ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ತಿರುಗಿ ಬಂದು ನಿನ್ನ ಸಹೋದರರನ್ನು ಬಲಪಡಿಸು’

‘ತಿರುಗಿ ಬಂದು ನಿನ್ನ ಸಹೋದರರನ್ನು ಬಲಪಡಿಸು’

ಯೇಸು ಯಾರೆಂದು ಗೊತ್ತೇ ಇಲ್ಲವೆಂದು ಅಲ್ಲಗಳೆದ ಬಳಿಕ ಪೇತ್ರನು ಪಶ್ಚಾತ್ತಾಪದಿಂದ ಬಿಕ್ಕಿಬಿಕ್ಕಿ ಅತ್ತನು. ಈ ಅಪೊಸ್ತಲನು ತನ್ನ ಆಧ್ಯಾತ್ಮಿಕ ಸಮತೋಲನವನ್ನು ಪುನಃ ಪಡೆಯಲು ಮುಂದೆ ತುಂಬ ಪ್ರಯಾಸಪಡಬೇಕಿತ್ತು. ಆದರೂ ಇತರರ ಸಹಾಯಕ್ಕಾಗಿ ಯೇಸು ಅವನನ್ನು ಉಪಯೋಗಿಸಲು ಇಚ್ಛಿಸಿದನು. ಆದ್ದರಿಂದಲೇ ಆತನು ಪೇತ್ರನಿಗೆ “ನೀನು ತಿರುಗಿ ಬಂದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು. (ಲೂಕ 22:32, 54-62) ಮುಂದೆ ಪೇತ್ರನು ಪ್ರಥಮ ಶತಮಾನದ ಕ್ರೈಸ್ತ ಸಭೆಯ ಸ್ತಂಭಗಳಲ್ಲಿ ಒಬ್ಬನಾದನು. (ಗಲಾ. 2:9) ಹಾಗೆಯೇ ಹಿಂದೊಮ್ಮೆ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದ ಸಹೋದರನೊಬ್ಬನು ಪುನಃ ಆ ಜವಾಬ್ದಾರಿಯನ್ನು ಹೆಗಲಿಗೇರಿಸಿ, ಜೊತೆ ವಿಶ್ವಾಸಿಗಳನ್ನು ಆಧ್ಯಾತ್ಮಿಕವಾಗಿ ಬಲಪಡಿಸುವ ಕೆಲಸವನ್ನು ಆನಂದಿಸಬಲ್ಲನು.

ಹಿಂದೊಮ್ಮೆ ಮೇಲ್ವಿಚಾರಕರಾಗಿ ಸೇವೆಸಲ್ಲಿಸುತ್ತಿದ್ದ ಕೆಲವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿರುವುದರಿಂದ ‘ತಾವು ನಿಷ್ಪ್ರಯೋಜಕರು’ ಎಂಬ ಭಾವನೆ ಅವರಲ್ಲಿ ಮೂಡಿರಬಹುದು. ದಕ್ಷಿಣ ಅಮೆರಿಕದಲ್ಲಿ 20ಕ್ಕಿಂತಲೂ ಹೆಚ್ಚು ವರ್ಷಗಳಿಂದ ಹಿರಿಯರಾಗಿ ಸೇವೆಸಲ್ಲಿಸಿದ ಹೂಲ್ಯೊ * ಎಂಬವರು ಹೇಳಿದ್ದು: “ಭಾಷಣಗಳನ್ನು ತಯಾರಿಸುವುದು, ಸಹೋದರರನ್ನು ಭೇಟಿಮಾಡಲು ಹೋಗುವುದು, ಸಭಾ ಸದಸ್ಯರ ಪರಿಪಾಲನೆ ಮಾಡುವುದು ಇವೆಲ್ಲ ನನ್ನ ಜೀವನದ ದೊಡ್ಡ ಭಾಗವಾಗಿತ್ತು. ಅವೆಲ್ಲ ತಟ್ಟನೆ ನಿಂತುಹೋದಾಗ ನನ್ನ ಬದುಕಿನಲ್ಲಿ ದೊಡ್ಡ ಶೂನ್ಯ ಆವರಿಸಿತು. ಒಟ್ಟಿನಲ್ಲಿ ಆ ಅವಧಿಯಲ್ಲಿ ನಾನು ತುಂಬ ನೊಂದು ಹೋಗಿದ್ದೆ.” ಇಂದು ಹೂಲ್ಯೊ ಪುನಃ ಹಿರಿಯರಾಗಿ ಸೇವೆಮಾಡುತ್ತಿದ್ದಾರೆ.

