ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಜನವರಿ 2014

100 ವರ್ಷಗಳ ರಾಜ್ಯಾಡಳಿತ—ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?

100 ವರ್ಷಗಳ ರಾಜ್ಯಾಡಳಿತ—ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?

‘ಯೆಹೋವ ದೇವರೇ, ನಿತ್ಯತೆಯ ರಾಜನೇ, ನಿನ್ನ ಕಾರ್ಯಗಳು ಮಹತ್ತರ ವಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ.’ಪ್ರಕ. 15:3.

1, 2. (1) ದೇವರ ರಾಜ್ಯವು ಏನನ್ನು ಸಾಧಿಸಲಿದೆ? (2) ದೇವರ ರಾಜ್ಯವು ಬಂದೇ ಬರುತ್ತದೆ ಎಂದು ನಾವೇಕೆ ಭರವಸೆಯಿಡಬಲ್ಲೆವು?

ಕ್ರಿಸ್ತ ಶಕ 31ರ ವಸಂತಕಾಲದಲ್ಲಿ ಯೇಸು ಕಪೆರ್ನೌಮಿನ ಸಮೀಪದ ಒಂದು ಬೆಟ್ಟದ ಮೇಲಿದ್ದಾಗ ತನ್ನ ಶಿಷ್ಯರಿಗೆ “ನಿನ್ನ ರಾಜ್ಯವು ಬರಲಿ” ಎಂದು ದೇವರಲ್ಲಿ ಪ್ರಾರ್ಥಿಸಲು ಕಲಿಸಿದನು. (ಮತ್ತಾ. 6:10) ಆ ರಾಜ್ಯವು ಎಂದಾದರೂ ಬರುವುದೋ ಎಂದು ಅನೇಕರು ಶಂಕಿಸುತ್ತಾರೆ. ಆದರೆ ನಾವು ಹಾಗಲ್ಲ. ‘ದೇವರ ರಾಜ್ಯವು ಬರಲಿ’ ಎಂದು ನಾವು ಹೃತ್ಪೂರ್ವಕವಾಗಿ ಮಾಡುವ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕೇ ಸಿಗುತ್ತದೆಂಬ ಖಾತ್ರಿ ನಮಗಿದೆ.

2 ಆ ರಾಜ್ಯದ ಮೂಲಕ ಯೆಹೋವನು ಸ್ವರ್ಗದಲ್ಲಿರುವ ಹಾಗೂ ಭೂಮಿಯಲ್ಲಿರುವ ತನ್ನ ಮಕ್ಕಳನ್ನು ಐಕ್ಯಗೊಳಿಸಲಿರುವನು. ಆತನ ಈ ಉದ್ದೇಶ ಕೈಗೂಡುವುದು ಖಂಡಿತ. (ಯೆಶಾ. 55:10, 11) ಏಕೆಂದರೆ ಯೆಹೋವನು ನಮ್ಮೀ ದಿನಗಳಲ್ಲಿ ಈಗಾಗಲೇ ರಾಜನಾಗಿದ್ದಾನೆ! ಕಳೆದ 100 ವರ್ಷಗಳಲ್ಲಿ ಆಗಿರುವ ರೋಮಾಂಚಕ ಸಂಗತಿಗಳೇ ಇದಕ್ಕೆ ಸಾಕ್ಷ್ಯ. ಯೆಹೋವ ದೇವರು ತನಗೆ ನಿಷ್ಠಾವಂತರಾಗಿರುವ ಲಕ್ಷಾಂತರ ಪ್ರಜೆಗಳಿಗಾಗಿ ಮಹತ್ತರವಾದ ಹಾಗೂ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುತ್ತಲಿದ್ದಾನೆ. (ಜೆಕ. 14:9; ಪ್ರಕ. 15:3) ಆದರೆ ನೆನಪಿಡಿ, ಯೆಹೋವನು ರಾಜನಾಗಿರುವುದು ಮತ್ತು ಯೇಸು ಪ್ರಾರ್ಥಿಸಲು ಕಲಿಸಿದ ಆ ದೇವರ ರಾಜ್ಯವು ಬರುವುದು ಇವೆರಡೂ ಒಂದೇ ಅಲ್ಲ, ಬೇರೆ ಬೇರೆ. ಇವೆರಡರ ಮಧ್ಯೆ ಇರುವ ವ್ಯತ್ಯಾಸವೇನು? ಅವು ನಮ್ಮನ್ನು ಹೇಗೆ ಪ್ರಭಾವಿಸುತ್ತವೆ? ನೋಡೋಣ.

ಯೆಹೋವನು ನೇಮಿಸಿದ ರಾಜನು ಕ್ರಿಯೆಗೈಯುತ್ತಾನೆ

3. (1) ಯೆಹೋವನು ಯೇಸುವನ್ನು ಪಟ್ಟಕ್ಕೇರಿಸಿದ್ದು ಯಾವಾಗ ಮತ್ತು ಎಲ್ಲಿ? (2) ದೇವರ ರಾಜ್ಯವು 1914ರಲ್ಲಿ ಸ್ಥಾಪನೆ ಆಯಿತೆಂದು ನೀವು ಹೇಗೆ ರುಜುಪಡಿಸುವಿರಿ? (ಪಾದಟಿಪ್ಪಣಿ ನೋಡಿ.)

