ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರ ಚಿತ್ತ ಮಾಡುವುದೇ ನನ್ನ ಆಹಾರ’

‘ದೇವರ ಚಿತ್ತ ಮಾಡುವುದೇ ನನ್ನ ಆಹಾರ’

ನಿಮಗೆ ತುಂಬ ಸಂತೋಷ ಸಿಗುವುದು ಯಾವುದರಿಂದ? ಮದುವೆ, ಬಾಳಸಂಗಾತಿಯೊಂದಿಗೆ ಕೂಡಿ ಮಕ್ಕಳನ್ನು ಬೆಳೆಸುವುದು, ಒಳ್ಳೇ ಗೆಳೆಯರನ್ನು ಮಾಡಿಕೊಳ್ಳುವುದರಿಂದ ಸಂತೋಷ ಸಿಗಬಹುದು. ಅಚ್ಚುಮೆಚ್ಚಿನವರ ಜೊತೆಸೇರಿ ಊಟವನ್ನು ಸವಿಯುವುದನ್ನು ಸಹ ನೀವು ಆನಂದಿಸಬಹುದು. ಆದರೆ ಇದೆಲ್ಲಕ್ಕಿಂತಲೂ ಯೆಹೋವನ ಇಷ್ಟವನ್ನು ಮಾಡುವುದು, ಆತನ ವಾಕ್ಯವನ್ನು ಅಧ್ಯಯನ ಮಾಡುವುದು ಮತ್ತು ಸುವಾರ್ತೆ ಸಾರುವುದು ಹೆಚ್ಚು ಸಂತೋಷ ಸಂತೃಪ್ತಿಯನ್ನು ತರುತ್ತದಲ್ಲವೇ?

“ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ಹೇಳುತ್ತಾ ಸೃಷ್ಟಿಕರ್ತನನ್ನು ಸ್ತುತಿಸಿದನು ಪ್ರಾಚೀನ ಇಸ್ರಾಯೇಲಿನ ರಾಜ ದಾವೀದ. (ಕೀರ್ತ. 40:8) ಜೀವನದಲ್ಲಿ ಅವನು ನಾನಾ ಸಂಕಷ್ಟಗಳನ್ನು, ಒತ್ತಡವನ್ನು ಅನುಭವಿಸಿದರೂ ದೇವರ ಚಿತ್ತವನ್ನು ಮಾಡುತ್ತಾ ತುಂಬ ಸಂತೋಷವನ್ನು ಕಂಡುಕೊಂಡನು. ದಾವೀದನಂತೆ ಇನ್ನೂ ಅನೇಕರು ಸತ್ಯ ದೇವರ ಸೇವೆ ಮಾಡುವುದರಲ್ಲಿ ಆನಂದಪಟ್ಟರು.

ಕೀರ್ತನೆ 40:8ರಲ್ಲಿರುವ ಮಾತುಗಳನ್ನು ಮೆಸ್ಸೀಯನಿಗೆ ಅಂದರೆ ಕ್ರಿಸ್ತನಿಗೆ ಅನ್ವಯಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: ‘ಯೇಸು ಹೀಗೆ ಹೇಳುತ್ತಾನೆ, “ಯಜ್ಞಗಳನ್ನೂ ಕಾಣಿಕೆಗಳನ್ನೂ ನೀನು ಬಯಸಲಿಲ್ಲ, ಆದರೆ ನೀನು ನನಗಾಗಿ ದೇಹವನ್ನು ಸಿದ್ಧಮಾಡಿದಿ. ನೀನು ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಅಂಗೀಕರಿಸಲಿಲ್ಲ.” “ಇಗೋ ದೇವರೇ, ನಾನು ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ.”’—ಇಬ್ರಿ. 10:5-7.

