ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಏಪ್ರಿಲ್ 2014

ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!

ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!

‘“ಯೆಹೋವನು ನನ್ನ ಸಹಾಯಕನು” ಎಂದು ಧೈರ್ಯವಾಗಿ ಹೇಳಿ.’—ಇಬ್ರಿ. 13:6.

1, 2. ಸ್ವದೇಶಕ್ಕೆ ಹಿಂತೆರಳಿದ ಮೇಲೆ ಅನೇಕರು ಯಾವ ಸವಾಲುಗಳನ್ನು ಎದುರಿಸುತ್ತಾರೆ? (ಮೇಲಿರುವ ಚಿತ್ರ ನೋಡಿ.)

“ವಿದೇಶದಲ್ಲಿ ನಾನು ದೊಡ್ಡ ಹುದ್ದೆಯಲ್ಲಿದ್ದೆ. ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಿದ್ದೆ. ಆದರೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದಾಗ ನಾನು ಕುಟುಂಬದೊಂದಿಗಿದ್ದು ಅವರನ್ನು ಶಾರೀರಿಕವಾಗಿ ಮಾತ್ರವಲ್ಲ ಆಧ್ಯಾತ್ಮಿಕವಾಗಿಯೂ ನೋಡಿಕೊಳ್ಳುವ ಪ್ರಾಮುಖ್ಯ ಜವಾಬ್ದಾರಿ ನನಗಿದೆ ಎಂದು ಕಲಿತೆ. ಹಾಗಾಗಿ ಸ್ವದೇಶಕ್ಕೆ ಮರಳಿ ಬಂದೆ” ಎಂದು ನೆನಪನ್ನು ಹಂಚಿಕೊಳ್ಳುತ್ತಾನೆ ಎಡ್ವಾರ್ಡೋ. *ಎಫೆ. 6:4.

2 ತಾನು ತಕ್ಕೊಂಡ ಈ ಹೆಜ್ಜೆಯನ್ನು ಯೆಹೋವನು ಮೆಚ್ಚುತ್ತಾನೆ ಎಂದು ಎಡ್ವಾರ್ಡೋಗೆ ಗೊತ್ತಿತ್ತು. ಆದರೆ ಅವನ ಮುಂದಿನ ಜೀವನ ಅಷ್ಟು ಸುಲಭವಾಗಿರಲಿಲ್ಲ. ಹಿಂದಿನ ಲೇಖನದಲ್ಲಿ ಹೇಳಲಾದ ಮರ್ಲೀನಳಂತೆ ಎಡ್ವಾರ್ಡೋ ಕೂಡ ಕುಟುಂಬ ಬಂಧವನ್ನು ಕಟ್ಟುವುದನ್ನು ಮತ್ತೆ ಮೊದಲಿನಿಂದ ಶುರುಮಾಡಬೇಕಿತ್ತು. ಕಡಿಮೆ ಸಂಬಳದಲ್ಲಿ ಮನೆ ನಡೆಸಬೇಕಿತ್ತು. ಅವನು ಇದನ್ನೆಲ್ಲ ಹೇಗೆ ಸಂಭಾಳಿಸಿದನು? ಸಭೆಯವರು ಅವನಿಗೆ ಹೇಗೆ ಸಹಾಯ ಮಾಡಿದರು?

ಆಧ್ಯಾತ್ಮಿಕ ಮತ್ತು ಕೌಟುಂಬಿಕ ಹಾನಿಯನ್ನು ಸರಿಪಡಿಸಿ

3. ಹೆತ್ತವರಲ್ಲೊಬ್ಬರು ಮನೆಯಿಂದ ದೂರವಿರುವುದು ಮಕ್ಕಳನ್ನು ಹೇಗೆ ಬಾಧಿಸುತ್ತದೆ?

3 “ಮಕ್ಕಳಿಗೆ ನನ್ನ ಮಾರ್ಗದರ್ಶನೆ ಮತ್ತು ಪ್ರೀತಿ ತುಂಬ ಬೇಕಾಗಿದ್ದ ಸಮಯದಲ್ಲೇ ನಾನವರನ್ನು ನಿರ್ಲಕ್ಷಿಸಿದ್ದೆ. ನಾನು ಅವರಿಗೆ ಬೈಬಲ್‌ ಕಥೆಗಳನ್ನು ಓದಿ ಹೇಳಲಿಕ್ಕಾಗಲಿಲ್ಲ, ಅವರ ಜೊತೆ ಪ್ರಾರ್ಥಿಸಲಿಕ್ಕಾಗಲಿಲ್ಲ, ಅಪ್ಪಿಮುದ್ದಾಡಲಿಲ್ಲ, ಅವರೊಟ್ಟಿಗೆ ಸೇರಿ ಆಟವಾಡಲಿಲ್ಲ” ಎಂದು ಮರುಗುತ್ತಾರೆ ಎಡ್ವಾರ್ಡೋ. (ಧರ್ಮೋ. 6:7) ಅವನ ದೊಡ್ಡ ಮಗಳು ಆ್ಯನ ತನಗಾದ ಅನಿಸಿಕೆಗಳನ್ನು ಹೀಗೆ ಹೇಳುತ್ತಾಳೆ: “ಅಪ್ಪ ನಮ್ಮ ಜೊತೆ ಇಲ್ಲದ್ದರಿಂದ  ಏನೋ ಭಯ, ಅಭದ್ರತೆಯ ಭಾವನೆ ನನ್ನಲ್ಲಿತ್ತು. ಅವರ ಮುಖ ಮತ್ತು ಧ್ವನಿಯಷ್ಟೇ ನನಗೆ ಪರಿಚಿತವಾಗಿತ್ತು. ಅವರು ಹಿಂತಿರುಗಿ ಮನೆಗೆ ಬಂದು ಪ್ರೀತಿಯಿಂದ ನನ್ನನ್ನು ಅಪ್ಪಿಕೊಂಡಾಗ ನನ್ನಲ್ಲೇನೂ ಭಾವನೆ ಬರಲಿಲ್ಲ, ಮುಜುಗರವೆನಿಸಿತು.”

4. ತಂದೆಯು ದೂರದಲ್ಲಿದ್ದರೆ ಕುಟುಂಬದ ಶಿರಸ್ಸಾಗಿ ಅವನಿಗಿರುವ ಪಾತ್ರವನ್ನು ನಿರ್ವಹಿಸುವುದು ಹೇಗೆ ಕಷ್ಟವಾಗುತ್ತದೆ?