3 ದೇವಜನರು ಸುಮಾರು 1880ರಷ್ಟಕ್ಕೆ, ದಾನಿಯೇಲನು 2,500 ವರ್ಷಗಳ ಹಿಂದೆ ಬರೆದ ಪ್ರವಾದನೆಯೊಂದರ ಅರ್ಥವನ್ನು ಗ್ರಹಿಸತೊಡಗಿದರು. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು” ಎಂಬ ಪ್ರವಾದನೆಯೇ ಅದು. (ದಾನಿ. 2:44) 1914ನೇ ವರ್ಷವು ಪ್ರಾಮುಖ್ಯ ವರ್ಷವಾಗಿರುವುದು  ಎಂದು ಆ ಬೈಬಲ್‌ ವಿದ್ಯಾರ್ಥಿಗಳು ದಶಕಗಳಿಂದ ಹೇಳುತ್ತಾ ಬಂದಿದ್ದರು. 1914ನೇ ವರ್ಷದಲ್ಲಿ ಲೋಕದ ಅನೇಕ ಜನರು ಪರಿಸ್ಥಿತಿ ಉತ್ತಮಗೊಳ್ಳುವುದೆಂದು ನಿರೀಕ್ಷಿಸುತ್ತಿದ್ದರು. ಆ ಕುರಿತು ಒಬ್ಬ ಲೇಖಕನು ಹೀಗೆ ಬರೆದನು: “1914ರ ಸಮಯದಲ್ಲಿ ಜಗತ್ತು ಭವಿಷ್ಯವನ್ನು ಭರವಸೆ ಹಾಗೂ ನಿರೀಕ್ಷೆಯಿಂದ ನೋಡುತ್ತಿತ್ತು.” ಆದರೆ ಆ ವರ್ಷದಲ್ಲಿ ನಂತರ 1ನೇ ಮಹಾಯುದ್ಧ ಭುಗಿಲೆದ್ದಾಗ ಬೈಬಲ್‌ ಪ್ರವಾದನೆ ಸತ್ಯವಾಯಿತು. ಅದರ ಬೆನ್ನಿಗೆ ಬರಗಾಲಗಳು, ಭೂಕಂಪಗಳು, ಅಂಟುರೋಗಗಳು ಮುಂತಿಳಿಸಲ್ಪಟ್ಟಂತೆಯೇ ಸಂಭವಿಸಿದವು. ಇವು ಹಾಗೂ ಬೈಬಲಿನ ಇತರ ಪ್ರವಾದನೆಗಳ ನೆರವೇರಿಕೆಗಳು ಯೇಸು ಕ್ರಿಸ್ತನು 1914ರಲ್ಲಿ ಸ್ವರ್ಗದಲ್ಲಿ ದೇವರ ರಾಜ್ಯದ ರಾಜನಾಗಿ ಆಳಲು ಆರಂಭಿಸಿದನು ಎಂಬುದನ್ನು ಸ್ಪಷ್ಟವಾಗಿ ರುಜುಪಡಿಸಿದವು. * ತನ್ನ ಮಗನನ್ನು ಮೆಸ್ಸೀಯ ರಾಜನಾಗಿ ಪಟ್ಟಕ್ಕೇರಿಸುವ ಮೂಲಕ ಯೆಹೋವನು ಒಂದು ಹೊಸ ಅರ್ಥದಲ್ಲಿ ರಾಜನಾದನು!

4. (1) ಹೊಸ ರಾಜನು ಕೂಡಲೆ ಯಾವ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡನು? (2) ಅದರ ನಂತರ ಯಾರ ಕಡೆಗೆ ಗಮನಹರಿಸಿದನು?

4 ದೇವರ ನೇಮಿತ ರಾಜನಾಗಿ ಯೇಸು ಕೈಗೆತ್ತಿಕೊಂಡ ಮೊತ್ತಮೊದಲ ಕಾರ್ಯಾಚರಣೆಯೆಂದರೆ ತನ್ನ ತಂದೆಯ ಪ್ರಧಾನ ವೈರಿಯಾದ ಸೈತಾನನ ವಿರುದ್ಧ ಯುದ್ಧಮಾಡಿದ್ದೇ. ಯೇಸು ಹಾಗೂ ಅವನ ದೂತರು ಪಿಶಾಚನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ಕೆಳಗೆ ದೊಬ್ಬಿದರು. ಆಗ ಸ್ವರ್ಗದಲ್ಲಿ ಮಹಾ ಹರ್ಷವುಂಟಾಯಿತು. ಭೂಮಿಯಲ್ಲಾದರೋ ಹಿಂದೆಂದೂ ಸಂಭವಿಸಿರದಷ್ಟು ಘೋರ ಸಂಕಷ್ಟಗಳು ಆರಂಭವಾದವು. (ಪ್ರಕಟನೆ 12:7-9, 12 ಓದಿ.) ತದನಂತರ ರಾಜ ಯೇಸು ಭೂಪ್ರಜೆಗಳ ಕಡೆಗೆ ತನ್ನ ಗಮನಹರಿಸಿದನು. ದೇವರ ಚಿತ್ತವನ್ನು ಮಾಡಲಿಕ್ಕಾಗಿ ಅವರನ್ನು ಶುದ್ಧೀಕರಿಸಲು, ತರಬೇತುಗೊಳಿಸಲು, ಸಂಘಟಿಸಲು ಪ್ರಾರಂಭಿಸಿದನು. ರಾಜನು ಕೈಗೊಂಡ ಈ ಮೂರು ಕಾರ್ಯಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ಆ ದೇವಸೇವಕರು ಹೇಗೆ ನಮಗೆ ಒಳ್ಳೆ ಮಾದರಿಯಿಟ್ಟಿದ್ದಾರೆಂದು ನೋಡೋಣ.

ಮೆಸ್ಸೀಯ ರಾಜ ತನ್ನ ನಿಷ್ಠಾವಂತ ಪ್ರಜೆಗಳನ್ನು ಶುದ್ಧೀಕರಿಸುತ್ತಾನೆ

5. ಇಸವಿ 1914ರಿಂದ 1919ರ ಆರಂಭಭಾಗದ ಮಧ್ಯದಲ್ಲಿ ಯಾವ ಶುದ್ಧೀಕರಣ ನಡೆಯಿತು?

5 ಸಿಂಹಾಸನವೇರಿದ ರಾಜನು ಸ್ವರ್ಗದಿಂದ ಸೈತಾನ ಮತ್ತು ಅವನ ದೆವ್ವಗಳ ಭ್ರಷ್ಟ ಪ್ರಭಾವವನ್ನು ತೊಲಗಿಸಿದ ನಂತರ ಯೆಹೋವನು ಆತನನ್ನು ಇನ್ನೊಂದು ಕೆಲಸದೆಡೆ ಮಾರ್ಗದರ್ಶಿಸಿದನು. ಯೇಸು ಭೂಮಿಯಲ್ಲಿರುವ ತನ್ನ ಹಿಂಬಾಲಕರನ್ನು ಪರೀಕ್ಷಿಸಿ ಅವರ ಆಧ್ಯಾತ್ಮಿಕ ಸ್ಥಿತಿಯನ್ನು ಶೋಧಿಸಬೇಕಿತ್ತು. ಪ್ರವಾದಿ ಮಲಾಕಿಯನು ಇದನ್ನು ಆಧ್ಯಾತ್ಮಿಕ ಶುದ್ಧೀಕರಣ ಎಂದು ವರ್ಣಿಸಿದ್ದಾನೆ. (ಮಲಾ. 3:1-3) ಈ ಶುದ್ಧೀಕರಣವು 1914ರಿಂದ 1919ರ ಆರಂಭಭಾಗದ ಮಧ್ಯದಲ್ಲಿ ನಡೆಯಿತೆಂದು ಇತಿಹಾಸ ತೋರಿಸುತ್ತದೆ. * ನಾವು ಯೆಹೋವನ ವಿಶ್ವವ್ಯಾಪಿ ಕುಟುಂಬದ ಭಾಗವಾಗಿರಬೇಕಾದರೆ ಶುದ್ಧರೂ ಪವಿತ್ರರೂ ಆಗಿರಬೇಕು. (1 ಪೇತ್ರ 1:15, 16) ಈ ಲೋಕದ ಸುಳ್ಳುಧರ್ಮ ಅಥವಾ ರಾಜಕೀಯದಿಂದ ನಾವು ಸ್ವಲ್ಪವೂ ಮಲಿನಗೊಳ್ಳಬಾರದು.

