“ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.”—ಕೀರ್ತ. 68:11.

1, 2. (ಎ) ದೇವರು ಆದಾಮನಿಗೆ ಯಾವ ಉಡುಗೊರೆಗಳನ್ನು ಕೊಟ್ಟನು? (ಬಿ) ದೇವರು ಆದಾಮನಿಗೆ ಪತ್ನಿಯನ್ನು ಕೊಟ್ಟದ್ದೇಕೆ? (ಶೀರ್ಷಿಕೆ ಚಿತ್ರ ನೋಡಿ.)

ಯೆಹೋವನು ಈ ಭೂಮಿಯನ್ನು ಒಂದು ಉದ್ದೇಶದಿಂದ ಸೃಷ್ಟಿಸಿದನು. “ಅದನ್ನು . . . ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾ. 45:18) ಆತನ ಮೊದಲ ಮಾನವ ಸೃಷ್ಟಿಯಾದ ಆದಾಮ ಪರಿಪೂರ್ಣನಾಗಿದ್ದನು. ದೇವರು ಅವನಿಗೊಂದು ಅದ್ಭುತ ಮನೆಯನ್ನು ಕೊಟ್ಟನು. ಅದು ಏದೆನ್‌ ತೋಟ. ಅಲ್ಲಿ ದೊಡ್ಡ ದೊಡ್ಡ ಮರಗಳಿದ್ದವು, ಜುಳುಜುಳು ಹರಿಯುತ್ತಿರುವ ತೊರೆಗಳಿದ್ದವು, ಕುಣಿದು ಕುಪ್ಪಳಿಸುತ್ತಿದ್ದ ಪ್ರಾಣಿಗಳಿದ್ದವು. ಆದಾಮ ಎಷ್ಟು ಖುಷಿಯಾಗಿದ್ದನು! ಆದರೆ ಅವನಿಗೆ ತುಂಬ ಮುಖ್ಯವಾಗಿ ಬೇಕಾದದ್ದೇನೊ ಅಲ್ಲಿರಲಿಲ್ಲ. ಅದೇನೆಂದು ಯೆಹೋವನು ನುಡಿದ ಮಾತುಗಳಲ್ಲಿ ತಿಳಿದುಬರುತ್ತದೆ: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು.” ನಂತರ ದೇವರು ಆದಾಮನಿಗೆ ಗಾಢ ನಿದ್ದೆ ಬರಿಸಿ, ಅವನ ಒಂದು ಪಕ್ಕೆಲುಬನ್ನು ತೆಗೆದು ‘ಸ್ತ್ರೀಯಾಗಿ ಮಾಡಿದನು.’ ಆದಾಮನು ಎದ್ದು ನೋಡಿದಾಗ ಅವನಿಗೆ ಎಷ್ಟು ಸಂತೋಷವಾಯಿತು! “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ; ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಎಂದು ಹೇಳಿದನು.—ಆದಿ. 2:18-23.

2 ದೇವರು ಸ್ತ್ರೀಯನ್ನು ಸೃಷ್ಟಿಸಿ ಆಕೆಯನ್ನು ಆದಾಮನಿಗೆ ಕೊಟ್ಟದ್ದು ಒಂದು ಅಪೂರ್ವ ಉಡುಗೊರೆ ಆಗಿತ್ತು. ಏಕೆಂದರೆ ಆಕೆ ಪುರುಷನಿಗೆ ಪರಿಪೂರ್ಣ ಸಹಾಯಕಿ ಆಗಿರಲಿದ್ದಳು. ಮಕ್ಕಳನ್ನು ಹೆರುವಂಥ ವಿಶೇಷ ಸುಯೋಗ ಸಹ ಆಕೆಗಿತ್ತು. ಆದಾಮನು “ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು; ಯಾಕೆಂದರೆ ಬದುಕುವವರೆಲ್ಲರಿಗೂ ಅವಳೇ ಮೂಲಮಾತೆ” ಆಗಿರಲಿದ್ದಳು. (ಆದಿ. 3:20) ಪ್ರಥಮ ಮಾನವ ದಂಪತಿಗೆ  ಪರಿಪೂರ್ಣ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯವನ್ನು ಯೆಹೋವನು ಕೊಟ್ಟನು. ಅದೆಷ್ಟು ವಿಸ್ಮಯಕಾರಿ ಉಡುಗೊರೆ ಆಗಿತ್ತು! ಈ ಮೂಲಕ ಪರಿಪೂರ್ಣ ಮಾನವರು ಭೂಮಿಯನ್ನು ತುಂಬಿಕೊಂಡು ಭೂಮಿಯನ್ನು ಪರದೈಸಾಗಿ ಮಾಡಿ ಬೇರೆಲ್ಲ ಜೀವಿಗಳ ಮೇಲೆ ದೊರೆತನ ನಡೆಸಬೇಕಿತ್ತು.—ಆದಿ. 1:27, 28.

3. (ಎ) ದೇವರ ಆಶೀರ್ವಾದ ಪಡೆಯಲಿಕ್ಕಾಗಿ ಆದಾಮಹವ್ವರು ಏನು ಮಾಡಬೇಕಿತ್ತು? (ಬಿ) ಆದರೆ ಏನಾಯಿತು? (ಸಿ) ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

3 ಆದಾಮಹವ್ವರು ತಮ್ಮ ಮುಂದೆ ಇಡಲಾಗಿದ್ದ ಆಶೀರ್ವಾದಗಳನ್ನು ಪಡೆಯಬೇಕಾದರೆ ಯೆಹೋವನಿಗೆ ವಿಧೇಯರಾಗಿ ಆತನ ಆಳ್ವಿಕೆಯನ್ನು ಅಂಗೀಕರಿಸಬೇಕಿತ್ತು. (ಆದಿ. 2:15-17) ಆಗಮಾತ್ರ ಅವರು ದೇವರ ಉದ್ದೇಶವನ್ನು ಪೂರೈಸಸಾಧ್ಯವಿತ್ತು. ಆದರೆ ಅವರು “ಪುರಾತನ ಸರ್ಪ”ವಾದ ಸೈತಾನನ ಪ್ರಭಾವಕ್ಕೊಳಗಾಗಿ ದೇವರ ವಿರುದ್ಧ ಪಾಪಗೈದದ್ದು ದುಃಖಕರ ಸಂಗತಿ. (ಪ್ರಕ. 12:9; ಆದಿ. 3:1-6) ಅವರ ಈ ದಂಗೆಯು ಸ್ತ್ರೀಯರ ಮೇಲೆ ಯಾವ ಪರಿಣಾಮ ಬೀರಿದೆ? ಗತಕಾಲದ ದೇವಭಕ್ತ ಸ್ತ್ರೀಯರು ಏನನ್ನು ಸಾಧಿಸಿದ್ದಾರೆ? ಆಧುನಿಕ ದಿನದ ಕ್ರೈಸ್ತ ಮಹಿಳೆಯರನ್ನು ‘ದೊಡ್ಡ ಸ್ತ್ರೀಸಮೂಹ’ ಎಂದೇಕೆ ಕರೆಯಬಹುದು?—ಕೀರ್ತ. 68:11.

