“ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿ . . . ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.”—ಕೊಲೊ. 4:6.

1, 2. (ಎ) ಸರಿಯಾದ ಪ್ರಶ್ನೆಗಳನ್ನು ಕೇಳುವುದು ಮುಖ್ಯವೆಂದು ತೋರಿಸುವ ಒಂದು ಅನುಭವ ತಿಳಿಸಿ. (ಮೇಲಿರುವ ಚಿತ್ರ ನೋಡಿ.) (ಬಿ) ಕಷ್ಟವೆನಿಸುವ ವಿಷಯಗಳು ಬಂದಾಗ ನಾವು ಹೆದರಬೇಕಿಲ್ಲ ಏಕೆ?

ಸುಮಾರು ವರ್ಷಗಳ ಹಿಂದೆ ನಡೆದ ಸಂಗತಿ. ಕ್ರೈಸ್ತ ಸಹೋದರಿಯೊಬ್ಬಳು ಸತ್ಯದಲ್ಲಿಲ್ಲದ ಗಂಡನೊಂದಿಗೆ ಬೈಬಲಿನ ಕುರಿತು ಮಾತಾಡುತ್ತಿದ್ದಳು. ಚರ್ಚಿನ ನಾಮಮಾತ್ರದ ಸದಸ್ಯನಾಗಿದ್ದ ಗಂಡ ತಾನು ತ್ರಿಯೇಕವನ್ನು ನಂಬುತ್ತೇನೆ ಎಂದು ಹೇಳಿದನು. ಅವನಿಗೆ ತ್ರಿಯೇಕ ಅಂದರೆ ನಿಜವಾಗಿಯೂ ಏನೆಂದು ಗೊತ್ತಿಲ್ಲವೆಂದು ಗ್ರಹಿಸಿದ ಆಕೆ ಜಾಣ್ಮೆಯಿಂದ ಹೀಗೆ ಕೇಳಿದಳು: “ದೇವರೂ ದೇವರು, ಯೇಸುವೂ ದೇವರು, ಪವಿತ್ರಾತ್ಮವೂ ದೇವರು. ಆದರೆ ಅವರೆಲ್ಲರೂ ಬೇರೆಬೇರೆ ದೇವರುಗಳಲ್ಲ, ಒಬ್ಬನೇ ದೇವರು ಎಂದು ನೀವು ನಂಬುತ್ತೀರಾ?” ಆಗ ಏನೋ ಹೊಸದು ಕೇಳಿದಂತೆ ಅನಿಸಿದ ಗಂಡ “ಇಲ್ಲ, ಅದನ್ನು ನಾನು ನಂಬಲ್ಲ” ಅಂದನು. ಅನಂತರ, ನಿಜವಾಗಿಯೂ ದೇವರು ಯಾರು ಎನ್ನುವುದರ ಕುರಿತು ಅವರಿಬ್ಬರೂ ಸ್ವಾರಸ್ಯಕರವಾದ ಚರ್ಚೆ ಮಾಡತೊಡಗಿದರು.

2 ಈ ಅನುಭವದಿಂದ ನಮಗೆ ಏನು ಗೊತ್ತಾಗುತ್ತದೆ? ಚಾಕಚಕ್ಯತೆಯಿಂದ, ಸರಿಯಾದ ಪ್ರಶ್ನೆಗಳನ್ನು ಕೇಳುವುದು ತುಂಬ ಪ್ರಾಮುಖ್ಯ. ಅಷ್ಟೇ ಅಲ್ಲ, ತ್ರಿಯೇಕ, ನರಕ ಅಥವಾ ದೇವರು ನಿಜವಾಗಿಯೂ ಇದ್ದಾನಾ? ಎಂಬಂಥ ಕಷ್ಟಕರ ವಿಷಯಗಳ ಬಗ್ಗೆ ಇತರರು ಪ್ರಶ್ನಿಸಿದಾಗ ಉತ್ತರಿಸುವುದು ಹೇಗೆಂದು ನಾವು ಹೆದರಬೇಕಿಲ್ಲ. ದೇವರ ಮೇಲೆ ಮತ್ತು ಆತನು ಕೊಡುವ ತರಬೇತಿಯ ಮೇಲೆ ನಾವು ಆತುಕೊಂಡರೆ ಮನವೊಪ್ಪಿಸುವ ಉತ್ತರವನ್ನು ಕೊಡಲು ಮತ್ತು ಜನರ ಹೃದಯ ತಲಪಲು  ನಮ್ಮಿಂದ ಆಗುತ್ತದೆ. (ಕೊಲೊ. 4:6) ಇಂಥ ವಿಷಯಗಳು ಬಂದಾಗ ಪರಿಣಾಮಕಾರಿಯಾಗಿ ಉತ್ತರಿಸಲು ನುರಿತ ಕ್ರೈಸ್ತರು ಉಪಯೋಗಿಸುವ ಮೂರು ವಿಧಾನಗಳನ್ನು ನಾವು ಹೇಗೆ ಬಳಸಬಹುದೆಂದು ನೋಡೋಣ. (1) ವ್ಯಕ್ತಿಯ ಮನಸ್ಸಿನಲ್ಲಿರುವುದನ್ನು ಹೊರಗೆಳೆಯುವಂಥ ಪ್ರಶ್ನೆಗಳನ್ನು ಕೇಳಿ. (2) ಬೈಬಲ್‌ ವಚನಗಳನ್ನು ಆಧಾರವಾಗಿಟ್ಟು ತರ್ಕಿಸಿ. (3) ವಿಷಯವೊಂದನ್ನು ಮನಗಾಣಿಸಲು ದೃಷ್ಟಾಂತಗಳನ್ನು ಬಳಸಿ.