6. (1) ಆಧ್ಯಾತ್ಮಿಕ ಆಹಾರವನ್ನು ಹೇಗೆ ಒದಗಿಸಲಾಗುತ್ತಿದೆ? (2) ಅದು ನಮಗೆ ಅತ್ಯಗತ್ಯವೇಕೆ?

6 ತದನಂತರ ಯೇಸು ತನ್ನ ರಾಜ್ಯಾಧಿಕಾರವನ್ನು ಹೇಗೆ ಬಳಸಿದನು? ಆತನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ನೇಮಿಸಿದನು. ಈ ಆಳು ಯೇಸುವಿನ ಆರೈಕೆಯಡಿ ‘ಒಂದೇ ಹಿಂಡಿನಲ್ಲಿರುವ’ ಎಲ್ಲರಿಗೆ ನಿಯತವಾಗಿ ಆರೋಗ್ಯಕರ ಆಧ್ಯಾತ್ಮಿಕ ಆಹಾರವನ್ನು ಉಣಬಡಿಸುತ್ತದೆ. (ಮತ್ತಾ. 24:45-47; ಯೋಹಾ. 10:16) “ಮನೆಯವರಿಗೆ” ಆಹಾರ ಒದಗಿಸುವ ಈ ದೊಡ್ಡ ಜವಾಬ್ದಾರಿಯನ್ನು 1919ರಿಂದ ಅಭಿಷಿಕ್ತರ ಈ ಚಿಕ್ಕ ಗುಂಪು ನಿಷ್ಠೆಯಿಂದ ನಿರ್ವಹಿಸುತ್ತಾ ಬಂದಿದೆ. ಈ ಆಳಿನ ಮೂಲಕ ಸಿಗುವ ಹೇರಳವಾದ ಆಧ್ಯಾತ್ಮಿಕ ಆಹಾರವು ನಮ್ಮ ನಂಬಿಕೆ ಬೆಳೆಯಲು ಬೇಕಾದ ಪೋಷಣೆಯನ್ನು ಕೊಡುತ್ತದೆ. ಆಧ್ಯಾತ್ಮಿಕವಾಗಿ, ನೈತಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಶುದ್ಧರಾಗಿ ಉಳಿಯುವ ನಮ್ಮ ನಿರ್ಧಾರವನ್ನು ಅದು ಇನ್ನೂ ಬಲಗೊಳಿಸುತ್ತದೆ. ಮಾತ್ರವಲ್ಲ ಇಂದು ಭೂಮಿಯಲ್ಲಿ ನಡೆಯುತ್ತಿರುವ ಒಂದು ಪ್ರಾಮುಖ್ಯ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ನಮ್ಮನ್ನು ತರಬೇತುಗೊಳಿಸಿ ಸನ್ನದ್ಧಗೊಳಿಸುತ್ತದೆ. ಈ ಆಧ್ಯಾತ್ಮಿಕ ಆಹಾರದಿಂದ ನೀವು ಪೂರ್ಣ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಾ?

ಭೂವ್ಯಾಪಕವಾಗಿ ಸಾರಲು ರಾಜ ತನ್ನ ಪ್ರಜೆಗಳನ್ನು ತರಬೇತುಗೊಳಿಸುತ್ತಾನೆ

7. (1) ಯೇಸು ಭೂಮಿಯಲ್ಲಿದ್ದಾಗ ಯಾವ ಪ್ರಮುಖ ಕೆಲಸವನ್ನು ಆರಂಭಿಸಿದನು? (2) ಈ ಕೆಲಸ ಎಲ್ಲಿಯ ವರೆಗೆ ಮುಂದುವರಿಯುವುದು?

7 ಯೇಸು ಭೂಮಿಯ ಮೇಲೆ ಸೇವೆಯನ್ನು ಆರಂಭಿಸಿದಾಗ, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದನು. (ಲೂಕ 4:43) ಅನಂತರದ ಮೂರೂವರೆ ವರ್ಷಗಳಲ್ಲಿ ಅವನ ಜೀವನ ಈ  ಸಾರುವ ಕೆಲಸದ ಮೇಲೆಯೇ ಕೇಂದ್ರಿತವಾಗಿತ್ತು. ತನ್ನ ಶಿಷ್ಯರಿಗೂ ಈ ನಿರ್ದೇಶನ ಕೊಟ್ಟನು: “ನೀವು ಹೋಗುವಾಗ, ‘ಸ್ವರ್ಗದ ರಾಜ್ಯವು ಸಮೀಪಿಸಿದೆ’ ಎಂದು ಸಾರಿಹೇಳಿರಿ.” (ಮತ್ತಾ. 10:7) ತನ್ನ ಹಿಂಬಾಲಕರು ರಾಜ್ಯದ ಸಂದೇಶವನ್ನು “ಭೂಮಿಯ ಕಟ್ಟಕಡೆಯ ವರೆಗೂ” ಪ್ರಕಟಿಸುವರೆಂದು ಪುನರುತ್ಥಾನವಾದ ಮೇಲೆ ಯೇಸು ಮುಂತಿಳಿಸಿದನು. (ಅ. ಕಾ. 1:8) ಮಾತ್ರವಲ್ಲ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಸ್ವತಃ ತಾನು ಈ ಪ್ರಾಮುಖ್ಯ ಕೆಲಸದಲ್ಲಿ ಒಳಗೂಡಿರುವೆನೆಂದು ಮಾತುಕೊಟ್ಟನು.—ಮತ್ತಾ. 28:19, 20.

