ಅದು ಮುಂಜಾನೆಯ ನಸುಕು. ಮೈಕೊರೆಯುವ ಚಳಿ. ಹೊಸದಾಗಿ ಮದುವೆಯಾದ ನಾನು ನನ್ನ ಪತ್ನಿ ಎವ್ಲಿನ್‍ಳೊಂದಿಗೆ ಹಾರ್ನ್‌ಪೇನ್‌ ಎಂಬಲ್ಲಿ ರೈಲಿನಿಂದಿಳಿದೆ. ಅದು ಕೆನಡದ ಉತ್ತರ ಆಂಟೇರಿಯೋದ ವನ್ಯಪ್ರದೇಶ. ಸ್ಥಳೀಯ ಸಹೋದರರೊಬ್ಬರು ಬಂದು ನಮ್ಮನ್ನು ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋದರು. ಅವರೂ ಅವರ ಹೆಂಡತಿ, ಮಗನೊಂದಿಗೆ ನಾವು ಬೆಳಗ್ಗಿನ ತಿಂಡಿಯನ್ನು ಹೊಟ್ಟೆತುಂಬ ತಿಂದು ಎಲ್ಲರೂ ಸೇವೆಗೆ ಹೊರಟೆವು. ಹಿಮದಲ್ಲಿ ನಡೆಯುತ್ತಾ ಮನೆ ಮನೆ ಸೇವೆ ಮಾಡಿದೆವು. ಮೊತ್ತಮೊದಲ ಬಾರಿ ಸರ್ಕಿಟ್‌ ಮೇಲ್ವಿಚಾರಕನಾಗಿ ನಾನು ಅಂದು ಸಂಜೆ ಸಾರ್ವಜನಿಕ ಭಾಷಣ ಕೊಟ್ಟೆ. ನಾವು ಐದು ಮಂದಿ ಬಿಟ್ಟರೆ ಬೇರೆ ಯಾರೂ ಅಲ್ಲಿರಲಿಲ್ಲ.

ಇದಾದದ್ದು 1957ರಲ್ಲಿ. ನನ್ನ ಭಾಷಣ ಕೇಳಲು ನಾಲ್ಕೇ ಮಂದಿ ಇದ್ದದ್ದು ಒಂದುರೀತಿ ಒಳ್ಳೇದೇ ಆಯಿತು. ಏಕೆಂದರೆ ನನಗೆ ಮೊದಲಿಂದಲೂ ತುಂಬ ನಾಚಿಕೆ ಸ್ವಭಾವ. ಚಿಕ್ಕವನಿದ್ದಾಗಲಂತೂ ಮನೆಗೆ ಪರಿಚಯದವರು ಬಂದರೂ ಒಳಗೆ ಅಡಗಿಕೊಳ್ಳುತ್ತಿದ್ದೆ.

ಆದರೆ ಅಚ್ಚರಿಯ ಸಂಗತಿಯೇನೆಂದರೆ ಯೆಹೋವನ ಸಂಘಟನೆಯಲ್ಲಿ ಸಿಕ್ಕಿರುವ ಹೆಚ್ಚಿನ ನೇಮಕಗಳಲ್ಲಿ ನಾನು ಅನೇಕ ಸ್ನೇಹಿತರೊಂದಿಗೆ ಹಾಗೂ ಪರಿಚಯವಿಲ್ಲದವರೊಂದಿಗೆ ಸಂವಾದ ಮಾಡಲೇಬೇಕಾಗಿ ಬಂದಿದೆ. ಆದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿ ನಾಚಿಕೆ ಸ್ವಭಾವ ಹಾಗೂ ಆತ್ಮವಿಶ್ವಾಸದ ಕೊರತೆ ಮನೆಮಾಡಿದೆ. ಹಾಗಾಗಿ ದೇವರ ಸೇವೆಯಲ್ಲಿ ನಾನು ಪೂರೈಸಿರುವ ಎಲ್ಲ ಕೆಲಸಕ್ಕೂ ಕೀರ್ತಿ ನನಗಲ್ಲ, ಯೆಹೋವನಿಗೇ ಸಲ್ಲಬೇಕು. “ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ [ನಿಜವಾಗಿಯೂ, NW] ಆಧಾರಮಾಡುತ್ತೇನೆ” ಎಂಬ ಮಾತನ್ನು ಯೆಹೋವನು ನನ್ನ ಜೀವನದಲ್ಲಿ ಪೂರೈಸಿದ್ದಾನೆ. (ಯೆಶಾ. 41:10) ಯೆಹೋವನು ನನಗೆ ಸಹಾಯ ಮಾಡಿರುವ ಒಂದು ಮುಖ್ಯ ವಿಧ ಜೊತೆಕ್ರೈಸ್ತರ ಮೂಲಕ. ಚಿಕ್ಕಂದಿನಿಂದಲೂ ನನಗೆ ಸಹಾಯ, ಬೆಂಬಲ ನೀಡಿರುವ ಜೊತೆಕ್ರೈಸ್ತರಲ್ಲಿ ಕೆಲವರ ಕುರಿತು ನಾನೀಗ ಹೇಳುತ್ತೇನೆ.