‘ಆನಂದವೆಂದು ಎಣಿಸಿ’

ಶಿಷ್ಯ ಯಾಕೋಬನು ಬರೆದದ್ದು: “ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ . . . ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ.” (ಯಾಕೋ. 1:2, 3) ಯಾಕೋಬನು ಇಲ್ಲಿ ನಮ್ಮ ಅಪರಿಪೂರ್ಣತೆಗಳು ಮತ್ತು ಹಿಂಸೆಯ ಕಾರಣದಿಂದ ಹುಟ್ಟುವ ಪರೀಕ್ಷೆಗಳಿಗೆ ಸೂಚಿಸುತ್ತಿದ್ದನು. ಸ್ವಾರ್ಥ ಅಭಿರುಚಿಗಳು, ಬೇಧಭಾವ ಇತ್ಯಾದಿ ಸಂಗತಿಗಳ ಬಗ್ಗೆ ಹೇಳಿದನು. (ಯಾಕೋ. 1:14; 2:1; 4:1, 2, 11) ಯೆಹೋವನು ಶಿಸ್ತುಗೊಳಿಸುವಾಗ ನಮಗೆ ತುಂಬ ನೋವಾಗುತ್ತದೆ. (ಇಬ್ರಿ. 12:11) ಆದರೆ ಆ ಕಷ್ಟಗಳು ನಮ್ಮಿಂದ ಆನಂದವನ್ನು ಕಸಿದುಕೊಳ್ಳಬೇಕೆಂದೇನಿಲ್ಲ.

ಸಭೆಯಲ್ಲಿನ ಜವಾಬ್ದಾರಿಯುತ ಸ್ಥಾನದಿಂದ ನಮ್ಮನ್ನು ತೆಗೆದುಹಾಕಲಾಗಿರಬಹುದು. ಆದರೂ ನಮ್ಮ ನಂಬಿಕೆಯ ಗುಣಮಟ್ಟವನ್ನು ಪರೀಕ್ಷಿಸುವ ಮತ್ತು ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುವ ಅವಕಾಶ ಇನ್ನೂ ಇದೆ. ನಾವು ಯಾಕೆ ಆ ಸ್ಥಾನದಲ್ಲಿದ್ದೆವು ಎಂಬ ಸಂಗತಿಯ  ಕುರಿತೂ ನಾವು ಮನನ ಮಾಡಬಹುದು. ನಾವು ಆ ಸುಯೋಗಕ್ಕಾಗಿ ಪ್ರಯತ್ನಪಟ್ಟದ್ದು ನಮ್ಮ ಸ್ವಂತ ಲಾಭಕ್ಕಾಗಿಯೊ? ಅಥವಾ ದೇವರ ಮೇಲಿನ ಪ್ರೀತಿ ಹಾಗೂ ಸಭೆ ಆತನದ್ದು ಮತ್ತು ಅದಕ್ಕೆ ಕೋಮಲ ಆರೈಕೆ ಅಗತ್ಯ ಎಂಬ ದೃಢವಿಶ್ವಾಸದಿಂದಲೊ? (ಅ. ಕಾ. 20:28-30) ಹಿಂದೆ ಹಿರಿಯರಾಗಿದ್ದರೂ ಈಗ ಆ ಸ್ಥಾನದಲ್ಲಿ ಇಲ್ಲದವರು ಪವಿತ್ರ ಸೇವೆಯನ್ನು ಆನಂದದಿಂದ ಮುಂದುವರಿಸಬೇಕು. ಹೀಗೆ ಯೆಹೋವನ ಮೇಲಿನ ತಮ್ಮ ಪ್ರೀತಿ ಯಥಾರ್ಥವಾದದ್ದು, ಯಾವುದೇ ಸ್ವಾರ್ಥವಿಲ್ಲದ್ದು ಎಂದು ಎಲ್ಲರಿಗೆ ಮತ್ತು ಸೈತಾನನಿಗೆ ಸಹ ತೋರಿಸಿಕೊಡುತ್ತಾರೆ.