8. ರಾಜನು ತನ್ನ ಭೂಪ್ರಜೆಗಳನ್ನು ಸಾರುವ ಕೆಲಸ ಮಾಡಲು ಪ್ರಚೋದಿಸಿದ್ದು ಹೇಗೆ?

8 ಇಸವಿ 1919ರಿಂದ ಹಿಡಿದು ಮುಂದಕ್ಕೆ ಈ “ಸುವಾರ್ತೆಯು” ಹೊಸ ಅರ್ಥವನ್ನು ಪಡೆದಿತ್ತು. (ಮತ್ತಾ. 24:14) ಏಕೆಂದರೆ, ಯೇಸು ಈಗಾಗಲೇ ಸ್ವರ್ಗದಲ್ಲಿ ರಾಜನಾಗಿ ಆಳ್ವಿಕೆ ನಡೆಸುತ್ತಿದ್ದನು. ಮಾತ್ರವಲ್ಲ ಶುದ್ಧೀಕರಿಸಲ್ಪಟ್ಟ ಪ್ರಜೆಗಳ ಒಂದು ಚಿಕ್ಕ ಗುಂಪನ್ನು ಭೂಮಿಯಲ್ಲಿ ಒಟ್ಟುಗೂಡಿಸಿದ್ದನು. ಯೇಸು ಅವರಿಗೆ ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿತವಾಗಿದೆಯೆಂಬ ಸುವಾರ್ತೆಯನ್ನು ಭೂಮಿಯಾದ್ಯಂತ ಸಾರುವಂತೆ ಹುರಿದುಂಬಿಸಿದನು. ಅವರು ಆ ನಿರ್ದೇಶನಕ್ಕೆ ಹುಮ್ಮಸ್ಸಿನಿಂದ ಓಗೊಟ್ಟರು. (ಅ. ಕಾ. 10:42) ಉದಾಹರಣೆಗೆ, 1922ರ ಸೆಪ್ಟೆಂಬರ್‌ನಲ್ಲಿ ಸುಮಾರು 20,000 ಮಂದಿ ದೇವರ ರಾಜ್ಯದ ಬೆಂಬಲಿಗರು ಅಮೆರಿಕದ ಒಹಾಯೋದ ಸೀಡರ್‌ ಪಾಯಿಂಟ್‍ನಲ್ಲಿ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಕೂಡಿಬಂದಿದ್ದರು. ಸಹೋದರ ರದರ್‌ಫರ್ಡ್‌ “ದೇವರ ರಾಜ್ಯ” ಎಂಬ ಶೀರ್ಷಿಕೆಯುಳ್ಳ ಭಾಷಣದಲ್ಲಿ “ನೋಡಿ, ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂದು ಘೋಷಿಸಿದಾಗ ನೆರೆದಿದ್ದವರ ಉತ್ಸಾಹ ಪುಟಿಯಿತು! 2,000 ಮಂದಿ ವಿಶೇಷ “ಸೇವಾ ದಿನ”ದಲ್ಲಿ ಭಾಗವಹಿಸುವ ಮೂಲಕ ತಮ್ಮ ಹುರುಪನ್ನು ತೋರಿಸಿಕೊಟ್ಟರು. ಅವರು ಅಧಿವೇಶನದ ಸ್ಥಳದಿಂದ 72 ಕಿ.ಮೀ. ದೂರದ ಪ್ರದೇಶದ ವರೆಗೆ ಮನೆ ಮನೆ ಭೇಟಿಮಾಡಿ ಸುವಾರ್ತೆ ಸಾರಿದರು. ಅವರಲ್ಲೊಬ್ಬ ಸಹೋದರರು “ರಾಜ್ಯವನ್ನು ಪ್ರಕಟಿಸಲು ಆಹ್ವಾನ ನೀಡಿದ್ದನ್ನು ಮತ್ತು ನೆರೆದು ಬಂದಿದ್ದವರ ಅತ್ಯುತ್ಸಾಹವನ್ನು ನಾನೆಂದೂ ಮರೆಯಲಾರೆ!” ಎಂದರು. ಅವರ ಈ ಮಾತು ಹಾಜರಾಗಿದ್ದ ಅನೇಕರ ಭಾವನೆಗಳಿಗೆ ಹಿಡಿದ ಕನ್ನಡಿಯಾಗಿತ್ತು.

9, 10. (1) ರಾಜ್ಯ ಘೋಷಕರಿಗೆ ತರಬೇತಿ ನೀಡಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ? (2) ಈ ತರಬೇತಿಯಿಂದ ವೈಯಕ್ತಿಕವಾಗಿ ನೀವು ಹೇಗೆ ಪ್ರಯೋಜನ ಪಡೆದಿದ್ದೀರಿ?

9 ಇಸವಿ 1922ರಷ್ಟಕ್ಕೆ ಲೋಕದಾದ್ಯಂತ 58 ದೇಶಗಳಲ್ಲಿ 17,000ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರು ಸುವಾರ್ತೆ ಸಾರುತ್ತಿದ್ದರು. ಆದರೆ ಅವರಿಗೆ ತರಬೇತಿಯ ಅಗತ್ಯವಿತ್ತು. ನೇಮಿತ ರಾಜನಾದ ಯೇಸು ಒಂದನೇ ಶತಮಾನದಲ್ಲಿ ತನ್ನ ಶಿಷ್ಯರಿಗೆ ಏನು ಸಾರಬೇಕು, ಎಲ್ಲಿ ಮತ್ತು ಹೇಗೆ ಸಾರಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿದ್ದನು. (ಮತ್ತಾ. 10:5-7; ಲೂಕ 9:1-6; 10:1-11) ಅದೇ ನಮೂನೆಯನ್ನು ಆತನು ಈಗಲೂ ಬಳಸುತ್ತಿದ್ದಾನೆ. ಸಾರುವ ಕೆಲಸದಲ್ಲಿ ಭಾಗವಹಿಸುವವರಿಗೆ ಪರಿಣಾಮಕಾರಿಯಾಗಿ ಸಾರಲು ಬೇಕಾದ ನಿರ್ದೇಶನಗಳು, ಸಾಧನಗಳು ದೊರಕುವಂತೆ ಆತನು ನೋಡಿಕೊಳ್ಳುತ್ತಿದ್ದಾನೆ. (2 ತಿಮೊ. 3:17) ಯೇಸು ಕ್ರೈಸ್ತ ಸಭೆಯ ಮುಖಾಂತರ ತನ್ನ ಪ್ರಜೆಗಳಿಗೆ ತರಬೇತಿ ನೀಡುತ್ತಿದ್ದಾನೆ. ಹೇಗೆ? ಒಂದು ವಿಧ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೂಲಕ. ಈ ಶಾಲೆಯನ್ನು ಪ್ರಪಂಚದೆಲ್ಲೆಡೆ ಇರುವ 1,11,000ಕ್ಕಿಂತ ಹೆಚ್ಚು ಸಭೆಗಳಲ್ಲಿ ಪ್ರತಿಯೊಂದರಲ್ಲೂ ನಡೆಸಲಾಗುತ್ತದೆ. ಈ ಶಾಲೆಯಲ್ಲಿ ಸಿಗುವ ತರಬೇತಿಯಿಂದ 70 ಲಕ್ಷಕ್ಕಿಂತ ಹೆಚ್ಚು ಮಂದಿ ಸೌವಾರ್ತಿಕರು ಪ್ರಯೋಜನ ಪಡೆಯುತ್ತಿದ್ದಾರೆ. ‘ಎಲ್ಲ ರೀತಿಯ ಜನರ’ ಹೃದಯವನ್ನು ಮುಟ್ಟುವಂಥ ರೀತಿಯಲ್ಲಿ ಸಾರಲು, ಬೋಧಿಸಲು ಅವರು ಸನ್ನದ್ಧರಾಗಿದ್ದಾರೆ.—1 ಕೊರಿಂಥ 9:20-23 ಓದಿ.