4 ತಂದೆಯು ಮನೆಯಿಂದ ದೂರವಿದ್ದರೆ ಕುಟುಂಬದ ಶಿರಸ್ಸಾಗಿ ಅವನಿಗಿರುವ ಪಾತ್ರವನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಎಡ್ವಾರ್ಡೋನ ಹೆಂಡತಿ ರೂಬಿ ಏನನ್ನುತ್ತಾಳೆ ಕೇಳಿ: “ಅಪ್ಪ-ಅಮ್ಮ ಇಬ್ಬರ ಪಾತ್ರವನ್ನೂ ನಾನು ವಹಿಸಬೇಕಿತ್ತು. ಕುಟುಂಬದಲ್ಲಿ ಹೆಚ್ಚಿನ ನಿರ್ಣಯಗಳನ್ನು ನಾನೇ ಮಾಡುತ್ತಿದ್ದೆ. ಹಾಗಾಗಿ ನನ್ನ ಯಜಮಾನರು ಮನೆಗೆ ಹಿಂದೆ ಬಂದಾಗ ಬೈಬಲ್‌ ಕೇಳಿಕೊಳ್ಳುವಂಥ ಅಧೀನತೆಯನ್ನು ತೋರಿಸಲು ನಾನು ಕಲಿಯಬೇಕಿತ್ತು. ಈಗ ಕೂಡ ಕೆಲವೊಮ್ಮೆ ಯಜಮಾನರು ನಮ್ಮೊಟ್ಟಿಗಿದ್ದಾರೆ ಎನ್ನುವುದನ್ನು ಮರೆತುಬಿಡುತ್ತೇನೆ.” (ಎಫೆ. 5:22, 23) ಎಡ್ವಾರ್ಡೋ ಕೂಡಿಸಿ ಹೇಳುವುದೇನೆಂದರೆ, “ನನ್ನ ಮೂವರೂ ಹೆಣ್ಣುಮಕ್ಕಳು ಯಾವುದಕ್ಕಾದರೂ ಅನುಮತಿ ಬೇಕಾದರೆ ರೂಢಿ ಪ್ರಕಾರ ಅಮ್ಮನ ಹತ್ತಿರ ಹೋಗುತ್ತಿದ್ದರು. ಹೆತ್ತವರಾಗಿ ನಾವಿಬ್ಬರು ಕೂಡಿ ನಿರ್ಣಯಗಳನ್ನು ಮಾಡುತ್ತೇವೆಂದು ಮಕ್ಕಳಿಗೆ ತೋರಿಸಬೇಕಾಗಿತ್ತು. ಮಾತ್ರವಲ್ಲ ಬೈಬಲ್‌ ಹೇಳುವಂಥ ರೀತಿಯಲ್ಲಿ ಶಿರಸ್ಸುತನ ವಹಿಸುವುದನ್ನು ನಾನು ಕಲಿಯಬೇಕಿತ್ತು.”

5. (ಎ) ಕುಟುಂಬದಿಂದ ದೂರವಿದ್ದದರಿಂದ ಆದ ಹಾನಿಯನ್ನು ಸರಿಪಡಿಸಲು ಎಡ್ವಾರ್ಡೋ ಏನು ಮಾಡಿದನು? (ಬಿ) ಫಲಿತಾಂಶ ಏನಾಯಿತು?

5 ಹೆಂಡತಿ ಮಕ್ಕಳೊಂದಿಗೆ ತನ್ನ ಬಂಧವನ್ನು ಪುನಃ ಬೆಸೆಯಲು ಮತ್ತು ಆಧ್ಯಾತ್ಮಿಕವಾಗಿ ಅವರನ್ನು ಬಲಗೊಳಿಸಲು ಎಡ್ವಾರ್ಡೋ ತನ್ನಿಂದಾದುದೆಲ್ಲ ಮಾಡಿದನು. “ನನ್ನ ಮಾತು ಮತ್ತು ಮಾದರಿಯ ಮೂಲಕ ಸತ್ಯವನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸಬೇಕೆನ್ನುವುದು ನನ್ನ ಗುರಿಯಾಗಿತ್ತು. ಯೆಹೋವನನ್ನು ನಾನು ಪ್ರೀತಿಸುತ್ತೇನೆಂದು ಬಾಯಲ್ಲಿ ಹೇಳುವುದಷ್ಟೇ ಅಲ್ಲ ನಡತೆಯಲ್ಲಿ ತೋರಿಸಲು ನಿಶ್ಚಯಿಸಿದೆ.” (1 ಯೋಹಾ. 3:18) ನಂಬಿಕೆಯಿಂದ ಎಡ್ವಾರ್ಡೋ ಹಾಕಿದ ಶ್ರಮವನ್ನು ಯೆಹೋವನು ಆಶೀರ್ವದಿಸಿದನೇ? ಉತ್ತರವು ಮಗಳು ಆ್ಯನಳ ಮಾತಿನಲ್ಲಿದೆ: “ಒಳ್ಳೇ ತಂದೆಯಾಗಿರಲು ಮತ್ತು ನಮ್ಮೊಂದಿಗೆ ಆಪ್ತವಾಗಿರಲು ಪಪ್ಪ ಮಾಡುತ್ತಿದ್ದ ಪ್ರಯತ್ನಗಳನ್ನೆಲ್ಲ ನೋಡಿ ನನಗೆ ಅವರ ಬಗ್ಗೆಯಿದ್ದ ಅಭಿಪ್ರಾಯ, ಭಾವನೆ ಬದಲಾಯಿತು. ಸಭೆಯಲ್ಲೂ ಪ್ರಗತಿ ಮಾಡಿ ಸೇವಾ ಸುಯೋಗಗಳಿಗೆ ಅರ್ಹರಾಗಲು ಪ್ರಯತ್ನಿಸುತ್ತಿದ್ದಾಗ ಅಂಥ ಪಪ್ಪ ನಮಗಿರೋದಕ್ಕಾಗಿ ಹೆಮ್ಮೆಯೆನಿಸಿತು. ಈ ಲೋಕ ನಮ್ಮನ್ನು ಯೆಹೋವನಿಂದ ದೂರ ಎಳೆಯಲು ಪ್ರಯತ್ನಿಸುತ್ತಿತ್ತು, ಆದರೆ ಹೆತ್ತವರ ಪೂರ್ತಿ ಗಮನ ಸತ್ಯದ ಮೇಲೆ ಕೇಂದ್ರಿತವಾಗಿತ್ತು. ನಾವೂ ಅವರಂತಿರಲು ಪ್ರಯತ್ನಿಸಿದೆವು. ಯಾವತ್ತೂ ನಮ್ಮನ್ನು ಬಿಟ್ಟು ದೂರ ಹೋಗುವುದಿಲ್ಲವೆಂದು ಪಪ್ಪ ಮಾತುಕೊಟ್ಟರು ಮತ್ತು ಹೇಳಿದ ಹಾಗೆ ನಡೆದುಕೊಂಡರು. ಒಂದುವೇಳೆ ಅವರು ನಮ್ಮನ್ನು ಪುನಃ ಬಿಟ್ಟು ಹೋಗಿರುತ್ತಿದ್ದರೆ ನಾನಿಂದು ಯೆಹೋವನ ಸಂಘಟನೆಯಲ್ಲಿ ಇರುತ್ತಿರಲಿಲ್ಲವೋ ಏನೋ.”

ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಿ

6. ಬಾಲ್ಕನ್‍ನ ಯುದ್ಧದ ಸಮಯದಲ್ಲಿ ಅನೇಕ ಹೆತ್ತವರು ಯಾವ ಪಾಠ ಕಲಿತರು?

6 ಬಾಲ್ಕನ್‍ನಲ್ಲಿ ನಡೆದ ಯುದ್ಧದ ಸಮಯದಲ್ಲಿ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಅಲ್ಲಿನ ಯೆಹೋವನ ಸಾಕ್ಷಿಗಳ ಮಕ್ಕಳು ಸಂತೋಷವಾಗಿದ್ದರು ಎಂದು ಕೆಲವು ಅನುಭವಗಳು ತೋರಿಸುತ್ತವೆ. ಏಕೆ? ಅವರ ಅಪ್ಪಅಮ್ಮ ನೌಕರಿಗೆ ಹೋಗಲು ಆಗದ ಕಾರಣ ಮನೆಯಲ್ಲೇ ಉಳಿಯಬೇಕಾಯಿತು. ಹಾಗಾಗಿ ಹೆಚ್ಚು ಸಮಯ ಮಕ್ಕಳೊಂದಿಗೆ ಕಳೆದರು. ಅವರೊಂದಿಗೆ ಆಟವಾಡಿದರು, ಮಾತಾಡಿದರು, ಕಲಿಸಿದರು. ಮಕ್ಕಳ ನಲಿವಿಗೆ ಇದೇ ಕಾರಣವಾಗಿತ್ತು. ಇದು ಯಾವ ಪಾಠ ಕಲಿಸುತ್ತದೆ? ಹಣ ಅಥವಾ ಉಡುಗೊರೆಗಳಿಗಿಂತ ಮಕ್ಕಳು ಬಯಸುವುದು ಅಪ್ಪಅಮ್ಮ ತಮ್ಮ ಜೊತೆ ಇರಬೇಕೆಂದೇ. ಹೌದು, ಬೈಬಲ್‌ ಹೇಳುವಂತೆ ಹೆತ್ತವರು ಮಕ್ಕಳಿಗೆ ಗಮನ ಮತ್ತು ತರಬೇತಿ ಕೊಡುವಲ್ಲಿ ಮಕ್ಕಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ.—ಜ್ಞಾನೋ. 22:6.

7, 8. (ಎ) ವಿದೇಶದಿಂದ ಹಿಂತೆರಳಿದ ಕೆಲವು ಹೆತ್ತವರು ಯಾವ ತಪ್ಪನ್ನು ಮಾಡುತ್ತಾರೆ? (ಬಿ) ಮಕ್ಕಳೊಂದಿಗೆ ಪುನಃ ಒಳ್ಳೇ ಬಂಧವನ್ನು ಬೆಸೆಯಲು ಹೆತ್ತವರು ಏನು ಮಾಡಸಾಧ್ಯವಿದೆ?

7 ವಿದೇಶದಿಂದ ಹಿಂತೆರಳಿದ ಕೆಲವು ಹೆತ್ತವರು ತಮ್ಮ ಮಕ್ಕಳ ವರ್ತನೆ ನೋಡಿ ಆಘಾತಗೊಂಡಿದ್ದಾರೆ. ಅಪ್ಪಅಮ್ಮ ಮನೆಯಲ್ಲಿರುವುದು ಗೊತ್ತೇ ಇಲ್ಲವೇನೋ ಎಂಬಂತೆ ಅಥವಾ ಅವರ ಮೇಲೆ ಭರವಸೆಯೇ ಇಲ್ಲವೆಂಬಂತೆ ಮಕ್ಕಳು ನಡೆದುಕೊಂಡಿದ್ದಾರೆ. ಆಗ ತಂದೆ/ತಾಯಿ “ನಿನಗೋಸ್ಕರ ನಾನೆಷ್ಟು ತ್ಯಾಗ ಮಾಡಿದ್ದೇನೆ. ನಿನಗೆ ಒಂಚೂರು ಕೃತಜ್ಞತೆ ಇಲ್ಲವಾ?” ಎಂದು ರೇಗಬಹುದು. ಆದರೆ, ಮಕ್ಕಳು ಹಾಗೆ ನಡೆದುಕೊಳ್ಳಲು ಬಹುಮಟ್ಟಿಗೆ ಆ ತಂದೆ ಅಥವಾ ತಾಯಿಯೇ ಹೊಣೆಯಾಗಿದ್ದಾರೆ. ಆದರೆ ಪ್ರಶ್ನೆಯೇನೆಂದರೆ ಆ ಸಮಸ್ಯೆಯನ್ನು ಸರಿಪಡಿಸಲು ಮುಂದೇನು ಮಾಡಬೇಕು?

8 ನೀವು ಒಂದುವೇಳೆ ಅಂಥ ಸನ್ನಿವೇಶದಲ್ಲಿದ್ದರೆ ಯೆಹೋವನಿಗೆ ಪ್ರಾರ್ಥಿಸಿ. ನಿಮ್ಮ ಕುಟುಂಬದವರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನಿಮಗೆ ಅವರ ಮೇಲೆ ಕಳಕಳಿಯಿದೆ ಎನ್ನುವುದನ್ನು ತೋರಿಸಲು ಸಹಾಯ ಮಾಡುವಂತೆ ಕೇಳಿಕೊಳ್ಳಿ. ಅನಂತರ ನಿಮ್ಮ ಕುಟುಂಬದವರೊಂದಿಗೆ ಮಾತಾಡುವಾಗ ಸಮಸ್ಯೆ ತಲೆದೋರಲು ನೀವು ಸಹ ಕಾರಣರಾಗಿದ್ದೀರಿ ಎನ್ನುವುದನ್ನು ಒಪ್ಪಿಕೊಳ್ಳಿ. ಮನಃಪೂರ್ವಕವಾಗಿ ಕ್ಷಮೆ ಕೇಳುವುದು ಕೂಡ ನಿಮಗೆ ನೆರವಾಗುವುದು. ಕುಟುಂಬದ ಸನ್ನಿವೇಶವನ್ನು ಉತ್ತಮಗೊಳಿಸಲು ನೀವು ಪ್ರಯತ್ನ ಹಾಕುತ್ತಾ ಇರುವುದನ್ನು ನಿಮ್ಮ ಸಂಗಾತಿ  ಮತ್ತು ಮಕ್ಕಳು ನೋಡುವಾಗ ನಿಮಗೆ ನಿಜವಾಗಿಯೂ ಕುಟುಂಬದ ಬಗ್ಗೆ ಕಾಳಜಿಯಿದೆ ಎಂದು ಅವರು ಅರಿತುಕೊಳ್ಳುವರು. ನೀವು ಪ್ರಯತ್ನವನ್ನು ಕೈಬಿಡದಿದ್ದರೆ ಮತ್ತು ತಾಳ್ಮೆಗೆಡದಿದ್ದರೆ ದಿನಕಳೆದಂತೆ ಮನೆಮಂದಿಯ ಪ್ರೀತಿ, ಗೌರವವನ್ನು ಗಳಿಸುವಿರಿ.