ರಾಜ ದಾವೀದನು ಗಂಭೀರ ಪಾಪಗಳನ್ನು ಮಾಡಿದ್ದಕ್ಕೆ ಶಿಸ್ತನ್ನು ಪಡೆದಾಗ ಆ ತಿದ್ದುಪಾಟನ್ನು ಸ್ವೀಕರಿಸಿದನು. ಅವನಿಗೆ ದೇವರ ಕ್ಷಮೆ ಸಿಕ್ಕಿತು. ಅವನು ಹಾಡಿದ್ದು: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು. ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ ಯಾವನ ಹೃದಯದಲ್ಲಿ ಕಪಟವಿರುವದಿಲ್ಲವೋ ಅವನು ಧನ್ಯನು.” (ಕೀರ್ತ. 32:1, 2) ದಾವೀದನಿಗೆ ಸಿಕ್ಕಿದ ಶಿಸ್ತು ಅವನನ್ನು ಪರಿಷ್ಕರಿಸಿತು. ಆತನು ದೇವಜನರಿಗೆ ಇನ್ನಷ್ಟು ಉತ್ತಮ ಕುರುಬನಾದನು ಎಂಬುದು ನಿಸ್ಸಂಶಯ.

ಪುನಃ ಹಿರಿಯರಾಗುವ ಸಹೋದರರು ಹೆಚ್ಚಾಗಿ ಮುಂಚಿಗಿಂತಲೂ ಉತ್ತಮ ಕುರುಬರಾಗುತ್ತಾರೆ. ಇಂಥ ಹಿರಿಯರಲ್ಲಿ ಒಬ್ಬನು ಹೇಳಿದ್ದು: “ತಪ್ಪು ಮಾಡಿದವರ ಕಾಳಜಿವಹಿಸುವುದು ಹೇಗೆಂದು ನನಗೀಗ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ.” ಇನ್ನೊಬ್ಬ ಹಿರಿಯನು ಹೀಗಂದನು: “ಸಹೋದರರ ಸೇವೆ ಮಾಡುವ ಈ ಸುಯೋಗ ನನಗೀಗ ಹಿಂದಿಗಿಂತ ಹೆಚ್ಚು ಅಮೂಲ್ಯವಾದದ್ದು.”

ಮತ್ತೆ ಹಿರಿಯರಾಗಬಲ್ಲಿರೊ?

ಯೆಹೋವನು “ಯಾವಾಗಲೂ ತಪ್ಪುಹುಡುಕುವವನಲ್ಲ” ಎಂದು ಕೀರ್ತನೆಗಾರ ಬರೆದನು. (ಕೀರ್ತ. 103:9) ಹಾಗಾಗಿ ಗಂಭೀರ ತಪ್ಪು ಮಾಡಿರುವ ವ್ಯಕ್ತಿಯನ್ನು ದೇವರು ಮತ್ತೆಂದೂ ನಂಬುವುದಿಲ್ಲವೆಂದು ನಾವು ನೆನಸಬಾರದು. ಅನೇಕ ವರ್ಷಗಳ ವರೆಗೆ ಹಿರಿಯರಾಗಿದ್ದ ರಿಕಾರ್ಡೊ ಎಂಬವರು ಆ ಸುಯೋಗವನ್ನು ಕಳಕೊಂಡರು. ಅವರನ್ನುವುದು: “ನಾನು ಮಾಡಿದ ತಪ್ಪಿನಿಂದಾಗಿ ನನಗೆ ನನ್ನ ಬಗ್ಗೆಯೇ ತುಂಬ ನಿರಾಶೆಯಾಯಿತು. ‘ನಾನು ಅಯೋಗ್ಯನು’ ಎಂಬ ಭಾವನೆಗಳು ಪುನಃ ಮೇಲ್ವಿಚಾರಕನಾಗಿ ಸಹೋದರರ ಸೇವೆಮಾಡುವುದರಿಂದ ನನ್ನನ್ನು ತುಂಬ ಸಮಯದ ವರೆಗೆ ತಡೆದವು. ನನ್ನ ಭರವಸಾರ್ಹತೆಯನ್ನು ಪುನಃ ಸಾಬೀತುಪಡಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗಿರಲಿಲ್ಲ. ಆದರೆ ಬೇರೆಯವರಿಗೆ ಸಹಾಯಮಾಡುವುದೆಂದರೆ ನನಗೆ ತುಂಬ ಇಷ್ಟ. ಹಾಗಾಗಿ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೆ, ರಾಜ್ಯ ಸಭಾಗೃಹದಲ್ಲಿ ಸಹೋದರರನ್ನು ಪ್ರೋತ್ಸಾಹಿಸುತ್ತಿದ್ದೆ, ಕ್ಷೇತ್ರ ಸೇವೆಯಲ್ಲಿ ಅವರ ಜೊತೆ ಕೆಲಸಮಾಡುತ್ತಿದ್ದೆ. ಇದರಿಂದ ನನ್ನ ಆತ್ಮವಿಶ್ವಾಸ ಮತ್ತೊಮ್ಮೆ ಚಿಗುರಿತು. ಈಗ ಪುನಃ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದೇನೆ.”