ದಂಗೆಯ ಪರಿಣಾಮ

4. ಪ್ರಥಮ ಮಾನವ ದಂಪತಿಯ ಪಾಪಕ್ಕಾಗಿ ಯಾರನ್ನು ಹೊಣೆಗಾರನನ್ನಾಗಿ ಮಾಡಲಾಯಿತು?

4 ದಂಗೆಯೇಳಲು ಕಾರಣವೇನೆಂದು ಆದಾಮನಿಗೆ ಕೇಳಲಾದಾಗ ಈ ಕುಂಟು ನೆಪ ಕೊಟ್ಟನು: “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು.” (ಆದಿ. 3:12) ಆದಾಮನು ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಸಾಲದ್ದಕ್ಕೆ ದೇವರು ಆತನಿಗೆ ಕೊಟ್ಟಿದ್ದ ಸ್ತ್ರೀಯ ಮೇಲೆ ಹಾಗೂ ಪ್ರೀತಿಯ ದಾತನ ಮೇಲೆ ದೂರು ಹಾಕಲೂ ಹೇಸಲಿಲ್ಲ. ಆದಾಮಹವ್ವರಿಬ್ಬರು ಪಾಪಮಾಡಿದರೂ ಆದಾಮನನ್ನು ಹೊಣೆಗಾರನನ್ನಾಗಿ ಮಾಡಲಾಯಿತು. ಆದ್ದರಿಂದಲೇ ‘ಒಬ್ಬ ಮನುಷ್ಯನಿಂದ [ಆದಾಮನಿಂದ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದವು’ ಎಂದು ಅಪೊಸ್ತಲ ಪೌಲನು ಬರೆದನು.—ರೋಮ. 5:12.

5. ತನ್ನ ಬೆಂಬಲವಿಲ್ಲದ ಮಾನವ ಆಳ್ವಿಕೆಯನ್ನು ಸ್ವಲ್ಪ ಸಮಯಕ್ಕೆ ದೇವರು ಅನುಮತಿಸಿರುವುದರಿಂದ ಏನು ಸಾಬೀತಾಗಿದೆ?

5 ಯೆಹೋವನು ತಮ್ಮ ಅಧಿಪತಿಯಾಗಿರುವ ಅಗತ್ಯವಿಲ್ಲವೆಂಬ ವಿಚಾರವನ್ನು ಸೈತಾನನು ಆ ಮೊದಲ ದಂಪತಿಯ ತಲೆಯಲ್ಲಿ ಹಾಕಿದ. ಇದರಿಂದಾಗಿ, ‘ಆಳುವ ಹಕ್ಕು ಯಾರಿಗಿದೆ?’ ಎಂಬ ಪರಮಾಧಿಕಾರದ ಕುರಿತ ಪ್ರಮುಖ ಪ್ರಶ್ನೆ ಎದ್ದಿತು. ಇದಕ್ಕೆ ಶಾಶ್ವತ ಉತ್ತರ ಒದಗಿಸಲಿಕ್ಕಾಗಿ ದೇವರು, ತನ್ನ ಬೆಂಬಲವಿಲ್ಲದೆ ಮನುಷ್ಯನು ಆಳ್ವಿಕೆ ನಡೆಸುವಂತೆ ಸ್ವಲ್ಪ ಸಮಯ ಅನುಮತಿ ಕೊಟ್ಟನು. ಇಂಥ ಆಳ್ವಿಕೆ ಖಂಡಿತ ಸೋಲುವುದೆಂಬ ಮಾತು ಮನುಷ್ಯರಿಗೆ ಅನುಭವದಿಂದ ತಿಳಿದುಬರುವುದೆಂದು ಆತನಿಗೆ ಗೊತ್ತಿತ್ತು. ಶತಮಾನಗಳಿಂದ ನಡೆದಿರುವ ಈ ಆಳ್ವಿಕೆಯಿಂದಾಗಿ ಮಾನವ ಸಮಾಜ ಒಂದರ ಮೇಲೊಂದರಂತೆ ವಿಪತ್ತುಗಳನ್ನು ಎದುರಿಸಿದೆ. ಕಳೆದ ಒಂದು ಶತಮಾನವನ್ನೇ ತೆಗೆದುಕೊಳ್ಳಿ. ಯುದ್ಧಗಳಲ್ಲಿ ಮಡಿದವರ ಸಂಖ್ಯೆ 10 ಕೋಟಿ. ಇದರಲ್ಲಿ ಲಕ್ಷಗಟ್ಟಲೆ ಅಮಾಯಕ ಗಂಡಸರು, ಹೆಂಗಸರು, ಮಕ್ಕಳು ಸೇರಿದ್ದಾರೆ. ಹೀಗೆ “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬ ಮಾತಿನ ಸತ್ಯತೆಗೆ ಈಗಾಗಲೇ ಬೆಟ್ಟದಷ್ಟು ಸಾಕ್ಷ್ಯವಿದೆ. (ಯೆರೆ. 10:23) ಮಾನವ ಆಳ್ವಿಕೆಯ ಈ ನಿಜಾಂಶವನ್ನು ಗ್ರಹಿಸಿದವರಾಗಿ ನಾವು ಯೆಹೋವನನ್ನೇ ನಮ್ಮ ಅಧಿಪತಿಯಾಗಿ ಅಂಗೀಕರಿಸುತ್ತೇವೆ.ಜ್ಞಾನೋಕ್ತಿ 3:5, 6 ಓದಿ.

6. ಅನೇಕ ದೇಶಗಳಲ್ಲಿ ಹೆಣ್ಮಕ್ಕಳನ್ನು ಹೇಗೆ ಉಪಚರಿಸಲಾಗುತ್ತಿದೆ?