‘ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸಿ’

9. ಕುಟುಂಬದವರಿಗೆ ‘ಅಗತ್ಯವಿರುವುದನ್ನು ಒದಗಿಸಲಿಕ್ಕಾಗಿ’ ಐಶ್ವರ್ಯದ ಬೆನ್ನುಹತ್ತಬೇಕಿಲ್ಲ ಏಕೆ?

9 ವೃದ್ಧ ಕ್ರೈಸ್ತರಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಆಗದಿದ್ದಾಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು “ತಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ ಸಲ್ಲತಕ್ಕದ್ದನ್ನು ಸಲ್ಲಿಸುತ್ತಾ” ಇರಬೇಕು ಎಂದು ಅಪೊಸ್ತಲ ಪೌಲನು ಹೇಳಿದನು. ಮುಂದುವರಿಸಿ ಪೌಲನು ಎಲ್ಲ ಕ್ರೈಸ್ತರಿಗೆ ದಿನ ದಿನಕ್ಕೆ ಏನು ಬೇಕಿದೆಯೋ ಅಂದರೆ ಊಟ, ಬಟ್ಟೆ, ವಸತಿ ಇದರಲ್ಲೇ ತೃಪ್ತರಾಗಿರುವಂತೆ ಬುದ್ಧಿಹೇಳಿದನು. ಉತ್ತಮ ಮಟ್ಟದ ಜೀವನ ನಡೆಸುವ ಅಥವಾ ಭವಿಷ್ಯಕ್ಕಾಗಿ ಹಣ ಕೂಡಿಸಿಡುವ ಗುರಿಯನ್ನಿಟ್ಟು ಅದಕ್ಕಾಗಿ ಹೆಣಗಾಡುತ್ತಿರಬಾರದೆಂದು ಎಚ್ಚರಿಸಿದನು. (1 ತಿಮೊಥೆಯ 5:4, 8; 6:6-10 ಓದಿ.) ಮನೆಮಂದಿಗೆ ‘ಅಗತ್ಯವಿರುವುದನ್ನು ಒದಗಿಸಲಿಕ್ಕಾಗಿ’ ಕ್ರೈಸ್ತನೊಬ್ಬನು ಈ ಲೋಕದಲ್ಲಿ ಐಶ್ವರ್ಯವಂತನಾಗಲು ಪ್ರಯತ್ನಿಸುವ ಅಗತ್ಯವಿಲ್ಲ. ಏಕೆಂದರೆ ಈ ಲೋಕ ಬೇಗನೆ ಗತಿಸಿಹೋಗಲಿದೆ. (1 ಯೋಹಾ. 2:15-17) ‘ಐಶ್ವರ್ಯದ ಮೋಸಕರ ಪ್ರಭಾವವಾಗಲಿ’ ‘ಜೀವನದ ಚಿಂತೆಗಳಾಗಲಿ’ ಹೊಸ ಲೋಕದಲ್ಲಿ ಸಿಗಲಿರುವ ‘ವಾಸ್ತವವಾದ ಜೀವನದ ಮೇಲೆ’ ನಮ್ಮ ಕುಟುಂಬಕ್ಕಿರುವ ‘ಭದ್ರ ಹಿಡಿತವನ್ನು’ ಸಡಿಲಗೊಳಿಸುವಂತೆ ನಾವು ಬಿಡಬಾರದು.—ಮಾರ್ಕ 4:19; ಲೂಕ 21:34-36; 1 ತಿಮೊ. 6:19.

10. ಸಾಲ ಮಾಡದಿರುವುದು ಏಕೆ ಜಾಣ್ಮೆಯಾಗಿದೆ?

10 ಯೆಹೋವನಿಗೆ ಗೊತ್ತು ನಮಗೆ ಹಣ ಸ್ವಲ್ಪಮಟ್ಟಿಗೆ ಬೇಕು ಎಂದು. ಆದರೆ ದೈವಿಕ ವಿವೇಕ ಕೊಡುವಂಥ ರೀತಿಯ ಸಹಾಯ ಮತ್ತು ಸಂರಕ್ಷಣೆಯನ್ನು ಹಣ ಕೊಡಲಾರದು. (ಪ್ರಸಂ. 7:12; ಲೂಕ 12:15) ಹೆಚ್ಚಿನವರು ವಿದೇಶಕ್ಕೆ ಹೋಗಲು ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಸರಿಯಾಗಿ ಯೋಚಿಸಿರುವುದಿಲ್ಲ. ಅಲ್ಲಿಗೆ ಹೋದ ಮೇಲೆ ಹಣ ಸಂಪಾದಿಸಲು ಆಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಅಷ್ಟೇ ಅಲ್ಲ ಇದರಿಂದ ಇನ್ನೂ ಹೆಚ್ಚು ಅಪಾಯಗಳಿವೆ. ವಿದೇಶಕ್ಕೆ ಹೋದ ಅನೇಕರು ವಾಪಸ್ಸಾಗುವಾಗ ಹೆಚ್ಚು ಸಾಲದಲ್ಲಿ ಮುಳುಗಿರುತ್ತಾರೆ. ಹೀಗೆ ದೇವರ ಸೇವೆ ಹೆಚ್ಚು ಮಾಡಲು ಶಕ್ತರಾಗುವ ಬದಲು ಸಾಲಕೊಟ್ಟವರ ಅಡಿಯಾಳಾಗುತ್ತಾರೆ. (ಜ್ಞಾನೋಕ್ತಿ 22:7 ಓದಿ.) ಹಾಗಾಗಿ ಸಾಲ ಮಾಡಲಿಕ್ಕೇ ಹೋಗದಿರುವುದು ಜಾಣ್ಮೆಯಾಗಿದೆ.

11. ಅಗತ್ಯವಾದವುಗಳಿಗೆ ಮಾತ್ರ ಹಣ ಖರ್ಚುಮಾಡಲು ನಿರ್ಧರಿಸುವುದರಿಂದ ಹಣದ ತಾಪತ್ರಯವನ್ನು ಹೇಗೆ ಕಡಿಮೆ ಮಾಡಬಹುದು?