ತಮ್ಮ ಆನಂದ ಮತ್ತು ಪುನಃ ಹಿರಿಯರಾಗಿ ಸೇವೆಮಾಡುವ ಆಸೆಯನ್ನು ಮರಳಿ ಪಡೆಯಲು ಯೆಹೋವನು ಸಹೋದರರಿಗೆ ಸಹಾಯಮಾಡಿದ್ದಾನೆ

ಒಬ್ಬ ಸಹೋದರನು ಮನಸ್ಸಿನಲ್ಲೇ ಕೋಪ ಇಟ್ಟುಕೊಂಡರೆ ಅವನು ಪುನಃ ಹಿರಿಯನಾಗಿ ಸೇವೆಸಲ್ಲಿಸಲು ಅದೊಂದು ತಡೆಗೋಡೆ ಆಗಿಬಿಡುತ್ತದೆ. ಅದರ ಬದಲು ಯೆಹೋವನ ಸೇವಕನಾದ ದಾವೀದನಂತಿರುವುದು ಹೆಚ್ಚು ಉತ್ತಮವಲ್ಲವೇ? ಹೊಟ್ಟೆಕಿಚ್ಚುಪಡುತ್ತಿದ್ದ ರಾಜ ಸೌಲನಿಂದ ತಪ್ಪಿಸಿಕೊಂಡು ದಾವೀದನು ಓಡಿಹೋಗಬೇಕಾಗಿತ್ತು. ದಾವೀದನಿಗೆ ಸೌಲನ  ಮೇಲೆ ಸೇಡುತೀರಿಸುವ ಅವಕಾಶಗಳು ಕೈಗೆ ಬಂದರೂ ಹಾಗೆ ಮಾಡಲಿಲ್ಲ. (1 ಸಮು. 24:4-7; 26:8-12) ಸೌಲನು ಯುದ್ಧದಲ್ಲಿ ಮಡಿದಾಗ ದಾವೀದನು ಅವನ ಸಾವಿಗಾಗಿ ಶೋಕಿಸಿದನು. ಅವನನ್ನು ಅವನ ಮಗನಾದ ಯೋನಾತಾನನನ್ನು ‘ಪ್ರಿಯರೂ ಮನೋಹರರೂ’ ಆದ ವ್ಯಕ್ತಿಗಳೆಂದು ಕರೆದನು. (2 ಸಮು. 1:21-23) ದಾವೀದನು ಮನಸ್ಸಿನಲ್ಲಿ ಕೋಪವನ್ನಿಟ್ಟುಕೊಳ್ಳಲಿಲ್ಲ.