10 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲದೆ ಬೇರೆ ಬೈಬಲ್‌ ಶಾಲೆಗಳನ್ನೂ ಏರ್ಪಾಡು ಮಾಡಲಾಗಿದೆ. ಈ  ಎಲ್ಲ ಶಾಲೆಗಳ ಮೂಲಕ ಸಭಾ ಹಿರಿಯರು, ಪಯನೀಯರರು, ಅವಿವಾಹಿತ ಸಹೋದರರು, ಕ್ರೈಸ್ತ ದಂಪತಿಗಳು, ಬ್ರಾಂಚ್‌ ಕಮಿಟಿ ಸದಸ್ಯರು ಹಾಗೂ ಅವರ ಪತ್ನಿಯರು, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು, ಮಿಷನರಿಗಳು, ಇವರನ್ನೆಲ್ಲ ತರಬೇತುಗೊಳಿಸಲಾಗುತ್ತಿದೆ. * ಕ್ರೈಸ್ತ ದಂಪತಿಗಳಿಗಾಗಿರುವ ಬೈಬಲ್‌ ಶಾಲೆಯೊಂದರ ವಿದ್ಯಾರ್ಥಿಗಳು ತಮಗೆ ದೊರೆತ ಶಿಕ್ಷಣಕ್ಕಾಗಿ ಹೀಗೆ ಕೃತಜ್ಞತೆ ವ್ಯಕ್ತಪಡಿಸಿದರು: “ನಮಗೆ ಸಿಕ್ಕಿದ ವಿಶೇಷ ತರಬೇತಿಯು ಯೆಹೋವನ ಮೇಲಿರುವ ನಮ್ಮ ಪ್ರೀತಿಯನ್ನು ಗಾಢಗೊಳಿಸಿದೆ ಹಾಗೂ ಇತರರಿಗೆ ಸಹಾಯಮಾಡಲು ನಮ್ಮನ್ನು ಹೆಚ್ಚು ಸಜ್ಜುಗೊಳಿಸಿದೆ.”

11. ರಾಜ್ಯ ಘೋಷಕರು ವಿರೋಧ ಬಂದರೂ ಸಾರುವುದನ್ನು ಮುಂದುವರಿಸಲು ಸಾಧ್ಯವಾಗಿರುವುದು ಹೇಗೆ?

11 ಭೂವ್ಯಾಪಕವಾಗಿ ಸಾರಲಿಕ್ಕಾಗಿ ಹಾಗೂ ಬೋಧಿಸಲಿಕ್ಕಾಗಿ ನಡೆಯುತ್ತಿರುವ ಈ ಎಲ್ಲ ಚಟುವಟಿಕೆಗಳು ವೈರಿಯಾದ ಸೈತಾನನ ಕಣ್ಣು ಕುಕ್ಕುತ್ತಿವೆ. ಸಾರುವ ಕೆಲಸ ನಿಲ್ಲಿಸಲಿಕ್ಕಾಗಿ ಸೈತಾನನು ರಾಜ್ಯದ ಸಂದೇಶದ ಮೇಲೂ ಅದನ್ನು ಸಾರುವವರ ಮೇಲೂ ನೇರವಾಗಿ ಹಾಗೂ ಕುಯುಕ್ತಿಯಿಂದ ಆಕ್ರಮಣ ಮಾಡುತ್ತಿದ್ದಾನೆ. ಆದರೆ ಅವನ ಪ್ರಯತ್ನವೇನೂ ಸಾಗದು. ಏಕೆಂದರೆ ಯೆಹೋವ ದೇವರು ತನ್ನ ಮಗನನ್ನು “ಎಲ್ಲ ಸರಕಾರಕ್ಕಿಂತಲೂ ಅಧಿಕಾರಕ್ಕಿಂತಲೂ ಶಕ್ತಿಗಿಂತಲೂ ಪ್ರಭುತ್ವಕ್ಕಿಂತಲೂ . . . ಮಿಗಿಲಾದ” ಸ್ಥಾನದಲ್ಲಿ ಕೂರಿಸಿದ್ದಾನೆ. (ಎಫೆ. 1:20-22) ರಾಜನಾಗಿರುವ ಯೇಸು ತನ್ನ ಶಿಷ್ಯರನ್ನು ಸಂರಕ್ಷಿಸಲು ಮತ್ತು ಮಾರ್ಗದರ್ಶಿಸಲು ತನ್ನ ಅಧಿಕಾರವನ್ನು ಉಪಯೋಗಿಸುತ್ತಾನೆ. ಈ ಮೂಲಕ ತನ್ನ ತಂದೆಯ ಚಿತ್ತ ನೆರವೇರುವಂತೆ ನೋಡಿಕೊಳ್ಳುತ್ತಾನೆ. * ಇಂದು ಸುವಾರ್ತೆಯು ಸಾರಲ್ಪಡುತ್ತಾ ಇದೆ. ಯಥಾರ್ಥ ಹೃದಯದ ಲಕ್ಷಾಂತರ ಜನರಿಗೆ ಯೆಹೋವನ ಮಾರ್ಗಗಳನ್ನು ಕಲಿಸಲಾಗುತ್ತಿದೆ. ಈ ಮಹತ್ತರ ಕೆಲಸದಲ್ಲಿ ನಮಗೆ ಪಾಲಿರುವುದು ಎಂಥ ದೊಡ್ಡ ಸುಯೋಗ!