ಅವರ ಬಳಿ ಬೈಬಲ್‌ ಹಾಗೂ ಚಿಕ್ಕ ಕಪ್ಪು ಪುಸ್ತಕವಿತ್ತು

ನೈಋತ್ಯ ಆಂಟೇರಿಯೋದಲ್ಲಿನ ನಮ್ಮ ಮನೆಯ ಹತ್ತಿರ ನಾನು

1940ರ ದಶಕ. ನೈಋತ್ಯ ಆಂಟೇರಿಯೋದಲ್ಲಿತ್ತು ನಮ್ಮ ಮನೆ. ಒಂದು ಭಾನುವಾರ ಒಬ್ಬಾಕೆ ಸ್ತ್ರೀ ನಮ್ಮ ಮನೆ ಬಾಗಿಲು ತಟ್ಟಿದರು. ಅವರ ಹೆಸರು ಎಲ್ಸೀ ಹಂಟಿಂಗ್‌ಫರ್ಡ್‌. ಅಮ್ಮ ಬಾಗಿಲು ತೆರೆದು ಮಾತಾಡಿಸಿದರು. ನನ್ನಂತೆ ನಾಚಿಕೆ ಸ್ವಭಾವದವರಾಗಿದ್ದ ಅಪ್ಪ ನನ್ನೊಟ್ಟಿಗೆ ಕೋಣೆಯೊಳಗೆ ಕೂತು ಅವರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು. ಸಹೋದರಿ  ಹಂಟಿಂಗ್‌ಫರ್ಡ್‌ ಏನನ್ನೋ ಮಾರಲು ಬಂದಿದ್ದಾರೆ, ಅಮ್ಮ ಸುಮ್ಮನೆ ಏನನ್ನಾದರೂ ಕೊಂಡುಕೊಳ್ಳಬಹುದು ಎಂದು ನೆನಸಿ ಅಪ್ಪ ಕೊನೆಗೂ ಹೊರಗೆ ಹೋಗಿ ‘ನಮಗೇನೂ ಬೇಡ’ ಎಂದು ಆ ಸ್ತ್ರೀಗೆ ಹೇಳಿದರು. ಅದಕ್ಕೆ ಅವರು “ಬೈಬಲ್‌ ಅಧ್ಯಯನ ಮಾಡಲು ನಿಮಗಿಷ್ಟ ಇಲ್ಲವಾ?” ಎಂದು ಕೇಳಿದರು. ಆಗ ಅಪ್ಪ “ಬೈಬಲ್‌ ಅಧ್ಯಯನನಾ? ಖಂಡಿತ ಇಷ್ಟ ಇದೆ” ಎಂದರು.

ಸಹೋದರಿ ಹಂಟಿಂಗ್‌ಫರ್ಡ್‌ ಒಳ್ಳೇ ಸಮಯಕ್ಕೆ ನಮ್ಮನ್ನು ಭೇಟಿಯಾಗಿದ್ದರು. ಏಕೆಂದರೆ ಕೆನಡದ ಯುನೈಟೆಡ್‌ ಚರ್ಚಿನ ಸಕ್ರಿಯ ಸದಸ್ಯರಾಗಿದ್ದ ಅಪ್ಪಅಮ್ಮ ಆಗಷ್ಟೇ ಚರ್ಚನ್ನು ಬಿಟ್ಟಿದ್ದರು. ಏಕೆಂದರೆ ಚರ್ಚಿಗೆ ದೇಣಿಗೆ ಕೊಟ್ಟವರ ಹೆಸರಿನ ಪಟ್ಟಿಯನ್ನು ಪಾದ್ರಿ ಚರ್ಚಿನಲ್ಲಿ ಹಾಕುತ್ತಿದ್ದರು. ಹೆಚ್ಚು ಕೊಟ್ಟವರ ಹೆಸರು ಪಟ್ಟಿಯಲ್ಲಿ ಮೇಲಿರುತ್ತಿದ್ದರೆ ಕಡಿಮೆ ಕೊಟ್ಟವರ ಹೆಸರು ಕೆಳಗಿರುತ್ತಿತ್ತು. ನನ್ನ ಹೆತ್ತವರು ಸ್ಥಿತಿವಂತರಲ್ಲದ ಕಾರಣ ಹೆಚ್ಚಾಗಿ ಅವರ ಹೆಸರು ಕೊನೆಕೊನೆಯಲ್ಲಿರುತ್ತಿತ್ತು. ಮಾತ್ರವಲ್ಲ ಹೆಚ್ಚು ದೇಣಿಗೆ ಕೊಡುವಂತೆ ಚರ್ಚಿನ ಪ್ರಧಾನರು ಅಪ್ಪಅಮ್ಮನನ್ನು ಒತ್ತಾಯಿಸುತ್ತಿದ್ದರು. ಇನ್ನೊಂದು ಘಟನೆ ಕೂಡ ಹೆತ್ತವರ ಮನಸ್ಸನ್ನು ಬದಲಾಯಿಸಿತು. ಇನ್ನೊಬ್ಬ ಪಾದ್ರಿ, ಚರ್ಚಿನಲ್ಲಿ ತನ್ನ ಕೆಲಸ ಉಳಿಸಿಕೊಳ್ಳುವ ಸಲುವಾಗಿ ತಾನು ನಂಬುವ ವಿಷಯವನ್ನು ಜನರಿಗೆ ಬೋಧಿಸದೆ ಬೇರೆಯದನ್ನೇ ಕಲಿಸುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದನು. ಹಾಗಾಗಿ ನಾವು ಚರ್ಚಿಗೆ ರಾಜಿನಾಮೆ ಕೊಟ್ಟೆವು. ಆದರೂ ನಮ್ಮಲ್ಲಿ ಆಧ್ಯಾತ್ಮಿಕ ವಿಷಯಗಳ ಕಡೆಗೆ ಹಂಬಲವಿತ್ತು.

ಆಗ ಕೆನಡದಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧವಿದ್ದದರಿಂದ ಸಹೋದರಿ ಹಂಟಿಂಗ್‌ಫರ್ಡ್‌ ಬೈಬಲನ್ನು ಹಾಗೂ ಕೆಲವು ಟಿಪ್ಪಣಿಗಳಿದ್ದ ಒಂದು ಚಿಕ್ಕ ಕಪ್ಪು ಪುಸ್ತಕವನ್ನು ಬಳಸಿ ನಮ್ಮೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದರು. ಅವರನ್ನು ನಾವು ಅಧಿಕಾರಿಗಳಿಗೆ ಹಿಡಿದು ಕೊಡುವುದಿಲ್ಲ ಎಂಬ ಭರವಸೆ ಬಂದ ಮೇಲೆ ನಮಗೆ ಬೈಬಲ್‌ ಸಾಹಿತ್ಯವನ್ನು ತಂದುಕೊಟ್ಟರು. ಪ್ರತಿಬಾರಿ ಅಧ್ಯಯನ ಮುಗಿದ ನಂತರ ನಾವು ಆ ಪ್ರಕಾಶನಗಳನ್ನು ಯಾರಿಗೂ ಕಾಣದ ಹಾಗೆ ಅಡಗಿಸಿಡುತ್ತಿದ್ದೆವು. *