6 ಸೈತಾನನ ವಶದಲ್ಲಿರುವ ಈ ಲೋಕದಲ್ಲಿ ಪುರುಷರು ಸ್ತ್ರೀಯರು ಎನ್ನದೆ ಎಲ್ಲರೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. (ಪ್ರಸಂ. 8:9; 1 ಯೋಹಾ. 5:19) ಆದರೆ ನಡೆದಿರುವ ಅತ್ಯಂತ ಘೋರ ಕೃತ್ಯಗಳಲ್ಲೊಂದು, ಸ್ತ್ರೀಯರ ಮೇಲಿನ ದೌರ್ಜನ್ಯ. ಲೋಕದಾದ್ಯಂತ ಶೇ. 30ರಷ್ಟು ಸ್ತ್ರೀಯರು ತಮ್ಮ ಗಂಡ ಅಥವಾ ಬಾಯ್‍ಫ್ರೆಂಡ್ನಿಂದ ಹಲ್ಲೆಗೊಳಗಾಗಿರುವುದನ್ನು ವರದಿಸಿದ್ದಾರೆ. ಕೆಲವೊಂದು ಸಮಾಜಗಳಲ್ಲಿ ಗಂಡುಮಕ್ಕಳೆಂದರೆ ವಿಪರೀತ ಪ್ರೀತಿ. ಅವರೇ ವಂಶೋದ್ಧಾರಕರು ಎಂಬ ಕಾರಣಕ್ಕಾಗಿ, ವಯಸ್ಸಾದ ಅಪ್ಪಅಮ್ಮ, ಅಜ್ಜಅಜ್ಜಿಗೆ ಅವರೇ ಆಸರೆ ಎಂಬ ಕಾರಣಕ್ಕಾಗಿ ಅವರಿಗೆ ರಾಜೋಪಚಾರ. ಕೆಲವೊಂದು ದೇಶಗಳಲ್ಲಂತೂ ಹೆಣ್ಣುಮಗು ಬೇಡ ಎಂಬ ಕಾರಣಕ್ಕಾಗಿ ಗಂಡಿಗಿಂತ ಹೆಚ್ಚಾಗಿ ಹೆಣ್ಣು ಭ್ರೂಣಹತ್ಯೆ ಮಾಡಿಸಲಾಗುತ್ತದೆ.

7. ದೇವರು ಗಂಡಸರಿಗೂ ಹೆಂಗಸರಿಗೂ ಯಾವ ರೀತಿಯ ಆರಂಭ ಕೊಟ್ಟನು?

7 ಸ್ತ್ರೀಯರ ದುರುಪಚಾರವನ್ನು ದೇವರು ಖಂಡಿತ ಮೆಚ್ಚುವುದಿಲ್ಲ. ಆತನು ಸ್ತ್ರೀಯರೊಟ್ಟಿಗೆ ನ್ಯಾಯದಿಂದ ವ್ಯವಹರಿಸುತ್ತಾನೆ, ಅವರನ್ನು ಗೌರವಿಸುತ್ತಾನೆ. ಈ ಸಂಗತಿಯು ಆತನು ಹವ್ವಳನ್ನು ಸೃಷ್ಟಿಸಿದ ರೀತಿಯಿಂದ ತಿಳಿದುಬರುತ್ತದೆ. ಆಕೆಯನ್ನು ಪರಿಪೂರ್ಣಳನ್ನಾಗಿ ಸೃಷ್ಟಿಸಿದನು. ಅವನು ಆಕೆಗೆ ಕೊಟ್ಟ ವಿಶಿಷ್ಟ ಗುಣಗಳು ಮತ್ತು ಲಕ್ಷಣಗಳು ಆಕೆಯನ್ನು ಆದಾಮನ ದಾಸಿ ಅಲ್ಲ ಬದಲಾಗಿ ಅವನಿಗೆ ಪೂರಕಳಾಗುವಂತೆ ಮಾಡಲಿದ್ದವು. ಆರನೇ ಸೃಷ್ಟಿದಿನದ ಕೊನೆಯಲ್ಲಿ ದೇವರು “ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿ”ರಲು  ಇದೂ ಒಂದು ಕಾರಣ. (ಆದಿ. 1:31) ಹೌದು, ದೇವರು ‘ಉಂಟುಮಾಡಿದ್ದೆಲ್ಲ’ ‘ಬಹು ಒಳ್ಳೇದಾಗಿತ್ತು.’ ಗಂಡಸರಿಗೂ ಹೆಂಗಸರಿಗೂ ಆತನು ಉತ್ತಮ ಆರಂಭ ಕೊಟ್ಟನು.

ಯೆಹೋವನ ಬೆಂಬಲವಿದ್ದ ಸ್ತ್ರೀಯರು

8. (ಎ) ಅಧಿಕಾಂಶ ಜನರ ನಡವಳಿಕೆ ಹೇಗಿದೆಯೆಂದು ವರ್ಣಿಸಿ. (ಬಿ) ಇತಿಹಾಸದಾದ್ಯಂತ ದೇವರು ಯಾರಿಗೆ ಅನುಗ್ರಹ ತೋರಿಸಿದ್ದಾನೆ?

8 ಏದೆನಿನಲ್ಲಾದ ದಂಗೆಯ ನಂತರ ಅಧಿಕಾಂಶ ಗಂಡಸರ ಮತ್ತು ಹೆಂಗಸರ ನಡವಳಿಕೆಯು ಹದಗೆಟ್ಟಿದೆ. ಕಳೆದ ಶತಮಾನದಲ್ಲಂತೂ ಹಿಂದೆಂದಿಗಿಂತ ಹೆಚ್ಚು ಕೆಟ್ಟಿದೆ. “ಕಡೇ ದಿವಸಗಳಲ್ಲಿ” ದುಷ್ಟ ನಡತೆಯು ರಾರಾಜಿಸುವುದೆಂದು ಬೈಬಲ್‌ ಮುಂತಿಳಿಸಿತ್ತು. ಮಾನವನ ದುಷ್ಕೃತ್ಯಗಳು ಎಷ್ಟು ಹೆಚ್ಚಾಗಿವೆಯೆಂದರೆ ಈಗಿನ ಸಮಯ ನಿಜವಾಗಿಯೂ “ಕಠಿನಕಾಲ” ಆಗಿದೆ. (2 ತಿಮೊ. 3:1-5) ಹಾಗಿದ್ದರೂ ಮಾನವ ಇತಿಹಾಸದಾದ್ಯಂತ ತನ್ನಲ್ಲಿ ಭರವಸವಿಟ್ಟು, ತನ್ನ ನಿಯಮಗಳನ್ನು ಪಾಲಿಸಿರುವ, ತನ್ನನ್ನು ಅಧಿಪತಿಯಾಗಿ ಸ್ವೀಕರಿಸಿರುವ ಸ್ತ್ರೀಪುರುಷರಿಗೆ “ಕರ್ತನಾದ ಯೆಹೋವ” ಸಹಾಯಮಾಡಿದ್ದಾನೆ.—ಕೀರ್ತನೆ 71:5 ಓದಿ.