ಮನಸ್ಸಿನಲ್ಲಿರುವುದನ್ನು ಹೊರಗೆಳೆಯಲು ಪ್ರಶ್ನೆಗಳನ್ನು ಕೇಳಿ

3, 4. ಪ್ರಶ್ನೆಗಳನ್ನು ಕೇಳುವ ಮೂಲಕ ಒಬ್ಬ ವ್ಯಕ್ತಿ ಏನನ್ನು ನಂಬುತ್ತಾನೆಂದು ತಿಳಿಯುವುದು ಪ್ರಾಮುಖ್ಯವೇಕೆ? ಉದಾಹರಣೆ ಕೊಡಿ.

3 ಪ್ರಶ್ನೆಗಳನ್ನು ಕೇಳುವುದರಿಂದ ಒಬ್ಬ ವ್ಯಕ್ತಿ ಏನನ್ನು ನಂಬುತ್ತಾನೆ ಎಂದು ತಿಳಿದುಕೊಳ್ಳಬಹುದು. ಅದು ಯಾಕೆ ಪ್ರಾಮುಖ್ಯ? ಯಾಕೆಂದರೆ ಜ್ಞಾನೋಕ್ತಿ 18:13ರಲ್ಲಿ ಹೇಳುತ್ತದೆ: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.” ಒಂದು ವಿಷಯದ ಕುರಿತು ಬೈಬಲ್‌ ಏನು ಹೇಳುತ್ತದೆಂದು ವ್ಯಕ್ತಿಯೊಬ್ಬನಿಗೆ ವಿವರಿಸುವ ಮೊದಲು ಅದರ ಬಗ್ಗೆ ಅವನೇನು ನಂಬುತ್ತಾನೆಂದು ತಿಳಿದುಕೊಳ್ಳಬೇಕು. ಹಾಗೆ ಮಾಡದಿದ್ದಲ್ಲಿ ಅವನು ಏನನ್ನು ನಂಬುವುದಿಲ್ಲವೋ ಅದನ್ನು ವಿವರಿಸುವುದರಲ್ಲೇ ನಾವು ಜಾಸ್ತಿ ಸಮಯ ಹಾಳುಮಾಡುತ್ತೇವೆ.—1 ಕೊರಿಂ. 9:26.

4 ಉದಾಹರಣೆಗೆ ನೆನಸಿ, ನಾವು ಒಬ್ಬರೊಂದಿಗೆ ನರಕದ ಬಗ್ಗೆ ಮಾತಾಡುತ್ತಾ ಇದ್ದೇವೆ. ನರಕ ಅಂದರೆ ಬೆಂಕಿಯುರಿಯುತ್ತಿರುವ ಯಾತನಾಸ್ಥಳ ಎಂದು ಎಲ್ಲರೂ ನಂಬುವುದಿಲ್ಲ. ಅನೇಕರು ಅದನ್ನು ದೇವರಿಂದ ದೂರಸರಿದಿರುವ ಸ್ಥಿತಿ ಎಂದು ನಂಬುತ್ತಾರೆ. ಹಾಗಾಗಿ ನಾವು ಅವರಿಗೆ ಹೀಗೆ ಕೇಳಬಹುದು: “ನರಕ ಅಂದರೆ ಏನೆಂಬುದರ ಬಗ್ಗೆ ಅನೇಕರಿಗೆ ಬೇರೆಬೇರೆ ಅಭಿಪ್ರಾಯಗಳಿವೆ. ನಿಮ್ಮ ಅಭಿಪ್ರಾಯ ಏನು?” ಆ ವ್ಯಕ್ತಿಯ ಉತ್ತರವನ್ನು ಮೊದಲು ಕೇಳಿಸಿಕೊಂಡರೆ ಅದರ ಬಗ್ಗೆ ಬೈಬಲ್‌ ಏನು ಹೇಳುತ್ತದೋ ಅದನ್ನು ಅವನಿಗೆ ಅರ್ಥಮಾಡಿಸಲು ನಮಗೆ ಸುಲಭವಾಗುತ್ತದೆ.

5. ಪ್ರಶ್ನೆಗಳನ್ನು ಕೇಳುವುದರಿಂದ ಮನೆಯವನ ನಂಬಿಕೆಗಿರುವ ಕಾರಣಗಳನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯವಾಗುತ್ತದೆ?

5 ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳುವುದರಿಂದ ಒಬ್ಬ ವ್ಯಕ್ತಿ ಏನು ನಂಬುತ್ತಾನೆಂದು ಮಾತ್ರವಲ್ಲ ಹಾಗೇಕೆ ನಂಬುತ್ತಾನೆಂದು ಕೂಡ ನಾವು ತಿಳಿದುಕೊಳ್ಳಬಹುದು. ಮನೆಯವನು ತನಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಹೇಳಿದನೆಂದು ನೆನಸಿ. ಆಗ ನಾವು ಇವರೇನೋ ವಿಕಾಸವಾದದಂಥ ವಿಷಯಗಳನ್ನು ನಂಬುತ್ತಿರಬೇಕು, ಅದಕ್ಕೇ ದೇವರಲ್ಲಿ ನಂಬಿಕೆಯಿಲ್ಲ ಎಂದು ನೆನಸಬಹುದು. (ಕೀರ್ತ. 10:4) ಆದರೆ ಕೆಲವರು ವಿಪರೀತ ಕಷ್ಟಗಳನ್ನು ಅನುಭವಿಸಿರುವುದರಿಂದ ಅಥವಾ ಇತರರ ಕಷ್ಟಗಳನ್ನು ನೋಡಿರುವುದರಿಂದ ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿರಬಹುದು. ಪ್ರೀತಿಸುವ ಸೃಷ್ಟಿಕರ್ತನೊಬ್ಬನು ಒಂದುವೇಳೆ ಇದ್ದಿದ್ದರೆ ಹಾಗೆ ಆಗುತ್ತಿರಲಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗಾಗಿ ದೇವರಿಲ್ಲವೆಂದು ಮನೆಯವನು ಹೇಳಿದರೆ ನಾವು ಹೀಗೆ ಕೇಳಬಹುದು: “ನೀವು ಮುಂಚಿನಿಂದಲೂ ಇದನ್ನೇ ನಂಬುತ್ತಿದ್ದಿರಾ?” ಅವರು ಇಲ್ಲವೆಂದರೆ, “ಈಗ ಹಾಗೆ ನಂಬಲು ಏನು ಕಾರಣ?” ಎಂದು ಕೇಳಬಹುದು. ಅವರ ಉತ್ತರವನ್ನು ತಿಳಿದುಕೊಂಡ ನಂತರ ಅವರಿಗೆ ಯಾವ ವಿಧದಲ್ಲಿ ಆಧ್ಯಾತ್ಮಿಕ ನೆರವನ್ನು ನೀಡಬಹುದೆಂದು ತಿಳಿಯಲು ಸಾಧ್ಯವಾಗುತ್ತದೆ.—ಜ್ಞಾನೋಕ್ತಿ 20:5 ಓದಿ.