ರಾಜ ತನ್ನ ಪ್ರಜೆಗಳನ್ನು ಹೆಚ್ಚು ಕೆಲಸಕ್ಕಾಗಿ ಸಂಘಟಿಸುತ್ತಾನೆ

12. ದೇವರ ರಾಜ್ಯ ಸ್ಥಾಪನೆಯಾದಂದಿನಿಂದ ಸಂಘಟನೆಯಲ್ಲಾದ ಕೆಲವು ಪರಿಷ್ಕರಣೆಗಳನ್ನು ವಿವರಿಸಿ.

12 ಯೇಸು 1914ರಲ್ಲಿ ರಾಜನಾದಂದಿನಿಂದ ದೇವಜನರು ತನ್ನ ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ಸಂಘಟಿಸಲ್ಪಟ್ಟಿರುವ ವಿಧವನ್ನು ಪರಿಷ್ಕರಿಸುತ್ತಾ ಬಂದಿದ್ದಾನೆ. (ಯೆಶಾಯ 60:17 ಓದಿ.) 1919ರಲ್ಲಿ ಸಾರುವ ಕೆಲಸದ ಮುಂದಾಳತ್ವ ವಹಿಸಲು ಪ್ರತಿಯೊಂದು ಸಭೆಯಲ್ಲಿ ಸರ್ವಿಸ್‌ ಡೈರೆಕ್ಟರ್‌ನನ್ನು ನೇಮಿಸಲಾಯಿತು. 1927ರಲ್ಲಿ ಪ್ರತಿ ಭಾನುವಾರದಂದು ಮನೆ-ಮನೆ ಸೇವೆಯನ್ನು ಸಂಯೋಜಿಸಲಾಯಿತು. ರಾಜ್ಯದ ಬೆಂಬಲಿಗರು 1931ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬೈಬಲ್‌ ಆಧರಿತ ಹೆಸರನ್ನು ಪಡೆದಾಗ ಸಾರುವ ಕೆಲಸದಲ್ಲಿ ಇನ್ನೂ ಹೆಚ್ಚು ಭಾಗವಹಿಸಲು ಹುರಿದುಂಬಿಸಲ್ಪಟ್ಟರು. (ಯೆಶಾ. 43:10-12) ಸಭೆಯಲ್ಲಿ ಜವಾಬ್ದಾರಿಯುತ ಪುರುಷರನ್ನು ಮೊದಲು ಚುನಾವಣೆ ಮಾಡಿ ಆಯ್ಕೆಮಾಡಲಾಗುತ್ತಿತ್ತು. ಆದರೆ 1938ರಲ್ಲಿ ಅವರನ್ನು ದೇವಪ್ರಭುತ್ವಾತ್ಮಕವಾಗಿ ನೇಮಿಸಲು ಆರಂಭಿಸಲಾಯಿತು. ಒಬ್ಬನೇ ಸಹೋದರ ಮಾಡುತ್ತಿದ್ದ ಸಭಾ ಮೇಲ್ವಿಚಾರಣೆಯನ್ನು 1972ರಲ್ಲಿ ಹಿರಿಯರ ಮಂಡಲಿಗೆ ವಹಿಸಲಾಯಿತು. ‘ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸುವ’ ಕೆಲಸದಲ್ಲಿ ಕೈಜೋಡಿಸಲು ಮುಂದೆಬರುವಂತೆ ಅರ್ಹ ಸಹೋದರರನ್ನು ಉತ್ತೇಜಿಸಲಾಯಿತು. (1 ಪೇತ್ರ 5:2) ಇಸವಿ 1976ರಲ್ಲಿ, ರಾಜ್ಯಕ್ಕೆ ಸಂಬಂಧಿಸಿದ ಲೋಕವ್ಯಾಪಕ ಕೆಲಸದ ಉಸ್ತುವಾರಿ ನಡೆಸಲಿಕ್ಕಾಗಿ ಆಡಳಿತ ಮಂಡಲಿಯನ್ನು ಆರು ಕಮಿಟಿಗಳಾಗಿ ಸಂಘಟಿಸಲಾಯಿತು.  ಹೌದು, ಯೆಹೋವನು ನೇಮಿಸಿರುವ ರಾಜನು ದೇವರ ರಾಜ್ಯದ ಪ್ರಜೆಗಳನ್ನು ಪ್ರಗತಿಪರವಾಗಿ ದೇವಪ್ರಭುತ್ವಾತ್ಮಕ ಅಥವಾ ದೇವಾಡಳಿತದ ವಿಧಾನದಲ್ಲಿ ಸಂಘಟಿಸಿದ್ದಾನೆ.

13. ದೇವರ ರಾಜ್ಯವು 100 ವರ್ಷಗಳಲ್ಲಿ ಸಾಧಿಸಿರುವ ವಿಷಯಗಳು ವೈಯಕ್ತಿಕವಾಗಿ ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಿವೆ?

13 ಮೆಸ್ಸೀಯ ರಾಜನು ಈ 100 ವರ್ಷಗಳ ಆಳ್ವಿಕೆಯಲ್ಲಿ ಏನನ್ನೆಲ್ಲ ಸಾಧಿಸಿದ್ದಾನೆಂದು ನೋಡಿ. ಯೆಹೋವನ ಹೆಸರಿಗಾಗಿ ಜನರ ಒಂದು ಗುಂಪನ್ನು ಶುದ್ಧೀಕರಿಸಿದ್ದಾನೆ. 239 ದೇಶಗಳಲ್ಲಿ ಸುವಾರ್ತೆ ಸಾರುವ ಕೆಲಸವನ್ನು ಮಾರ್ಗದರ್ಶಿಸಿ ಲಕ್ಷಾಂತರ ಜನರಿಗೆ ಯೆಹೋವನ ಮಾರ್ಗಗಳ ಕುರಿತು ಕಲಿಸಿದ್ದಾನೆ. ತಂದೆಯ ಚಿತ್ತವನ್ನು ಮಾಡಲು ತಮ್ಮನ್ನು ಸಿದ್ಧಮನಸ್ಸಿನಿಂದ ಒಪ್ಪಿಸಿಕೊಟ್ಟ 70 ಲಕ್ಷಕ್ಕಿಂತಲೂ ಹೆಚ್ಚು ನಿಷ್ಠಾವಂತ ಪ್ರಜೆಗಳನ್ನು ಐಕ್ಯಗೊಳಿಸಿದ್ದಾನೆ. (ಕೀರ್ತ. 110:3) ಯೆಹೋವ ದೇವರು ಮೆಸ್ಸೀಯ ರಾಜ್ಯದ ಮೂಲಕ ಮಾಡಿರುವ ಕೆಲಸಗಳು ನಿಜಕ್ಕೂ ಮಹತ್ತರ, ಆಶ್ಚರ್ಯಕರ! ಮುಂದೆ ಇನ್ನೂ ಹೆಚ್ಚು ರೋಮಾಂಚಕಾರಿ ಘಟನೆಗಳು ನಡೆಯಲಿವೆ!