9. (ಎ) ಎಷ್ಟು ಜನರು ಜಲಪ್ರಳಯದಿಂದ ಪಾರಾದರು? (ಬಿ) ಅವರು ಪಾರಾಗಲು ಕಾರಣವೇನು?

9 ನೋಹನ ದಿನಗಳಲ್ಲಿ ದೇವರು ಪ್ರಾಚೀನಕಾಲದ ಆ ಹಿಂಸಾತ್ಮಕ ಜಗತ್ತನ್ನು ಜಲಪ್ರಳಯದಲ್ಲಿ ನಾಶಮಾಡಿದಾಗ ತೀರ ಕಡಿಮೆ ಜನರು ಪಾರಾದರು. ನೋಹನ ಒಡಹುಟ್ಟಿದವರು ಆ ಸಮಯದಲ್ಲಿ ಬದುಕಿದ್ದಿದ್ದರೆ, ಅವರೂ ಆ ಜಲಪ್ರಳಯದಲ್ಲಿ ನಾಶವಾಗಿರಬೇಕು. (ಆದಿ. 5:30) ಪಾರಾದವರಲ್ಲಿ ಗಂಡಸರ ಹೆಂಗಸರ ಸಂಖ್ಯೆ ಸಮವಾಗಿತ್ತು—ನೋಹ ಮತ್ತವನ ಹೆಂಡತಿ, ಅವರ ಮೂವರು ಪುತ್ರರು ಮತ್ತವರ ಹೆಂಡತಿಯರು. ದೇವರಿಗೆ ಭಯಪಟ್ಟು ಆತನ ಚಿತ್ತ ಮಾಡಿದ್ದರಿಂದ ಅವರು ಬದುಕುಳಿದರು. ಈಗ ಜೀವಿಸುತ್ತಿರುವ ದಶಕೋಟಿ ಮಾನವರು ದೇವರ ಬೆಂಬಲವಿದ್ದ ಆ ಎಂಟು ಮಂದಿಯ ಸಂತಾನದವರೇ.—ಆದಿ. 7:7; 1 ಪೇತ್ರ 3:20.

10. ನಂಬಿಗಸ್ತ ಸೇವಕರ ದೇವಭೀರು ಹೆಂಡತಿಯರಿಗೆ ಯೆಹೋವನ ಬೆಂಬಲವಿದ್ದದ್ದೇಕೆ?

10 ವರ್ಷಗಳಾನಂತರ ಇದ್ದ ನಂಬಿಗಸ್ತ ಸೇವಕರ ದೇವಭೀರು ಪತ್ನಿಯರಿಗೂ ದೇವರ ಬೆಂಬಲವಿತ್ತು. ಒಂದುವೇಳೆ ಅವರು ಯಾವಾಗಲೂ ತಮ್ಮ ಬದುಕಿನ ಬಗ್ಗೆ ಗೊಣಗುತ್ತಾ ಇರುತ್ತಿದ್ದಿದ್ದರೆ ದೇವರು ಖಂಡಿತ ಅವರನ್ನು ಬೆಂಬಲಿಸುತ್ತಿರಲಿಲ್ಲ. (ಯೂದ 16) ಅಬ್ರಹಾಮನಿಗೆ ಸದಾ ಗೌರವ ತೋರಿಸುತ್ತಿದ್ದ ಪತ್ನಿ ಸಾರಳ ಉದಾಹರಣೆ ನೋಡಿ. ಅವರು ಊರ್‌ ಪಟ್ಟಣದ ಆರಾಮಕರ ಜೀವನವನ್ನು ಬಿಟ್ಟು ಇನ್ನೊಂದು ದೇಶದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಗುಡಾರಗಳಲ್ಲಿ ವಾಸಿಸುತ್ತಿದ್ದರು. ಇದಕ್ಕಾಗಿ ಅವಳು ಗೊಣಗುತ್ತಾ ಇರುವುದನ್ನು ನಮ್ಮಿಂದ ಊಹಿಸಲಿಕ್ಕೂ ಆಗುವುದಿಲ್ಲ ಅಲ್ಲವೇ? ಗೊಣಗುವ ಬದಲು “ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ‘ಯಜಮಾನ’ ಎಂದು ಕರೆದಳು.” (1 ಪೇತ್ರ 3:6) ರೆಬೆಕ್ಕಳ ಕುರಿತೂ ಯೋಚಿಸಿ. ಅವಳು ಯೆಹೋವನು ಕೊಟ್ಟ ಒಂದು ಉಡುಗೊರೆ ಆಗಿದ್ದಳು. ಇಸಾಕನಿಗೆ ಉತ್ತಮ ಪತ್ನಿಯಾದಳು. ಹಾಗಾಗಿ ಇಸಾಕನು “ಆಕೆಯನ್ನು ಪ್ರೀತಿಸಿ ತನ್ನ ತಾಯಿ ಸತ್ತ ದುಃಖವನ್ನು ಶಮನ ಮಾಡಿ”ಕೊಳ್ಳಲು ಸಾಧ್ಯವಾಯಿತು. (ಆದಿ. 24:67) ಇಂದೂ ನಮ್ಮ ಮಧ್ಯೆ ಸಾರ, ರೆಬೆಕ್ಕಳಂಥ ದೇವಭಕ್ತ ಸ್ತ್ರೀಯರು ಇರುವುದಕ್ಕಾಗಿ ನಾವೆಷ್ಟು ಸಂತೋಷಪಡುತ್ತೇವೆ!

11. ಇಬ್ಬರು ಇಬ್ರಿಯ ಸೂಲಗಿತ್ತಿಯರು ಹೇಗೆ ಧೈರ್ಯ ತೋರಿಸಿದರು?