6. ಪ್ರಶ್ನೆ ಕೇಳಿದ ನಂತರ ನಾವೇನು ಮಾಡಬೇಕು?

6 ನಾವು ಪ್ರಶ್ನೆಗಳನ್ನು ಕೇಳಿದ ನಂತರ ಅವರು ಕೊಡುವ ಉತ್ತರವನ್ನು ಕಿವಿಗೊಟ್ಟು ಕೇಳಬೇಕು ಮತ್ತು ಅವರ ಅನಿಸಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಉದಾಹರಣೆಗೆ, ಜೀವನದಲ್ಲಾದ ಒಂದು ಆಘಾತಕಾರಿ ಘಟನೆಯಿಂದಾಗಿ ದೇವರೇ ಇಲ್ಲವೆಂದು ತನಗೆ ಅನಿಸುತ್ತಿದೆ ಎಂದು ಯಾರಾದರೂ ಹೇಳಿದರು ಅಂದುಕೊಳ್ಳಿ. ತಕ್ಷಣ ಬೈಬಲಿನಿಂದ ದೇವರು ನಿಜವಾಗಿಯೂ ಇದ್ದಾನೆಂದು ರುಜುಪಡಿಸುವ ಬದಲು ಮೊದಲು ಅವರಿಗೆ ಅನುಕಂಪ ತೋರಿಸಿ. ಯಾಕೆ ನಮಗಿಷ್ಟು ಕಷ್ಟಗಳಿವೆ ಎಂದು ಕೇಳುವುದು ತಪ್ಪಲ್ಲವೆಂದು ಮನಗಾಣಿಸಿ. (ಹಬ. 1:2, 3) ನಾವು ತಾಳ್ಮೆಯಿಂದ, ಪ್ರೀತಿಯಿಂದ ಮಾತಾಡುವುದಾದರೆ ಹೆಚ್ಚನ್ನು ಕಲಿಯಲು ಅವನಿಗೆ ಮನಸ್ಸಾಗಬಹುದು. *

ಬೈಬಲ್‌ ವಚನಗಳನ್ನು ಆಧಾರವಾಗಿಟ್ಟು ತರ್ಕಿಸಿ

ಪರಿಣಾಮಕಾರಿಯಾಗಿ ಸಾರಲು ನಮಗೆ ಮುಖ್ಯವಾಗಿ ಯಾವುದು ನೆರವಾಗುತ್ತದೆ? (ಪ್ಯಾರ 7 ನೋಡಿ)

7. ಪರಿಣಾಮಕಾರಿಯಾಗಿ ಸುವಾರ್ತೆ ಸಾರುವುದು ಯಾವುದರ ಮೇಲೆ ಹೊಂದಿಕೊಂಡಿದೆ?

7 ಬೈಬಲ್‌ ವಚನಗಳನ್ನು ಆಧಾರವಾಗಿಟ್ಟು ನಾವು ಹೇಗೆ ತರ್ಕಿಸಬಹುದೆಂದು ಈಗ ತಿಳಿಯೋಣ. ಶುಶ್ರೂಷೆಯಲ್ಲಿ ನಾವು ಬಳಸುವ ಪ್ರಧಾನ ಸಾಧನ ಬೈಬಲ್‌. ಅದು ನಮ್ಮನ್ನು ‘ಪೂರ್ಣ ಸಮರ್ಥರನ್ನಾಗಿ, ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧರನ್ನಾಗಿ’ ಮಾಡುತ್ತದೆ. (2 ತಿಮೊ. 3:16, 17) ಪರಿಣಾಮಕಾರಿಯಾಗಿ ಸುವಾರ್ತೆ ಸಾರುವುದು ನಾವು ಎಷ್ಟು ವಚನಗಳನ್ನು ಬಳಸುತ್ತೇವೆ ಅನ್ನುವುದರ ಮೇಲೆ ಹೊಂದಿಕೊಂಡಿಲ್ಲ. ಬದಲಿಗೆ ಓದಿದ ವಚನಗಳನ್ನು ಹೇಗೆ ವಿವರಿಸುತ್ತೇವೆ,  ತರ್ಕಿಸುತ್ತೇವೆ ಎನ್ನುವುದರ ಮೇಲೆ ಹೊಂದಿಕೊಂಡಿದೆ. (ಅಪೊಸ್ತಲರ ಕಾರ್ಯಗಳು 17:2, 3 ಓದಿ.) ಅದನ್ನು ಅರ್ಥಮಾಡಿಕೊಳ್ಳಲು ಈಗ ಮೂರು ಸನ್ನಿವೇಶಗಳನ್ನು ನೋಡೋಣ.

8, 9. (ಎ) ಯೇಸು ದೇವರಿಗೆ ಸಮಾನನು ಎಂದು ನಂಬುವವರೊಂದಿಗೆ ತರ್ಕಿಸುವ ಒಂದು ವಿಧ ಯಾವುದು? (ಬಿ) ಈ ವಿಷಯದ ಕುರಿತು ನೀವು ಬೇರೆ ಯಾವ ವಿಧದಲ್ಲಿ ಪರಿಣಾಮಕಾರಿಯಾಗಿ ತರ್ಕಿಸಿದ್ದೀರಿ?

