ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಜುಲೈ 2014

“ನನಗೆ ಸಾಕ್ಷಿಗಳಾಗಿರುವಿರಿ”

“ನನಗೆ ಸಾಕ್ಷಿಗಳಾಗಿರುವಿರಿ”

“[ಯೇಸು] ಅವರಿಗೆ, ‘. . . ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ’ ಎಂದನು.”—ಅಪೊಸ್ತಲರ ಕಾರ್ಯಗಳು 1:7, 8.

1, 2. (ಎ) ಯೆಹೋವನ ಅತಿ ಉತ್ಕೃಷ್ಟ ಸಾಕ್ಷಿ ಯಾರು? (ಬಿ) ಯೇಸು ಎಂಬ ಹೆಸರಿನ ಅರ್ಥ ಏನು? (ಸಿ) ದೇವರ ಮಗ ತನಗೆ ಇಡಲಾದ ಹೆಸರಿಗೆ ತಕ್ಕಂತೆ ಹೇಗೆ ಜೀವಿಸಿದನು?

“ನಾನು ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿಯೇ ಹುಟ್ಟಿದ್ದೇನೆ ಮತ್ತು ಅದಕ್ಕಾಗಿಯೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:33-37 ಓದಿ.) ವಿಚಾರಣೆಯ ಸಮಯದಲ್ಲಿ ಯೂದಾಯ ಪ್ರಾಂತದ ರೋಮನ್‌ ರಾಜ್ಯಪಾಲ ಪಿಲಾತನಿಗೆ ಯೇಸು ಹೇಳಿದ ಮಾತುಗಳಿವು. ಆಗಷ್ಟೇ ಯೇಸು ತಾನೊಬ್ಬ ರಾಜ ಎಂದು ಹೇಳಿದ್ದನು. ವರ್ಷಗಳಾನಂತರ ಅಪೊಸ್ತಲ ಪೌಲನು ಯೇಸುವಿನ ಈ ಧೀರ ಮಾದರಿಗೆ ಸೂಚಿಸುತ್ತಾ ಆತನು “ಪೊಂತ್ಯ ಪಿಲಾತನ ಮುಂದೆ ಒಬ್ಬ ಸಾಕ್ಷಿಯಾಗಿ ಬಹಿರಂಗ ಅರಿಕೆಯನ್ನು ಮಾಡಿದ” ಎಂದು ಹೇಳಿದನು. (1 ತಿಮೊ. 6:13) ದ್ವೇಷ ತುಂಬಿರುವ ಸೈತಾನನ ಲೋಕದಲ್ಲಿ ‘ನಂಬಿಗಸ್ತ ಸತ್ಯ ಸಾಕ್ಷಿ’ ಆಗಿರಲು ಕೆಲವೊಮ್ಮೆ ಗಟ್ಟಿ ಗುಂಡಿಗೆ ಬೇಕು ಎನ್ನುವುದರಲ್ಲಿ ಸಂಶಯವಿಲ್ಲ.—ಪ್ರಕ. 3:14.

2 ಯೆಹೂದಿ ಜನಾಂಗದಲ್ಲಿ ಹುಟ್ಟಿದವನಾಗಿದ್ದರಿಂದ ಯೇಸು ಹುಟ್ಟಿನಿಂದಲೇ ಯೆಹೋವನಿಗೆ ಸಾಕ್ಷಿಯಾಗಿದ್ದನು. (ಯೆಶಾ. 43:10) ಅಷ್ಟೇ ಏಕೆ, ಯೆಹೋವನ ನಾಮದ ಪರವಾಗಿ ಸಾಕ್ಷಿಯಾಗಿದ್ದವರಲ್ಲೇ ಅತ್ಯಂತ ಮಹಾನ್‌ ಸಾಕ್ಷಿ ಯೇಸುವೇ. ತನ್ನ ಹೆಸರಿನ ಅರ್ಥವನ್ನು ಯೇಸು ಗಂಭೀರವಾಗಿ ಪರಿಗಣಿಸಿದ್ದನು. ಆ ಹೆಸರನ್ನು ಆತನಿಗಿಟ್ಟವನು ದೇವರೇ. ದೇವದೂತನೊಬ್ಬನು ಆತನ ಸಾಕುತಂದೆಯಾದ ಯೋಸೇಫನ ಬಳಿ ಬಂದು ಮರಿಯಳು ಪವಿತ್ರಾತ್ಮದಿಂದ ಗರ್ಭ ಧರಿಸಿರುವುದರ ಬಗ್ಗೆ ಹೇಳಿದ ನಂತರ ಹೀಗಂದನು: “ಅವಳು ಒಂದು ಗಂಡುಮಗುವನ್ನು ಹೆರುವಳು; ಅವನಿಗೆ ನೀನು ಯೇಸು ಎಂದು ಹೆಸರಿಡಬೇಕು; ಏಕೆಂದರೆ ಅವನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು.” (ಮತ್ತಾ. 1:20, 21) ಬೈಬಲ್‌ ವಿದ್ವಾಂಸರು ಸಾಮಾನ್ಯವಾಗಿ ನಂಬುವುದೇನೆಂದರೆ ಯೇಸು ಎಂಬ ಹೆಸರು ಬಂದಿರುವುದು ಯೇಷೂವ ಎಂಬ ಹೀಬ್ರು ಹೆಸರಿಂದ. ಇದರಲ್ಲಿ  ದೈವಿಕ ಹೆಸರಿನ ಸಂಕ್ಷಿಪ್ತ ರೂಪ ಇದೆ. ಯೇಸು ಎಂಬ ಹೆಸರಿನ ಅರ್ಥ “ರಕ್ಷಣೆ ಯೆಹೋವನಿಂದ.” ತನ್ನ ಹೆಸರಿಗಿರುವ ಈ ಅರ್ಥಕ್ಕೆ ಹೊಂದಿಕೆಯಲ್ಲಿ ಯೇಸು ‘ಇಸ್ರಾಯೇಲ್‌ ಮನೆತನದ ತಪ್ಪಿಹೋದ ಕುರಿಗಳು’ ಯೆಹೋವನ ಒಪ್ಪಿಗೆಯನ್ನು ಪುನಃ ಪಡೆಯಲು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವಂತೆ ಸಹಾಯಮಾಡಿದನು. (ಮತ್ತಾ. 10:6; 15:24; ಲೂಕ 19:10) ಈ ನಿಟ್ಟಿನಲ್ಲಿ ಯೇಸು ಹುರುಪಿನಿಂದ ದೇವರ ರಾಜ್ಯದ ಬಗ್ಗೆ ಸಾಕ್ಷಿಕೊಟ್ಟನು. ಸುವಾರ್ತಾ ಪುಸ್ತಕದ ಲೇಖಕನಾದ ಮಾರ್ಕ ವರದಿಸಿದ್ದು: “ಯೇಸು ಗಲಿಲಾಯಕ್ಕೆ ಹೋಗಿ ದೇವರ ಸುವಾರ್ತೆಯನ್ನು ಸಾರುತ್ತಾ, ‘ನೇಮಿತ ಕಾಲವು ನೆರವೇರಿದೆ. ದೇವರ ರಾಜ್ಯವು ಸಮೀಪಿಸಿದೆ. ಜನರೇ, ಪಶ್ಚಾತ್ತಾಪಪಟ್ಟು ಸುವಾರ್ತೆಯಲ್ಲಿ ನಂಬಿಕೆಯನ್ನಿಡಿರಿ’ ಎಂದು ಹೇಳಿದನು.” (ಮಾರ್ಕ 1:14, 15) ಯೇಸು ಯೆಹೂದಿ ಧಾರ್ಮಿಕ ಮುಖಂಡರ ವಿರುದ್ಧ ಧೈರ್ಯದಿಂದ ಧ್ವನಿಯೆತ್ತಿದನು ಸಹ. ಅವರು ಆತನನ್ನು ಯಾತನಾ ಕಂಬದಲ್ಲಿ ಸಾಯಿಸಿದ್ದಕ್ಕೆ ಇದೂ ಒಂದು ಕಾರಣ.—ಮಾರ್ಕ 11:17, 18; 15:1-15.