ಯೇಸು ಭೂಮಿಯಲ್ಲಿದ್ದಾಗ ಸೃಷ್ಟಿಯ ಸೌಂದರ್ಯವನ್ನು ನೋಡಿ ಆನಂದಿಸಿದನು. ಸ್ನೇಹಿತರೊಂದಿಗೆ ಸಮಯ ಕಳೆಯುವುದರಲ್ಲಿ, ಇತರರ ಜೊತೆ ಊಟ ಮಾಡುವುದರಲ್ಲಿ ಖುಷಿಪಟ್ಟನು. (ಮತ್ತಾ. 6:26-29; ಯೋಹಾ. 2:1, 2; 12:1, 2) ಆದರೆ ಅವನು ಪ್ರಧಾನವಾಗಿ ತನ್ನ ತಂದೆಯ ಚಿತ್ತವನ್ನು ಮಾಡುವುದರ ಮೇಲೆ ಗಮನವಿಟ್ಟನು. ಅದರಲ್ಲಿ ಅವನು ಪರಮ ಸಂತೋಷ ಕಂಡುಕೊಂಡನು. ಸ್ವತಃ ಯೇಸು ಅಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ.” (ಯೋಹಾ. 4:34; 6:38) ಯೇಸುವಿನ ಶಿಷ್ಯರು ತಮ್ಮ ಗುರುವನ್ನು ನೋಡಿ ನಿಜ ಸಂತೋಷದ ಗುಟ್ಟನ್ನು ತಿಳಿದುಕೊಂಡರು. ಆದ್ದರಿಂದ ದೇವರ ರಾಜ್ಯದ ಸಂದೇಶವನ್ನು ಸಿದ್ಧಮನಸ್ಸಿನಿಂದ, ಹುರುಪಿನಿಂದ ಸಾರುತ್ತಾ ಬಹಳ ಆನಂದಿಸಿದರು.—ಲೂಕ 10:1, 8, 9, 17.

‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’

ಯೇಸು ತನ್ನ ಹಿಂಬಾಲಕರಿಗೆ ಈ ಆಜ್ಞೆ ಕೊಟ್ಟನು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:19, 20) ಈ ಆಜ್ಞೆಯನ್ನು ಪಾಲಿಸಲು ಏನು ಮಾಡಬೇಕು? ಜನರು ಸಿಕ್ಕಿದಲ್ಲೆಲ್ಲ  ಸುವಾರ್ತೆ ತಿಳಿಸಬೇಕು, ಆಸಕ್ತಿ ತೋರಿಸಿದವರಿಗೆ ಪುನರ್ಭೇಟಿಗಳನ್ನು ಮಾಡಬೇಕು, ಅವರೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸಬೇಕು. ಈ ಕೆಲಸ ಅಪಾರ ಹರ್ಷಾನಂದ ತರುತ್ತದೆ.

ಜನರು ಆಸಕ್ತಿ ತೋರಿಸದಿದ್ದಾಗಲೂ ಸಾರುತ್ತಾ ಇರುವಂತೆ ಪ್ರೀತಿ ನಮ್ಮನ್ನು ಪ್ರೇರಿಸುತ್ತದೆ

ನಮ್ಮ ಸಂದೇಶದಲ್ಲಿ ಜನರು ಆಸಕ್ತಿ ತೋರಿಸದಿದ್ದಾಗಲೂ ನಾವು ಸಂತೋಷದಿಂದಿರಲು ಸಾಧ್ಯವೇ? ಹೌದು. ಏಕೆಂದರೆ ಜನರು ಆಸಕ್ತಿ ತೋರಿಸಲಿ ತೋರಿಸದಿರಲಿ ಸೇವೆಯಲ್ಲಿ ನಮಗಿರುವ ಮನೋಭಾವವೇ ಸಂತೋಷಕ್ಕೆ ಕೀಲಿಕೈ ಆಗಿದೆ. ಜನರು ಸ್ವಲ್ಪವೂ ಆಸಕ್ತಿ ತೋರಿಸದಿದ್ದರೂ ನಾವು ಸುವಾರ್ತೆ ಸಾರುತ್ತಾ ಇರುತ್ತೇವೆ. ಏಕೆಂದರೆ ನಾವು ರಾಜ್ಯ ಸಂದೇಶವನ್ನು ಸಾರುವುದು ಮತ್ತು ಶಿಷ್ಯರನ್ನಾಗಿ ಮಾಡುವುದು ನಮಗೆ ದೇವರ ಹಾಗೂ ನೆರೆಯವರ ಮೇಲೆ ಪ್ರೀತಿ ಇರುವುದರಿಂದಲೇ. ಅಲ್ಲದೆ ನಮ್ಮ ಜೀವ ಹಾಗೂ ಜನರ ಜೀವ ಅಪಾಯದಲ್ಲಿದೆ. (ಯೆಹೆ. 3:17-21; 1 ತಿಮೊ. 4:16) ಸೇವೆಯಲ್ಲಿ ಹುರುಪು ಕುಂದದಂತೆ ನೋಡಿಕೊಳ್ಳಲು ಮತ್ತು ಹೊಸ ಹುರುಪನ್ನು ಪಡೆದುಕೊಳ್ಳಲು ನಮ್ಮ ಜೊತೆ ಕೆಲಸಗಾರರಲ್ಲಿ ಅನೇಕರಿಗೆ ಯಾವುದು ನೆರವಾಗಿದೆ? ನಾವೀಗ ಗಮನಿಸೋಣ.