11 ಮನೆಗೆ ಮರಳಿದ ಎಡ್ವಾರ್ಡೋ ಕುಟುಂಬದೊಂದಿಗೇ ಉಳಿಯಲು ಆಗುವಂತೆ ಹಣ ಖರ್ಚು ಮಾಡುವ ವಿಷಯದಲ್ಲಿ ಜಾಗ್ರತೆ ವಹಿಸಿದನು. ಅವನು ಮತ್ತು ಅವನ ಹೆಂಡತಿ ಸೇರಿ ನಿಜವಾಗಿಯೂ ಅಗತ್ಯವಿರುವ ವಸ್ತುಗಳಿಗಾಗಿ ಇಂತಿಷ್ಟೇ ಹಣವನ್ನು ಖರ್ಚುಮಾಡಬೇಕೆಂದು ನಿರ್ಧರಿಸಿದರು. ಇದರಿಂದ ಮೊದಲಿನಂತೆ ಇಷ್ಟಬಂದದ್ದೆಲ್ಲವನ್ನು ಕೊಂಡುಕೊಳ್ಳಲು ಅವರಿಗೆ ಆಗಲಿಲ್ಲ. ಆದರೆ ಮನೆಯಲ್ಲಿ ಎಲ್ಲರೂ ಸಹಕರಿಸಿದರು, ಅನಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದರು. * ಎಡ್ವಾರ್ಡೋ ಹೀಗನ್ನುತ್ತಾನೆ: “ಉದಾಹರಣೆಗೆ ನನ್ನ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಒಳ್ಳೇ ಸರ್ಕಾರಿ ಶಾಲೆಗೆ ಸೇರಿಸಿದೆ.” ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಡ್ಡಿಬರದಂಥ ನೌಕರಿ ಸಿಗುವಂತೆ ಕುಟುಂಬವಾಗಿ ಅವರು ಪ್ರಾರ್ಥಿಸಿದರು. ಅವರ ಪ್ರಾರ್ಥನೆಗಳನ್ನು ಯೆಹೋವನು ಉತ್ತರಿಸಿದನೇ?

12, 13. (ಎ) ಕುಟುಂಬವನ್ನು ನೋಡಿಕೊಳ್ಳಲು ಎಡ್ವಾರ್ಡೋ ಏನು ಮಾಡಿದನು? (ಬಿ) ಸರಳ ಜೀವನ ನಡೆಸಬೇಕೆಂಬ ಅವನ ದೃಢಸಂಕಲ್ಪವನ್ನು ಯೆಹೋವನು ಹೇಗೆ ಆಶೀರ್ವದಿಸಿದನು?

12 “ಎರಡು ವರ್ಷದ ವರೆಗೆ ನನ್ನ ಸಂಪಾದನೆ ಮನೆ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸಂಬಳ ತುಂಬ ಕಡಿಮೆಯಿತ್ತು. ಕೂಡಿಸಿಟ್ಟಿದ್ದ ಹಣ ದಿನದಿನಕ್ಕೆ ಖಾಲಿಯಾಗುತ್ತಿತ್ತು. ಕೆಲಸದಿಂದ ತುಂಬ ಸುಸ್ತಾಗಿ ಬಿಡುತ್ತಿದ್ದೆ. ಆದರೆ ನನ್ನ ಕುಟುಂಬದೊಂದಿಗೆ ಕೂಟಗಳಿಗೆ, ಸೇವೆಗೆ ಹೋಗಲು ಆಗುತ್ತಿತ್ತು” ಎನ್ನುತ್ತಾನೆ ಎಡ್ವಾರ್ಡೋ. ಮಾತ್ರವಲ್ಲ ತನ್ನನ್ನು ಕುಟುಂಬದಿಂದ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ದೂರವಿಡುವ ನೌಕರಿ ಸೇರುವ ಯೋಚನೆ ಕೂಡ ಮಾಡಬಾರದೆಂದು ಅವನು ನಿರ್ಧರಿಸಿದ. “ಬದಲಿಗೆ ನಾನು ಬೇರೆ ಬೇರೆ ರೀತಿಯ ಕೆಲಸಗಳನ್ನು ಕಲಿತೆ. ಇದರಿಂದ ಒಂದು ಕೆಲಸ ಇಲ್ಲದಿದ್ದಾಗ ಇನ್ನೊಂದು ಕೆಲಸ ಮಾಡಿ ಜೀವನ ಸಾಗಿಸಲು ಆಗುತ್ತಿದೆ” ಎನ್ನುತ್ತಾನೆ ಅವನು.

ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ಆಗುವಂತೆ ನೀವು ಬೇರೆ ಬೇರೆ ಕೆಲಸಗಳನ್ನು ಕಲಿಯಬಹುದೊ? (ಪ್ಯಾರ 12 ನೋಡಿ)

13 ಹಿಂದಿದ್ದ ಸಾಲವನ್ನು ತೀರಿಸಲು ತುಂಬ ಸಮಯ ಹಿಡಿದ ಕಾರಣ ಅವನು ತುಂಬ ಬಡ್ಡಿಯನ್ನು ಕಟ್ಟಬೇಕಾಯಿತು. ಇದಕ್ಕಾಗಿ ಎಡ್ವಾರ್ಡೋ ವಿಷಾದಿಸಿದನೇ? ಇಲ್ಲ, ಯೆಹೋವನು ಬಯಸುವಂತೆ ಕುಟುಂಬದ ಜೊತೆಯಲ್ಲಿ ಆತನನ್ನು ಆರಾಧಿಸಲಿಕ್ಕಾಗಿ ತಾನು ಪಾವತಿಸಬೇಕಾದ ಚಿಕ್ಕ ಮೊತ್ತವಾಗಿ ಅವನದನ್ನು ಕಂಡನು. ಎಡ್ವಾರ್ಡೋ ಹೀಗನ್ನುತ್ತಾನೆ: “ವಿದೇಶದಲ್ಲಿ ಸಿಗುತ್ತಿದ್ದ ಸಂಬಳದ 10 ಪರ್ಸೆ೦ಟ್‌ ಕೂಡ ನನಗೀಗ ಸಿಗುತ್ತಿಲ್ಲ. ಆದರೆ ನಾವೆಂದೂ ಹಸಿವೆಯಿಂದ ಮಲಗುವುದಿಲ್ಲ. ಏಕೆಂದರೆ ‘ಯೆಹೋವನ ಹಸ್ತವು ಮೋಟುಗೈಯಲ್ಲ.’ ನಮ್ಮಿಂದ ಪಯನೀಯರ್‌ ಸೇವೆ ಆರಂಭಿಸಲು ಕೂಡ ಆಗಿದೆ. ವಿಶೇಷವೇನೆಂದರೆ, ಅದರ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕುಟುಂಬವನ್ನು ನೋಡಿಕೊಳ್ಳುವುದು ಸುಲಭವಾಗಿದೆ.”—ಯೆಶಾ. 59:1.

 ಕುಟುಂಬದವರ ಒತ್ತಡವನ್ನು ನಿಭಾಯಿಸಿ

14, 15. (ಎ) ಆಧ್ಯಾತ್ಮಿಕ ವಿಷಯಗಳಿಗಿಂತ ಭೌತಿಕ ವಿಷಯಗಳಿಗೆ ಮಹತ್ವಕೊಡುವಂತೆ ಸಂಬಂಧಿಕರು ಒತ್ತಡ ಹಾಕುವಲ್ಲಿ ಏನು ಮಾಡಬಹುದು? (ಬಿ) ನಾವು ಒಳ್ಳೇ ಮಾದರಿಯಿಡುವಲ್ಲಿ ಪರಿಣಾಮ ಏನಾಗಬಹುದು?