8 ಸನ್ನಿವೇಶ 1: ನಾವು ಸೇವೆಮಾಡುವಾಗ ಒಬ್ಬರನ್ನು ಭೇಟಿಯಾಗುತ್ತೇವೆ, ಯೇಸುವು ದೇವರಿಗೆ ಸಮಾನನು ಎಂದವರು ನಂಬುತ್ತಾರೆ. ಇಂಥ ಸಮಯದಲ್ಲಿ ಯಾವ ವಚನಗಳನ್ನು ಬಳಸಿದರೆ ಚೆನ್ನಾಗಿರುತ್ತದೆ? ನಾವು ಅವರಿಗೆ ಯೋಹಾನ 6:38ನ್ನು ಓದುವಂತೆ ಹೇಳಬಹುದು. ಅಲ್ಲಿ ಯೇಸು ಹೀಗೆ ಹೇಳಿದ್ದಾನೆ: “ನಾನು ನನ್ನ ಚಿತ್ತವನ್ನು ಮಾಡಲಿಕ್ಕಾಗಿ ಅಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲಿಕ್ಕಾಗಿಯೇ ಸ್ವರ್ಗದಿಂದ ಇಳಿದುಬಂದಿದ್ದೇನೆ.” ಅನಂತರ ನಾವು ಹೀಗೆ ತರ್ಕಿಸಬಹುದು: “ಒಂದುವೇಳೆ ಯೇಸು ದೇವರಾಗಿದ್ದರೆ ಅವನನ್ನು ಸ್ವರ್ಗದಿಂದ ಭೂಮಿಗೆ ಕಳುಹಿಸಿದ್ದು ಯಾರು? ಆತನು ಯೇಸುವಿಗಿಂತ ದೊಡ್ಡವನಾಗಿರಬೇಕಲ್ಲ? ಕಳುಹಿಸಿದಾತನು ಕಳುಹಿಸಲ್ಪಟ್ಟವನಿಗಿಂತ ದೊಡ್ಡವನು ಖಂಡಿತ!”

9 ನಾವು ಫಿಲಿಪ್ಪಿ 2:9ನ್ನು ಸಹ ಬಳಸಬಹುದು. ಯೇಸು ಸತ್ತು ಪುನರುತ್ಥಾನವಾದ ನಂತರ ದೇವರು ಏನು ಮಾಡಿದನೆಂದು ಆ ವಚನದಲ್ಲಿ ಅಪೊಸ್ತಲ ಪೌಲ ತಿಳಿಸಿದ್ದಾನೆ. ಅಲ್ಲಿ ಹೀಗಿದೆ: “ಇದೇ ಕಾರಣಕ್ಕಾಗಿ ದೇವರು ಸಹ ಅವನನ್ನು [ಯೇಸುವನ್ನು] ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು.” ಅನಂತರ ನಾವು ಮನೆಯವರೊಂದಿಗೆ ಹೀಗೆ ತರ್ಕಿಸಬಹುದು: “ಒಂದುವೇಳೆ ಯೇಸು ಸಾಯುವುದಕ್ಕಿಂತ ಮುಂಚೆ ದೇವರಿಗೆ ಸಮಾನನಾಗಿದ್ದು, ಪುನರುತ್ಥಾನದ ನಂತರ ದೇವರು ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿರುವುದಾದರೆ ಯೇಸು ದೇವರಿಗಿಂತ ಉನ್ನತ ಸ್ಥಾನದಲ್ಲಿ ಇದ್ದಾನೆ ಎಂದಾಗುತ್ತದಲ್ಲ? ದೇವರಿಗಿಂತ ಉನ್ನತ ಸ್ಥಾನದಲ್ಲಿ ಯಾರಾದರೂ ಇರಲು ಸಾಧ್ಯವೇ?” ಒಂದುವೇಳೆ ಆ ವ್ಯಕ್ತಿ ದೇವರ ವಾಕ್ಯವನ್ನು ಗೌರವಿಸುವವನಾದರೆ ಮತ್ತು ಸಹೃದಯದವನಾಗಿದ್ದರೆ ಈ ವಿಷಯದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಇದು ಅವನನ್ನು ಪ್ರೇರಿಸಬಹುದು.—ಅ. ಕಾ. 17:11.

10. (ಎ) ಬೆಂಕಿಯುರಿಯುವ ನರಕ ಇದೆಯೆಂದು ನಂಬುವವರೊಂದಿಗೆ ನಾವು ಹೇಗೆ ತರ್ಕಿಸಬಹುದು? (ಬಿ) ನರಕದ ಕುರಿತು ಮಾತಾಡುವಾಗ ನೀವು ಯಾವ ಪರಿಣಾಮಕಾರಿ ತರ್ಕವನ್ನು ಉಪಯೋಗಿಸಿದ್ದೀರಿ?