“ದೇವರ ಮಹೋನ್ನತ ಕಾರ್ಯ”

3. ಯೇಸು ಸತ್ತು ಮೂರು ದಿನಗಳಾದ ನಂತರ ಏನಾಯಿತು?

3 ಯೇಸುವನ್ನು ಕ್ರೂರವಾಗಿ ಸಾಯಿಸಲಾದ ಮೂರು ದಿನಗಳ ಬಳಿಕ ವಿಸ್ಮಯಕಾರಿ ಘಟನೆಯೊಂದು ನಡೆಯಿತು. ಆತನ ಪುನರುತ್ಥಾನವಾಯಿತು! ಅದೂ ಮಾನವನಾಗಿ ಅಲ್ಲ, ಅಮರ ಆತ್ಮಜೀವಿಯಾಗಿ. (1 ಪೇತ್ರ 3:18) ತನ್ನ ಪುನರುತ್ಥಾನವಾಗಿದೆ ಎಂಬುದನ್ನು ತೋರಿಸಲು ಕರ್ತನಾದ ಯೇಸು ಮಾನವ ದೇಹದಲ್ಲಿ ಪ್ರತ್ಯಕ್ಷನಾದನು. ಅವನು ಪುನರುತ್ಥಾನಗೊಂಡ ದಿನದಂದೇ ಹೆಚ್ಚುಕಡಿಮೆ ಐದು ಸಲ ಬೇರೆ ಬೇರೆ ಶಿಷ್ಯರಿಗೆ ಕಾಣಿಸಿಕೊಂಡನು.—ಮತ್ತಾ. 28:8-10; ಲೂಕ 24:13-16, 30-36; ಯೋಹಾ. 20:11-18.

4. (ಎ) ಯೇಸುವಿನ ಪುನರುತ್ಥಾನವಾದ ದಿನ ನಡೆದ ಕೂಟದಲ್ಲಿ ಆತನು ಯಾವುದರ ಬಗ್ಗೆ ಮಾತಾಡಿದನು? (ಬಿ) ತನ್ನ ಶಿಷ್ಯರಿಗೆ ಯಾವ ಜವಾಬ್ದಾರಿ ಇದೆ ಎಂದು ಸ್ಪಷ್ಟವಾಗಿ ಹೇಳಿದನು?