14 ಅನೇಕ ಸ್ಥಳಗಳಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಹಣ, ಉಡುಗೊರೆಗಳನ್ನು ಕೊಡಲೇಬೇಕಾದ ರೂಢಿ ಜನರಲ್ಲಿದೆ. “ಅದು ನಮ್ಮ ಸಂಸ್ಕೃತಿ” ಎನ್ನುತ್ತಾನೆ ಎಡ್ವಾರ್ಡೋ. ಈ ಸನ್ನಿವೇಶವನ್ನು ಅವನು ಹೇಗೆ ನಿಭಾಯಿಸಿದನು? ಅವನೇ ಹೇಳುವುದು: “ಆ ರೀತಿ ಕೊಡಲು ನಮಗೆ ಖುಷಿಯಾಗುತ್ತದೆ. ಆದರೆ ಅದಕ್ಕೂ ಒಂದು ಮಿತಿಯಿದೆ. ನಾನು ಹೆಂಡತಿ-ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಮತ್ತು ರೂಢಿಗಳನ್ನು ನಿರ್ಲಕ್ಷಿಸಲಾರೆ, ಹಾಗಾಗಿ ನನ್ನ ಕೈಯಲ್ಲಿ ಆದದ್ದನ್ನು ಕೊಡುತ್ತೇನೆಂದು ನನ್ನ ಸಂಬಂಧಿಕರಿಗೆ ಜಾಣ್ಮೆಯಿಂದ ವಿವರಿಸಿದೆ.”

15 ವಿದೇಶದಲ್ಲಿ ದುಡಿಯುವ ಅವಕಾಶಗಳನ್ನು ಯಾರಾದರೂ ಕೈಬಿಟ್ಟಾಗ ಅಥವಾ ಕುಟುಂಬದೊಂದಿಗೆ ಇರಲಿಕ್ಕಾಗಿ ವಿದೇಶದಿಂದ ಹಿಂದಿರುಗಿ ಬಂದಾಗ ಬಂಧುಬಳಗದವರು ನಿರಾಶರಾಗಬಹುದು, ಹೀಯಾಳಿಸಬಹುದು, ಕಿಡಿಕಾರಬಹುದು. ತಮಗೆ ಸಿಗುತ್ತಿದ್ದ ಹಣ ಕೈತಪ್ಪಿತಲ್ಲಾ ಎಂಬ ಕಾರಣಕ್ಕಾಗಿ ‘ಸ್ವಾರ್ಥಿ’ ಎಂಬ ಹಣೆಪಟ್ಟಿಯನ್ನೂ ಹಚ್ಚಬಹುದು. (ಜ್ಞಾನೋ. 19:6, 7) ಎಡ್ವಾರ್ಡೋನ ಮಗಳು ಆ್ಯನ ಹೀಗನ್ನುತ್ತಾಳೆ: “ಹಾಗಿದ್ದರೂ ನಾವು ಸುಖ-ಸೌಕರ್ಯಕ್ಕಾಗಿ ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟುಕೊಡಲಿಲ್ಲ. ಇದರಿಂದ ಸಮಯ ಕಳೆದಂತೆ ನಮ್ಮ ಸಂಬಂಧಿಕರಲ್ಲಿ ಕೆಲವರಿಗೆ ನಾವು ಕ್ರೈಸ್ತ ಜೀವನಕ್ಕೆ ಎಷ್ಟೊಂದು ಮಹತ್ವ ಕೊಡುತ್ತೇವೆಂದು ಅರ್ಥವಾಗಬಹುದು. ಒಂದುವೇಳೆ ನಾವು ಅವರು ಹೇಳಿದ ಹಾಗೆ ಮಾಡಿದರೆ ಅವರಿಗದು ಯಾವತ್ತೂ ಅರ್ಥವಾಗುವುದಿಲ್ಲ.”—1 ಪೇತ್ರ 3:1, 2 ಹೋಲಿಸಿ.

ದೇವರಲ್ಲಿ ನಂಬಿಕೆಯಿಡಿ

16. (ಎ) ಒಬ್ಬನು ಹೇಗೆ ‘ಸುಳ್ಳಾದ ತರ್ಕಗಳಿಂದ ತನ್ನನ್ನು ಮೋಸಗೊಳಿಸಿಕೊಳ್ಳಸಾಧ್ಯ’? (ಯಾಕೋ. 1:22) (ಬಿ) ಎಂಥ ನಿರ್ಣಯಗಳನ್ನು ಯೆಹೋವನು ಆಶೀರ್ವದಿಸುತ್ತಾನೆ?

16 ಗಂಡ ಮಕ್ಕಳನ್ನು ಬಿಟ್ಟು ಶ್ರೀಮಂತ ದೇಶಕ್ಕೆ ಬಂದಿಳಿದ ಸಹೋದರಿಯೊಬ್ಬರು ಅಲ್ಲಿನ ಸಭಾ ಹಿರಿಯರಿಗೆ ಹೀಗಂದರು: “ನಾನಿಲ್ಲಿಗೆ ಬರಲು ಇಡೀ ಕುಟುಂಬ ತುಂಬ ದೊಡ್ಡ ತ್ಯಾಗಗಳನ್ನು ಮಾಡಬೇಕಾಯಿತು. ನನ್ನ ಯಜಮಾನರು ಸಭಾ ಹಿರಿಯರಾಗಿ ಸೇವೆ ಸಲ್ಲಿಸುವುದನ್ನು ಬಿಡಬೇಕಾಯಿತು. ಹಾಗಾಗಿ ನಾನಿಲ್ಲಿ ಬಂದಿರುವುದನ್ನು ಯೆಹೋವನು ಖಂಡಿತ ಆಶೀರ್ವದಿಸುತ್ತಾನೆಂಬ ನಂಬಿಕೆ ನನಗಿದೆ.” ನಾವು ಯೆಹೋವನಲ್ಲಿ ನಂಬಿಕೆಯಿಟ್ಟು ನಿರ್ಣಯಗಳನ್ನು ಮಾಡುವಲ್ಲಿ ಆತನು ಆಶೀರ್ವದಿಸುತ್ತಾನೆ ಖಂಡಿತ. ಆದರೆ ಆತನ ಚಿತ್ತಕ್ಕೆ ವಿರುದ್ಧವಾಗಿ ನಿರ್ಣಯಗಳನ್ನು ಮಾಡುವಲ್ಲಿ, ಅದರಲ್ಲೂ ಅನಗತ್ಯವಾಗಿ ಪವಿತ್ರ ಸೇವಾಸುಯೋಗಗಳನ್ನು ಬಿಟ್ಟುಕೊಡುವಲ್ಲಿ ಆತನು ಹೇಗೆ ತಾನೇ ಆಶೀರ್ವದಿಸುತ್ತಾನೆ?—ಇಬ್ರಿಯ 11:6; 1 ಯೋಹಾನ 5:13-15 ಓದಿ.

