ಈ ಸನ್ನಿವೇಶ ಗಮನಿಸಿ: ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಸದಸ್ಯರಾಗಿರುವ ಹಿರಿಯರೊಬ್ಬರು ಯುವ ಸಹೋದರನಿಗೆ ಭಾನುವಾರ ಬೆಳಿಗ್ಗೆ ಅವನೊಂದಿಗೆ ಕ್ಷೇತ್ರ ಸೇವೆಗೆ ಬರುತ್ತೇನೆಂದು ಹೇಳುತ್ತಾರೆ. ಭಾನುವಾರ ಬರುತ್ತದೆ. ಬೆಳಬೆಳಗ್ಗೆ ಆ ಹಿರಿಯನಿಗೆ ಒಂದು ತುರ್ತು ಫೋನ್‌ ಕರೆ. ಅತ್ತಲಿಂದ ಮಾತಾಡುತ್ತಿದ್ದ ಸಹೋದರನ ಸ್ವರ ಕಂಪಿಸುತ್ತಿರುತ್ತದೆ. ಆಗಷ್ಟೇ ಕಾರ್‌ ಅಪಘಾತಕ್ಕೀಡಾದ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ಆ ಸಹೋದರ ಹೇಳುತ್ತಾನೆ ಮತ್ತು ರಕ್ತರಹಿತ ಚಿಕಿತ್ಸೆ ನೀಡಲು ಸಹಕರಿಸುವ ಡಾಕ್ಟರರನ್ನು ಕಂಡುಕೊಳ್ಳಲು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆಗ ಆ ಹಿರಿಯನು ಯುವ ಸಹೋದರನಿಗೆ ಫೋನಾಯಿಸಿ ತಾನಿಂದು ಸೇವೆಗೆ ಬರಲು ಆಗುವುದಿಲ್ಲ ಎಂದು ಹೇಳಿ ತುರ್ತು ಪರಿಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಪ್ರೀತಿಯ ಸಹಾಯ ನೀಡಲು ಧಾವಿಸುತ್ತಾನೆ.

ಇನ್ನೊಂದು ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ: ಒಂಟಿ ಹೆತ್ತವಳಾಗಿರುವ ಸಹೋದರಿಯನ್ನು ಸಭೆಯಲ್ಲಿನ ಒಂದು ದಂಪತಿ ಇಂಥ ಒಂದು ಸಂಜೆ ಮಕ್ಕಳೊಂದಿಗೆ ಮನೆಗೆ ಬರುವಂತೆ ಆಮಂತ್ರಣ ನೀಡುತ್ತಾರೆ. ತಾಯಿ ತನ್ನಿಬ್ಬರು ಮಕ್ಕಳಿಗೆ ಆ ಸುದ್ದಿ ಹೇಳಿದ್ದೇ ತಡ ಅವರು ಕುಣಿದು ಕುಪ್ಪಳಿಸುತ್ತಾರೆ. ಆ ದಿನ ಯಾವಾಗ ಬರುತ್ತದೊ ಎಂದು ಮಕ್ಕಳು ಕಾಯುತ್ತಿರುತ್ತಾರೆ. ಆದರೆ ಒಂದು ದಿನ ಮುಂಚೆ ಆ ದಂಪತಿ ಆ ತಾಯಿಗೆ ಫೋನ್‌ ಮಾಡಿ ತಾವೆಲ್ಲೊ ಹೋಗಬೇಕಿದೆ ಹಾಗಾಗಿ ಇನ್ನೊಮ್ಮೆ ಎಂದಾದರೂ ಜೊತೆಯಾಗಿ ಸಮಯ ಕಳೆಯಲು ಏರ್ಪಾಡು ಮಾಡೋಣ ಎಂದು ಹೇಳುತ್ತಾರೆ. ಆ ದಂಪತಿಯ ಕೆಲವು ಸ್ನೇಹಿತರು ಅವರನ್ನು ಅದೇ ಸಂಜೆ ಕರೆದಿದ್ದರಿಂದ ಅವರು ಅಲ್ಲಿಗೆ ಹೋಗಬೇಕಾಯಿತು ಎಂದು ಬಳಿಕ ಈ ತಾಯಿಗೆ ಗೊತ್ತಾಗುತ್ತದೆ.