4 ಯೇಸು ಐದನೇ ಬಾರಿ ಪ್ರತ್ಯಕ್ಷನಾದದ್ದು ತನ್ನ ಅಪೊಸ್ತಲರ ಮತ್ತವರ ಜೊತೆ ಕೂಡಿ ಬಂದಿದ್ದ ಇತರರ ಮುಂದೆ. ಆ ಮರೆಯಲಾಗದ ಸಂದರ್ಭದಂದು ಯೇಸು ತನ್ನ ಶಿಷ್ಯರೊಂದಿಗೆ ಒಂದು ರೀತಿಯ ಬೈಬಲ್‌ ಅಧ್ಯಯನ ನಡೆಸಿದನು. ‘ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದನು.’ ಹೀಗೆ ಆ ಶಿಷ್ಯರಿಗೆ ಯೇಸುವಿನ ಮರಣ ಮತ್ತು ಅದ್ಭುತಕರ ಪುನರುತ್ಥಾನದ ಬಗ್ಗೆ ಶಾಸ್ತ್ರಗ್ರಂಥದಲ್ಲಿ ಮುಂತಿಳಿಸಲಾಗಿತ್ತೆಂದು ಅರ್ಥವಾಯಿತು. ಯೇಸುವಿನ ಪುನರುತ್ಥಾನವಾದ ದಿನದಂದೇ ನಡೆದ ಆ ಕೂಟದ ಮುಕ್ತಾಯದಷ್ಟಕ್ಕೆ ಅವನಿಗೆ ಕಿವಿಗೊಡುತ್ತಿದ್ದ ಶಿಷ್ಯರಿಗಿದ್ದ ಜವಾಬ್ದಾರಿ ಏನೆಂದು ಸ್ಪಷ್ಟವಾಗಿ ತಿಳಿಸಿದನು. ಅವನಂದದ್ದು: ‘ತನ್ನ ಹೆಸರಿನ ಆಧಾರದ ಮೇಲೆ ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪಪಡುವಂತೆ ಎಲ್ಲ ಜನಾಂಗಗಳಿಗೆ ಸಾರಲಾಗುವುದು.’ ಇದನ್ನು ಯೆರೂಸಲೇಮಿನಿಂದ ಆರಂಭಿಸಿ ಎಂದು ಹೇಳಿದನು. “ನೀವು ಈ ಸಂಗತಿಗಳಿಗೆ ಸಾಕ್ಷಿಗಳಾಗಿರುವಿರಿ” ಎಂದೂ ಹೇಳಿದನು.—ಲೂಕ 24:44-48.

5, 6. (ಎ) “ನನಗೆ ಸಾಕ್ಷಿಗಳಾಗಿರುವಿರಿ” ಎಂದು ಯೇಸು ಏಕೆ ಹೇಳಿದನು? (ಬಿ) ಯೇಸುವಿನ ಶಿಷ್ಯರು ಯೆಹೋವನ ಉದ್ದೇಶದ ಯಾವ ಹೊಸ ವೈಶಿಷ್ಟ್ಯದ ಬಗ್ಗೆ ಸಾರಬೇಕಿತ್ತು?

5 ಆದ್ದರಿಂದಲೇ 40 ದಿನಗಳ ನಂತರ ಯೇಸು ಕೊನೇ ಬಾರಿ ಕಾಣಿಸಿಕೊಂಡಾಗ ಅವನು ತನ್ನ ಅಪೊಸ್ತಲರಿಗೆ ಹೇಳಿದ ಈ ಸರಳ, ಶಕ್ತಿಯುತ ಮಾತುಗಳು ಅವರಿಗೆ ಚೆನ್ನಾಗಿ ಅರ್ಥವಾಗಿರಬೇಕು: “ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅ. ಕಾ. 1:8) ಯಾಕೆ ಯೇಸು “ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದನು? ಯೆಹೋವನಿಗೆ ಸಾಕ್ಷಿಗಳಾಗಿರುವಿರಿ ಎಂದೇಕೆ ಹೇಳಲಿಲ್ಲ? ಯಾಕೆಂದರೆ ಯೇಸು ಯಾರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಿದನೊ ಅವರು ಇಸ್ರಾಯೇಲ್ಯರಾಗಿದ್ದರು, ಹಾಗಾಗಿ ಈಗಾಗಲೇ ಯೆಹೋವನಿಗೆ ಸಾಕ್ಷಿಗಳಾಗಿದ್ದರು.

ಯೇಸುವಿನ ಶಿಷ್ಯರಾಗಿರುವ ನಾವು ಭವಿಷ್ಯತ್ತಿಗಾಗಿರುವ ಯೆಹೋವನ ಉದ್ದೇಶವನ್ನು ಸಾರುತ್ತಿರಬೇಕು (ಪ್ಯಾರ 5, 6 ನೋಡಿ)

6 ಈಗ ಯೇಸುವಿನ ಶಿಷ್ಯರು ಯೆಹೋವನ ಉದ್ದೇಶದ ಒಂದು ಹೊಸ ವೈಶಿಷ್ಟ್ಯದ ಬಗ್ಗೆ ಸಾರಬೇಕಿತ್ತು. ಇದು ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಮತ್ತು ಬಾಬೆಲಿನ ಬಂದಿವಾಸದಿಂದ ಪಡೆದ ಬಿಡುಗಡೆಗಿಂತ ಎಷ್ಟೋ ಹೆಚ್ಚು ಮಹತ್ತರವಾದ ವಿಷಯವಾಗಿತ್ತು. ಅದೇನೆಂದರೆ ಅತ್ಯಂತ ಭಯಾನಕವಾದ ಬಂದಿವಾಸವಾದ ಪಾಪ, ಮರಣದ ಬಂದಿವಾಸದಿಂದ ಬಿಡುಗಡೆ! ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನ ಈ ಬಿಡುಗಡೆಗೆ ಆಧಾರ ನೀಡಿತು. ಕ್ರಿ.ಶ. 33ರ ಪಂಚಾಶತ್ತಮದಂದು ಯೇಸುವಿನ ಹೊಸ ಅಭಿಷಿಕ್ತ ಶಿಷ್ಯರು, ಜನರಿಗೆ “ದೇವರ ಮಹೋನ್ನತ ಕಾರ್ಯ”ಗಳ ಬಗ್ಗೆ ತಿಳಿಸಿದರು. ಇದನ್ನು ಕೇಳಿದ ಅನೇಕರು ಒಳ್ಳೇ ಪ್ರತಿಕ್ರಿಯೆ ನೀಡಿದರು. ಹೀಗೆ ಸ್ವರ್ಗದಲ್ಲಿ ತನ್ನ ತಂದೆಯ ಬಲಗಡೆಯಲ್ಲಿ ಆಸೀನನಾದ ಯೇಸು ತನ್ನ ಹೆಸರು ಹೆಚ್ಚು ಅರ್ಥಪೂರ್ಣ ಆಗುವುದನ್ನು ಗಮನಿಸಿದನು. ಯಾಕೆಂದರೆ ಸಾವಿರಾರು ಜನರು ಪಶ್ಚಾತ್ತಾಪಪಟ್ಟು  ಯೆಹೋವನಿಂದ ರಕ್ಷಣೆ ಪಡೆಯಲು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು.—ಅ. ಕಾ. 2:5, 11, 37-41.