ಮನೆ-ಮನೆ ಸಾಕ್ಷಿಕಾರ್ಯದಿಂದ ಸತ್ಯವನ್ನು ತಿಳಿದುಕೊಂಡ ನನ್ನ ಅಪ್ಪಅಮ್ಮ 1948ರಲ್ಲಿ ದೀಕ್ಷಾಸ್ನಾನ ಪಡೆದರು

ವಿರೋಧ, ಅಡೆತಡೆಗಳಿದ್ದರೂ ಸಹೋದರಿ ಹಂಟಿಂಗ್‌ಫರ್ಡ್‌ ಹುರುಪಿನಿಂದ ಸುವಾರ್ತೆ ಸಾರುತ್ತಿದ್ದರು. ಅವರಲ್ಲಿದ್ದ ಹುರುಪು ನನ್ನನ್ನು ತುಂಬ ಪ್ರಭಾವಿಸಿತು ಮತ್ತು ಸತ್ಯದ ಪಕ್ಷದಲ್ಲಿ ನಿಲ್ಲಲು ಸ್ಫೂರ್ತಿಯಾಯಿತು. ಹಾಗಾಗಿ ಅಪ್ಪಅಮ್ಮ ದೀಕ್ಷಾಸ್ನಾನ ಪಡೆದ ಮರುವರ್ಷ ಅಂದರೆ 1949, ಫೆಬ್ರವರಿ 27ರಂದು ನನ್ನ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದೆ. ನನ್ನ ದೀಕ್ಷಾಸ್ನಾನವಾದದ್ದು ಪ್ರಾಣಿಗಳಿಗೆ ಕುಡಿಯಲು ನೀರಿಡುತ್ತಿದ್ದ ಲೋಹದ ತೊಟ್ಟಿಯಲ್ಲಿ. ನನಗಾಗ 17 ವರ್ಷ. ಪೂರ್ಣ ಸಮಯದ ಸೇವೆ ಆರಂಭಿಸಬೇಕೆಂಬ ದೃಢನಿರ್ಧಾರ ನನ್ನಲ್ಲಿತ್ತು.

ಯೆಹೋವನು ನನ್ನಲ್ಲಿ ಧೈರ್ಯತುಂಬಿದನು

1952ರಲ್ಲಿ ಬೆತೆಲಿಗೆ ಅನಿರೀಕ್ಷಿತ ಆಮಂತ್ರಣ

ತಕ್ಷಣ ನಾನು ಪಯನೀಯರ್‌ ಸೇವೆಗಿಳಿಯಲಿಲ್ಲ. ಪಯನೀಯರ್‌ ಸೇವೆ ಮಾಡುವಾಗ ನನ್ನ ಅವಶ್ಯಕತೆಗಳನ್ನು ನೋಡಿಕೊಳ್ಳಲು ಸ್ವಲ್ಪ ಹಣ ಕೂಡಿಸಿಡಬೇಕು ಎಂದು ಯೋಚಿಸಿ ಒಂದು ಬ್ಯಾಂಕ್‍ನಲ್ಲಿ ಹಾಗೂ ಆಫೀಸೊಂದರಲ್ಲಿ ಕೆಲಸ ಆರಂಭಿಸಿದೆ. ಆದರೆ ತರುಣನಾಗಿದ್ದ ನನಗೆ ಜೀವನದಲ್ಲಿ ಅನುಭವವಿಲ್ಲದ್ದರಿಂದ ಕೈಗೆ ಬಂದ ಸಂಬಳವನ್ನು ಕೆಲವೇ  ದಿನಗಳಲ್ಲಿ ಖಾಲಿಮಾಡುತ್ತಿದ್ದೆ. ಆಗ ಟೆಡ್‌ ಸಾರ್ಜ೦ಟ್‌ ಎಂಬ ಸಹೋದರರು ನನಗೆ ಧೈರ್ಯದಿಂದಿದ್ದು ಯೆಹೋವನಲ್ಲಿ ನಂಬಿಕೆಯಿಟ್ಟು ಸೇವೆಯನ್ನು ಆರಂಭಿಸುವಂತೆ ಉತ್ತೇಜಿಸಿದರು. (1 ಪೂರ್ವ. 28:10) ಅವರ ಆ ಪ್ರೋತ್ಸಾಹದಿಂದಾಗಿ 1951ರ ನವೆಂಬರ್‌ನಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ. ಆಗ ನನ್ನ ಹತ್ತಿರ ಇದ್ದದ್ದು ಕೇವಲ 40 ಡಾಲರ್‌, ಹಳೆಯದೊಂದು ಸೈಕಲ್‌, ಒಂದು ಹೊಸ ಬ್ಯಾಗ್‌. ಆದರೆ ನನಗೆ ಅವಶ್ಯವಾದ ವಿಷಯಗಳಿಗೆ ಯಾವತ್ತೂ ಕೊರತೆಯಾಗದಂತೆ ಯೆಹೋವನು ನೋಡಿಕೊಂಡನು. ಆ ದಿನ ಸಹೋದರ ಟೆಡ್‌ ನನ್ನನ್ನು ಪಯನೀಯರ್‌ ಸೇವೆ ಆರಂಭಿಸುವಂತೆ ಉತ್ತೇಜಿಸಿದ್ದಕ್ಕಾಗಿ ನಾನವರಿಗೆ ಚಿರಋಣಿ. ಅದರಿಂದ ಅನೇಕ ಆಶೀರ್ವಾದಗಳು ನನ್ನದಾದವು.