17. (ಎ) ನಿರ್ಣಯಗಳನ್ನು ಮಾಡುವ ಮುಂಚೆಯೇ ಯೆಹೋವನ ನಿರ್ದೇಶನವೇನೆಂದು ತಿಳಿಯಬೇಕು ಏಕೆ? (ಬಿ) ಅದಕ್ಕಾಗಿ ನಾವು ಏನು ಮಾಡಬೇಕು?

17 ನಿರ್ಣಯಗಳನ್ನು ಮಾಡುವ ಮುಂಚೆಯೇ ಯೆಹೋವನ ನಿರ್ದೇಶನಕ್ಕಾಗಿ ಹುಡುಕಿ; ನಂತರವಲ್ಲ. ಪವಿತ್ರಾತ್ಮಕ್ಕಾಗಿ, ವಿವೇಕ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿ. (2 ತಿಮೊ. 1:7) ಹೀಗೆ ಕೇಳಿಕೊಳ್ಳಿ: ‘ಎಂಥ ಸನ್ನಿವೇಶದಲ್ಲೂ ನಾನು ಯೆಹೋವನಿಗೆ ವಿಧೇಯತೆ  ತೋರಿಸಲು ಸಿದ್ಧನಿದ್ದೇನಾ? ಹಿಂಸೆ ಬಂದರೂ ಕೂಡ?’ ನೀವು ಅದಕ್ಕೂ ಸಿದ್ಧರಿರುವಲ್ಲಿ, ಆತನಿಗೆ ವಿಧೇಯತೆ ತೋರಿಸಲಿಕ್ಕಾಗಿ ಆರಾಮದ ಜೀವನವನ್ನು ಬಿಟ್ಟುಕೊಡಲು ಸಿದ್ಧರಿಲ್ಲವೇ? (ಲೂಕ 14:33) ಸಭಾ ಹಿರಿಯರ ಬಳಿ ಸಹಾಯ ಕೇಳಿಕೊಳ್ಳಿ. ಅವರು ಕೊಡುವ ಬೈಬಲ್‌ ಆಧರಿತ ಸಲಹೆಯನ್ನು ಅನುಸರಿಸಿ. ಹಾಗೆ ಮಾಡುವ ಮೂಲಕ, ಸಹಾಯ ಮಾಡುತ್ತೇನೆಂದು ಯೆಹೋವನು ಮಾಡಿರುವ ವಾಗ್ದಾನದಲ್ಲಿ ನಿಮಗೆ ನಂಬಿಕೆ, ಭರವಸೆ ಇದೆಯೆಂದು ತೋರಿಸುವಿರಿ. ಹಿರಿಯರು ನಿಮಗೋಸ್ಕರ ನಿರ್ಣಯಗಳನ್ನು ಮಾಡುವುದಿಲ್ಲ. ಆದರೆ ಸಂತೋಷದ ಜೀವನಕ್ಕೆ ನಡೆಸುವ ನಿರ್ಣಯಗಳನ್ನು ನೀವು ಮಾಡಲು ಅವರು ನೆರವಾಗುವರು.—2 ಕೊರಿಂ. 1:24.

18. (ಎ) ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು? (ಬಿ) ಅವರಿಗೆ ಸಹಾಯ ಮಾಡಲು ಯಾವಾಗ ನಮಗೆ ಅವಕಾಶ ಸಿಗಬಹುದು?

18 ಕುಟುಂಬದ ಶಿರಸ್ಸು ಪ್ರತಿದಿನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ‘ಹೊರಬೇಕೆಂದು’ ಯೆಹೋವನು ಬಯಸುತ್ತಾನೆ. ಈ ಜವಾಬ್ದಾರಿಯನ್ನು ತಮ್ಮ ಹೆಂಡತಿ ಮಕ್ಕಳೊಂದಿಗಿದ್ದೇ ಪೂರೈಸುತ್ತಿರುವ ಗಂಡಂದಿರನ್ನು ನಾವು ಶ್ಲಾಘಿಸಬೇಕು. ದೂರ ಹೋಗಿ ಕೆಲಸಮಾಡುವ ಒತ್ತಡ, ಆಕರ್ಷಣೆ ಇದ್ದರೂ ಅದನ್ನು ಪ್ರತಿರೋಧಿಸುತ್ತಿರುವ ಈ ಸಹೋದರರಿಗಾಗಿ ನಾವು ಪ್ರಾರ್ಥಿಸಬೇಕು. ಅನಿರೀಕ್ಷಿತ ಸನ್ನಿವೇಶಗಳಲ್ಲಿ ಅಂದರೆ ಅವರ ಕುಟುಂಬ ಯಾವುದಾದರೂ ವಿಪತ್ತಿಗೆ ತುತ್ತಾಗುವಲ್ಲಿ ಅಥವಾ ಹಠಾತ್ತನೆ ಆರೋಗ್ಯ ಹದಗೆಡುವಲ್ಲಿ ನಾವದನ್ನು ಅವರಿಗೆ ನಿಜ ಕ್ರೈಸ್ತ ಪ್ರೀತಿಯನ್ನೂ ಕಳಕಳಿಯನ್ನೂ ತೋರಿಸುವ ಅವಕಾಶವಾಗಿ ಕಾಣಬೇಕು. (ಗಲಾ. 6:2, 5; 1 ಪೇತ್ರ 3:8) ಹಣ ಸಹಾಯ ಮಾಡಲು ನಿಮ್ಮಿಂದಾಗುವುದೋ? ಅಥವಾ ಕೆಲಸ ಹುಡುಕಲು ಅವರಿಗೆ ನೆರವಾಗಬಹುದೇ? ಹಾಗೆ ಮಾಡುವಲ್ಲಿ ಗಂಡ/ಹೆಂಡತಿ ಕೆಲಸಕ್ಕಾಗಿ ಕುಟುಂಬ ಬಿಟ್ಟು ದೂರಹೋಗುವ ಒತ್ತಡವನ್ನು ನೀವು ಕಡಿಮೆಗೊಳಿಸಿದಂತಾಗುತ್ತದೆ.—ಜ್ಞಾನೋ. 3:27, 28; 1 ಯೋಹಾ. 3:17.

ಮರೆಯದಿರಿ, ಯೆಹೋವನು ನಿಮಗೆ ಸಹಾಯಕನಾಗಿರುವನು

19, 20. ಯೆಹೋವನು ಖಂಡಿತ ಸಹಾಯ ಮಾಡುತ್ತಾನೆಂದು ಕ್ರೈಸ್ತರು ಏಕೆ ಭರವಸೆಯಿಂದಿರಬಲ್ಲರು?

19 ಬೈಬಲ್‌ ನಮಗೆ ಹೀಗನ್ನುತ್ತದೆ: “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ ‘ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’ ಎಂದು [ದೇವರು] ಹೇಳಿದ್ದಾನೆ. ಆದುದರಿಂದ ನಾವು ‘ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?’ ಎಂದು ಧೈರ್ಯವಾಗಿ ಹೇಳಬಹುದು.” (ಇಬ್ರಿ. 13:5, 6) ಈ ಮಾತುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು?