ಕ್ರೈಸ್ತರಾದ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮೊದಲು ‘ಹೌದು ಎಂದ ಮೇಲೆ ನಂತರ ಅಲ್ಲ’ ಎಂದು ನಾವು ಯಾವತ್ತೂ ಹೇಳಬಾರದು. (2 ಕೊರಿಂ. 1:18) ಆದರೆ ಆ ಎರಡು ಉದಾಹರಣೆಗಳು ತೋರಿಸುವಂತೆ ಎಲ್ಲ ಸನ್ನಿವೇಶಗಳು ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಬೇರೆ ದಾರಿಯೇ ಇಲ್ಲದೆ ನಾವು ಮಾಡಿದ್ದ ಯೋಜನೆಗಳನ್ನು ಬದಲಾಯಿಸಬೇಕಾಗಬಹುದು. ಅಪೊಸ್ತಲ ಪೌಲ ಒಮ್ಮೆ ಇಂಥದ್ದೊಂದು ಸನ್ನಿವೇಶದಲ್ಲಿದ್ದನು.

ಪೌಲನ ಮೇಲೆ ಚಂಚಲನೆಂಬ ಆರೋಪ

ಕ್ರಿ.ಶ. 55ರಲ್ಲಿ ಪೌಲನು ತನ್ನ ಮೂರನೇ ಮಿಷನರಿ ಪ್ರಯಾಣದ ಸಮಯದಲ್ಲಿ ಎಫೆಸದಲ್ಲಿದ್ದಾಗ ಇಜೀಯನ್‌ ಸಮುದ್ರವನ್ನು ದಾಟಿ ಕೊರಿಂಥಕ್ಕೆ ಹೋಗಲು ಮತ್ತು ಅಲ್ಲಿಂದ ಮಕೆದೋನ್ಯಕ್ಕೆ ಪ್ರಯಾಣಿಸಲು ಯೋಜಿಸಿದ್ದನು. ಮಕೆದೋನ್ಯದಿಂದ ಯೆರೂಸಲೇಮಿಗೆ ಹಿಂತಿರುಗುವಾಗ ಪ್ರಾಯಶಃ ಸಹೋದರರಿಂದ ದಯಾಭರಿತ ಕಾಣಿಕೆ ತಕ್ಕೊಂಡು ಹೋಗಲಿಕ್ಕಾಗಿ ಪೌಲನು ಪುನಃ ಕೊರಿಂಥಕ್ಕೆ ಬರುತ್ತೇನೆಂದು ಹೇಳಿದ್ದನು. (1 ಕೊರಿಂ. 16:3) ಈ ವಿಷಯವು 2 ಕೊರಿಂಥ 1:15, 16ರಿಂದ ನಮಗೆ ಸ್ಪಷ್ಟವಾಗುತ್ತದೆ. ಅಲ್ಲಿ ಪೌಲನು ಹೀಗಂದನು: “ಈ ಭರವಸೆಯಿಂದ, ಎರಡನೆಯ ಬಾರಿ ನಿಮಗೆ ಆನಂದಿಸಲು ಸಂದರ್ಭ ಸಿಗಬೇಕೆಂಬ ಉದ್ದೇಶದಿಂದ ನಾನು ಮುಂಚೆಯೇ ನಿಮ್ಮ ಬಳಿಗೆ ಬರಲು ಯೋಚಿಸುತ್ತಿದ್ದೆ. ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಆ ಮೇಲೆ ಮಕೆದೋನ್ಯವನ್ನು ಬಿಟ್ಟು ತಿರಿಗಿ ನಿಮ್ಮ ಬಳಿಗೆ ಬಂದು ನಿಮ್ಮಿಂದ ಯೂದಾಯಕ್ಕೆ ಸಾಗಕಳುಹಿಸಲ್ಪಡಬೇಕೆಂದು ಯೋಚಿಸುತ್ತಿದ್ದೆ.”