10 ಸನ್ನಿವೇಶ 2: ನೀವೊಬ್ಬ ಧರ್ಮನಿಷ್ಠ ವ್ಯಕ್ತಿಯನ್ನು ಭೇಟಿಯಾಗಿದ್ದೀರಿ. ದುಷ್ಟ ಜನರು ನರಕದಲ್ಲಿ ನಿತ್ಯಯಾತನೆ ಅನುಭವಿಸುವುದಿಲ್ಲ ಎನ್ನುವುದನ್ನು ನಂಬಲು ಅವರಿಗೆ ಕಷ್ಟವಾಗುತ್ತಿದೆ. ದುಷ್ಟ ಜನರಿಗೆ ತಕ್ಕ ಶಾಸ್ತಿ ಆಗಲೇಬೇಕು ಎಂದು ಅಪೇಕ್ಷಿಸುವುದರಿಂದ ಅವರು ಹಾಗೆ ನಂಬುತ್ತಿರಬಹುದು. ಇವರೊಂದಿಗೆ ಹೇಗೆ ತರ್ಕಿಸುವುದು? ದುಷ್ಟ ಜನರಿಗೆ ಖಂಡಿತ ಶಿಕ್ಷೆ ಸಿಗಲಿದೆ ಎಂದು ಮೊದಲು ನಾವು ಅವರಿಗೆ ಹೇಳಬಹುದು. (2 ಥೆಸ. 1:9) ಅನಂತರ ಆದಿಕಾಂಡ 2:16, 17ನ್ನು ಓದಿಸಿ, ಪಾಪಕ್ಕೆ ಶಿಕ್ಷೆ ಮರಣವೆಂದು ಹೇಳಬಹುದು. ಆದಾಮನು ಮಾಡಿದ ಪಾಪದಿಂದಾಗಿ ಮಾನವರೆಲ್ಲರೂ ಹುಟ್ಟಿನಿಂದಲೇ ಪಾಪಿಗಳಾಗಿದ್ದಾರೆ ಎಂದು ವಿವರಿಸಬಹುದು. (ರೋಮ. 5:12) ಆದರೆ ದೇವರು ನರಕದ ಬಗ್ಗೆ ಯಾವುದೇ ಉಲ್ಲೇಖ ಮಾಡಲಿಲ್ಲವೆಂದು ಸ್ಪಷ್ಟಪಡಿಸಬಹುದು. ಆಮೇಲೆ ಹೀಗೆ ಕೇಳಿ: “ಆದಾಮಹವ್ವರು ಪಾಪ ಮಾಡುವಲ್ಲಿ ನರಕಕ್ಕೆ ಹೋಗಲಿದ್ದಿದ್ದರೆ ‘ನೀವು ನರಕಕ್ಕೆ ಹೋಗುವಿರಿ’ ಎಂದೇ ದೇವರು ಎಚ್ಚರಿಸಬಹುದಿತ್ತಲ್ಲ?” ಅನಂತರ ಆದಿಕಾಂಡ 3:19ನ್ನು ಓದಿ. ಪಾಪ ಮಾಡಿದ ಆದಾಮಹವ್ವರಿಗೆ ದೇವರು ಶಿಕ್ಷೆ ವಿಧಿಸಿದ್ದರ  ಬಗ್ಗೆ ಅಲ್ಲಿ ಹೇಳಲಾಗಿದೆ. ಆದರೆ ನರಕದ ಬಗ್ಗೆ ಏನೂ ಹೇಳಲಾಗಿಲ್ಲ. ಬದಲಿಗೆ ಆದಾಮನಿಗೆ ‘ಪುನಃ ಮಣ್ಣಿಗೆ ಹೋಗುತ್ತೀ’ ಎಂದು ದೇವರು ಹೇಳಿದನು. ನಾವು ಮನೆಯವರಿಗೆ ಹೀಗೆ ಕೇಳಬಹುದು, “ಒಂದುವೇಳೆ ಆದಾಮನು ಬೆಂಕಿಯುರಿಯುವ ನರಕಕ್ಕೆ ಹೋಗಲಿದ್ದಿದ್ದರೆ ‘ಮಣ್ಣಿಗೆ ಹೋಗುತ್ತೀ’ ಎಂದು ಹೇಳುವುದು ತಪ್ಪಾಗುತ್ತಿತ್ತಲ್ಲ?” ಆ ವ್ಯಕ್ತಿ ಮುಕ್ತ ಮನಸ್ಸಿನವನಾಗಿರುವಲ್ಲಿ ಈ ತರ್ಕವು ಅವನನ್ನು ಯೋಚಿಸುವಂತೆ ಮಾಡುವುದು.

11. (ಎ) ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆಂದು ನಂಬುವ ವ್ಯಕ್ತಿಯೊಂದಿಗೆ ನಾವು ಹೇಗೆ ತರ್ಕಿಸಬಹುದು? (ಬಿ) ಇದೇ ಸನ್ನಿವೇಶದಲ್ಲಿ ನೀವು ಬೇರೆ ಯಾವ ಪರಿಣಾಮಕಾರಿ ತರ್ಕವನ್ನು ಉಪಯೋಗಿಸಿದ್ದೀರಿ?