ಒಂದೇ ಒಂದು ಅವಕಾಶವನ್ನೂ ಬಿಟ್ಟು ಬಿಡಬೇಡಿ

ಸೂಕ್ತ ಪ್ರಶ್ನೆಗಳನ್ನು ಕೇಳುವುದರಿಂದ ನಾವು ಸೇವೆಯಲ್ಲಿ ಒಳ್ಳೇ ಫಲಿತಾಂಶಗಳನ್ನು ಪಡೆಯುತ್ತೇವೆ. ಆಮಾಲ್ಯಾ ಎಂಬಾಕೆ ಹೇಗೆ ಪ್ರಶ್ನೆ ಕೇಳಿದಳೆಂದು ಗಮನಿಸಿ. ಒಂದು ದಿನ ಬೆಳಗ್ಗೆ ಪಾರ್ಕ್‍ನಲ್ಲಿ ವಾರ್ತಾಪತ್ರಿಕೆ ಓದುತ್ತಿದ್ದ ವ್ಯಕ್ತಿಯ ಬಳಿ ಹೋಗಿ ‘ಯಾವುದಾದರೂ ಒಳ್ಳೇ ಸುದ್ದಿ ಇದೆಯಾ?’ ಎಂದು ಕೇಳಿದಳು. ‘ಇಲ್ಲ’ ಎಂದು ಅವನು ಹೇಳಿದಾಗ ಅವಳು, “ದೇವರ ರಾಜ್ಯದ ಕುರಿತು ಒಳ್ಳೇ ಸುದ್ದಿಯನ್ನು ತಿಳಿಸಲು ನಾನು ಬಂದಿದ್ದೇನೆ” ಎಂದಳು. ಇದು ಆ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಿತು. ಬೈಬಲ್‌ ಅಧ್ಯಯನಕ್ಕೂ ಒಪ್ಪಿಕೊಂಡ. ಆಮಾಲ್ಯಾ ಆ ಪಾರ್ಕ್‍ನಲ್ಲಿ ಮೂರು ಬೈಬಲ್‌ ಅಧ್ಯಯನಗಳನ್ನು ಶುರುಮಾಡಿದಳು.

ಸಹೋದರಿ ಜ್ಯಾನಸ್‌ ತಾನು ಕೆಲಸ ಮಾಡುವ ಸ್ಥಳವನ್ನೇ ತನ್ನ ಟೆರಿಟೊರಿಯಾಗಿ ಮಾಡಿಕೊಂಡಿದ್ದಾಳೆ. ಕಾವಲಿನಬುರುಜುವಿನಲ್ಲಿ ಒಂದು ಲೇಖನವನ್ನು ನೋಡಿ ಅವಳ ಸಹೋದ್ಯೋಗಿಯೊಬ್ಬಳು ಮತ್ತು ವಾಚ್‌ಮ್ಯಾನ್‌ ಆಸಕ್ತಿ ತೋರಿಸಿದಾಗ ಜ್ಯಾನಸ್‌ ‘ಪತ್ರಿಕೆಯ ಪ್ರತಿ ಸಂಚಿಕೆಯನ್ನು ತಂದುಕೊಡುಬಹುದೇ’ ಎಂದು ಕೇಳಿದಳು. ಅದಕ್ಕವರು ಒಪ್ಪಿದರು. ಇನ್ನೊಬ್ಬಳು ಸಹೋದ್ಯೋಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಮೂಡಿಬರುವ ವೈವಿಧ್ಯಮಯ ಲೇಖನಗಳನ್ನು ನೋಡಿ ತುಂಬ ಖುಷಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದಳು. ‘ಪ್ರತಿ ತಿಂಗಳು ಪತ್ರಿಕೆ ತಂದುಕೊಡಬಹುದೇ’ ಎಂದು ಅವಳಿಗೆ ಸಹ ಕೇಳಿದಳು. ಅವಳೂ ಒಪ್ಪಿದಳು. ಪತ್ರಿಕೆಗಳನ್ನು ನೋಡಿ ಇನ್ನೊಬ್ಬಳು ಕೂಡ ತನಗೂ ಬೇಕೆಂದು ಕೇಳಿಕೊಂಡಳು. “ಯೆಹೋವನು ನನ್ನನ್ನು ಎಷ್ಟೊಂದು ಆಶೀರ್ವದಿಸಿದ್ದಾನೆ!” ಎಂದು ಉದ್ಗರಿಸುತ್ತಾಳೆ ಜ್ಯಾನಸ್‌. ಹೀಗೆ ಕೆಲಸದ ಸ್ಥಳದಲ್ಲಿ ಒಟ್ಟು 11 ಮಂದಿಗೆ ಅವಳು ನಿಯತವಾಗಿ ಪತ್ರಿಕೆಗಳನ್ನು ಕೊಡಲಾರಂಭಿಸಿದಳು.