ಪೌಲನು ಮುಂಚೆ ಕೊರಿಂಥದವರಿಗೆ ಒಂದು ಪತ್ರ ಬರೆದು ತಾನು ಅಲ್ಲಿಗೆ ಬರಲು ಯೋಜಿಸಿದ್ದೇನೆಂದು ತಿಳಿಸಿದ್ದನೆಂದು ತೋರುತ್ತದೆ. (1 ಕೊರಿಂ. 5:9) ಆ ಪತ್ರವನ್ನು ಕಳುಹಿಸಿದ ಬಳಿಕ ಪೌಲನಿಗೆ ಕೊರಿಂಥ ಸಭೆಯಲ್ಲಿ ಗಂಭೀರ ಮನಸ್ತಾಪಗಳಿವೆ ಎಂದು ಖ್ಲೋಯೆಯ ಮನೆಯವರಿಂದ ತಿಳಿದುಬಂತು. (1 ಕೊರಿಂ. 1:10, 11) ಆಗ ಪೌಲನು ತನ್ನ ಯೋಜನೆಯನ್ನು ಬದಲಾಯಿಸಿದನು ಮತ್ತು ಅವರಿಗೆ ಪತ್ರವನ್ನು ಬರೆದನು. ಆ ಪತ್ರವೇ ಈಗ  ಬೈಬಲಿನಲ್ಲಿರುವ ಒಂದನೇ ಕೊರಿಂಥ ಪುಸ್ತಕವಾಗಿದೆ. ಇದರಲ್ಲಿ ಪೌಲನು ಕೊರಿಂಥದವರಿಗೆ ಪ್ರೀತಿಯಿಂದ ಬುದ್ಧಿವಾದ ಮತ್ತು ತಿದ್ದುಪಾಟನ್ನು ನೀಡಿದನು. ತಾನು ತನ್ನ ಪ್ರಯಾಣದ ಯೋಜನೆಯನ್ನು ಬದಲಾಯಿಸಿದ್ದೇನೆ, ಮೊದಲು ಮಕೆದೋನ್ಯಕ್ಕೆ ಹೋಗಿ ಬಳಿಕ ಕೊರಿಂಥಕ್ಕೆ ಬರುತ್ತೇನೆಂದು ಕೂಡ ಅವನು ಆ ಪತ್ರದಲ್ಲಿ ಬರೆದನು.—1 ಕೊರಿಂ. 16:5, 6. *

ಕೊರಿಂಥ ಸಭೆಯವರು ಈ ಪತ್ರವನ್ನು ಪಡೆದುಕೊಂಡಾಗ ಸಭೆಯಲ್ಲಿ ‘ಅತ್ಯುತ್ಕೃಷ್ಟ ಅಪೊಸ್ತಲರೆಂದು ತೋರಿಸಿಕೊಳ್ಳುವ’ ಕೆಲವರು ಪೌಲನ ಮೇಲೆ ಆರೋಪ ಹೊರಿಸಿದರೆಂದು ತೋರುತ್ತದೆ. ಅವನು ಚಂಚಲನು, ಕೊಟ್ಟ ಮಾತನ್ನು ಉಳಿಸಿಕೊಳ್ಳದವನು ಎಂದು ಆರೋಪಿಸಿದರು. ಆ ಮಾತನ್ನು ಪೌಲನು ನಿರಾಕರಿಸುತ್ತಾ, “ಇದನ್ನು ಯೋಚಿಸಿದಾಗ ನಾನು ಹಗುರಭಾವ ತಾಳಿದೆನೊ? ಅಥವಾ ನಾನು ಕೆಲವು ವಿಷಯಗಳನ್ನು ಶರೀರಭಾವಕ್ಕನುಸಾರ ಉದ್ದೇಶಿಸಿ ‘ಹೌದು, ಹೌದು’ ಎಂದ ಮೇಲೆ ‘ಅಲ್ಲ, ಅಲ್ಲ’ ಎನ್ನುವವನಾಗುತ್ತೇನೊ?” ಎಂದು ಕೇಳಿದನು.—2 ಕೊರಿಂ. 1:17; 11:5.