20 “ಯೆಹೋವನ ಸಾಕ್ಷಿಗಳು ತುಂಬ ಸಂತೋಷದಿಂದ ಇರುವ ಜನರು ಎಂದು ಅನೇಕರು ಹೇಳುತ್ತಾರೆ. ಸಾಕ್ಷಿಗಳಲ್ಲಿ ಬಡವರಾಗಿರುವವರು ಕೂಡ ಯಾವಾಗಲೂ ಅಚ್ಚುಕಟ್ಟಾಗಿ ಬಟ್ಟೆ ಧರಿಸಿರುತ್ತಾರೆ. ಬೇರೆ ಜನರಿಗಿಂತ ತುಂಬ ನೀಟಾಗಿ ಕಾಣುತ್ತಾರೆ” ಎಂದರು ಪ್ರಗತಿಶೀಲ ದೇಶದಲ್ಲಿ ಅನೇಕ ವರ್ಷಗಳಿಂದ ಸಭಾ ಹಿರಿಯರಾಗಿರುವ ಸಹೋದರರೊಬ್ಬರು. ಇದು, ದೇವರ ರಾಜ್ಯವನ್ನು ತಮ್ಮ ಜೀವನದಲ್ಲಿ ಪ್ರಥಮವಾಗಿಡುವವರಿಗೆ ಯೇಸು ಕೊಟ್ಟ ಮಾತು ನಿಜವಾಗುತ್ತಿದೆ ಎಂಬುದಕ್ಕೆ ಪುರಾವೆ. (ಮತ್ತಾ. 6:28-30, 33) ನಿಮ್ಮ ತಂದೆಯಾದ ಯೆಹೋವನು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ. ನಿಮಗೂ ನಿಮ್ಮ ಮಕ್ಕಳಿಗೂ ಅತ್ಯುತ್ತಮವಾದದ್ದೇ ಸಿಗಬೇಕೆನ್ನುವುದು ಆತನ ಇಷ್ಟ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವ. 16:9) ಆದ್ದರಿಂದಲೇ ಕುಟುಂಬ ಜೀವನ, ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವ ವಿಧ ಮತ್ತು ಇನ್ನಿತರ ವಿಷಯಗಳ ಕುರಿತು ಆತನು ಆಜ್ಞೆಗಳನ್ನು ಕೊಟ್ಟಿದ್ದಾನೆ. ಅವು ನಮ್ಮ ಒಳಿತಿಗಾಗಿಯೇ ಇವೆ. ಅವುಗಳನ್ನು ಪಾಲಿಸುವ ಮೂಲಕ ನಾವು ಆತನನ್ನು ಪ್ರೀತಿಸುತ್ತೇವೆಂದು ಮತ್ತು ಆತನಲ್ಲಿ ಭರವಸೆಯಿಡುತ್ತೇವೆಂದು ತೋರಿಸುತ್ತೇವೆ. ಏಕೆಂದರೆ “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾ. 5:3.

21, 22. ಯೆಹೋವನಲ್ಲಿ ಭರವಸೆಯಿಡುವ ನಿರ್ಣಯವನ್ನು ನೀವೇಕೆ ಮಾಡಿದ್ದೀರಿ?

21 ಎಡ್ವಾರ್ಡೋ ಹೇಳುವುದೇನೆಂದರೆ, “ನನ್ನ ಹೆಂಡತಿ, ಮಕ್ಕಳಿಂದ ದೂರ ಇದ್ದ ಸಮಯವನ್ನು ಯಾವತ್ತೂ ಹಿಂದೆ ಪಡೆಯಲು ಆಗುವುದಿಲ್ಲವೆಂದು ನನಗೆ ಗೊತ್ತು. ಆದರೆ ಅದರಿಂದಾದ ನಷ್ಟದ ಕುರಿತು ಯಾವಾಗಲೂ ಯೋಚಿಸಿ ಕೊರಗುವುದಿಲ್ಲ. ಮುಂಚೆ ನನ್ನ ಜೊತೆ ಕೆಲಸಮಾಡುತ್ತಿದ್ದವರ ಹತ್ತಿರ ಈಗ ತುಂಬ ಹಣ, ಐಶ್ವರ್ಯ ಇದೆ. ಆದರೆ ಸಂತೋಷ ಇಲ್ಲ. ಅವರ ಕುಟುಂಬಗಳಲ್ಲಿ ದೊಡ್ಡ ಸಮಸ್ಯೆಗಳಿವೆ. ಆದರೆ ನಮ್ಮ ಕುಟುಂಬ ತುಂಬ ಆನಂದದಿಂದ ಇದೆ! ಈ ದೇಶದಲ್ಲಿ ಕೆಲವು ಸಹೋದರರು ಬಡವರಾಗಿದ್ದರೂ ಆಧ್ಯಾತ್ಮಿಕ ವಿಷಯಗಳನ್ನು ಜೀವನದಲ್ಲಿ ಪ್ರಥಮವಾಗಿ ಇಡುವುದನ್ನು ನೋಡಿ ನನಗೆ ತುಂಬ ಖುಷಿಯಾಗುತ್ತದೆ. ಯೇಸು ಹೇಳಿದ್ದು ಎಷ್ಟು ಸತ್ಯವೆಂದು ನಾವೆಲ್ಲರೂ ಸ್ವತಃ ಅನುಭವಿಸಿ ನೋಡುತ್ತಿದ್ದೇವೆ.”—ಮತ್ತಾಯ 6:33 ಓದಿ.

22 ಸಹೋದರರೇ ಧೈರ್ಯದಿಂದಿರಿ! ಯೆಹೋವನಿಗೆ ವಿಧೇಯತೆ ತೋರಿಸುವ, ಆತನಲ್ಲಿ ಭರವಸೆಯಿಡುವ ಆಯ್ಕೆ ಮಾಡಿ. ದೇವರ ಮೇಲೆ, ನಿಮ್ಮ ಸಂಗಾತಿಯ ಮೇಲೆ ಮತ್ತು ಮಕ್ಕಳ ಮೇಲೆ ನಿಮಗಿರುವ ಪ್ರೀತಿಯು ಕುಟುಂಬದ ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಪೂರೈಸುವಂತೆ ನಿಮ್ಮನ್ನು ಪ್ರೇರಿಸಲಿ. ಆಗ ‘ಯೆಹೋವನು ನಿಮ್ಮ ಸಹಾಯಕನಾಗಿದ್ದಾನೆ’ ಎಂಬುದನ್ನು ಅನುಭವದಿಂದ ತಿಳಿದುಕೊಳ್ಳುವಿರಿ.

^ ಪ್ಯಾರ. 1 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 11 2012, ಜನವರಿ-ಮಾರ್ಚ್‌ ಕಾವಲಿನಬುರುಜು ಸಂಚಿಕೆಯಲ್ಲಿ “ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?” ಎಂಬ ಲೇಖನ ನೋಡಿ.