‘ಅನೇಕರಿಗೆ ಪ್ರತಿಯಾಗಿ ವಿಮೋಚನಾ ಮೌಲ್ಯ’

7. ಕ್ರಿ.ಶ. 33ರ ಪಂಚಾಶತ್ತಮದಂದು ನಡೆದ ಘಟನೆಗಳು ಏನನ್ನು ಸಾಬೀತುಪಡಿಸಿದವು?

7 ಕ್ರಿ.ಶ. 33ರ ಪಂಚಾಶತ್ತಮದ ದಿನದಂದು ನಡೆದ ಘಟನೆಗಳು ಒಂದು ವಿಷಯವನ್ನು ಸಾಬೀತುಪಡಿಸಿದವು. ಅದೇನೆಂದರೆ ಪಾಪದ ದೋಷಪರಿಹಾರವಾಗಿ ಯೇಸು ಅರ್ಪಿಸಿದ ತನ್ನ ಪರಿಪೂರ್ಣ ಮಾನವ ದೇಹದ ಯಜ್ಞವನ್ನು ಯೆಹೋವನು ಸ್ವೀಕರಿಸಿದನು. (ಇಬ್ರಿ. 9:11, 12, 24) ಯೇಸುವೇ ವಿವರಿಸಿದಂತೆ ಅವನು “ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.” (ಮತ್ತಾ. 20:28) “ಅನೇಕರಿಗೆ” ಅನ್ನುವಾಗ ಪಶ್ಚಾತ್ತಾಪಪಟ್ಟ ಯೆಹೂದ್ಯರಿಗೆ ಮಾತ್ರ ವಿಮೋಚನಾ ಮೌಲ್ಯದ ಪ್ರಯೋಜನ ಸಿಗುತ್ತದೆಂದು ಅರ್ಥವಲ್ಲ. ಬದಲಿಗೆ ದೇವರ ಚಿತ್ತವೇನೆಂದರೆ “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು.” ಏಕೆಂದರೆ ವಿಮೋಚನಾ ಮೌಲ್ಯವು ‘ಲೋಕದ ಪಾಪವನ್ನು ತೆಗೆದುಹಾಕುವ’ ಏರ್ಪಾಡಾಗಿದೆ.—1 ತಿಮೊ. 2:4-6; ಯೋಹಾ. 1:29.

8. (ಎ) ಯೇಸುವಿನ ಶಿಷ್ಯರು ಎಷ್ಟರ ಮಟ್ಟಿಗೆ ಸಾಕ್ಷಿಕೊಟ್ಟರು? (ಬಿ) ಇದು ಹೇಗೆ ಸಾಧ್ಯವಾಯಿತು?

8 ಯೇಸುವಿನ ಬಗ್ಗೆ ಸಾಕ್ಷಿ ನೀಡುತ್ತಾ ಇರಲು ಆತನ ಆರಂಭದ ಶಿಷ್ಯರಿಗೆ ಧೈರ್ಯ ಬೇಕಾಗಿತ್ತಾ? ಖಂಡಿತ. ಆದರೆ ಇದನ್ನವರು ಸ್ವಂತ ಬಲದಿಂದ ಮಾಡಲಿಕ್ಕಾಗಲಿಲ್ಲ. ಯೆಹೋವನ ಶಕ್ತಿಶಾಲಿ ಪವಿತ್ರಾತ್ಮ ಅವರನ್ನು ಹುರಿದುಂಬಿಸಿತು ಮತ್ತು ಸಾಕ್ಷಿ ಕೊಡುತ್ತಾ ಇರಲು ಬೇಕಾದ ಬಲವನ್ನು ತುಂಬಿಸಿತು. (ಅಪೊಸ್ತಲರ ಕಾರ್ಯಗಳು 5:30-32 ಓದಿ.) ಆದ್ದರಿಂದಲೇ ಸುಮಾರು 27 ವರ್ಷಗಳ ನಂತರ “ಸುವಾರ್ತೆಯ ಕುರಿತಾದ ಸತ್ಯವು” ಯೆಹೂದ್ಯರು ಮತ್ತು ಅನ್ಯಜನಾಂಗದವರನ್ನು ಸೇರಿಸಿ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ತಲಪಿದೆ ಎಂದು ಹೇಳಲು ಸಾಧ್ಯವಾಯಿತು.—ಕೊಲೊ. 1:5, 23.

9. ಮುಂಚೆಯೇ ಹೇಳಿದಂತೆ ಮೂಲ ಕ್ರೈಸ್ತ ಸಭೆಗೆ ಏನಾಯಿತು?

9 ಆದರೆ ಮೂಲ ಕ್ರೈಸ್ತ ಸಭೆ ಕ್ರಮೇಣ ಕಲುಷಿತಗೊಂಡದ್ದು ವಿಷಾದನೀಯ. (ಅ. ಕಾ. 20:29, 30; 2 ಪೇತ್ರ 2:2, 3; ಯೂದ 3, 4) “ವೈರಿ”ಯಾದ ಸೈತಾನನು ಬಿತ್ತಿದ ಧರ್ಮಭ್ರಷ್ಟತೆಯು ಬೆಳೆದು ನಿಜ ಕ್ರೈಸ್ತತ್ವವನ್ನು “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ ವರೆಗೆ ಮರೆಮಾಡುವುದು ಎಂದು ಯೇಸು ಮುಂಚೆಯೇ ಹೇಳಿದ್ದನು. (ಮತ್ತಾ. 13:37-43) ಇದಾದ ನಂತರ ಯೆಹೋವನು ಯೇಸುವನ್ನು ಮಾನವಕುಲಕ್ಕೆ ರಾಜನಾಗಿ ನೇಮಿಸಲಿದ್ದನು. ಇದು ನಡೆದದ್ದು ಅಕ್ಟೋಬರ್‌ 1914ರಂದು. ಅಂದಿನಿಂದ ಸೈತಾನನ ವ್ಯವಸ್ಥೆಯ “ಕಡೇ ದಿವಸಗಳು” ಆರಂಭವಾದವು.—2 ತಿಮೊ. 3:1.