ಈ ಸಂದರ್ಭದಲ್ಲಿ ಅಪೊಸ್ತಲ ಪೌಲನು ನಿಜವಾಗಿ ತನ್ನ ಭೇಟಿಯ ವಿಷಯವನ್ನು ‘ಹಗುರವಾಗಿ’ ತಕ್ಕೊಂಡಿದ್ದನೇ ಎಂಬ ಪ್ರಶ್ನೆ ನಮಗೆ ಬರಬಹುದು. ಖಂಡಿತ ಇಲ್ಲ! “ಹಗುರಭಾವ” ಎಂದು ಭಾಷಾಂತರವಾಗಿರುವ ಪದಕ್ಕೆ ಚಂಚಲ, ವಿಶ್ವಾಸಾರ್ಹನಲ್ಲದ ವ್ಯಕ್ತಿ, ಮಾತು ಕೊಟ್ಟಂತೆ ನಡೆಯದವ ಎಂಬರ್ಥವಿದೆ. ಆದರೆ, ‘ನಾನು ಕೆಲವು ವಿಷಯಗಳನ್ನು ಶರೀರಭಾವಕ್ಕನುಸಾರ ಉದ್ದೇಶಿಸಿದ್ದೇನೊ’ ಎಂದು ಪೌಲನು ಕೇಳಿದ ಭಾವೋತ್ತೇಜಕ ಪ್ರಶ್ನೆಯು ಅವನು ತನ್ನ ಯೋಜನೆಯನ್ನು ಬದಲಾಯಿಸಿದ್ದು ವಿಶ್ವಾಸಾರ್ಹನಾಗಿಲ್ಲದ್ದರಿಂದ ಅಲ್ಲ ಎಂಬುದನ್ನು ಕೊರಿಂಥದ ಕ್ರೈಸ್ತರಿಗೆ ಸ್ಪಷ್ಟಪಡಿಸಿದ್ದಿರಬೇಕು.

ಪೌಲನು ತನ್ನ ಮೇಲೆ ಹಾಕಲಾದ ಆರೋಪ ಸುಳ್ಳೆಂದು ರುಜುಪಡಿಸುತ್ತಾ ಬರೆದದ್ದು: “ನಾವು ನಿಮಗೆ ಹೇಳಿದ ಮಾತು ಮೊದಲು ಹೌದು ಎಂದು ಅನಂತರ ಅಲ್ಲ ಎಂದು ಆಗುವುದಿಲ್ಲ; ಈ ವಿಷಯದಲ್ಲಿ ದೇವರ ಮೇಲೆ ಭರವಸೆಯಿಡಸಾಧ್ಯವಿದೆ.” (2 ಕೊರಿಂ. 1:18) ಪೌಲ ತನ್ನ ಯೋಜನೆಯನ್ನು ಬದಲಾಯಿಸಿದ್ದು ಕೊರಿಂಥದಲ್ಲಿದ್ದ ತನ್ನ ಸಹೋದರ ಸಹೋದರಿಯರಿಗೆ ಒಳ್ಳೇದನ್ನು ಬಯಸಿದ್ದರಿಂದಲೇ ಎಂಬುದು ಖಂಡಿತ. ಏಕೆಂದರೆ ‘ಅವರಿಗೆ ಬೇಸರವನ್ನು ಉಂಟುಮಾಡದಿರಲಿಕ್ಕಾಗಿಯೇ’ ತಾನು ಹಾಗೆ ಮಾಡಿದೆನೆಂದು ಅವನು 2 ಕೊರಿಂಥ 1:23ರಲ್ಲಿ ಹೇಳಿದ್ದಾನೆ. ನಿಜವೇನೆಂದರೆ ಪೌಲನು, ತಾನು ಅವರನ್ನು ಭೇಟಿಮಾಡುವುದಕ್ಕೆ ಮುಂಚೆ ಅವರು ತಮ್ಮ ಮಧ್ಯೆಯಿದ್ದ ಗಂಭೀರ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶ ಕೊಟ್ಟನು. ಮುಂದೇನಾಯಿತು? ಅವನು ನಿರೀಕ್ಷಿಸಿದಂತೆಯೇ ಕೊರಿಂಥದವರು ಅವನ ಪತ್ರವನ್ನು ಓದಿ ದುಃಖಪಟ್ಟರು ಮತ್ತು ಪಶ್ಚಾತ್ತಾಪಪಟ್ಟರು. ಈ ಸುದ್ದಿಯನ್ನು ತೀತನ ಮೂಲಕ ತಿಳಿದು ಮಕೆದೋನ್ಯದಲ್ಲಿದ್ದ ಪೌಲನು ತುಂಬ ಹರ್ಷಿಸಿದನು.—2 ಕೊರಿಂ. 6:11; 7:5-7.