ಅಪಾರ್ಥ ಅಥವಾ ಅನ್ಯಾಯದಿಂದ ನೀವು ಸುಯೋಗ ಕಳೆದುಕೊಂಡಿರೆಂದು ನಿಮಗನಿಸುವಲ್ಲಿ, ಆ ಕೋಪ ನಿಮ್ಮೆಲ್ಲ ಯೋಚನೆಗಳನ್ನು ಆಕ್ರಮಿಸುವಂತೆ ಬಿಡಬೇಡಿ. ಉದಾಹರಣೆಗೆ ಬ್ರಿಟನಿನಲ್ಲಿ ಸುಮಾರು 30 ವರ್ಷಗಳ ವರೆಗೆ ಹಿರಿಯನಾಗಿ ಸೇವೆಸಲ್ಲಿಸಿದ ನಂತರ ವಿಲ್ಯಮ್‌ ಎಂಬವರನ್ನು ಆ ಜವಾಬ್ದಾರಿಯುತ ಸ್ಥಾನದಿಂದ ತೆಗೆದುಹಾಕಲಾಯಿತು. ಅವರು ಅಸಮಾಧಾನಪಟ್ಟು ಕೆಲವು ಹಿರಿಯರ ಮೇಲೆ ಕೋಪಗೊಂಡರು. ಪುನಃ ತಮ್ಮ ಸಮತೋಲನವನ್ನು ಪಡೆಯುವಂತೆ ವಿಲ್ಯಮ್‌ಗೆ ಯಾವುದು ಸಹಾಯಮಾಡಿತು? “ಯೋಬನ ಪುಸ್ತಕ ಓದುವುದರಿಂದ ನನಗೆ ತುಂಬ ಪ್ರೋತ್ಸಾಹ ಸಿಕ್ಕಿತು. ಯೋಬನು ತನ್ನ ಮೂರು ಸಂಗಡಿಗರೊಂದಿಗೆ ಸಮಾಧಾನ ಮಾಡಲು ಯೆಹೋವನು ಸಹಾಯ ಮಾಡಿದನೆಂದ ಮೇಲೆ, ಕ್ರೈಸ್ತ ಹಿರಿಯರೊಂದಿಗೆ ಸಮಾಧಾನದ ಸಂಬಂಧವನ್ನು ಸ್ಥಾಪಿಸಲು ಆತನು ನನಗೆ ಇನ್ನೂ ಹೆಚ್ಚು ಸಹಾಯ ಮಾಡುವನಲ್ಲವೇ!” ಎಂದವರು ಹೇಳಿದರು.—ಯೋಬ 42:7-9.

ಕುರುಬರಾಗಿ ಪುನಃ ಸೇವೆಮಾಡುವವರನ್ನು ದೇವರು ಆಶೀರ್ವದಿಸುತ್ತಾನೆ

ದೇವರ ಮಂದೆಯ ಪಾಲನೆಮಾಡುವ ಸುಯೋಗವನ್ನು ನೀವಾಗಿಯೇ ಕೈಬಿಟ್ಟಿರುವಲ್ಲಿ ಅದನ್ನು ಯಾಕೆ ಮಾಡಿದಿರೆಂಬ ಕಾರಣಗಳಿಗೆ ಗಮನಕೊಡುವುದು ಒಳ್ಳೇದು. ವೈಯಕ್ತಿಕ ಸಮಸ್ಯೆಗಳಿಂದಲಾ? ನಿಮ್ಮ ಬದುಕಿನಲ್ಲಿ ಬೇರೆ ಸಂಗತಿಗಳು ಹೆಚ್ಚು ಪ್ರಾಮುಖ್ಯವಾಗಿ ಬಿಟ್ಟದ್ದರಿಂದಲಾ? ಇತರರ ಅಪರಿಪೂರ್ಣತೆಗಳಿಂದ ನಿರುತ್ಸಾಹಗೊಂಡದ್ದರಿಂದಲಾ? ಕಾರಣ ಏನೇ ಇರಲಿ, ನೀವು ಹಿರಿಯರಾಗಿದ್ದಾಗ ಇತರರಿಗೆ ಎಷ್ಟೋ ವಿಧಗಳಲ್ಲಿ ಸಹಾಯಮಾಡುವ ಸ್ಥಾನದಲ್ಲಿದ್ದಿರಿ ಎಂಬದನ್ನು ನೆನಪಿಸಿಕೊಳ್ಳಿ. ನಿಮ್ಮ ಭಾಷಣಗಳು ಅವರನ್ನು ಬಲಪಡಿಸುತ್ತಿದ್ದವು, ನಿಮ್ಮ ಮಾದರಿ ಅವರನ್ನು ಪ್ರೋತ್ಸಾಹಿಸುತ್ತಿತ್ತು, ನೀವು ಮಾಡುತ್ತಿದ್ದ ಪರಿಪಾಲನಾ ಭೇಟಿಗಳು ಅವರಿಗೆ ಪರೀಕ್ಷೆಗಳನ್ನು ತಾಳಿಕೊಳ್ಳಲು ಸಹಾಯಮಾಡಿದ್ದವು. ನಂಬಿಗಸ್ತ ಹಿರಿಯನಾಗಿ ನೀವು ಮಾಡಿದ ಕೆಲಸವು ಯೆಹೋವನ ಮನಸ್ಸನ್ನು ಸಂತೋಷಪಡಿಸಿತು. ನಿಮಗೂ ಅದು ಸಂತೋಷ ತರುತ್ತಿತ್ತಲ್ಲವೇ?—ಜ್ಞಾನೋ. 27:11.