1952ರ ಆಗಸ್ಟ್‌ನಲ್ಲಿ ಒಂದು ದಿನ ಸಂಜೆ ನನಗೆ ಫೋನ್‌ ಕರೆ ಬಂತು. ಅದು ಯೆಹೋವನ ಸಾಕ್ಷಿಗಳ ಕೆನಡ ಬ್ರಾಂಚ್‌ ಆಫೀಸಿನಿಂದ! ಸೆಪ್ಟೆಂಬರ್‌ನಿಂದ ಬೆತೆಲ್‍ನಲ್ಲಿ ಸೇವೆ ಆರಂಭಿಸುವ ಅವಕಾಶವನ್ನು ನನ್ನ ಮುಂದಿಟ್ಟರು. ನಾನು ನಾಚಿಕೆ ಸ್ವಭಾವದವನಾಗಿದ್ದರೂ ಬೆತೆಲನ್ನು ಅಷ್ಟರವರೆಗೆ ನೋಡಿರದಿದ್ದರೂ ಈಗಾಗಲೇ ಕೆಲವು ಪಯನೀಯರರು ಬೆತೆಲಿನ ಬಗ್ಗೆ ತುಂಬ ಒಳ್ಳೇ ವಿಷಯಗಳನ್ನು ಹೇಳಿದ್ದರಿಂದ ಅಲ್ಲಿಗೆ ಹೋಗಲು ಆ ಕ್ಷಣವೇ ಸಿದ್ಧನಾದೆ. ಹೋದ ದಿನದಿಂದಲೇ ಅದು ನನ್ನ ಮನೆಯಂತೆ ಅನಿಸತೊಡಗಿತು.

“ಸಹೋದರರ ಬಗ್ಗೆ ನಿನಗೆ ಕಾಳಜಿ ಇದೆಯೆಂದು ಅವರಿಗೆ ತೋರಿಸಿಕೊಡು”

ಬೆತೆಲಿಗೆ ಬಂದು ಎರಡು ವರ್ಷಗಳ ನಂತರ ನನ್ನನ್ನು ಟೊರಾಂಟೊದ ‘ಷಾ’ ಘಟಕದಲ್ಲಿ * ಸಹೋದರ ಬಿಲ್‌ ಯೇಕಸ್‌ ಬದಲಿಗೆ ಸಭಾ ಸೇವಕನನ್ನಾಗಿ (ಈಗ ಹಿರಿಯರ ಮಂಡಲಿಯ ಸಂಯೋಜಕ) ನೇಮಿಸಲಾಯಿತು. ನನಗಾಗ 23 ವರ್ಷ. ಏನೂ ಅನುಭವವಿಲ್ಲದ ಹಳ್ಳಿ ಹುಡುಗನಂತೆ ನನಗನಿಸಿತು. ಆದರೆ ಸಹೋದರ ಯೇಕಸ್‌ರು ದೀನತೆಯಿಂದ ಪ್ರೀತಿಯಿಂದ ನನಗೆ ಸಹಾಯಮಾಡಿದರು. ಯಾವುದನ್ನು ಹೇಗೆ ಮಾಡಬೇಕೆಂದು ಹೇಳಿಕೊಟ್ಟರು. ಯೆಹೋವನೂ ನನಗೆ ನಿಜವಾಗಿ ತುಂಬ ಸಹಾಯಮಾಡಿದನು.

ದೃಢಕಾಯರಾಗಿದ್ದ ಸಹೋದರ ಯೇಕಸ್‌ರ ಮುಖದ ಮೇಲೆ ಯಾವಾಗಲೂ ನಗು ಹೊಮ್ಮುತ್ತಿತ್ತು. ಜನರ ಬಗ್ಗೆ ನಿಜ ಕಳಕಳಿಯಿತ್ತು. ಅವರಿಗೆ ಸಹೋದರರ ಮೇಲೆ ತುಂಬ ಪ್ರೀತಿ; ಸಹೋದರರಿಗೂ ಅವರೆಂದರೆ ಪ್ರಾಣ. ಜೊತೆವಿಶ್ವಾಸಿಗಳಿಗೆ ಸಮಸ್ಯೆಗಳಿದ್ದಾಗ ಮಾತ್ರವಲ್ಲ ಎಲ್ಲ ಸಮಯದಲ್ಲೂ ಅವರ ಮನೆಗಳಿಗೆ ಹೋಗಿ ಭೇಟಿಯಾಗುತ್ತಿದ್ದರು. ನನಗೂ ಅದನ್ನೇ ಮಾಡುವಂತೆ ಉತ್ತೇಜಿಸಿದರು. ಸಹೋದರ ಸಹೋದರಿಯರೊಂದಿಗೆ ಸೇವೆಯಲ್ಲಿ ಭಾಗವಹಿಸುವಂತೆ ಸಲಹೆಕೊಟ್ಟರು. ಅವರು ಹೀಗಂದರು: “ಕೆನ್‌, ಸಹೋದರರ ಬಗ್ಗೆ ನಿನಗೆ ಕಾಳಜಿ ಇದೆಯೆಂದು ಅವರಿಗೆ ತೋರಿಸಿಕೊಡು. ಅದು ಬಹು ಬಲಹೀನತೆಗಳನ್ನು ಮುಚ್ಚುತ್ತದೆ.”

ನನ್ನ ಪತ್ನಿಯ ನಿಷ್ಠಾಭರಿತ ಪ್ರೀತಿ

1957ರ ಜನವರಿಯಿಂದ ನಾನು ಯೆಹೋವನ ಸಹಾಯವನ್ನು ವಿಶೇಷ ರೀತಿಯಲ್ಲಿ ಅನುಭವಿಸತೊಡಗಿದೆ. ಆ ತಿಂಗಳು ನಾನು ಎವ್ಲಿನ್‍ಳನ್ನು ಮದುವೆಯಾದೆ. ಆಕೆ ಗಿಲ್ಯಡ್‌ ಶಾಲೆಯ 14ನೇ ತರಗತಿಯ ಪದವೀಧರಳು. ಮದುವೆ ಮುಂಚೆ ಅವಳು ಕ್ವಿಬೆಕ್‌ ಪ್ರಾಂತ್ಯದಲ್ಲಿ ಸೇವೆ ಮಾಡುತ್ತಿದ್ದಳು. ಅಲ್ಲಿನ ಭಾಷೆ ಫ್ರೆಂಚ್‌. ಆ ಸಮಯದಲ್ಲಿ ಕ್ವಿಬೆಕ್‌ ಹೆಚ್ಚಿನಮಟ್ಟಿಗೆ ರೋಮನ್‌ ಕ್ಯಾಥೊಲಿಕ್‌ ಚರ್ಚಿನ ನಿಯಂತ್ರಣದಲ್ಲಿತ್ತು. ಹಾಗಾಗಿ ಅಲ್ಲಿ ಸಾರುವುದು ತುಂಬ ಕಷ್ಟಕರವಾಗಿತ್ತು. ಹಾಗಿದ್ದರೂ ಎವ್ಲಿನ್‌ ತನ್ನ ನೇಮಕಕ್ಕೂ ಯೆಹೋವನಿಗೂ ನಿಷ್ಠೆ ತೋರಿಸಿದಳು.