ದೇವರಿಗೆ “ಆಮೆನ್‌” ಎಂದು ಹೇಳುತ್ತೇವೆ

ಪೌಲ ಚಂಚಲನೆಂಬ ಅಪವಾದವು ಅವನು ಸಾರುತ್ತಿದ್ದ ಸುವಾರ್ತೆಯ ವಿಷಯದಲ್ಲಿ ಸಂಶಯ ಎಬ್ಬಿಸಸಾಧ್ಯವಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವನು ದಿನನಿತ್ಯ ಆಡುವ ಮಾತಿನಲ್ಲಿ ಭರವಸೆಯಿಡಲು ಸಾಧ್ಯವಿಲ್ಲದಿದ್ದಲ್ಲಿ ಅವನು ಸಾರುವ ಸುವಾರ್ತೆಯನ್ನು ನಂಬಲು ಹೇಗೆ ಸಾಧ್ಯ ಎಂಬುದು ಆ ಆರೋಪದ ಅರ್ಥವಾಗಿತ್ತು. ಆದರೆ ಕೊರಿಂಥದವರಿಗೆ ತಾನು ಯೇಸು ಕ್ರಿಸ್ತನನ್ನು ಪ್ರಚುರಪಡಿಸಿದ್ದೇನೆಂದು ನೆನಪಿಸುತ್ತಾ ಪೌಲನು ಹೀಗಂದನು: “ನಮ್ಮ ಮೂಲಕ ಅಂದರೆ ನನ್ನ, ಸಿಲ್ವಾನನ ಮತ್ತು ತಿಮೊಥೆಯನ ಮೂಲಕ ನಿಮ್ಮ ನಡುವೆ ಸಾರಲ್ಪಟ್ಟ ದೇವರ ಮಗನಾದ ಕ್ರಿಸ್ತ ಯೇಸುವು ಹೌದು ಮತ್ತು ಅದೇ ಸಮಯದಲ್ಲಿ ಅಲ್ಲವಾಗಲಿಲ್ಲ, ಬದಲಿಗೆ ಅವನ ವಿಷಯದಲ್ಲಿ ಹೌದು ಎಂಬುದು ಹೌದಾಗಿದೆ.” (2 ಕೊರಿಂ. 1:19) ಪೌಲನ ಆದರ್ಶನಾಗಿದ್ದ ಯೇಸು ಕ್ರಿಸ್ತನು ಯಾವ ವಿಧದಲ್ಲಾದರೂ ವಿಶ್ವಾಸಯೋಗ್ಯನಲ್ಲದ ವ್ಯಕ್ತಿಯಾಗಿದ್ದನೊ? ಇಲ್ಲವೇ ಇಲ್ಲ! ಯೇಸು ತನ್ನ ಜೀವನದುದ್ದಕ್ಕೂ, ಸೇವೆಯಾದ್ಯಂತ ಸತ್ಯವನ್ನೇ ನುಡಿದನು. (ಯೋಹಾ. 14:6; 18:37) ಯೇಸು ಸಾರಿದ್ದು ಸಂಪೂರ್ಣವಾಗಿ ಸತ್ಯವೂ ಭರವಸಯೋಗ್ಯವೂ ಆಗಿತ್ತಾದರೆ ಅದೇ ಸಂದೇಶವನ್ನು ಪೌಲನು ಸಾರಿದ್ದರಿಂದ ಅವನು ಸಾರಿದ ಸುವಾರ್ತೆಯು ಸಹ ಭರವಸಯೋಗ್ಯ ಆಗಿತ್ತು.

ಯೆಹೋವ ದೇವರು ‘ಸತ್ಯವಂತನು’ ಎಂಬುದು ಅಲ್ಲಗಳೆಯಲಾಗದ ಸತ್ಯ. (ರೋಮ. 3:4) ಪೌಲನು ಮುಂದೆ ಬರೆದ ವಿಷಯಗಳಿಂದ ನಾವಿದನ್ನು ತಿಳಿಯುತ್ತೇವೆ. “ದೇವರ ವಾಗ್ದಾನಗಳು ಎಷ್ಟೇ ಇರುವುದಾದರೂ ಅವು ಅವನ [ಕ್ರಿಸ್ತನ] ಮೂಲಕ ಹೌದಾಗಿ ಪರಿಣಮಿಸಿವೆ.” ಯೇಸು ಭೂಮಿಯ ಮೇಲಿದ್ದಾಗ ತೋರಿಸಿದ ಲೋಪರಹಿತ ಸಮಗ್ರತೆಯು ಯೆಹೋವನು ವಾಗ್ದಾನಗಳನ್ನು ಪೂರೈಸುತ್ತಾನೋ ಇಲ್ಲವೋ ಎಂಬ ಸಂಶಯಗಳನ್ನೆಲ್ಲ ಪೂರ್ತಿಯಾಗಿ ತೊಡೆದುಹಾಕಿತು. ಪೌಲನು ಮುಂದುವರಿಸಿ ಹೇಳಿದ್ದು: “ಆದುದರಿಂದ ನಾವು ದೇವರಿಗೆ ಮಹಿಮೆಯನ್ನು ಉಂಟುಮಾಡಲಿಕ್ಕಾಗಿ ಅವನ [ಯೇಸುವಿನ] ಮೂಲಕವೇ ದೇವರಿಗೆ ‘ಆಮೆನ್‌’ ಎಂದು ಹೇಳುತ್ತೇವೆ.” (2 ಕೊರಿಂ. 1:20) ಹೌದು, ಯೆಹೋವ ದೇವರು ಮಾಡುವ ಪ್ರತಿಯೊಂದು ವಾಗ್ದಾನವು ನೆರವೇರಿಯೇ ತೀರುವುದೆಂಬುದಕ್ಕೆ ಖುದ್ದಾಗಿ ಯೇಸುವೇ ಖಾತ್ರಿ ಅಥವಾ ಆಮೆನ್‌ ಆಗಿದ್ದಾನೆ!