11 ಇಸ್ರಾಯೇಲ್ಯರು ಐಗುಪ್ತದ ದಾಸತ್ವದಲ್ಲಿದ್ದಾಗ ಅವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಆದ್ದರಿಂದ ಇಬ್ರಿಯ ಗಂಡುಕೂಸುಗಳನ್ನು ಹುಟ್ಟುತ್ತಲೇ ಸಾಯಿಸಬೇಕೆಂಬ ಆಜ್ಞೆಯನ್ನು ಫರೋಹನು ಹೊರಡಿಸಿದ. ಆ ಕಾಲದಲ್ಲಿ ಶಿಫ್ರಾ, ಪೂಗಾ ಎಂಬ ಇಬ್ರಿಯ ಸೂಲಗಿತ್ತಿಯರಿದ್ದರು. ಇವರು ಸೂಲಗಿತ್ತಿಯರ ಮುಖ್ಯಸ್ಥೆಯರು ಆಗಿದ್ದಿರಬಹುದು. ಅವರಿಗೆ ಯೆಹೋವನಲ್ಲಿ ಭಯಭಕ್ತಿ ಇದ್ದ ಕಾರಣ ಶಿಶುಹತ್ಯೆ ಮಾಡಲು ಧೈರ್ಯದಿಂದ ನಿರಾಕರಿಸಿದರು. ಇದಕ್ಕೆ ಪ್ರತಿಫಲವಾಗಿ ಯೆಹೋವನು ಅವರ ವಂಶಾಭಿವೃದ್ಧಿ ಮಾಡಿದನು.—ವಿಮೋ. 1:15-21.

12. ದೆಬೋರ ಮತ್ತು ಯಾಯೇಲಳ ಬಗ್ಗೆ ಯಾವ ಸಂಗತಿ ಗಮನಾರ್ಹವಾಗಿದೆ?

12 ಇಸ್ರಾಯೇಲ್ಯರ ನ್ಯಾಯಸ್ಥಾಪಕರ ಕಾಲದಲ್ಲಿದ್ದ ಪ್ರವಾದಿನಿ ದೆಬೋರಳಿಗೆ ದೇವರ ಬೆಂಬಲವಿತ್ತು. ಅವಳು ನ್ಯಾಯಸ್ಥಾಪಕ ಬಾರಾಕನಿಗೆ ಪ್ರೋತ್ಸಾಹ ಕೊಟ್ಟಳು. ಇಸ್ರಾಯೇಲ್ಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ತೆಗೆದುಹಾಕುವುದರಲ್ಲಿ ಅವಳಿಗೂ ಒಂದು ಪಾತ್ರವಿತ್ತು. ಆದರೆ ಕಾನಾನ್ಯರನ್ನು ಜಯಿಸುವ ಕೀರ್ತಿ ಬಾರಾಕನಿಗೆ ಸಲ್ಲುವುದಿಲ್ಲವೆಂದು ಮುಂತಿಳಿಸಿದಳು. ಏಕೆಂದರೆ ದೇವರು ಕಾನಾನ್ಯರ ಸೇನಾಪತಿ ಸಿಸೇರನನ್ನು “ಒಬ್ಬ ಸ್ತ್ರೀಗೆ ಒಪ್ಪಿಸಿಕೊಡುವನು” ಎಂದು ಪ್ರವಾದಿಸಿದಳು. ಹಾಗೆಯೇ ಆಯಿತು. ಇಸ್ರಾಯೇಲ್ಯಳಲ್ಲದ ಯಾಯೇಲಳು ಸಿಸೇರನನ್ನು ಕೊಂದಳು.—ನ್ಯಾಯ. 4:4-9, 17-22.

13. ಬೈಬಲ್‌ ನಮಗೆ ಅಬೀಗೈಲಳ ಬಗ್ಗೆ ಏನನ್ನುತ್ತದೆ?

13 ಅಬೀಗೈಲ ಎಂಬಾಕೆ ಕ್ರಿ.ಪೂ. 11ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಗಮನಾರ್ಹ ಸ್ತ್ರೀ. ಅವಳಲ್ಲಿ ವಿವೇಚನೆಯಿತ್ತು. ಆದರೆ ಆಕೆಯ ಗಂಡ ನಾಬಾಲ ಕಠೋರನು,  ಅಯೋಗ್ಯನು, ಮೂರ್ಖನು ಆಗಿದ್ದನು. (1 ಸಮು. 25:2, 3, 25) ದಾವೀದ ಮತ್ತವನ ಸಂಗಡಿಗರು ನಾಬಾಲನ ಸ್ವತ್ತನ್ನು ಸ್ವಲ್ಪ ಸಮಯ ಕಾವಲಿರಿಸಿ ಕಾಪಾಡಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ತಮಗೆ ಸ್ವಲ್ಪ ಆಹಾರ ಪಾನೀಯ ಕೊಡುವಂತೆ ನಾಬಾಲನನ್ನು ಕೇಳಿದಾಗ ದಾವೀದನ ಸಂಗಡಿಗರನ್ನು ಅವನು ಅವಮಾನಕರವಾಗಿ “ಬೈದನು.” ಅವರಿಗೆ ಏನೂ ಕೊಡಲಿಲ್ಲ. ಇದರಿಂದಾಗಿ ದಾವೀದನು ಎಷ್ಟು ಕ್ರೋಧಿತನಾದನೆಂದರೆ ನಾಬಾಲ ಮತ್ತವನ ಮನೆಯಲ್ಲಿದ್ದ ಗಂಡಸರೆಲ್ಲರನ್ನೂ ಕೊಲ್ಲಲು ಯೋಜಿಸಿದನು. ಇದು ಅಬೀಗೈಲಳಿಗೆ ಗೊತ್ತಾದಾಗ, ದಾವೀದ ಮತ್ತವನ ಸಂಗಡಿಗರಿಗಾಗಿ ಆಹಾರ ಪಾನೀಯವನ್ನು ತಕ್ಕೊಂಡು ಹೋದಳು. ಹೀಗೆ ರಕ್ತಪಾತವನ್ನು ತಪ್ಪಿಸಿದಳು. (1 ಸಮು. 25:8-18) ಆಗ ದಾವೀದನು ಆಕೆಗೆ “ಈಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಹೇಳಿದನು. (1 ಸಮು. 25:32) ನಾಬಾಲನ ಮರಣದ ನಂತರ ದಾವೀದನು ಅಬೀಗೈಲಳನ್ನು ಮದುವೆಯಾದನು.—1 ಸಮು. 25:37-42.

14. (ಎ) ಶಲ್ಲೂಮನ ಪುತ್ರಿಯರು ಯಾವ ಕೆಲಸದಲ್ಲಿ ಪಾಲ್ಗೊಂಡರು? (ಬಿ) ಇದಕ್ಕೆ ಹೋಲುವ ಯಾವ ಕೆಲಸವನ್ನು ಇಂದು ಕೆಲವು ಕ್ರೈಸ್ತ ಸ್ತ್ರೀಯರು ಮಾಡುತ್ತಿದ್ದಾರೆ?