10. (ಎ) ಆಧುನಿಕ ಕ್ರೈಸ್ತರು ಯಾವ ಪ್ರಾಮುಖ್ಯ ತಾರೀಕಿನ ಬಗ್ಗೆ ಹೇಳಿದ್ದರು? (ಬಿ) ಅಕ್ಟೋಬರ್‌ 1914ರಲ್ಲಿ ಏನು ಸಂಭವಿಸಿತು? (ಸಿ) ಇದು ನಮಗೆ ಹೇಗೆ ಸ್ಪಷ್ಟವಾಗಿ ಗೊತ್ತಾಗಿದೆ?

10 ಆಧುನಿಕ ದಿನದ ಅಭಿಷಿಕ್ತ ಕ್ರೈಸ್ತರು ಅಕ್ಟೋಬರ್‌  1914 ಒಂದು ಮಹತ್ವದ ತಾರೀಕಾಗಿರುವುದು ಎಂದು ಎಷ್ಟೋ ಮುಂಚೆಯೇ ಹೇಳಿದ್ದರು. ಇದನ್ನು ಹೇಳಲು ಅವರಿಗಿದ್ದ ಆಧಾರ ಒಂದು ದೊಡ್ಡ ವೃಕ್ಷ ಕಡಿಯಲ್ಪಟ್ಟು “ಏಳು ಕಾಲಗಳ” ನಂತರ ಪುನಃ ಬೆಳೆಯುವುದರ ಕುರಿತ ದಾನಿಯೇಲನ ಪ್ರವಾದನೆ. (ದಾನಿ. 4:16 ಪಾದಟಿಪ್ಪಣಿ) ಈ ಅವಧಿಯನ್ನೇ ಯೇಸು, ಭವಿಷ್ಯತ್ತಿನಲ್ಲಾಗುವ ತನ್ನ ಸಾನ್ನಿಧ್ಯ ಮತ್ತು “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ ಕುರಿತ ತನ್ನ ಪ್ರವಾದನೆಯಲ್ಲಿ “ಅನ್ಯಜನಾಂಗಗಳ ನೇಮಿತ ಕಾಲ”ವೆಂದು ಕರೆದನು. 1914ರಿಂದ ಭೂಮಿಯ ಹೊಸ ರಾಜನಾಗಿ ‘[ಕ್ರಿಸ್ತನ] ಸಾನ್ನಿಧ್ಯದ ಸೂಚನೆ’ ನಮ್ಮೆಲ್ಲರಿಗೆ ಸ್ಪಷ್ಟವಾಗಿ ತೋರಿಬರುತ್ತಿದೆ. (ಮತ್ತಾ. 24:3, 7, 14; ಲೂಕ 21:24) ಹೀಗಿರಲಾಗಿ ಅಂದಿನಿಂದ ‘ದೇವರ ಮಹೋನ್ನತ ಕಾರ್ಯಗಳಲ್ಲಿ’ ಯೆಹೋವನು ಯೇಸುವನ್ನು ಮಾನವಕುಲದ ರಾಜನಾಗಿ ಪಟ್ಟಾಭಿಷೇಕ ಮಾಡಿರುವುದು ಸೇರಿದೆ.

11, 12. (ಎ) ಯುದ್ಧ ಮುಗಿದ ನಂತರದ ವರ್ಷ ಅಂದರೆ 1919ರಲ್ಲಿ ಭೂಮಿಯ ಹೊಸ ರಾಜ ಏನು ಮಾಡಲು ಆರಂಭಿಸಿದನು? (ಬಿ) 1935ರಿಂದ ಆರಂಭಿಸಿ ಯಾವ ಬೆಳವಣಿಗೆ ಆಯಿತು? (ಶೀರ್ಷಿಕೆ ಚಿತ್ರ ನೋಡಿ.)

11 ಭೂಮಿಯ ಹೊಸ ರಾಜನಾಗಿ ಯೇಸು ಕ್ರಿಸ್ತನು ಬೇಗನೆ ತನ್ನ ಅಭಿಷಿಕ್ತ ಹಿಂಬಾಲಕರನ್ನು “ಮಹಾ ಬಾಬೆಲ್‌”ನ ಬಂಧನದಿಂದ ಬಿಡಿಸಲು ಶುರುಮಾಡಿದನು. (ಪ್ರಕ. 18:2, 4) ಯುದ್ಧ ಮುಗಿದ ನಂತರದ ವರ್ಷ ಅಂದರೆ 1919ರಲ್ಲಿ ರಕ್ಷಣೆಗಾಗಿರುವ ದೇವರ ಮಾಧ್ಯಮದ ಬಗ್ಗೆ ಮತ್ತು ಈಗಾಗಲೇ ಸ್ಥಾಪಿತವಾಗಿರುವ ರಾಜ್ಯದ ಸುವಾರ್ತೆಯ ಬಗ್ಗೆ ಭೌಗೋಳಿಕವಾಗಿ ಸಾಕ್ಷಿ ನೀಡಲು ದಾರಿ ತೆರೆಯಿತು. ಈ ಅವಕಾಶವನ್ನು ಅಭಿಷಿಕ್ತ ಕ್ರೈಸ್ತರು ಕೂಡಲೆ ಬಳಸಿದರು. ಫಲಿತಾಂಶವಾಗಿ ಕ್ರಿಸ್ತನ ಸಹರಾಜರಾಗಿ ಆಳಲಿಕ್ಕಾಗಿ ಸಾವಿರಾರು ಮಂದಿ ಅಭಿಷಿಕ್ತರನ್ನು ಕೂಡಿಸಲಾಯಿತು.