ಯೆಹೋವ ಮತ್ತು ಯೇಸು ಯಾವಾಗಲೂ ಸತ್ಯವನ್ನು ಮಾತಾಡುವಂತೆಯೇ ಪೌಲನು ಕೂಡ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದನು. (2 ಕೊರಿಂ. 1:19) ಅವನು “ಶರೀರಭಾವಕ್ಕನುಸಾರ” ಮಾತು ಕೊಡುವ ಚಂಚಲ ವ್ಯಕ್ತಿಯಾಗಿರಲಿಲ್ಲ. (2 ಕೊರಿಂ. 1:17) ಬದಲಾಗಿ ಅವನು ‘ಪವಿತ್ರಾತ್ಮವನ್ನು  ಅನುಸರಿಸಿ ನಡೆದನು.’ (ಗಲಾ. 5:16) ಇತರರಿಗೆ ಅವನು ಒಳ್ಳೇದನ್ನೇ ಬಯಸಿದನು. ಅವನ ಮಾತು ‘ಹೌದಾದರೆ ಹೌದು’ ಆಗಿತ್ತು!

ನಿಮ್ಮ ಮಾತು ಹೌದಾದರೆ ಹೌದು ಎಂದಾಗಿದೆಯೇ?

ಬೈಬಲಿನ ತತ್ವಗಳಿಗೆ ಅನುಗುಣವಾಗಿ ಜೀವಿಸದಿರುವ ಜನರು ಮಾತು ಕೊಡುತ್ತಾರೆ ಆದರೆ ನಂತರ ಚಿಕ್ಕಪುಟ್ಟ ಕಷ್ಟಗಳು ಬಂತೆಂದರೆ ಅಥವಾ ಹೆಚ್ಚು ಲಾಭಕರವಾದದ್ದು ಹೆಚ್ಚು ಮನಸೆಳೆಯುವಂಥದ್ದು ಸಿಕ್ಕಿತೆಂದರೆ ಕೊಟ್ಟ ಮಾತನ್ನು ತಪ್ಪುವುದು ಸಾಮಾನ್ಯ. ಉದಾಹರಣೆಗೆ ವ್ಯಾಪಾರ-ವ್ಯವಹಾರಗಳಲ್ಲಿ ‘ಹೌದು’ ಎಂದು ಹೇಳಿದ್ದು ‘ಹೌದಾಗಿಯೇ’ ಇರುವುದಿಲ್ಲ. ಎಷ್ಟೋ ಸಲ ಬರಹ ರೂಪದಲ್ಲಿ ಒಪ್ಪಂದಗಳನ್ನು ಮಾಡಿ ಮಾತನ್ನು ದೃಢೀಕರಿಸಿದ ಮೇಲೂ ಅದನ್ನು ಉಳಿಸಿಕೊಳ್ಳುವುದಿಲ್ಲ. ವಿವಾಹ ಬಂಧಕ್ಕೆ ಅಡಿಯಿಡುವಾಗ ಗಂಡುಹೆಣ್ಣು ಜೊತೆಯಾಗಿ ಬಾಳುತ್ತೇವೆಂದು ಪರಸ್ಪರ ಮಾತುಕೊಡುತ್ತಾರೆ. ಆದರೆ ಅನೇಕ ಜನರು, ಆ ಮಾತನ್ನು ಯಾವಾಗ ಬೇಕಾದರೂ ಮುರಿಯಬಹುದು, ಜೀವನದುದ್ದಕ್ಕೂ ಬದ್ಧರಾಗಿರಬೇಕಿಲ್ಲ ಎಂದು ನೆನಸುತ್ತಾರೆ. ಇಂದು ಗಗನಕ್ಕೇರುತ್ತಿರುವ ವಿವಾಹ ವಿಚ್ಛೇದನ ಸಂಖ್ಯೆಯು, ಬಹುಮಂದಿ ವಿವಾಹವನ್ನು ಇಷ್ಟಬಂದ ಹಾಗೆ ಮುರಿದುಬಿಡಬಹುದಾದ ಒಂದು ಸಾಧಾರಣ ಬಂಧವಾಗಿ ವೀಕ್ಷಿಸುತ್ತಾರೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.—2 ತಿಮೊ. 3:1, 2.