ಎವ್ಲಿನ್‌ ಮತ್ತು ನಾನು ಮದುವೆಯಾದಾಗ (1957)

ಎವ್ಲಿನ್‌ ನನಗೂ ನಿಷ್ಠೆ ತೋರಿಸಿದ್ದಾಳೆ. (ಎಫೆ. 5:31) ನಾವು ಮದುವೆಯಾದ ಮರುದಿನವೇ ಅವಳ ನಿಷ್ಠೆಯ ಪರೀಕ್ಷೆಯಾಯಿತು. ಮದುವೆ ನಂತರ ಅಮೆರಿಕದ ಫ್ಲಾರಿಡಕ್ಕೆ ಹೋಗಿ ಸಮಯ ಕಳೆಯಬೇಕೆಂದು ಯೋಜನೆ ಮಾಡಿದ್ದೆವು. ಆದರೆ ಮದುವೆಯ ಮರುದಿನ ಕೆನಡ ಬ್ರಾಂಚ್‌ ನನಗೆ ಬೆತೆಲಿನಲ್ಲಿ ನಡೆಯಲಿದ್ದ ಒಂದು ವಾರದ ಕೂಟಕ್ಕೆ ಹಾಜರಾಗುವಂತೆ ಹೇಳಿತು. ಯೆಹೋವನು ಯಾವುದೇ ನೇಮಕ ಕೊಟ್ಟರೂ ಮಾಡಬೇಕೆಂದು ಎವ್ಲಿನ್‌ ಮತ್ತು ನಾನು ನಿರ್ಧಾರ ಮಾಡಿದ್ದೆವು. ಹಾಗಾಗಿ ನಮ್ಮ ಹನಿಮೂನ್‌ ಯೋಜನೆಯನ್ನು ಕೈಬಿಟ್ಟೆವು. ಆ ವಾರ ಎವ್ಲಿನ್‌ ಬ್ರಾಂಚ್‌ ಹತ್ತಿರದ ಟೆರಿಟೊರಿಯಲ್ಲಿ ಸೇವೆಮಾಡಿದಳು. ಕ್ವಿಬೆಕ್‌ ಮತ್ತು ಇಲ್ಲಿನ ಟೆರಿಟೊರಿ ಮಧ್ಯೆ ತುಂಬ ವ್ಯತ್ಯಾಸವಿದ್ದರೂ ಅವಳು ತನ್ನ ನೇಮಕವನ್ನು ನಿಷ್ಠೆಯಿಂದ ಪೂರೈಸಿದಳು.

 ಆ ವಾರದ ಕೊನೆಯಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ನನ್ನನ್ನು ಉತ್ತರ ಆಂಟೇರಿಯೋಗೆ ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಿಸಲಾಗಿತ್ತು. ನನಗಾಗ 25 ವರ್ಷ ಅಷ್ಟೆ. ಅನುಭವ ಇರಲಿಲ್ಲ. ಹೊಸದಾಗಿ ಮದುವೆಯಾಗಿದ್ದೆ ಬೇರೆ. ಹಾಗಿದ್ದರೂ ಯೆಹೋವನ ಮೇಲೆ ಭರವಸೆಯಿಟ್ಟು ನೇಮಕಕ್ಕೆ ಹೊರಟೇಬಿಟ್ಟೆವು. ಕೆನಡದ ಆ ಮೈಕೊರೆಯುವ ಚಳಿಯಲ್ಲಿ ರೈಲು ಪ್ರಯಾಣ ಆರಂಭಿಸಿದೆವು. ಒಂದು ರಾತ್ರಿಯ ಪಯಣ. ನಮ್ಮೊಟ್ಟಿಗೆ ತಮ್ಮ ನೇಮಕಕ್ಕೆ ಹಿಂತೆರಳುತ್ತಿದ್ದ ಅನೇಕ ಅನುಭವಿ ಸಂಚರಣ ಮೇಲ್ವಿಚಾರಕರೂ ಇದ್ದರು. ಅವರು ನಮ್ಮನ್ನು ಬಹಳ ಉತ್ತೇಜಿಸಿದರು. ಒಬ್ಬ ಸಹೋದರರಂತೂ ಇಡೀ ರಾತ್ರಿ ನಾವು ಕೂತುಕೊಂಡೇ ಪ್ರಯಾಣ ಮಾಡುವುದು ಬೇಡವೆಂದು ತಮಗಾಗಿ ಕಾಯ್ದಿರಿಸಿದ್ದ ಮಲಗುವ ಕೋಚನ್ನು ಬಳಸುವಂತೆ ನಮ್ಮನ್ನು ಒತ್ತಾಯಿಸಿದರು. ಮರುದಿನ ಬೆಳಗ್ಗೆ ನಾವು ಹಾರ್ನ್‌ಪೇನ್‌ ತಲುಪಿ ಅಲ್ಲಿನ ಚಿಕ್ಕ ಗುಂಪನ್ನು ಭೇಟಿಮಾಡಿದೆವು. ಆರಂಭದಲ್ಲಿ ಹೇಳಿದ ಘಟನೆ ಇದೇ. ಆಗ ನಮ್ಮ ಮದುವೆಯಾಗಿ 15 ದಿನಗಳಾಗಿತ್ತಷ್ಟೆ.