14 ಬಾಬೆಲಿನ ಸೈನ್ಯಗಳು ಕ್ರಿ.ಪೂ. 607ರಲ್ಲಿ ಯೆರೂಸಲೇಮ್‌ ಮತ್ತು ಅದರ ಆಲಯವನ್ನು ನಾಶಮಾಡಿದಾಗ ಸ್ತ್ರೀ, ಪುರುಷ, ಮಕ್ಕಳೆನ್ನದೆ ಅನೇಕರು ಸತ್ತುಹೋದರು. ಕ್ರಿ.ಪೂ. 455ರಲ್ಲಿ ಯೆರೂಸಲೇಮಿನ ಗೋಡೆಗಳನ್ನು ನೆಹೆಮೀಯನ ಮೇಲ್ವಿಚಾರಣೆಯ ಕೆಳಗೆ ಪುನಃ ಕಟ್ಟಲಾಯಿತು. ಈ ದುರಸ್ತು ಕೆಲಸದಲ್ಲಿ ಬೇರೆಯವರೊಂದಿಗೆ ಯೆರೂಸಲೇಮಿನ ಅರೆನಾಡಿನ ಒಡೆಯ ಶಲ್ಲೂಮನ ಪುತ್ರಿಯರು ಸಹ ಕೈಜೋಡಿಸಿದರು. (ನೆಹೆ. 3:12) ಈ ಕೆಲಸ ಅವರ ಅಂತಸ್ತಿಗೆ ತಕ್ಕದಲ್ಲದಿದ್ದರೂ ಸಂತೋಷದಿಂದ ಮಾಡಿದರು. ಇಂದು ಸಹ ಹಲವಾರು ಕ್ರೈಸ್ತ ಸ್ತ್ರೀಯರು ದೇವಪ್ರಭುತ್ವಾತ್ಮಕ ನಿರ್ಮಾಣ ಯೋಜನೆಗಳನ್ನು ಅನೇಕ ವಿಧಗಳಲ್ಲಿ ಆನಂದದಿಂದ ಬೆಂಬಲಿಸುತ್ತಿದ್ದಾರೆ. ನಾವು ಅವರನ್ನು ಬಹಳಷ್ಟು ಮೆಚ್ಚುತ್ತೇವೆ.

ಮೊದಲನೇ ಶತಮಾನದ ದೇವಭಕ್ತೆಯರು

15. ಮರಿಯಳಿಗೆ ದೇವರು ಕೊಟ್ಟ ಸುಯೋಗವೇನು?

15 ಕ್ರಿ.ಶ. ಮೊದಲನೇ ಶತಮಾನದಲ್ಲಿ ಮತ್ತು ಅದಕ್ಕೂ ಸ್ವಲ್ಪ ಮುಂಚೆ ಯೆಹೋವನು ಹಲವಾರು ಸ್ತ್ರೀಯರಿಗೆ ಉತ್ಕೃಷ್ಟವಾದ ಸುಯೋಗಗಳನ್ನು ಕೊಟ್ಟು ಆಶೀರ್ವದಿಸಿದನು. ಇವರ ಪೈಕಿ ಕನ್ಯೆ ಮರಿಯಳು ಒಬ್ಬಳು. ಯೋಸೇಫನೊಟ್ಟಿಗೆ ಅವಳ ನಿಶ್ಚಿತಾರ್ಥವಾಗಿತ್ತು. ಆಗ ಅವಳು ಪವಿತ್ರಾತ್ಮದಿಂದ ಅದ್ಭುತವಾಗಿ ಗರ್ಭಧರಿಸಿದಳು. ಯೇಸುವಿನ ತಾಯಿಯಾಗುವಂತೆ ದೇವರು ಅವಳನ್ನೇ ಆಯ್ಕೆಮಾಡಿದ್ದೇಕೆ? ಆಕೆಯಲ್ಲಿದ್ದ ಆಧ್ಯಾತ್ಮಿಕ ಗುಣಗಳೇ ಒಂದು ಮುಖ್ಯ ಕಾರಣ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಗುಣಗಳು ಆಕೆ ತನ್ನ ಪರಿಪೂರ್ಣ ಮಗನನ್ನು ಬಾಲ್ಯದಿಂದ ಪ್ರೌಢಾವಸ್ಥೆಗೆ ಬೆಳೆಸಲು ಅಗತ್ಯವಾಗಿದ್ದವು. ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಮಹಾನ್‌ ಪುರುಷನ ತಾಯಿ ಆಗಿರುವುದು ಎಂಥ ದೊಡ್ಡ ಸುಯೋಗವಲ್ಲವೇ?—ಮತ್ತಾ. 1:18-25.

16. ಸ್ತ್ರೀಯರ ಬಗ್ಗೆ ಯೇಸುವಿಗಿದ್ದ ಮನೋಭಾವವನ್ನು ತೋರಿಸುವ ಒಂದು ಉದಾಹರಣೆ ಕೊಡಿ.

16 ಯೇಸು ಸ್ತ್ರೀಯರೊಂದಿಗೆ ತುಂಬ ದಯೆಯಿಂದ ನಡೆದುಕೊಂಡನು. ಉದಾಹರಣೆಗೆ 12 ವರ್ಷ ರಕ್ತಸ್ರಾವರೋಗದಿಂದ ಬಳಲುತ್ತಿದ್ದ ಸ್ತ್ರೀಯೊಬ್ಬಳು ಜನರ ಗುಂಪಿನಲ್ಲಿ ಅವನ ಹಿಂದಿನಿಂದ ಬಂದು ಅವನ ಬಟ್ಟೆ ಮುಟ್ಟಿದಳು. ಯೇಸು ಅವಳನ್ನು ಗದರಿಸದೆ ದಯೆಯಿಂದ ಹೀಗಂದನು: “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು.”—ಮಾರ್ಕ 5:25-34.

17. ಕ್ರಿ.ಶ. 33ರ ಪಂಚಾಶತ್ತಮದಂದು ಯಾವ ಅದ್ಭುತಕರ ಘಟನೆ ನಡೆಯಿತು?

