ಸತ್ಯ ಎಂದು ನಂಬಲು ಈ ಕಾರಣಗಳನ್ನು ಕೊಡುತ್ತಾರೆ: “ಯೆಹೋವನ ಸಾಕ್ಷಿಗಳು ಮೊದಲ ಶತಮಾನದಲ್ಲಿದ್ದ ಕ್ರೈಸ್ತ ಧರ್ಮದ ಮಾದರಿಯನ್ನು ಅನುಕರಿಸಲು ನಿಜವಾಗಲೂ ಪ್ರಯತ್ನ ಮಾಡಿದ್ದಾರೆ ಎಂದು ಅನೇಕ ವರ್ಷಗಳ ನನ್ನ ಅಧ್ಯಯನದಿಂದ ತಿಳಿದಿದ್ದೇನೆ. ನಾನು ಅನೇಕ ದೇಶಗಳಿಗೆ ಭೇಟಿ ನೀಡಿರುವುದರಿಂದ ಯೆಹೋವನ ಸಾಕ್ಷಿಗಳ ಭೌಗೋಳಿಕ ಐಕ್ಯವನ್ನು ಕಣ್ಣಾರೆ ಕಂಡಿದ್ದೇನೆ. ಬೈಬಲಿನ ಸತ್ಯ ನನಗೆ ಸಂತೃಪ್ತಿ, ಸಂತೋಷ ಕೊಟ್ಟಿದೆ.” 60 ದಾಟಿರುವ ಸಹೋದರರೊಬ್ಬರಿಗೆ ‘ನಿಮಗೆ ಸತ್ಯ ಸಿಕ್ಕಿದೆಯೆಂದು ಹೇಗೆ ಹೇಳುತ್ತೀರಾ?’ ಎಂದು ಕೇಳಿದಾಗ ಅವರು ಯೇಸುವಿನ ಬಗ್ಗೆ ಹೇಳುತ್ತಾ ವಿವರಿಸಿದ್ದು: “ಯೆಹೋವನ ಸಾಕ್ಷಿಗಳಾದ ನಾವು ಯೇಸುವಿನ ಮತ್ತು ಆತನ ಶುಶ್ರೂಷೆಯ ಬಗ್ಗೆ ಶ್ರದ್ಧೆಯಿಂದ ಅಧ್ಯಯನ ಮಾಡಿದ್ದೇವೆ. ಆತನ ಮಾದರಿಯನ್ನು ತುಂಬ ಮಾನ್ಯಮಾಡುತ್ತೇವೆ. ಕ್ರಿಸ್ತ ಯೇಸುವಿನ ಮೂಲಕ ದೇವರ ಸಮೀಪಕ್ಕೆ ಬರಲು ನಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡಿದ್ದೇವೆ. ಯೇಸುವಿನ ವಿಮೋಚನಾ ಮೌಲ್ಯದಿಂದ ಮಾತ್ರ ನಮಗೆ ರಕ್ಷಣೆ ಸಿಗುತ್ತದೆಂದು ಮನಗಂಡಿದ್ದೇವೆ. ಆತನ ಪುನರುತ್ಥಾನವಾಯಿತು ಎಂದು ನಂಬುತ್ತೇವೆ. ಅದನ್ನು ಕಣ್ಣಾರೆ ಕಂಡವರ ಭರವಸಾರ್ಹ ಸಾಕ್ಷಿಯೂ ನಮ್ಮ ಬಳಿ ಇದೆ.”1 ಕೊರಿಂಥ 15:3-8 ಓದಿ.

ಇತರರಿಗೆ ಸತ್ಯವನ್ನು ತಿಳಿಸಿ

19, 20. (ಎ) ರೋಮ್‍ನಲ್ಲಿದ್ದ ಸಭೆಗೆ ಪೌಲನು ಯಾವ ಜವಾಬ್ದಾರಿಯ ಬಗ್ಗೆ ಒತ್ತಿಹೇಳಿದನು? (ಬಿ) ಸಮರ್ಪಿತ ಕ್ರೈಸ್ತರಾಗಿರುವ ನಮಗೆ ಯಾವ ಸುಯೋಗವಿದೆ?

19 ನೆರೆಯವರನ್ನು ಪ್ರೀತಿಸುವ ಕ್ರೈಸ್ತರಾದ ನಾವು ಸತ್ಯದ ಅಮೂಲ್ಯ ಜ್ಞಾನವನ್ನು ನಮ್ಮಲ್ಲೇ ಇಟ್ಟುಕೊಳ್ಳಲು ಆಗುವುದೇ ಇಲ್ಲ. ರೋಮ್‍ನಲ್ಲಿದ್ದ ಸಭೆಯ ಸಹೋದರರಿಗೆ ಪೌಲನು ಹೇಳಿದ್ದು: “ಕ್ರಿಸ್ತನೇ ಕರ್ತನೆಂದು ‘ನಿಮ್ಮ ಬಾಯಿಂದಲೇ ಆ ವಾಕ್ಯವನ್ನು’ ಬಹಿರಂಗವಾಗಿ ಪ್ರಕಟಿಸಿ, ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ನಿಮ್ಮ ಹೃದಯದಲ್ಲಿ ನಂಬಿಕೆಯಿಡುವುದಾದರೆ ನೀವು ರಕ್ಷಿಸಲ್ಪಡುವಿರಿ. ಏಕೆಂದರೆ ಒಬ್ಬನು ನೀತಿಗಾಗಿ ಹೃದಯದಿಂದ ನಂಬಿಕೆಯನ್ನು ಅಭ್ಯಾಸಿಸುತ್ತಾನೆ; ಆದರೆ ರಕ್ಷಣೆಗಾಗಿ ಬಾಯಿಂದ ಬಹಿರಂಗವಾಗಿ ಪ್ರಕಟಿಸುತ್ತಾನೆ.”—ರೋಮ. 10:9, 10.

20 ನಮ್ಮ ಬಳಿ ಸತ್ಯ ಇದೆ ಎಂದು ಯೆಹೋವನ ಸಮರ್ಪಿತ ಸಾಕ್ಷಿಗಳಾದ ನಮಗೆ ಮನವರಿಕೆ ಆಗಿದೆ. ಇತರರಿಗೆ ದೇವರ ರಾಜ್ಯಾಡಳಿತದ ಸುವಾರ್ತೆಯ ಬಗ್ಗೆ ಕಲಿಸುವ ಸುಯೋಗವೂ ನಮಗಿದೆ ಎಂದು ತಿಳಿದಿದೆ. ಸುವಾರ್ತೆ ಸಾರುವ ನಮ್ಮ ನೇಮಕವನ್ನು ಪೂರೈಸುತ್ತಿರುವಾಗ ಬೈಬಲ್‍ನಿಂದ ನಾವೇನು ಕಲಿಸುತ್ತೇವೊ ಅದರಿಂದ ಮಾತ್ರವಲ್ಲ, ಇದೇ ಸತ್ಯ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ನೋಡಿ ಸಹ ಜನರು ಪ್ರಭಾವಿತರಾಗಲಿ.

^ ಪ್ಯಾರ. 3 ಏಪ್ರಿಲ್‌ 1, 2000ದ ಕಾವಲಿನಬುರುಜು ಪುಟ 24-28 ನೋಡಿ.