ಇನ್ನೂ ಅನೇಕ ಬದಲಾವಣೆಗಳು ಒಂದರ ಹಿಂದೆ ಒಂದರಂತೆ ಬಂದವು. 1960ರ ಕೊನೆಕೊನೆಯಲ್ಲಿ ನಾವು ಡಿಸ್ಟ್ರಿಕ್ಟ್‌ ಸೇವೆಯಲ್ಲಿದ್ದಾಗ ಗಿಲ್ಯಡ್‌ ಶಾಲೆಯ 36ನೇ ತರಗತಿಗೆ ಹಾಜರಾಗಲು ನನಗೆ ಆಮಂತ್ರಣ ಸಿಕ್ಕಿತು. ಅದು 10 ತಿಂಗಳ ಕೋರ್ಸ್‌. 1961ರ ಫೆಬ್ರವರಿಯಲ್ಲಿ ನ್ಯೂಯಾರ್ಕ್‍ನ ಬ್ರೂಕ್ಲಿನ್‍ನಲ್ಲಿ ಆರಂಭವಾಗಲಿತ್ತು. ಆಮಂತ್ರಣ ಸಿಕ್ಕಿದಾಗ ತುಂಬ ಖುಷಿಪಟ್ಟೆ. ಆದರೆ ಎವ್ಲಿನ್‌ಗೆ ಆಮಂತ್ರಣ ಸಿಕ್ಕಿಲ್ಲ ಎಂದು ತಿಳಿದಾಗ ನನ್ನ ಖುಷಿಯೆಲ್ಲ ಹಾರಿಹೋಯಿತು. ಈ ಸನ್ನಿವೇಶದಲ್ಲಿದ್ದ ಇತರ ಸಹೋದರಿಯರಂತೆ ಎವ್ಲಿನ್‌ ಸಹ ಕಡಿಮೆಪಕ್ಷ ಹತ್ತು ತಿಂಗಳು ನನ್ನನ್ನು ಬಿಟ್ಟು ದೂರವಿರಲು ಸಿದ್ಧಳೆಂದು ಪತ್ರದ ಮೂಲಕ ತಿಳಿಸಬೇಕಿತ್ತು. ಎವ್ಲಿನ್‌ ಅತ್ತೇಬಿಟ್ಟಳು. ಆದರೆ ನನಗೆ ಗಿಲ್ಯಡ್‍ನಲ್ಲಿ ಸಿಗಲಿದ್ದ ಅತ್ಯಮೂಲ್ಯ ತರಬೇತಿಯನ್ನು ನೆನಸಿ ಖುಷಿಪಟ್ಟಳು. ಹಾಗಾಗಿ ನಾನು ಗಿಲ್ಯಡ್‌ ಶಾಲೆಗೆ ಹಾಜರಾಗಬೇಕೆಂದು ಇಬ್ಬರೂ ಕೂಡಿ ನಿರ್ಧರಿಸಿದೆವು.

ನಾನು ಗಿಲ್ಯಡ್‍ನಲ್ಲಿದ್ದಾಗ ಎವ್ಲಿನ್‌ ಕೆನಡ ಬ್ರಾಂಚಿನಲ್ಲಿ ಸೇವೆ ಮಾಡಿದಳು. ಅಭಿಷಿಕ್ತರಾಗಿದ್ದ ಸಹೋದರಿ ಮಾರ್ಗರೆಟ್‌ ಲವಲ್‌ರ ಜೊತೆಯಲ್ಲಿ ಉಳಿದುಕೊಳ್ಳುವ ವಿಶೇಷ ಸುಯೋಗ ಅವಳಿಗಾಗ ಸಿಕ್ಕಿತು. ಒಬ್ಬರನ್ನೊಬ್ಬರು ಬಿಟ್ಟಿರಲು ನಮಗೆ ತುಂಬ ಕಷ್ಟವಾಯಿತು. ಆದರೆ ಯೆಹೋವನ ಸಹಾಯದಿಂದ ನಮ್ಮ ನಮ್ಮ ನೇಮಕಗಳಲ್ಲಿ ಮುಂದುವರಿದೆವು. ಯೆಹೋವನಿಗೂ ಆತನ ಸಂಘಟನೆಗೂ ನಾವು ಹೆಚ್ಚು ಉಪಯುಕ್ತರಾಗಬೇಕೆಂಬ ಉದ್ದೇಶದಿಂದ ಎವ್ಲಿನ್‌ ನಾವು ಜೊತೆಯಾಗಿ ಕಳೆಯಬೇಕಾಗಿದ್ದ ಸಮಯವನ್ನು ತ್ಯಾಗಮಾಡಿದ್ದು ನನ್ನ ಹೃದಯದಾಳವನ್ನು ಸ್ಪರ್ಶಿಸಿತು.

ಗಿಲ್ಯಡ್‌ಗೆ ಹೋಗಿ ಹೆಚ್ಚುಕಡಿಮೆ ಮೂರು ತಿಂಗಳಾಗಿತ್ತು. ಆಗ ಲೋಕವ್ಯಾಪಕ ಸಾರುವ ಕೆಲಸದ ನೇತೃತ್ವ ವಹಿಸಿದ್ದ ಸಹೋದರ ನೇತನ್‌ ನಾರ್‌, ‘ಗಿಲ್ಯಡ್‌ ತರಬೇತಿಯನ್ನು ಅಲ್ಲಿಗೆ ನಿಲ್ಲಿಸಿ ಕೆನಡ ಬ್ರಾಂಚ್‌ಗೆ ಹೋಗಿ ರಾಜ್ಯ ಶುಶ್ರೂಷಾ ಶಾಲೆಯ ಬೋಧಕನಾಗಿ ಸ್ವಲ್ಪಕಾಲ ಕಾರ್ಯನಿರ್ವಹಿಸುತ್ತೀಯಾ?’ ಎಂದು ಕೇಳಿದರು. ನಾನು ಈ ನೇಮಕವನ್ನು ಸ್ವೀಕರಿಸಲೇಬೇಕು ಎಂದೇನಿಲ್ಲ ಎಂದು ಸಹ ಸಹೋದರ ನಾರ್‌ ಹೇಳಿದರು. ಮಾತ್ರವಲ್ಲ, ನಾನು ಬಯಸುವಲ್ಲಿ ಗಿಲ್ಯಡ್‌ ತರಬೇತಿಯನ್ನು ಮುಗಿಸಬಹುದು. ಆಗ ಪ್ರಾಯಶಃ ನಮ್ಮನ್ನು ಮಿಷನರಿಯಾಗಿ ನೇಮಿಸಬಹುದು. ಆದರೆ ಕೆನಡಕ್ಕೆ ಹಿಂದಿರುಗಲು ನಿರ್ಧರಿಸುವಲ್ಲಿ ಪುನಃ ಯಾವತ್ತೂ ಗಿಲ್ಯಡ್‌ ಶಾಲೆಗೆ ಕರೆಯಲಿಕ್ಕಿಲ್ಲ, ಸ್ವಲ್ಪ ಸಮಯದ ನಂತರ ನಮಗೆ ಕ್ಷೇತ್ರದಲ್ಲಿ ನೇಮಕ ಕೊಡಬಹುದೆಂದೂ ಹೇಳಿದರು. ಪತ್ನಿಯೊಂದಿಗೆ ಮಾತಾಡಿ ಒಂದು ನಿರ್ಧಾರಕ್ಕೆ ಬರುವಂತೆ ಸಹೋದರ ನಾರ್‌ ತಿಳಿಸಿದರು.