ಮೆಸ್ಸೀಯ ರಾಜ್ಯವು ಮುಂದೆ ತರಲಿರುವ ಆಶೀರ್ವಾದಗಳು!

14. (1) “ನಿನ್ನ ರಾಜ್ಯವು ಬರಲಿ” ಎಂದು ದೇವರಲ್ಲಿ ಪ್ರಾರ್ಥಿಸುವಾಗ ನಾವೇನು ಕೇಳಿಕೊಳ್ಳುತ್ತಿದ್ದೇವೆ? (2) ಇಸವಿ 2014ರ ವರ್ಷವಚನ ಯಾವುದು? (3) ಈ ವಚನ ಸೂಕ್ತವೇಕೆ?

14 ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನನ್ನು 1914ರಲ್ಲಿ ಮೆಸ್ಸೀಯ ರಾಜ್ಯದ ರಾಜನಾಗಿ ಮಾಡಿದ್ದು, “ನಿನ್ನ ರಾಜ್ಯವು ಬರಲಿ” ಎಂಬ ನಮ್ಮ ಪ್ರಾರ್ಥನೆಗೆ ಸಂಪೂರ್ಣ ಉತ್ತರವಲ್ಲ. (ಮತ್ತಾ. 6:10) ಯೇಸು ‘ವೈರಿಗಳ ಮಧ್ಯದಲ್ಲಿ ದೊರೆತನಮಾಡುವನು’ ಎಂದು ಬೈಬಲಿನಲ್ಲಿ ಮುಂತಿಳಿಸಲಾಗಿತ್ತು. (ಕೀರ್ತ. 110:2) ಸೈತಾನನ ನಿಯಂತ್ರಣದಲ್ಲಿರುವ ಮಾನವ ಸರಕಾರಗಳು ಇನ್ನೂ ದೇವರ ರಾಜ್ಯವನ್ನು ವಿರೋಧಿಸುತ್ತಿವೆ. ಹಾಗಾಗಿ ದೇವರ ರಾಜ್ಯ ಬರಲಿ ಎಂದು ಪ್ರಾರ್ಥಿಸುವ ಮೂಲಕ ನಾವು ದೇವರಲ್ಲಿ ಏನು ಕೇಳಿಕೊಳ್ಳುತ್ತಿದ್ದೇವೆಂದರೆ, ಮೆಸ್ಸೀಯ ರಾಜನು ತನ್ನ ಸಹರಾಜರೊಂದಿಗೆ ಬಂದು ಮಾನವ ಆಳ್ವಿಕೆಗೆ ಹಾಗೂ ದೇವರ ರಾಜ್ಯವನ್ನು ವಿರೋಧಿಸುವ ಜನರಿಗೆ ಅಂತ್ಯವನ್ನು ತರಲಿ ಎಂದೇ. ಇದು ಸಂಭವಿಸುವಾಗ ದಾನಿಯೇಲ 2:44ರಲ್ಲಿರುವ ಮಾತು ನೆರವೇರಿಕೆ ಹೊಂದುವುದು. ದೇವರ ರಾಜ್ಯವು “ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ” ಬಿಡುವುದು. ಮಾತ್ರವಲ್ಲ ದೇವರ ರಾಜ್ಯವನ್ನು ವಿರೋಧಿಸುವ ಭೂಸರಕಾರಗಳನ್ನು ಅಳಿಸಿಹಾಕುವುದು. (ಪ್ರಕ. 6:1, 2; 13:1-18; 19:11-21) ಈ ಘಟನೆ ಇನ್ನೇನು ಸ್ವಲ್ಪ ಸಮಯದಲ್ಲೇ ಸಂಭವಿಸಲಿದೆ. ಹಾಗಾಗಿ ದೇವರ ರಾಜ್ಯ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಳ್ಳುವ ಈ 2014ನೇ ವರ್ಷದ ವರ್ಷವಚನ ಮತ್ತಾಯ 6:10 ಆಗಿರುವುದು ಎಷ್ಟು ಸೂಕ್ತ! ಅದು ಹೇಳುವುದು: “ನಿನ್ನ ರಾಜ್ಯವು ಬರಲಿ.”

2014ರ ವರ್ಷವಚನ: “ನಿನ್ನ ರಾಜ್ಯವು ಬರಲಿ.”ಮತ್ತಾಯ 6:10

15, 16. (1) ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ಪುಳಕಗೊಳಿಸುವ ಯಾವ ಘಟನೆಗಳು ಸಂಭವಿಸುವವು? (2) ಮೆಸ್ಸೀಯ ರಾಜನಾಗಿ ಯೇಸು ಮಾಡುವ ಕೊನೆಯ ಕೆಲಸ ಯಾವುದು? (3) ತನ್ನೆಲ್ಲ ಸೃಷ್ಟಿಯ ವಿಷಯದಲ್ಲಿ ಯೆಹೋವನಿಗಿದ್ದ ಉದ್ದೇಶ ಆಗ ಏನಾಗುವುದು?