12 ಕ್ರಿಸ್ತನು ಲಕ್ಷಾಂತರ ಮಂದಿ “ಬೇರೆ ಕುರಿಗಳನ್ನು” ಕೂಡಿಸಲು ಆರಂಭಿಸಿದ್ದಾನೆಂಬುದು 1935ರಿಂದ ಸ್ಪಷ್ಟವಾಗತೊಡಗಿತು. ಈ ಬೇರೆ ಕುರಿಗಳು “ಮಹಾ ಸಮೂಹ”ವಾಗಿದ್ದು ಬಹುರಾಷ್ಟ್ರಗಳಿಂದ ಬಂದವರಾಗಿದ್ದಾರೆ. ಅಭಿಷಿಕ್ತ ಕ್ರೈಸ್ತರ ನಿರ್ದೇಶನದ ಕೆಳಗೆ ಈ ಮಹಾ ಸಮೂಹ ಯೇಸುವಿನ ಧೀರ ಮಾದರಿಯನ್ನು ಅನುಕರಿಸುತ್ತಾ ಯೆಹೋವ ಮತ್ತು ಕ್ರಿಸ್ತನಿಂದಲೇ ತಮಗೆ ರಕ್ಷಣೆ ಎಂದು ಸಾರ್ವಜನಿಕವಾಗಿ ಸಾರುತ್ತಾರೆ. ಸಾಕ್ಷಿ ಕಾರ್ಯದಲ್ಲಿ ತಾಳಿಕೊಳ್ಳುವ ಮೂಲಕ ಹಾಗೂ ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ತೋರಿಸುತ್ತಾ ಇರುವ ಮೂಲಕ ಇವರು ಸೈತಾನನ ಲೋಕಕ್ಕೆ ಕೊನೆ ತರುವ “ಮಹಾ ಸಂಕಟ”ದಿಂದ ಪಾರಾಗುತ್ತಾರೆ.—ಯೋಹಾ. 10:16; ಪ್ರಕ. 7:9, 10, 14.

‘ಸುವಾರ್ತೆ ತಿಳಿಸಲು ಧೈರ್ಯ ಪಡೆದುಕೊಳ್ಳಿ’

13. (ಎ) ಯೆಹೋವನ ಸಾಕ್ಷಿಗಳಾದ ನಾವು ಏನನ್ನು ಮಾಡಲು ದೃಢರಾಗಿದ್ದೇವೆ? (ಬಿ) ನಮಗೆ ಯಶಸ್ಸು ಸಿಗುತ್ತದೆಂದು ಏಕೆ ನಿಶ್ಚಯದಿಂದ ಇರಬಲ್ಲೆವು?

13 ಯೆಹೋವನು ಮಾಡಿರುವ “ಮಹೋನ್ನತ ಕಾರ್ಯಗಳು” ಮತ್ತು ಭವಿಷ್ಯತ್ತಿಗಾಗಿ ಆತನು ಮಾಡಿರುವ ವಾಗ್ದಾನಗಳ ಬಗ್ಗೆ ಸಾಕ್ಷಿಗಳಾಗಿರುವ ನಮ್ಮ ಸುಯೋಗವನ್ನು ಅಮೂಲ್ಯವೆಂದೆಣಿಸಲು ಮುಂದುವರಿಸೋಣ. ಸಾಕ್ಷಿ ನೀಡುವುದು ಯಾವಾಗಲೂ ಸುಲಭವಲ್ಲ ನಿಜ. ನಮ್ಮ ಅನೇಕ ಸಹೋದರರು ಸೇವೆ ಮಾಡುತ್ತಿರುವ ಕ್ಷೇತ್ರಗಳಲ್ಲಿ ಜನರು ನಿರಾಸಕ್ತಿ ತೋರಿಸುತ್ತಾರೆ, ಅಪಹಾಸ್ಯ ಮಾಡುತ್ತಾರೆ ಮತ್ತು ತೀಕ್ಷ್ಣವಾಗಿ ಹಿಂಸಿಸುತ್ತಾರೆ ಕೂಡ. ಹಾಗಾಗಿ ನಾವು ಅಪೊಸ್ತಲ ಪೌಲ ಮತ್ತವನ ಸಂಗಡಿಗರು ಮಾಡಿದಂತೇ ಮಾಡಬೇಕು. ಪೌಲನು ಹೇಳಿದ್ದು: “ಸುವಾರ್ತೆಯನ್ನು ನಿಮಗೆ ತಿಳಿಸಲು ನಮ್ಮ ದೇವರ ಸಹಾಯದಿಂದ ಧೈರ್ಯವನ್ನು ಪಡೆದುಕೊಂಡೆವು.” (1 ಥೆಸ. 2:2) ಎಂದೂ ಬಿಟ್ಟು ಕೊಡದೆ ಇರೋಣ. ಸೈತಾನನ ವ್ಯವಸ್ಥೆ ಕುಸಿಯುತ್ತಾ ಹೋದಂತೆ ನಮ್ಮ ಸಮರ್ಪಣೆಗೆ ಅಂಟಿಕೊಂಡಿರಲು ದೃಢರಾಗಿರೋಣ. (ಯೆಶಾ. 6:11, 12) ಇದು ನಮ್ಮ ಸ್ವಂತ ಬಲದಿಂದ ಖಂಡಿತ ಸಾಧ್ಯವಿಲ್ಲ.  ಆದರೆ ಆರಂಭದ ಕ್ರೈಸ್ತರ ಮಾದರಿಯನ್ನು ಅನುಕರಿಸುತ್ತಾ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ”ಯನ್ನು ಕೊಡುವ ಪವಿತ್ರಾತ್ಮಕ್ಕಾಗಿ ಯೆಹೋವನಲ್ಲಿ ಬೇಡೋಣ.—2 ಕೊರಿಂಥ 4:1, 7 ಓದಿ; ಲೂಕ 11:13.