ಸಕಾರಾತ್ಮಕ ಮನೋಭಾವವಿರಲಿ

ಸೇವೆಯಲ್ಲಿ ಮನೆಯವರ ಹತ್ತಿರ, ‘ನಾನು ಯಾವತ್ತಾದರೂ ಒಂದು ದಿನ ಬರುತ್ತೇನೆ’ ಎಂದಷ್ಟೇ ಹೇಳಿ ಬರಬಾರದೆಂದು ಒಬ್ಬ ಸಂಚರಣ ಮೇಲ್ವಿಚಾರಕರು ಪ್ರಚಾರಕರಿಗೆ ಹೇಳಿದರು. ಬದಲಿಗೆ “ಬೈಬಲ್‌ ಅಧ್ಯಯನ ಹೇಗೆ ಮಾಡುವುದೆಂದು ನಾನು ನಿಮಗೆ ಮುಂದಿನ ಸಲ ಬಂದು ತೋರಿಸಬಹುದಾ?” ಎಂದು ಅಥವಾ “ಈ ವಿಷಯದ ಬಗ್ಗೆ ಇನ್ನೂ ಹೆಚ್ಚು ಮಾತಾಡಲು ನಾನು ಯಾವ ದಿನ ಬರಬಹುದು? ಎಷ್ಟು ಗಂಟೆಗೆ ಬರಬಹುದು?” ಎಂದು ಕೇಳುವಂತೆ ಸಲಹೆಯಿತ್ತರು. ಆ ಸಲಹೆಯನ್ನು ಪಾಲಿಸಿದ್ದರ ಫಲಿತಾಂಶ? ಆ ಸಂಚರಣ ಮೇಲ್ವಿಚಾರಕರು ನಂತರ ವರದಿಸಿದಂತೆ, ಒಂದು ಸಭೆಯ ಸಹೋದರ ಸಹೋದರಿಯರು ಒಂದೇ ವಾರದಲ್ಲಿ 44 ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದರು!

ಆಸಕ್ತ ವ್ಯಕ್ತಿಗಳನ್ನು ಆದಷ್ಟು ಬೇಗನೆ ಪುನರ್ಭೇಟಿ ಮಾಡುವುದರಿಂದ ಒಳ್ಳೇ ಫಲಿತಾಂಶಗಳು ಸಿಗುತ್ತವೆ. ಕೆಲವೇ ದಿನಗಳಲ್ಲಿ ಭೇಟಿಮಾಡುವುದು ಇನ್ನೂ ಪರಿಣಾಮಕಾರಿ. ಏಕೆ? ಏಕೆಂದರೆ ಈ ಮೂಲಕ ಬೈಬಲನ್ನು ಅರ್ಥಮಾಡಿಕೊಳ್ಳಲು ಯಥಾರ್ಥ ವ್ಯಕ್ತಿಗಳಿಗೆ ಸಹಾಯ ಮಾಡಲು ನಾವು ನಿಜವಾಗಿಯೂ ಬಯಸುತ್ತೇವೆಂದು ತೋರಿಸುತ್ತೇವೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಲು ಕಾರಣವೇನೆಂದು ಒಬ್ಬ ಮಹಿಳೆಯನ್ನು ಕೇಳಿದಾಗ ಆಕೆ, “ಅವರು ನನ್ನ ಕಡೆಗೆ ನಿಜವಾದ ಕಾಳಜಿ, ಪ್ರೀತಿ ತೋರಿಸಿದರು ಅದಕ್ಕೆ” ಎಂದು ಹೇಳಿದಳು.

ಮನೆಯವರನ್ನು ನೀವು ಹೀಗೆ ಕೇಳಬಹುದು: “ಬೈಬಲ್‌ ಅಧ್ಯಯನ ಹೇಗೆ ಮಾಡುವುದೆಂದು ನಾನು ನಿಮಗೆ ಮುಂದಿನ ಸಲ ಬಂದು ತೋರಿಸಬಹುದಾ?”