11 ಸನ್ನಿವೇಶ 3: ಎಲ್ಲ ಒಳ್ಳೇ ಜನರು ಸ್ವರ್ಗಕ್ಕೆ ಹೋಗುತ್ತಾರೆಂದು ನಂಬುವ ಒಬ್ಬರನ್ನು ನಾವು ಸೇವೆಯಲ್ಲಿ ಭೇಟಿಯಾಗಿದ್ದೇವೆ. ಅಂಥ ನಂಬಿಕೆಯಿರುವ ವ್ಯಕ್ತಿ ಬೈಬಲಿನಲ್ಲಿ ಹೇಳಿರುವುದನ್ನು ಬೇರೆಯೇ ವಿಧದಲ್ಲಿ ಅರ್ಥಮಾಡಿಕೊಂಡಿರಬಹುದು. ನಾವು ಅವನಿಗೆ ಪ್ರಕಟನೆ 21:4ನ್ನು (ಓದಿ) ತೋರಿಸಿದ್ದೇವೆಂದು ನೆನಸಿ. ಅಲ್ಲಿ ಹೇಳಿರುವ ಆಶೀರ್ವಾದಗಳು ಸ್ವರ್ಗದ ಜೀವನಕ್ಕೆ ಅನ್ವಯಿಸುತ್ತವೆಂದು ಅವನು ಅನ್ನಬಹುದು. ಆಗ ಹೇಗೆ ತರ್ಕಿಸುವುದು? ಬೇರೆ ವಚನಗಳಿಗೆ ಜಿಗಿಯುವ ಬದಲು ಅದೇ ವಚನದಲ್ಲಿರುವ ಮಾಹಿತಿಯನ್ನು ಬಳಸಿ ನಾವು ಅವನೊಂದಿಗೆ ತರ್ಕಿಸಬಹುದು. “ಇನ್ನು ಮರಣವಿರುವುದಿಲ್ಲ” ಎಂದು ಆ ವಚನ ಹೇಳುತ್ತದೆ. ನಾವು ಆ ವ್ಯಕ್ತಿಗೆ ಹೀಗೆ ಕೇಳಬಹುದು, “ಯಾವುದಾದರೂ ಒಂದು ವಿಷಯ ಇಲ್ಲದೆ ಹೋಗಬೇಕಾದರೆ ಅದು ಮೊದಲು ಇದ್ದಿರಲೇಬೇಕಲ್ಲವೇ?” ಅವರು ‘ಹೌದು’ ಎನ್ನಬಹುದು. “ಸ್ವರ್ಗದಲ್ಲಿ ಸಾವು ಇದೆಯಾ? ಅಲ್ಲಿ ಸಾವು ಯಾವತ್ತೂ ಇಲ್ಲ. ಭೂಮಿಯಲ್ಲಿ ಮಾತ್ರ ಸಾವು ಇದೆ. ಅಂದಮೇಲೆ ಪ್ರಕಟನೆ 21:4ರಲ್ಲಿ ಹೇಳಿರುವ ಮಾತುಗಳು ಭೂಮಿಯಲ್ಲಿ ಮುಂದೆ ಬರಲಿರುವ ಆಶೀರ್ವಾದಗಳ ಕುರಿತೇ ಆಗಿರಬೇಕಲ್ಲವೇ?” ಎಂದು ನಾವು ಸ್ಪಷ್ಟಪಡಿಸಬಹುದು.—ಕೀರ್ತನೆ 37:29.

ನಿಜಾಂಶವನ್ನು ಮನಗಾಣಿಸಲು ದೃಷ್ಟಾಂತಗಳನ್ನು ಬಳಸಿ

12. ಯೇಸು ದೃಷ್ಟಾಂತಗಳನ್ನು ಏಕೆ ಬಳಸಿದನು?

12 ಯೇಸು ಸುವಾರ್ತೆ ಸಾರುವಾಗ ಪ್ರಶ್ನೆಗಳನ್ನಷ್ಟೇ ಅಲ್ಲ ದೃಷ್ಟಾಂತಗಳನ್ನು ಸಹ ಬಳಸಿದನು. (ಮತ್ತಾಯ 13:34, 35 ಓದಿ.) ಆ ದೃಷ್ಟಾಂತಗಳು ಯೇಸು ಯಾರೊಂದಿಗೆ ಮಾತಾಡುತ್ತಿದ್ದನೋ ಅವರ ಇರಾದೆಗಳನ್ನು ಹೊರಗೆಡವಿದವು. (ಮತ್ತಾ. 13:10-15) ದೃಷ್ಟಾಂತಗಳು ಅವನ ಬೋಧನೆಗೆ ಸೊಬಗು ನೀಡಿದವು, ಮಾತ್ರವಲ್ಲ ಆ ಬೋಧನೆಯನ್ನು ಸದಾ ನೆನಪಿನಲ್ಲಿಡಲು ಜನರಿಗೆ ನೆರವಾದವು. ನಾವು ಇತರರಿಗೆ ಕಲಿಸುವಾಗ ದೃಷ್ಟಾಂತಗಳನ್ನು ಹೇಗೆ ಬಳಸಬಹುದು?

13. ದೇವರು ಯೇಸುವಿಗಿಂತ ಉನ್ನತನೆಂದು ವಿವರಿಸಲು ಯಾವ ದೃಷ್ಟಾಂತವನ್ನು ನಾವು ಬಳಸಬಹುದು?

13 ಸರಳ ದೃಷ್ಟಾಂತಗಳನ್ನು ಬಳಸುವುದು ಯಾವಾಗಲೂ ಒಳ್ಳೇದು. ಉದಾಹರಣೆಗೆ, ದೇವರು ಯೇಸುವಿಗಿಂತ ಉನ್ನತನು ಎಂದು ವಿವರಿಸುತ್ತಿದ್ದೇವೆ ಅಂದುಕೊಳ್ಳೋಣ. ಮನೆಯವರಿಗೆ ಅದನ್ನು ಹೇಗೆ ವಿವರಿಸಬಹುದು? ದೇವರು ಮತ್ತು ಯೇಸು ಇಬ್ಬರೂ ತಮ್ಮ ಮಧ್ಯೆ ಇರುವ ಸಂಬಂಧವನ್ನು ತಂದೆ ಮತ್ತು ಮಗನ ಸಂಬಂಧಕ್ಕೆ ಹೋಲಿಸಿದರು. ದೇವರು ಯೇಸುವನ್ನು ಮಗನೆಂದು, ಯೇಸು ದೇವರನ್ನು ತಂದೆಯೆಂದು ಸಂಬೋಧಿಸಿದ್ದಾರೆ ಎಂದು ನಾವು ತಿಳಿಸಬಹುದು. (ಲೂಕ 3:21, 22; ಯೋಹಾ. 14:28) ಅನಂತರ ಹೀಗೆ ಕೇಳಬಹುದು: “ನೀವು ನನಗೆ ಯಾರೋ ಇಬ್ಬರು ವ್ಯಕ್ತಿಗಳು ಸರಿಸಮಾನರು ಎಂದು ಹೇಳಲು ಬಯಸುತ್ತೀರಿ ಅಂದುಕೊಳ್ಳಿ. ಅದನ್ನು ಕುಟುಂಬದಲ್ಲಿ ಯಾವ ಇಬ್ಬರು ವ್ಯಕ್ತಿಗಳ ಉದಾಹರಣೆ ಕೊಟ್ಟು ವಿವರಿಸುವಿರಿ?” ಆ ವ್ಯಕ್ತಿ ಅದಕ್ಕೆ, ಒಡಹುಟ್ಟಿದವರು ಅಥವಾ ಅವಳಿ-ಜವಳಿಗಳ ಕುರಿತು ತಿಳಿಸಬಹುದು. ಆಗ ನಾವು ಹೀಗನ್ನಬಹುದು: “ನಾನು ಕೂಡ ಅದೇ ಉದಾಹರಣೆ ಕೊಡುತ್ತಿದ್ದೆ. ನಾವೇ ಅಷ್ಟು ಸುಲಭವಾದ ಹೋಲಿಕೆಯಿಂದ ಅದನ್ನು ವಿವರಿಸುತ್ತೇವೆ ಅಂದಮೇಲೆ ಯೇಸು ಮತ್ತು ದೇವರು ಸಮಾನರಾಗಿದ್ದರೆ ಮಹಾ ಬೋಧಕನಾದ ಯೇಸು ಸಹ ಅಂಥ ಹೋಲಿಕೆ ಬಳಸಿರಬಹುದಿತ್ತಲ್ಲ? ಆದರೆ ಆತನು ದೇವರನ್ನು ತನ್ನ ತಂದೆಯೆಂದು ಹೇಳಿದ್ದಾನೆ. ದೇವರು ತನಗಿಂತ ದೊಡ್ಡವನು, ಹೆಚ್ಚು ಅಧಿಕಾರವುಳ್ಳವನು ಆಗಿದ್ದಾನೆಂದು ಯೇಸುವೇ ತೋರಿಸಿಕೊಟ್ಟಿದ್ದಾನೆ!”