14, 15. (ಎ) ಕ್ರಿ.ಶ. ಪ್ರಥಮ ಶತಮಾನದಲ್ಲಿ ಕ್ರೈಸ್ತರ ಬಗ್ಗೆ ಜನರಿಗೆ ಯಾವ ನೋಟವಿತ್ತು? (ಬಿ) ಅವರ ಬಗ್ಗೆ ಅಪೊಸ್ತಲ ಪೇತ್ರ ಏನೆಂದು ಹೇಳಿದನು? (ಸಿ) ಯೆಹೋವನ ಸಾಕ್ಷಿಗಳಾಗಿದ್ದೇವೆಂಬ ಕಾರಣಕ್ಕೆ ನಾವು ಅನ್ಯಾಯಕ್ಕೆ ಗುರಿಯಾದರೆ ಅದರ ಅರ್ಥವೇನು?

14 ಇಂದು ಲಕ್ಷಾಂತರ ಮಂದಿ ತಾವು ಕ್ರೈಸ್ತರು ಎಂದು ಹೇಳಿಕೊಳ್ಳಬಹುದು. “ಆದರೆ ತಮ್ಮ ಕೃತ್ಯಗಳಿಂದ ಆತನನ್ನು [ದೇವರನ್ನು] ಅಲ್ಲಗಳೆಯುತ್ತಾರೆ; ಏಕೆಂದರೆ ಅವರು ಅಸಹ್ಯರೂ ಅವಿಧೇಯರೂ ಯಾವುದೇ ರೀತಿಯ ಒಳ್ಳೇ ಕೆಲಸಕ್ಕೆ ಅನುಮೋದನೆ ಪಡೆಯದವರೂ ಆಗಿದ್ದಾರೆ.” (ತೀತ 1:16) ನಾವು ಒಂದು ವಿಷಯವನ್ನು ತಿಳಿದುಕೊಂಡಿರುವುದು ಒಳ್ಳೇದು. ಏನೆಂದರೆ ಮೊದಲನೇ ಶತಮಾನದಲ್ಲಿ ನಿಜ ಕ್ರೈಸ್ತರ ಸಮಕಾಲೀನರಲ್ಲಿ ಅಧಿಕಾಂಶ ಮಂದಿ ಅವರನ್ನು ದ್ವೇಷಿಸುತ್ತಿದ್ದರು. ಆದ್ದರಿಂದಲೇ ಅಪೊಸ್ತಲ ಪೇತ್ರನು ಬರೆದದ್ದು: “ಕ್ರಿಸ್ತನ ಹೆಸರಿನ ನಿಮಿತ್ತ ನೀವು ನಿಂದಿಸಲ್ಪಡುತ್ತಿರುವುದಾದರೆ ಸಂತೋಷಿತರು; ಏಕೆಂದರೆ . . . ದೇವರ ಪವಿತ್ರಾತ್ಮವು . . . ನಿಮ್ಮಲ್ಲಿ ನೆಲೆಗೊಂಡಿದೆ.”—1 ಪೇತ್ರ 4:14.

15 ಆ ಪ್ರೇರಿತ ಮಾತುಗಳು ಇಂದು ಯೆಹೋವನ ಸಾಕ್ಷಿಗಳಿಗೆ ಅನ್ವಯವಾಗುತ್ತವಾ? ಆಗುತ್ತವೆ. ಯಾಕೆಂದರೆ ನಾವು ಯೇಸು ರಾಜನಾಗಿದ್ದಾನೆಂದು ಸಾಕ್ಷಿ ನೀಡುತ್ತೇವೆ. ಹಾಗಾಗಿ ಯೆಹೋವನ ನಾಮವನ್ನು ಹೊಂದಿರುವುದಕ್ಕಾಗಿ ಜನರು ನಮ್ಮನ್ನು ದ್ವೇಷಿಸಿದರೆ ಅದು ‘[ಯೇಸು] ಕ್ರಿಸ್ತನ ಹೆಸರಿನ ನಿಮಿತ್ತ ನಿಂದಿಸಲ್ಪಡುವುದಕ್ಕೆ’ ಸಮ. ತನ್ನನ್ನು ದ್ವೇಷಿಸಿದವರಿಗೆ ಅವನಂದದ್ದು: “ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ಆದರೆ ನೀವು ನನ್ನನ್ನು ಸ್ವೀಕರಿಸುತ್ತಿಲ್ಲ.” (ಯೋಹಾ. 5:43) ಆದ್ದರಿಂದ ಮುಂದಿನ ಸಲ ನಿಮಗೆ ಸಾಕ್ಷಿಕಾರ್ಯದಲ್ಲಿ ವಿರೋಧ ಬಂದರೆ ಧೈರ್ಯವಾಗಿರಿ. ಇಂಥ ಅನ್ಯಾಯಕ್ಕೆ ನೀವು ಗುರಿಯಾಗುವಲ್ಲಿ ದೇವರ ಒಪ್ಪಿಗೆ ನಿಮಗಿದೆ ಮತ್ತು ಪವಿತ್ರಾತ್ಮ “ನಿಮ್ಮಲ್ಲಿ ನೆಲೆಗೊಂಡಿದೆ” ಎಂದರ್ಥ.