17 ಯೇಸುವಿನ ಶಿಷ್ಯೆಯರಾಗಿದ್ದ ಕೆಲವು ಸ್ತ್ರೀಯರು ಆತನ ಮತ್ತು ಆತನ ಅಪೊಸ್ತಲರ ಉಪಚಾರ ಮಾಡಿದರು. (ಲೂಕ 8:1-3) ಕ್ರಿ.ಶ. 33ರ ಪಂಚಾಶತ್ತಮದಂದು ದೇವರ ಪವಿತ್ರಾತ್ಮವನ್ನು ವಿಶೇಷ ರೀತಿಯಲ್ಲಿ ಪಡೆದ 120 ಮಂದಿಯಲ್ಲಿ ಪುರುಷರು ಮಾತ್ರವಲ್ಲ ಸ್ತ್ರೀಯರೂ ಇದ್ದರು. (ಅ. ಕಾರ್ಯಗಳು 2:1-4 ಓದಿ.) ತಾನು ಪವಿತ್ರಾತ್ಮವನ್ನು ಸುರಿಸುವೆನು ಎಂಬ ಸಂಗತಿಯನ್ನು ಯೆಹೋವನು ಈ ಮಾತುಗಳಲ್ಲಿ ಮುಂತಿಳಿಸಿದನು: “ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; . . . ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.” (ಯೋವೇ. 2:28, 29) ಪಂಚಾಶತ್ತಮದ ದಿನದಂದು ನಡೆದ ಆ ಅದ್ಭುತದ ಮೂಲಕ ದೇವರು ಧರ್ಮಭ್ರಷ್ಟ ಇಸ್ರಾಯೇಲ್ಯರಿಂದ ತನ್ನ ಬೆಂಬಲವನ್ನು ಹಿಂದೆಗೆದು ‘ದೇವರ ಇಸ್ರಾಯೇಲಿಗೆ’ ಕೊಡುತ್ತಿದ್ದಾನೆಂದು ತೋರಿಸಿಕೊಟ್ಟನು. ಈ ಇಸ್ರಾಯೇಲಿನಲ್ಲಿ ಪುರುಷರೂ ಸ್ತ್ರೀಯರೂ ಇದ್ದಾರೆ. (ಗಲಾ. 3:28; 6:15, 16) ಒಂದನೇ ಶತಮಾನದಲ್ಲಿ ಸೇವೆಯಲ್ಲಿ ಪಾಲ್ಗೊಂಡ ಕ್ರೈಸ್ತ ಸ್ತ್ರೀಯರಲ್ಲಿ ಸೌವಾರ್ತಿಕನಾದ ಫಿಲಿಪ್ಪನ ನಾಲ್ಕು ಪುತ್ರಿಯರೂ ಸೇರಿದ್ದರು.—ಅ. ಕಾರ್ಯಗಳು 21:8, 9.

 ದೊಡ್ಡ “ಸ್ತ್ರೀಸಮೂಹ”

18, 19. (ಎ) ಸತ್ಯಾರಾಧನೆಯ ವಿಷಯದಲ್ಲಿ ದೇವರು ಸ್ತ್ರೀಪುರುಷರಿಗೆ ಯಾವ ಸುಯೋಗ ಕೊಟ್ಟಿದ್ದಾನೆ? (ಬಿ) ಸುವಾರ್ತೆ ಸಾರುತ್ತಿರುವ ಸ್ತ್ರೀಯರನ್ನು ಕೀರ್ತನೆಗಾರನು ಏನೆಂದು ಕರೆಯುತ್ತಾನೆ?

18 ಕೆಲವು ಸ್ತ್ರೀ ಪುರುಷರು 18ನೇ ಶತಮಾನದ ಕೊನೆಯ ಭಾಗದಷ್ಟಕ್ಕೆ ಸತ್ಯಾರಾಧನೆಯ ಬಗ್ಗೆ ತೀವ್ರ ಆಸಕ್ತಿ ವಹಿಸಿದರು. ಇವರು ಯೇಸುವಿನ ಸಂದೇಶವನ್ನು ಸಾರಲಾರಂಭಿಸಿದರು. “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎಂಬ ಯೇಸುವಿನ ಪ್ರವಾದನಾ ಮಾತುಗಳನ್ನು ನೆರವೇರಿಸುವುದರಲ್ಲಿ ಹೀಗೆ ಪಾಲ್ಗೊಂಡರು.—ಮತ್ತಾ. 24:14.

19 ಬೈಬಲ್‌ ವಿದ್ಯಾರ್ಥಿಗಳ ಆ ಚಿಕ್ಕ ಗುಂಪು ಬೆಳೆದು ಈಗ ಯೆಹೋವನ ಸಾಕ್ಷಿಗಳಾಗಿ 80,00,000ದಷ್ಟು ದೊಡ್ಡದಾಗಿದೆ. 1,10,00,000ಕ್ಕಿಂತಲೂ ಹೆಚ್ಚು ಮಂದಿ ಯೇಸುವಿನ ಮರಣದ ವಾರ್ಷಿಕ ಸ್ಮರಣೆಗೆ ಹಾಜರಾಗುವ ಮೂಲಕ ಬೈಬಲಲ್ಲಿ ಮತ್ತು ನಮ್ಮ ಕೆಲಸದಲ್ಲಿ ಆಸಕ್ತಿ ತೋರಿಸಿದ್ದಾರೆ. ಹೆಚ್ಚಿನ ದೇಶಗಳಲ್ಲಿ ಹೀಗೆ ಹಾಜರಾದವರಲ್ಲಿ ಅಧಿಕಾಂಶ ಮಂದಿ ಸ್ತ್ರೀಯರೇ. ಅಲ್ಲದೆ ಜಗದ್ವಾ್ಯಪಕವಾಗಿ ಪೂರ್ಣ ಸಮಯದ 10,00,000ಕ್ಕಿಂತಲೂ ಹೆಚ್ಚು ರಾಜ್ಯ ಘೋಷಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಸ್ತ್ರೀಯರೇ. ಕೀರ್ತನೆಗಾರನು ಹೇಳಿದ್ದು: “ಕರ್ತನು ನುಡಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.” ಈ ಮಾತುಗಳ ನೆರವೇರಿಕೆಯಲ್ಲಿ ಪಾಲ್ಗೊಳ್ಳುವ ಸುಯೋಗವನ್ನು ದೇವರು ನಂಬಿಗಸ್ತ ಸ್ತ್ರೀಯರಿಗೆ ಕೊಟ್ಟಿದ್ದಾನೆಂಬುದು ನಿಶ್ಚಿತ.—ಕೀರ್ತ. 68:11.