14. ಬೆಂಕಿಯುರಿಯುವ ನರಕದಲ್ಲಿ ಜನರಿಗೆ ಯಾತನೆಕೊಡಲು ದೇವರು ಪಿಶಾಚನನ್ನು ನೇಮಿಸಿದ್ದಾನೆ ಎನ್ನುವುದಕ್ಕೆ ಅರ್ಥವಿಲ್ಲವೇಕೆ?

14 ಇನ್ನೊಂದು ಉದಾಹರಣೆ ನೋಡಿ. ಸೈತಾನನನ್ನು ನರಕದ ಅಧಿಪತಿಯಾಗಿ ದೇವರು ನೇಮಿಸಿದ್ದಾನೆ ಎಂದು ಕೆಲವರು ನಂಬುತ್ತಾರೆ. ಹೆತ್ತವರೊಬ್ಬರ ಹತ್ತಿರ ನಾವು ಮಾತಾಡುತ್ತಿರುವಲ್ಲಿ ಅಂಥ ವಿಚಾರ ತಪ್ಪೆಂದು ವಿವರಿಸಲು ಯಾವ ದೃಷ್ಟಾಂತ ಬಳಸಬಹುದು? ನಾವು ಅವರಿಗೆ ಹೀಗೆ ಕೇಳಬಹುದು: “ನೆನಸಿ, ನಿಮ್ಮ ಮಗ ಕೆಟ್ಟ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾನೆ, ಎದುರು ಮಾತಾಡುತ್ತಾನೆ. ಹೇಳಿದ್ದು ಒಂದೂ ಕೇಳುತ್ತಿಲ್ಲ. ನೀವು ಏನು ಮಾಡುವಿರಿ?” ಅದಕ್ಕವರು, ‘ನಾನವನಿಗೆ ಬುದ್ಧಿ ಹೇಳುತ್ತೇನೆ, ಮತ್ತೆ ಅವನು ತಪ್ಪು ದಾರಿಗೆ ಇಳಿಯದಂತೆ ಸಹಾಯ ಮಾಡುತ್ತಾ ಇರುತ್ತೇನೆ’ ಎಂದು ಹೇಳಬಹುದು. (ಜ್ಞಾನೋ. 22:15) ನಾವು ಆಗ, “ನೀವೆಷ್ಟು  ಸಹಾಯ ಮಾಡಿದರೂ ನಿಮ್ಮ ಮಗ ತಪ್ಪನ್ನೇ ಮಾಡುತ್ತಾ ಹೋದರೆ ಏನು ಮಾಡುತ್ತೀರಿ?” ಎಂದು ಕೇಳಬಹುದು. ಆಗ ಹೆಚ್ಚಿನ ಹೆತ್ತವರು ಹೇಳುವುದು: ‘ನಾನು ಅವನಿಗೆ ಚೆನ್ನಾಗಿ ಬಾರಿಸುತ್ತೇನೆ.’ ಆವಾಗ ಹೀಗೆ ಕೇಳಿ: “ನಿಮ್ಮ ಮಗ ಆ ರೀತಿ ಆಗಲು ಯಾರೋ ಒಬ್ಬ ಕೆಟ್ಟ ವ್ಯಕ್ತಿ ಕಾರಣ ಎಂದು ನಿಮಗೆ ಒಂದುವೇಳೆ ತಿಳಿದುಬಂದರೆ? ನಿಮಗೆ ಆ ವ್ಯಕ್ತಿ ಮೇಲೆ ತುಂಬ ಸಿಟ್ಟು ಬರುತ್ತದಲ್ಲ?” ಈ ದೃಷ್ಟಾಂತದ ತಿರುಳನ್ನು ಸ್ಪಷ್ಟಪಡಿಸಲು ಹೀಗೆ ಹೇಳಬಹುದು: “ನಿಮ್ಮ ಮಗ ಕೆಟ್ಟವನಾಗಲು ಕಾರಣನಾದ ಅದೇ ವ್ಯಕ್ತಿಯ ಬಳಿ ನಿಮ್ಮ ಮಗನನ್ನು ಶಿಕ್ಷಿಸುವಂತೆ ಕೇಳಿಕೊಳ್ಳುತ್ತೀರಾ?” ಆಗ ಉತ್ತರ, ‘ಖಂಡಿತ ಇಲ್ಲ’ ಎಂದು ಬರುತ್ತದೆ. ಹಾಗೆಯೇ ಕೆಟ್ಟದ್ದನ್ನು ಮಾಡುವಂತೆ ಸೈತಾನನು ಯಾರನ್ನು ಪ್ರಭಾವಿಸಿದ್ದಾನೋ ಆ ಜನರನ್ನು ಅವನ ಕೈಯಿಂದಲೇ ದೇವರು ಶಿಕ್ಷಿಸುವುದಿಲ್ಲ ಅಲ್ಲವೇ? ಎಂದು ಕೇಳಿ.