ಪವಿತ್ರ ಸೇವೆಯಲ್ಲಿ ಆನಂದದಿಂದ ಪಾಲ್ಗೊಳ್ಳುವ ಮೂಲಕ ಯೆಹೋವನ ಮೇಲೆ ನಿಮಗೆ ಪ್ರೀತಿಯಿದೆಯೆಂದು ತೋರಿಸಿ

ತಮ್ಮ ಆನಂದವನ್ನು ಮತ್ತು ಸಭೆಯಲ್ಲಿ ಮುಂದಾಳತ್ವ ವಹಿಸುವ ಆಸೆಯನ್ನು ಮರಳಿ ಪಡೆಯಲು ಯೆಹೋವನು ಅನೇಕ ಸಹೋದರರಿಗೆ ಸಹಾಯಮಾಡಿದ್ದಾನೆ. ಹಿರಿಯನ ಸುಯೋಗವನ್ನು ನೀವಾಗಿಯೇ ಬಿಟ್ಟುಕೊಟ್ಟಿರಲಿ ಇಲ್ಲವೆ ಆ ಜವಾಬ್ದಾರಿಯುತ ಸ್ಥಾನದಿಂದ ನಿಮ್ಮನ್ನು ತೆಗೆದುಹಾಕಲಾಗಿರಲಿ ಪುನಃ ಒಮ್ಮೆ ನೀವು ‘ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸಬಹುದು.’ (1 ತಿಮೊ. 3:1) ಕೊಲೊಸ್ಸೆಯ ಕ್ರೈಸ್ತರು ದೇವರ ಚಿತ್ತದ ನಿಷ್ಕೃಷ್ಟ ಜ್ಞಾನದಿಂದ ತುಂಬಿಕೊಂಡಿರುವಂತೆ ಪೌಲನು ‘ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲಿಲ್ಲ.’ ಏಕೆಂದರೆ ಈ ಜ್ಞಾನದಿಂದ ಅವರು ‘ಯೆಹೋವನಿಗೆ ಯೋಗ್ಯರಾಗಿ ನಡೆದು ಆತನನ್ನು ಸಂಪೂರ್ಣವಾಗಿ ಮೆಚ್ಚಿಸಲು’ ಸಾಧ್ಯವಾಗಲಿತ್ತು. (ಕೊಲೊ. 1:9, 10) ಹಿರಿಯನಾಗಿ ಸೇವೆಸಲ್ಲಿಸುವ ಸುಯೋಗ ನಿಮಗೆ ಪುನಃ ಸಿಕ್ಕಿದರೆ ಬಲ, ತಾಳ್ಮೆ, ಆನಂದ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸಿ. ಈ ಕಡೇ ದಿವಸಗಳಲ್ಲಿ ದೇವಜನರಿಗೆ ಪ್ರೀತಿಪರ ಕುರುಬರ ಆಧ್ಯಾತ್ಮಿಕ ಬೆಂಬಲ ಬೇಕಾಗಿದೆ. ನಿಮ್ಮ ಸಹೋದರರನ್ನು ಬಲಪಡಿಸಲು ಶಕ್ತರಾಗಿದ್ದೀರೊ? ಅದನ್ನು ಮಾಡುವ ಮನಸ್ಸು ನಿಮಗಿದೆಯೊ?

^ ಪ್ಯಾರ. 3 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.