ಎವ್ಲಿನ್‌ ದೇವಪ್ರಭುತ್ವಾತ್ಮಕ ನೇಮಕಗಳನ್ನು ಹೇಗೆ ವೀಕ್ಷಿಸುತ್ತಾಳೆಂದು ನನಗೀಗಾಲೇ ಗೊತ್ತಿದ್ದರಿಂದ ನಾನು ಕೂಡಲೆ ಸಹೋದರ ನಾರ್‌ಗೆ “ಯೆಹೋವನ ಸಂಘಟನೆ ನಮಗೆ ಏನೇ ಮಾಡಲು ಹೇಳಿದರೂ ನಾವದನ್ನು ಸಂತೋಷದಿಂದ ಮಾಡುತ್ತೇವೆ” ಎಂದೆ. ನಮ್ಮ ಇಚ್ಛೆ ಆಕಾಂಕ್ಷೆಗಳು ಏನೇ ಇದ್ದರೂ ಯೆಹೋವನ ಸಂಘಟನೆ ಕಳುಹಿಸಿದ್ದಲ್ಲಿಗೆ ಹೋಗಬೇಕೆಂಬುದು ನಮ್ಮ ನಿರ್ಧಾರವಾಗಿತ್ತು.

1961ರ ಏಪ್ರಿಲ್‍ನಲ್ಲಿ ನಾನು ಬ್ರೂಕ್ಲಿನ್‌ ಬೆತೆಲಿನಿಂದ ಕೆನಡ ಬೆತೆಲಿಗೆ ಬಂದು ರಾಜ್ಯ ಶುಶ್ರೂಷಾ ಶಾಲೆಯ ಬೋಧಕನಾಗಿ  ಕಾರ್ಯನಿರ್ವಹಿಸಿದೆ. ಅದರ ನಂತರ ನಾವು ಬೆತೆಲ್‌ ಸೇವೆಯನ್ನು ಮುಂದುವರಿಸಿದೆವು. ತದನಂತರ ಪುನಃ ಆಶ್ಚರ್ಯವೆಂಬಂತೆ ನನಗೆ ಗಿಲ್ಯಡ್‍ನ 40ನೇ ತರಗತಿಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ಆ ತರಗತಿ 1965ರಲ್ಲಿ ಆರಂಭವಾಗಲಿತ್ತು. ಪುನಃ ಒಮ್ಮೆ ಎವ್ಲಿನ್‌ ತಾನು ಸ್ವಲ್ಪಕಾಲ ಪ್ರತ್ಯೇಕವಾಗಿರಲು ಸಿದ್ಧಳೆಂದು ಪತ್ರದ ಮೂಲಕ ತಿಳಿಸಬೇಕಿತ್ತು. ಆದರೆ ಕೆಲವು ವಾರಗಳ ಬಳಿಕ ನಮಗೆ ಸಿಕ್ಕಿದ ಪತ್ರ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತು. ನನ್ನೊಂದಿಗೆ ಗಿಲ್ಯಡ್‌ ಶಾಲೆಗೆ ಹಾಜರಾಗಲು ಎವ್ಲಿನ್‌ಗೂ ಆಮಂತ್ರಣ ಸಿಕ್ಕಿತು!

ನಾವು ಗಿಲ್ಯಡ್‌ ಶಾಲೆಗೆ ಹೋದಾಗ ನಮ್ಮಂತೆ ಫ್ರೆಂಚ್‌ ಭಾಷಾ ತರಗತಿಗೆ ಸೇರಿದವರೆಲ್ಲರನ್ನು ಆಫ್ರಿಕಕ್ಕೆ ನೇಮಿಸಲಾಗುವುದು ಎಂದು ಸಹೋದರ ನಾರ್‌ ಹೇಳಿದರು. ಆದರೆ ಪದವಿಪ್ರಧಾನ ಸಮಾರಂಭದಲ್ಲಿ ತಿಳಿಯಿತು ನಮ್ಮನ್ನು ಪುನಃ ಕೆನಡ ಬೆತೆಲಿಗೆ ನೇಮಿಸಲಾಗಿದೆ ಎಂದು! ನನ್ನನ್ನು ಬ್ರಾಂಚ್‌ ಮೇಲ್ವಿಚಾರಕನಾಗಿ (ಈಗ ಬ್ರಾಂಚ್‌ ಕಮಿಟಿ ಕೋಆರ್ಡಿನೇಟರ್‌ ಎಂದು ಕರೆಯಲಾಗುತ್ತದೆ) ನೇಮಿಸಲಾಗಿತ್ತು. ನನಗಾಗ 34 ವರ್ಷ. ಹಾಗಾಗಿ ಸಹೋದರ ನಾರ್‌ ಬಳಿ ಹೋಗಿ “ನಾನಿನ್ನೂ ತುಂಬ ಚಿಕ್ಕವನು” ಎಂದೆ. ಆದರೆ ಅವರು ನನ್ನಲ್ಲಿ ಭರವಸೆ ತುಂಬಿದರು. ಆ ನೇಮಕದಲ್ಲಿ ನಾನು ಆರಂಭದಿಂದಲೂ ಯಾವುದೇ ದೊಡ್ಡ ನಿರ್ಣಯ ಮಾಡುವ ಮೊದಲು ಬೆತೆಲಿನಲ್ಲಿದ್ದ ಪ್ರಾಯಸ್ಥ ಹಾಗೂ ಹೆಚ್ಚು ಅನುಭವವಿರುವ ಸಹೋದರರ ಸಲಹೆ ಪಡೆದುಕೊಳ್ಳುತ್ತಿದ್ದೆ.