ನಿಮ್ಮ ಕುರಿತೇನು? ನಿಮ್ಮ ಮಾತು ಹೌದಾದರೆ ಹೌದು ಎಂದಾಗಿದೆಯೇ? ಲೇಖನದ ಆರಂಭದಲ್ಲಿ ಗಮನಿಸಿದಂತೆ ಕೆಲವೊಮ್ಮೆ ನಾವು ನಮ್ಮ ಯೋಜನೆಗಳನ್ನು ಬದಲಾಯಿಸಬೇಕಾಗಬಹುದು ನಿಜ. ಇದು ಸನ್ನಿವೇಶಗಳು ಕೈಮೀರಿ ಹೋಗುವುದರಿಂದಲೇ ಹೊರತು ನಾವು ಚಂಚಲರಾಗಿರುವುದರಿಂದ ಅಲ್ಲ. ಹಾಗಿದ್ದರೂ ಕ್ರೈಸ್ತರಾಗಿ ನೀವು ಕೊಟ್ಟ ಮಾತಿನಂತೆ ನಡೆಯಲು ಅಥವಾ ಮಾಡಿರುವ ಒಪ್ಪಂದವನ್ನು ಪಾಲಿಸಲು ಕೈಲಾದುದ್ದೆಲ್ಲವನ್ನೂ ಮಾಡಬೇಕು. (ಕೀರ್ತ. 15:4; ಮತ್ತಾ. 5:37) ಆಗ ಮಾತ್ರ ಭರವಸಾರ್ಹ ವ್ಯಕ್ತಿ, ಹೇಳಿದ ಹಾಗೆ ಮಾಡುವವ, ಯಾವಾಗಲೂ ಸತ್ಯವನ್ನೇ ನುಡಿಯುವವ ಎಂಬ ಹೆಸರು ನಿಮಗಿರುವುದು. (ಎಫೆ. 4:15, 25; ಯಾಕೋ. 5:12) ದಿನನಿತ್ಯದ ವಿಚಾರಗಳಲ್ಲಿ ನೀವು ಭರವಸಾರ್ಹರೆಂದು ಜನರಿಗೆ ತಿಳಿದಲ್ಲಿ ನೀವು ದೇವರ ರಾಜ್ಯದ ಸತ್ಯವನ್ನು ಹೇಳುವಾಗ ಅವರು ಆಲಿಸಲು ಮನಸ್ಸುಮಾಡಬಹುದು. ಆದ್ದರಿಂದ ನಾವು ಹೌದು ಎಂದು ಹೇಳಿದ ಮೇಲೆ ಅದು ನಿಜವಾಗಿಯೂ ಹೌದು ಆಗಿರುವಂತೆ ನೋಡಿಕೊಳ್ಳೋಣ.

^ ಪ್ಯಾರ. 7 ಒಂದನೇ ಕೊರಿಂಥವನ್ನು ಬರೆದ ಸ್ವಲ್ಪದರಲ್ಲೇ ಪೌಲನು ಮಕೆದೋನ್ಯಕ್ಕೆ ಹೋದನು. ಆದರೆ ತ್ರೋವದ ಮಾರ್ಗವಾಗಿ ಹೋದನು. ಅಲ್ಲಿ ಅವನು ಎರಡನೇ ಕೊರಿಂಥವನ್ನು ಬರೆದನು. (2 ಕೊರಿಂ. 2:12; 7:5) ಸಮಯಾನಂತರ ಕೊರಿಂಥಕ್ಕೆ ಕೂಡ ಭೇಟಿಕೊಟ್ಟನು.