15 ಮೆಸ್ಸೀಯ ರಾಜನು ದೇವರ ವಿರೋಧಿಗಳನ್ನು ನಾಶಮಾಡಿದ ನಂತರ ಸೈತಾನನನ್ನೂ ಅವನ ದೆವ್ವಗಳನ್ನೂ ಅಗಾಧ ಸ್ಥಳಕ್ಕೆ ದೊಬ್ಬಿ ಸಾವಿರ ವರ್ಷ ಬಂಧನದಲ್ಲಿಡುವನು. (ಪ್ರಕ. 20:1-3) ಯಾವುದೇ ಕೆಟ್ಟ ಪ್ರಭಾವವಿರದ ಭೂಮಿಯಲ್ಲಿ ಆಗ ದೇವರ ರಾಜ್ಯವು ಮುಂದಿನ ಕೆಲಸವನ್ನು ಕೈಗೆತ್ತಿಕೊಳ್ಳುವುದು. ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಿಂದ ಮಾನವರು ಪ್ರಯೋಜನಗಳನ್ನು ಪಡೆಯುವಂತೆ ಸಹಾಯಮಾಡುವುದು ಮತ್ತು ಆದಾಮನಿಂದ ಬಂದ ಪಾಪದ ಪರಿಣಾಮಗಳನ್ನೆಲ್ಲ ಗುರುತಿಲ್ಲದಂತೆ ಅಳಿಸಿಹಾಕುವುದು. ಸಮಾಧಿಯಲ್ಲಿರುವ ಕೋಟ್ಯಂತರ ಜನರನ್ನು ರಾಜನು ಪುನರುತ್ಥಾನಗೊಳಿಸುವನು. ಯೆಹೋವ ದೇವರ ಬಗ್ಗೆ ಅವರೆಲ್ಲರು ಕಲಿಯಲಿಕ್ಕಾಗಿ ಬಹು ವ್ಯಾಪಕ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸುವನು. (ಪ್ರಕ. 20:12, 13) ಇಡೀ ಭೂಮಿ ಏದೆನ್‌ ತೋಟದಂತೆ ಕಂಗೊಳಿಸುವುದು! ಎಲ್ಲ ನಂಬಿಗಸ್ತ ಮಾನವರು ಪರಿಪೂರ್ಣರಾಗುವರು!

16 ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯೊಳಗೆ ಮೆಸ್ಸೀಯ ರಾಜ್ಯವು ತನ್ನ ಉದ್ದೇಶವನ್ನು ಸಾಧಿಸಿರುವುದು. ಆಗ ಯೇಸು ರಾಜ್ಯವನ್ನು ತನ್ನ ತಂದೆಯ ಕೈಗೊಪ್ಪಿಸುವನು. (1 ಕೊರಿಂಥ 15:24-28 ಓದಿ.) ಆ ನಂತರ ಯೆಹೋವನ ಮತ್ತು ಭೂಮಿಯಲ್ಲಿರುವ ಆತನ ಮಕ್ಕಳ ನಡುವೆ ಮಧ್ಯವರ್ತಿಯ ಅಗತ್ಯವಿರುವುದಿಲ್ಲ. ನಮ್ಮ ತಂದೆಯಾದ ಯೆಹೋವನ ಸ್ವರ್ಗೀಯ ಪುತ್ರರು ಮತ್ತು ಆತನ ಭೂಮಕ್ಕಳು ಒಂದೇ ವಿಶ್ವವ್ಯಾಪಿ ಕುಟುಂಬಕ್ಕೆ ಸೇರಿದವರಾಗಿ ಆತನೊಂದಿಗೆ ಏಕತೆಯಿಂದಿರುವರು!

17. ದೇವರ ರಾಜ್ಯದ ಸಂಬಂಧದಲ್ಲಿ ವೈಯಕ್ತಿಕವಾಗಿ ನೀವು ಏನು ಮಾಡಲು ದೃಢನಿರ್ಧಾರ ಮಾಡಿದ್ದೀರಿ?

17 ದೇವರ ರಾಜ್ಯ ಈ 100 ವರ್ಷಗಳಲ್ಲಿ ಸಾಧಿಸಿರುವ ರೋಮಾಂಚಕ ಸಂಗತಿಗಳು ತಾನೇ ಭೂಮಿಯಲ್ಲಿರುವ ವಿಷಯಗಳ ಮೇಲೆ ಯೆಹೋವನಿಗೆ ನಿಯಂತ್ರಣವಿದೆ ಹಾಗೂ ಭೂಮಿಗಾಗಿರುವ ಆತನ ಉದ್ದೇಶ ನೆರವೇರಿಯೇ ತೀರುವುದು ಎಂಬ ಭರವಸೆಯನ್ನು ನಮಗೆ ಕೊಡುತ್ತವೆ. ಹಾಗಾಗಿ ನಾವು ಯಾವಾಗಲೂ ಆತನ ನಿಷ್ಠಾವಂತ ಪ್ರಜೆಗಳಾಗಿರೋಣ, ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸೋಣ. ಇದೆಲ್ಲವನ್ನು ಮಾಡುತ್ತಾ ಮುಂದುವರಿಯುವಾಗ “ನಿನ್ನ ರಾಜ್ಯವು ಬರಲಿ” ಎಂಬ ನಮ್ಮ ಮನದಾಳದ ಪ್ರಾರ್ಥನೆಯನ್ನು ಯೆಹೋವನು ಬಲುಬೇಗನೆ ಉತ್ತರಿಸುವನು ಎಂಬ ಖಾತ್ರಿ ನಮಗಿದೆ!

^ ಪ್ಯಾರ. 3 ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 88-92 ನೋಡಿ.

^ ಪ್ಯಾರ. 5 2013, ಜುಲೈ 15ರ ಕಾವಲಿನಬುರುಜು, ಪುಟ 22-23, ಪ್ಯಾರ 12 ನೋಡಿ.

^ ಪ್ಯಾರ. 10 2012, ಸೆಪ್ಟೆಂಬರ್‌ 15ರ ಕಾವಲಿನಬುರುಜು, ಪುಟ 13-17ರಲ್ಲಿರುವ “ದೈವಿಕ ಶಿಕ್ಷಣ ಶಾಲೆಗಳು—ಯೆಹೋವನ ಪ್ರೀತಿಯ ಪುರಾವೆ” ಲೇಖನ ನೋಡಿ.

^ ಪ್ಯಾರ. 11 ವಿವಿಧ ದೇಶಗಳ ನ್ಯಾಯಾಲಯದಲ್ಲಿ ಸಿಕ್ಕಿರುವ ವಿಜಯಗಳ ಉದಾಹರಣೆಗಳಿಗಾಗಿ 1998, ಡಿಸೆಂಬರ್‌ 1ರ ಕಾವಲಿನಬುರುಜು ಪುಟ 19-22 ನೋಡಿ.