ಸಮತೂಕ ಮನೋಭಾವವಿರಲಿ

15, 16. (ಎ) ನಮ್ಮ ಸಂದೇಶಕ್ಕೆ ಎಲ್ಲರೂ ಕಿವಿಗೊಡುತ್ತಾರೆಂದು ನಾವೇಕೆ ನಿರೀಕ್ಷಿಸಬಾರದು? (ಬಿ) ಪರಿಣಾಮಕಾರಿಯಾಗಿ ಬೋಧಿಸಲು ನಾವು ಪ್ರವೀಣರಾಗಿರಬೇಕಾ? ವಿವರಿಸಿ. (“ “ಉತ್ತರಿಸಲು ನೆರವಾಗುವ ಒಂದು ಸಾಧನ” ಎಂಬ ಚೌಕ ನೋಡಿ.)

15 ನಾವು ಸಾರುವ ರಾಜ್ಯದ ಸಂದೇಶವನ್ನು ಎಲ್ಲರೂ ಕೇಳುವುದಿಲ್ಲವೆಂದು ನಮಗೆ ಗೊತ್ತು. (ಮತ್ತಾ. 10:11-14) ನಾವು ಸೂಕ್ತ ಪ್ರಶ್ನೆಗಳನ್ನು, ಪರಿಣಾಮಕಾರಿ ತರ್ಕಗಳನ್ನು, ಒಳ್ಳೆಯ ದೃಷ್ಟಾಂತಗಳನ್ನು ಬಳಸಿದರೂ ಕೆಲವೊಮ್ಮೆ ಜನರು ಕೇಳದೆ ಹೋಗಬಹುದು. ಇದು ಅಚ್ಚರಿಯ ಸಂಗತಿಯಲ್ಲ. ಏಕೆಂದರೆ, ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಮಹಾನ್‌ ಬೋಧಕನಾದ ಯೇಸುವಿನ ಬೋಧನೆಗೇ ಕಿವಿಗೊಟ್ಟವರು ಕೆಲವು ಮಂದಿ.—ಯೋಹಾ. 6:66; 7:45-48.

16 ಆದರೆ ಇತರರಿಗೆ ಕಲಿಸಲು ನಮ್ಮಲ್ಲಿ ವಿಶೇಷ ನೈಪುಣ್ಯತೆ ಇಲ್ಲವೆಂದು ಅನಿಸುವಲ್ಲಿ ಆಗೇನು? ಆಗಲೂ ನಾವು ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಬಲ್ಲೆವು. (ಅಪೊಸ್ತಲರ ಕಾರ್ಯಗಳು 4:13 ಓದಿ.) ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ ಎಲ್ಲರೂ’ ಸುವಾರ್ತೆಗೆ ಕಿವಿಗೊಡುವರು ಎಂಬ ಆಶ್ವಾಸನೆಯನ್ನು ದೇವರ ವಾಕ್ಯ ನಮಗೆ ಕೊಡುತ್ತದೆ. (ಅ. ಕಾ. 13:48) ಹಾಗಾಗಿ ನಾವು ಸಮತೂಕ ಮನೋಭಾವ ಕಾಪಾಡಿಕೊಳ್ಳಬೇಕು. ಅಂದರೆ ಬೋಧಿಸುವ ಕಲೆಯನ್ನು ನಾವು ಉತ್ತಮಗೊಳಿಸಲು ಪ್ರಯಾಸಪಡಬೇಕು, ಅದೇ ಸಮಯದಲ್ಲಿ ಯಾರಾದರೂ ನಮ್ಮ ಸಂದೇಶಕ್ಕೆ ಕಿವಿಗೊಡದಿದ್ದಲ್ಲಿ ನಿರಾಶರಾಗಬಾರದು. ಯೆಹೋವನು ಕೊಡುವ ತರಬೇತಿಯನ್ನು ನಾವು ಸದುಪಯೋಗಿಸಿಕೊಳ್ಳುವಾಗ ನಮಗೂ ನಮ್ಮ ಸಂದೇಶಕ್ಕೆ ಕಿವಿಗೊಡುವವರಿಗೂ ಖಂಡಿತ ಪ್ರಯೋಜನವಾಗುತ್ತದೆ. (1 ತಿಮೊ. 4:16) “ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು” ಎಂದು ತಿಳಿದುಕೊಳ್ಳಲು ಯೆಹೋವನು ನಮಗೆ ನೆರವಾಗುತ್ತಾನೆ. ಯಾವುದನ್ನು ನಾವು ‘ಸುವರ್ಣ ನಿಯಮ’ ಎಂದು ಕರೆಯುತ್ತೇವೋ ಅದನ್ನು ಅನುಸರಿಸುವುದರಿಂದ ಸಹ ಶುಶ್ರೂಷೆಯಲ್ಲಿ ಯಶಸ್ಸು ಸಾಧಿಸಬಹುದು. ಅದು ಹೇಗೆಂದು ಮುಂದಿನ ಲೇಖನದಲ್ಲಿ ನೋಡೋಣ.

^ ಪ್ಯಾರ. 6 2000, ಜೂನ್‌ 15ರ ಕಾವಲಿನಬುರುಜುವಿನಲ್ಲಿ “ಕಣ್ಣಿಗೆ ಕಾಣಿಸದಿರುವುದನ್ನು ನೀವು ನಂಬುತ್ತೀರೋ?” ಎಂಬ ಲೇಖನ ನೋಡಿ.