ಕಲಿಯಲು ಹಾಗೂ ಕಲಿಸಲು ಅವಕಾಶ ಕೊಡುವ ಬೆತೆಲ್‌

ಇತರರಿಂದ ಕಲಿಯಲು ಬೆತೆಲ್‌ ನನಗೆ ಒಳ್ಳೇ ಅವಕಾಶಗಳನ್ನು ಕೊಟ್ಟಿದೆ. ಬ್ರಾಂಚ್‌ ಕಮಿಟಿಯ ಇತರ ಸದಸ್ಯರನ್ನು ನಾನು ಗೌರವಿಸುತ್ತೇನೆ. ಅವರಲ್ಲಿರುವ ಬಹುಮೂಲ್ಯ ಗುಣಗಳನ್ನು ತುಂಬ ಮೆಚ್ಚುತ್ತೇನೆ. ಮಾತ್ರವಲ್ಲ ಚಿಕ್ಕವರೂ ದೊಡ್ಡವರೂ ನನ್ನ ಮೇಲೆ ಒಳ್ಳೇ ಪ್ರಭಾವ ಬೀರಿದ್ದಾರೆ. ಬೆತೆಲ್‍ನಲ್ಲಿರುವ ಹಾಗೂ ನಾವು ಸೇವೆಮಾಡಿರುವ ಅನೇಕ ಸಭೆಗಳಲ್ಲಿರುವ ಈ ನೂರಾರು ಸಹೋದರ ಸಹೋದರಿಯರಿಂದ ನಾನು ಅನೇಕ ಒಳ್ಳೇ ವಿಷಯಗಳನ್ನು ಕಲಿತಿದ್ದೇನೆ.

ಕೆನಡ ಬೆತೆಲಿನಲ್ಲಿ ಬೆಳಗಿನ ಆರಾಧನೆ ನಡೆಸುತ್ತಿರುವುದು

ಬೇರೆಯವರಿಗೆ ಕಲಿಸುವ ಮತ್ತು ಅವರ ನಂಬಿಕೆಯನ್ನು ಬಲಗೊಳಿಸುವ ಅವಕಾಶವನ್ನು ಸಹ ಬೆತೆಲ್‌ ಸೇವೆ ನನಗೆ ಕೊಟ್ಟಿದೆ. ಅಪೊಸ್ತಲ ಪೌಲ ತಿಮೊಥೆಯನಿಗೆ, ‘ಕಲಿತ ವಿಷಯಗಳಲ್ಲಿ ಮುಂದುವರಿಯುತ್ತಾ ಇರು’ ಎಂದು ಹೇಳಿದನು. ಮಾತ್ರವಲ್ಲ “ಅನೇಕ ಸಾಕ್ಷಿಗಳ ಬೆಂಬಲದಿಂದ ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು” ಎಂದು ಸಹ ಹೇಳಿದನು. (2 ತಿಮೊ. 2:2; 3:14) ಕೆಲವು ಜೊತೆಕ್ರೈಸ್ತರು ನನಗೆ ‘57 ವರ್ಷಗಳ ಬೆತೆಲ್‌ ಸೇವೆಯಿಂದ ನೀವೇನು ಕಲಿತಿರಿ?’ ಎಂದು ಕೇಳುತ್ತಾರೆ. ಆಗ ನಾನು ಕೊಡುವ ಉತ್ತರ ಇಷ್ಟೆ: “ಯೆಹೋವನ ಸಂಘಟನೆ ಮಾಡಲು ಹೇಳಿದ್ದನ್ನೆಲ್ಲ ಸಿದ್ಧಮನಸ್ಸಿನಿಂದ ಕೂಡಲೆ ಮಾಡಬೇಕು. ಯೆಹೋವನ ಸಹಾಯದ ಮೇಲೆ ಅವಲಂಬಿಸಬೇಕು.”

ನಾಚಿಕೆ ಸ್ವಭಾವದ, ಏನೂ ಅನುಭವವಿಲ್ಲದ ತರುಣನಾಗಿದ್ದ ನಾನು ಬೆತೆಲಿಗೆ ಬಂದದ್ದು ನಿನ್ನೆಯೇ ಎಂಬಂತಿದೆ. ಅಂದಿನಿಂದ ಇಂದಿನವರೆಗೂ ಯೆಹೋವನು ‘ನನ್ನ ಕೈಹಿಡಿದು’ ಕರೆದುಕೊಂಡು ಬಂದಿದ್ದಾನೆ. ವಿಶೇಷವಾಗಿ ಜೊತೆ ಸಾಕ್ಷಿಗಳ ಪ್ರೀತಿ ಹಾಗೂ ಅಗತ್ಯವಿದ್ದಾಗ ಅವರು ನೀಡುವ ಸಹಾಯದ ಮೂಲಕ ಯೆಹೋವನು ಈಗಲೂ ನನಗೆ “ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ” ಎಂದು ಧೈರ್ಯ ತುಂಬುತ್ತಿದ್ದಾನೆ.—ಯೆಶಾ. 41:13.

^ ಪ್ಯಾರ. 10 1945, ಮೇ 22ರಂದು ಕೆನಡ ಸರ್ಕಾರ ನಿಷೇಧವನ್ನು ರದ್ದುಗೊಳಿಸಿತು.

^ ಪ್ಯಾರ. 16 ಆ ಸಮಯದಲ್ಲಿ ಒಂದು ನಗರದಲ್ಲಿ ಅನೇಕ ಸಭೆಗಳಿದ್ದರೆ ಪ್ರತಿಯೊಂದು ಸಭೆಯನ್ನು ಘಟಕ ಎಂದು ಕರೆಯಲಾಗುತ್ತಿತ್ತು.