16, 17. (ಎ) ಜಗತ್ತಿನ ಅನೇಕ ಭಾಗಗಳಲ್ಲಿ ಯೆಹೋವನ ಜನರು ಏನನ್ನು ಆನಂದಿಸುತ್ತಿದ್ದಾರೆ? (ಬಿ) ನಿಮ್ಮ ದೃಢನಿಶ್ಚಯವೇನು?

16 ಅದೇ ಸಮಯದಲ್ಲಿ ಈ ವಿಷಯವನ್ನೂ ನೆನಪಿಡಿ. ಜಗತ್ತಿನ ಅನೇಕ ಭಾಗಗಳಲ್ಲಿ ಸಾಕ್ಷಿಗಳ ಸಂಖ್ಯೆಯಲ್ಲಿ ಅಭಿವೃದ್ಧಿಯಾಗುತ್ತಿದೆ. ತುಂಬ ಸಲ ಆವರಿಸಲಾಗಿರುವ ಕ್ಷೇತ್ರಗಳಲ್ಲೂ ರಕ್ಷಣೆಯ ಕುರಿತ ಅದ್ಭುತ ಸಂದೇಶಕ್ಕೆ ಕಿವಿಗೊಡುವವರು ನಮಗೆ ಈಗಲೂ ಸಿಗುತ್ತಾರೆ. ಆಸಕ್ತ ವ್ಯಕ್ತಿಗಳನ್ನು ಶ್ರದ್ಧೆಯಿಂದ ಪುನರ್ಭೇಟಿ ಮಾಡಿ ಸಾಧ್ಯವಾದಲ್ಲಿ ಅವರೊಂದಿಗೆ ಬೈಬಲ್‌ ಅಧ್ಯಯನ ಮಾಡೋಣ. ಹೀಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರಗತಿ ಮಾಡಲು ಅವರಿಗೆ ಸಹಾಯಮಾಡೋಣ. ದಕ್ಷಿಣ ಆಫ್ರಿಕಾದಲ್ಲಿ 60ಕ್ಕಿಂತ ಹೆಚ್ಚು ವರ್ಷಗಳಿಂದ ಸಾರುವ ಕೆಲಸ ಮಾಡುತ್ತಿರುವ ಸಾರೀ ಎಂಬಾಕೆಗೆ ಇರುವ ಭಾವನೆಗಳು ನಿಮಗೂ ಇರಬಹುದು. ಅವರನ್ನುವುದು: “ನಾನು ಯೇಸುವಿನ ವಿಮೋಚನಾ ಮೌಲ್ಯದ ಏರ್ಪಾಡಿಗೆ ತುಂಬ ಕೃತಜ್ಞಳು. ಏಕೆಂದರೆ ಅದರಿಂದಲೇ ನಾನು ವಿಶ್ವದ ಪರಮಾಧಿಕಾರಿಯಾದ ಯೆಹೋವನೊಂದಿಗೆ ಒಳ್ಳೇ ಸಂಬಂಧದಲ್ಲಿರಲು ಸಾಧ್ಯವಾಗಿದೆ ಮತ್ತು ಆತನ ಹೆಸರನ್ನು ನಾನು ಮಹಿಮೆಪಡಿಸಲು ಆಗಿದೆ.” ಸಾರೀ ಮತ್ತವರ ಪತಿ ಮಾರ್ಟಿನಸ್‌ ತಮ್ಮ ಮೂವರು ಮಕ್ಕಳಿಗೆ ಮತ್ತು ಇನ್ನೂ ಅನೇಕರಿಗೆ ಯೆಹೋವನ ಆರಾಧಕರಾಗಲು ಸಹಾಯ ಮಾಡಿದ್ದಾರೆ. ಅವರು ಮುಂದುವರಿಸಿ ಹೇಳುವುದು: “ಬೇರಾವ ಕೆಲಸವೂ ಇಷ್ಟೊಂದು ತೃಪ್ತಿಯನ್ನು ತರುವುದಿಲ್ಲ. ಯೆಹೋವನು ತನ್ನ ಪವಿತ್ರಾತ್ಮವನ್ನು ದಯಪಾಲಿಸುವ ಮೂಲಕ ಈ ಜೀವರಕ್ಷಕ ಕೆಲಸವನ್ನು ಮುಂದುವರಿಸಲು ನಮಗೆ ಬೇಕಾದ ಶಕ್ತಿಯನ್ನು ಕೊಡುತ್ತಿದ್ದಾನೆ.”

17 ನಾವು ದೀಕ್ಷಾಸ್ನಾನಿತ ಕ್ರೈಸ್ತರಾಗಿರಲಿ ಅಥವಾ ಆ ಗುರಿಯ ಕಡೆಗೆ ಸಾಗುತ್ತಿರುವವರಾಗಿರಲಿ ಯೆಹೋವನ ಸಾಕ್ಷಿಗಳ ಭೌಗೋಳಿಕ ಸಭೆಯ ಭಾಗವಾಗಿರುವುದಕ್ಕೆ ಕೃತಜ್ಞರಾಗಿರಬೇಕು. ಆದ್ದರಿಂದ ಕೂಲಂಕಷ ಸಾಕ್ಷಿ ನೀಡುವುದನ್ನು ಮುಂದುವರಿಸಿರಿ. ಜೊತೆಗೆ ಸೈತಾನನ ಅಶುದ್ಧ ಲೋಕದಿಂದ ಕಲುಷಿತರಾಗದೆ ನಿಮ್ಮನ್ನು ಶುದ್ಧರಾಗಿಟ್ಟುಕೊಳ್ಳಲು ಶ್ರಮಿಸಿ. ಹೀಗೆ ಮಾಡುವ ಮೂಲಕ ಯಾರ ಹೆಸರನ್ನು ಹೊಂದಿರುವುದು ನಮ್ಮ ಸುಯೋಗವಾಗಿದೆಯೋ ಆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ಗೌರವ ತರುವಿರಿ.