 ಮಡಾಯೀ ಎಂಬ ಸಹೋದರಿ ಪಯನೀಯರ್‌ ಸೇವಾ ಶಾಲೆ ಹಾಜರಾಗಿ ಬಂದು ಸ್ವಲ್ಪವೇ ಸಮಯದಲ್ಲಿ 15 ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದಳು. ಇನ್ನೂ 5 ಬೈಬಲ್‌ ಅಧ್ಯಯನಗಳನ್ನು ಬೇರೆ ಪ್ರಚಾರಕರಿಗೆ ಕೊಟ್ಟಳು. ಆಕೆಯ ಹೆಚ್ಚಿನ ವಿದ್ಯಾರ್ಥಿಗಳು ಕ್ರಮವಾಗಿ ಕೂಟಗಳಿಗೆ ಹಾಜರಾಗತೊಡಗಿದರು. ಅಷ್ಟು ಅಧ್ಯಯನಗಳನ್ನು ಆರಂಭಿಸಲು ಆ ಸಹೋದರಿಗೆ ಯಾವುದು ಸಹಾಯ ಮಾಡಿತು? ಮೊದಲ ಭೇಟಿಯಲ್ಲಿ ಆಸಕ್ತಿ ತೋರಿಸಿದ ವ್ಯಕ್ತಿ ಪುನರ್ಭೇಟಿಯಲ್ಲಿ ಸಿಗದಿದ್ದಾಗ ಆ ವ್ಯಕ್ತಿ ಸಿಗುವ ವರೆಗೂ ಭೇಟಿ ಮಾಡುತ್ತಾ ಇರುವಂತೆ ಪಯನೀಯರ್‌ ಶಾಲೆ ಕಲಿಸಿತು. ಆ ಅಂಶ ಅವಳ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಬೈಬಲ್‌ ಸತ್ಯವನ್ನು ಕಲಿಯಲು ಅನೇಕರಿಗೆ ಸಹಾಯ ಮಾಡಿದ ಇನ್ನೊಬ್ಬ ಸಹೋದರಿ ಹೀಗನ್ನುತ್ತಾಳೆ: “ಯೆಹೋವನ ಕುರಿತು ತಿಳಿಯಲು ಬಯಸುವ ಜನರಿಗೆ ಸಹಾಯ ಮಾಡಬೇಕಾದರೆ ಪುನರ್ಭೇಟಿಗಳನ್ನು ಮಾಡುವುದರಲ್ಲಿ ಪಟ್ಟುಹಿಡಿಯಬೇಕು.”

ನಾವು ಕೂಡಲೇ ಪುನರ್ಭೇಟಿ ಮಾಡುವ ಮೂಲಕ ಬೈಬಲಿನ ಕುರಿತು ಕಲಿಯಲು ಬಯಸುವವರಲ್ಲಿ ನಮಗೆ ನಿಜ ಆಸಕ್ತಿಯಿದೆಯೆಂದು ತೋರಿಸುತ್ತೇವೆ

ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಮತ್ತು ಬೈಬಲ್‌ ಅಧ್ಯಯನಗಳನ್ನು ನಡೆಸಲಿಕ್ಕಾಗಿ ಶ್ರದ್ಧಾಪೂರ್ವಕ ಪ್ರಯತ್ನ ಹಾಕಬೇಕು. ಆದರೆ ನಮಗೆ ನಮ್ಮ ಶ್ರಮಕ್ಕಿಂತ ಎಷ್ಟೋ ಮಿಗಿಲಾದ ಪ್ರತಿಫಲ ಸಿಗುತ್ತದೆ. ಸಾರುವ ಕೆಲಸಕ್ಕೆ ನಮ್ಮನ್ನು ಕೊಟ್ಟುಕೊಳ್ಳುವುದರಿಂದ ನಾವು ಇತರರಿಗೆ ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು’ ನೆರವಾಗುತ್ತೇವೆ. ಇದರಿಂದ ಅವರು ರಕ್ಷಣೆ ಪಡೆಯುತ್ತಾರೆ. (1 ತಿಮೊ. 2:3, 4) ಇದು ನಮಗೆ ಕೊಡುವ ಸಂತೃಪ್ತಿ ಮತ್ತು ಸಂತೋಷ ಸರಿಸಾಟಿಯಿಲ್ಲದ್ದು.