ಸುವಾರ್ತೆ ಸಾರುತ್ತಿರುವ “ಸ್ತ್ರೀಸಮೂಹವು” ನಿಜಕ್ಕೂ ದೊಡ್ಡದು (ಪ್ಯಾರ 18, 19 ನೋಡಿ)

ದೇವಭಕ್ತೆಯರಿಗಾಗಿ ಕಾದಿರುವ ಭವ್ಯ ಆಶೀರ್ವಾದಗಳು

20. ನಾವು ಯಾವ ವಿಷಯಗಳ ಬಗ್ಗೆ ಅಧ್ಯಯನ ಪ್ರಾಜೆಕ್ಟ್‌ಗಳನ್ನು ಮಾಡಬಹುದು?

20 ಬೈಬಲ್‌ ದಾಖಲೆಯಲ್ಲಿರುವ ಅನೇಕಾನೇಕ ನಂಬಿಗಸ್ತ ಸ್ತ್ರೀಯರ ಬಗ್ಗೆ ಚರ್ಚಿಸಲು ನಮಗೆ ಈ ಪತ್ರಿಕೆಯಲ್ಲಿ ಸ್ಥಳ ಸಾಲದು. ಆದರೆ ನಾವು ಅವರೆಲ್ಲರ ಬಗ್ಗೆ ದೇವರ ವಾಕ್ಯದಲ್ಲಿ ಮತ್ತು ನಮ್ಮ ಸಾಹಿತ್ಯದಲ್ಲಿ ಓದಬಹುದು. ಉದಾಹರಣೆಗೆ ನಾವು ರೂತಳ ನಿಷ್ಠೆಯ ಕುರಿತು ಧ್ಯಾನಿಸಬಹುದು. (ರೂತ. 1:16, 17) ರಾಣಿ ಎಸ್ತೇರಳ ಹೆಸರಲ್ಲಿರುವ ಬೈಬಲ್‌ ಪುಸ್ತಕವನ್ನು ಮತ್ತು ಅವಳ ಕುರಿತ ಲೇಖನಗಳನ್ನು ಓದುವುದು ಸಹ ನಮ್ಮ ನಂಬಿಕೆಯನ್ನು ಬಲಪಡಿಸಬಲ್ಲದು. ಕುಟುಂಬ ಆರಾಧನಾ ಸಂಜೆಯಲ್ಲಿ ನಾವು ಇವುಗಳಂಥ ಅಧ್ಯಯನ ಪ್ರಾಜೆಕ್ಟ್‌ಗಳನ್ನು ಮಾಡಿದರೆ ಪ್ರಯೋಜನವಾಗುವುದು. ನಾವು ಒಬ್ಬಂಟಿಗರಾಗಿದ್ದರೆ ಇಂಥ ವಿಷಯಗಳನ್ನು ವೈಯಕ್ತಿಕ ಅಧ್ಯಯನದಲ್ಲಿ ಪರಿಗಣಿಸಬಹುದು.

21. ದೇವಭಕ್ತೆಯರು ಕಷ್ಟಕರ ಸಮಯದಲ್ಲಿ ಯೆಹೋವನಿಗೆ ಹೇಗೆ ಭಕ್ತಿ ತೋರಿಸಿದ್ದಾರೆ?

21 ಕ್ರೈಸ್ತ ಸ್ತ್ರೀಯರ ಸಾರುವ ಕೆಲಸವನ್ನು ಯೆಹೋವನು ಆಶೀರ್ವದಿಸುತ್ತಾನೆ ಮತ್ತು ಕಷ್ಟಗಳ ಸಮಯದಲ್ಲಿ ಅವರನ್ನು ಬೆಂಬಲಿಸುತ್ತಾನೆ ಎಂಬ ಮಾತನ್ನು ಅಲ್ಲಗಳೆಯಲಾಗದು. ಉದಾಹರಣೆಗೆ ನಾಸಿ ಮತ್ತು ಕಮ್ಯೂನಿಸ್ಟ್‌ ಆಳ್ವಿಕೆಯ ಸಮಯದಲ್ಲಿ ಅನೇಕ ದೇವಭಕ್ತೆಯರು ದೇವರಿಗೆ ವಿಧೇಯತೆ ತೋರಿಸಿದ್ದರಿಂದ ತುಂಬ ಕಷ್ಟಗಳನ್ನು ಅನುಭವಿಸಿದರು ಮತ್ತು ಕೆಲವರು ತಮ್ಮ ಜೀವವನ್ನೂ ಕಳಕೊಂಡರು. ಆದರೆ ದೇವರ ಸಹಾಯದಿಂದಾಗಿ ಅವರು ಸಮಗ್ರತೆ ಕಾಪಾಡಿಕೊಳ್ಳಲು ಶಕ್ತರಾದರು. (ಅ. ಕಾ. 5:29) ಗತಕಾಲದಲ್ಲಾದಂತೆ ಇಂದು ನಮ್ಮ ಸಹೋದರಿಯರು ಸೇರಿದಂತೆ ಎಲ್ಲ ಸತ್ಯಾರಾಧಕರೂ ದೇವರ ಪರಮಾಧಿಕಾರವನ್ನು ಎತ್ತಿಹಿಡಿಯುತ್ತಾರೆ. ಯೆಹೋವನು ಪ್ರಾಚೀನ ಇಸ್ರಾಯೇಲ್ಯರಿಗೆ ಮಾಡಿದಂತೆ ಅವರ ಬಲಗೈಯನ್ನು ಹಿಡಿದುಕೊಂಡೊ ಎಂಬಂತೆ ಹೀಗನ್ನುತ್ತಾನೆ: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ.”—ಯೆಶಾ. 41:10-13.

22. ಭವಿಷ್ಯದಲ್ಲಿ ಯಾವ ಸುಯೋಗಗಳಿಗಾಗಿ ನಾವು ಎದುರುನೋಡಬಹುದು?

22 ಬಲು ಬೇಗನೆ ದೇವಭಕ್ತ ಪುರುಷರು ಮತ್ತು ಸ್ತ್ರೀಯರು ಈ ಭೂಮಿಯನ್ನು ಪರದೈಸಾಗಿ ಮಾಡಿ, ಪುನರುತ್ಥಾನಗೊಂಡ ಲಕ್ಷಾಂತರ ಮಂದಿಗೆ ಯೆಹೋವನ ಉದ್ದೇಶಗಳ ಬಗ್ಗೆ ಕಲಿಯಲು ಸಹಾಯಮಾಡುವರು. ಅಲ್ಲಿವರೆಗೆ “ಒಂದೇ ಮನಸ್ಸಿನಿಂದ” ಯೆಹೋವನ ಸೇವೆಮಾಡುವ ನಮ್ಮ ಸುಯೋಗವನ್ನು ಅಮೂಲ್ಯವೆಂದೆಣಿಸೋಣ.—ಚೆಫ. 3:9.