“ಅಯ್ಯೋ, ಇನ್‌ ಸ್ವಲ್ಪ ಸಮಯ ಇದ್ದಿದ್ರೆ. . . ” ಅಂತ ಎಷ್ಟೊಂದು ಸಲ ನೀವು ಹೇಳಿರಬಹುದಲ್ವಾ? ಒಂದರ್ಥದಲ್ಲಿ, ಸಮಯ ಯಾರ ವಿಷಯದಲ್ಲೂ ಪಕ್ಷಪಾತ ಮಾಡಲ್ಲ. ಶ್ರೀಮಂತನಾಗಿರಲಿ, ಬಡವನಾಗಿರಲಿ ಅಥವಾ ಅಧಿಕಾರಿಯಾಗಿರಲಿ, ಅಲ್ಪನಾಗಿರಲಿ ಎಲ್ಲರಿಗೂ ದಿನಕ್ಕೆ ಇರುವುದು ಇಪ್ಪತ್ನಾಲ್ಕು ಗಂಟೆನೇ. ಯಾರು ಕೂಡ ತಮ್ಮ ಬಳಿ ಸಮಯವನ್ನು ಕೂಡಿಡಲು ಸಾಧ್ಯವಿಲ್ಲ. ಒಮ್ಮೆ ಕಳೆದು ಹೋದ ಹೊತ್ತು ಮತ್ತೆ ಸಿಗಲ್ಲ. ಹಾಗಾಗಿ ವಿವೇಚನೆ ಉಪಯೋಗಿಸಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಹೇಗೆ? ಅದನ್ನು ತಿಳಿಯಲು, ಸಮಯವನ್ನು ವಿವೇಚನೆಯಿಂದ ಬಳಸಲು ಹಲವರಿಗೆ ನೆರವಾದ ನಾಲ್ಕು ಕಾರ್ಯವಿಧಾನಗಳನ್ನು ಪರಿಗಣಿಸೋಣ.

ಕಾರ್ಯವಿಧಾನ 1: ಸುವ್ಯವಸ್ಥಿತರಾಗಿರಿ

ಆದ್ಯತೆ ನೀಡಿ. ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವಂತೆ’ ಬೈಬಲ್‌ ಸಲಹೆ ನೀಡುತ್ತದೆ. (ಫಿಲಿಪ್ಪಿ 1:10) ಕೆಲವು ಕೆಲಸಗಳು, ಒಂದೋ ಪ್ರಾಮುಖ್ಯವಾಗಿರುತ್ತವೆ ಇಲ್ಲವೇ ತುರ್ತಿನದ್ದಾಗಿರುತ್ತವೆ. ಇನ್ನು ಕೆಲವು, ಪ್ರಾಮುಖ್ಯವೂ ತುರ್ತಾಗಿ ಮಾಡಬೇಕಾದಂಥವೂ ಆಗಿರುತ್ತವೆ. ಹಾಗಾಗಿ ಅಂಥ ಕೆಲಸಗಳಲ್ಲಿ ಯಾವ ಕೆಲಸ ಮೊದಲು, ಯಾವುದು ಆಮೇಲೆ ಎಂದು ಮನಸ್ಸಿನಲ್ಲಿಟ್ಟುಕೊಂಡು ಪಟ್ಟಿ ಮಾಡಿ. ಉದಾಹರಣೆಗೆ, ಅಡುಗೆ ಮಾಡಲು ಬೇಕಾದ ಸಾಮಾನುಗಳನ್ನು ತರುವ ಕೆಲಸ ತುರ್ತಿನದ್ದಲ್ಲದಿದ್ದರೂ, ಪ್ರಾಮುಖ್ಯವಾದದ್ದಾಗಿದೆ. ನಿರ್ದಿಷ್ಟ ಸಮಯಕ್ಕೆ ಬರುವ ನಿಮ್ಮ ನೆಚ್ಟಿನ ಟಿವಿ ಕಾರ್ಯಕ್ರಮವನ್ನು ನೋಡುವುದು ತುರ್ತಿನದ್ದಾಗಿರಬಹುದು, ಆದರೆ ಪ್ರಾಮುಖ್ಯವಾದ ಕೆಲಸವೇನಲ್ಲ.

ಮುಂದಾಲೋಚನೆ ಮಾಡಿ. “ಮೊಂಡುಕೊಡಲಿಯ ಬಾಯಿ ಮೊನೆಮಾಡದಿದ್ದರೆ ಹೆಚ್ಚು ಬಲವನ್ನು ಪ್ರಯೋಗಿಸಬೇಕಲ್ಲವೆ” ಎಂದು ಹೇಳಿ, ನಂತರ “ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ” ಎನ್ನುತ್ತದೆ ಪ್ರಸಂಗಿ 10:10. ಇದರಿಂದೇನು ಪಾಠ? ಕೊಡಲಿಯನ್ನು ಮೊದಲೇ ಮೊನೆಮಾಡಿಟ್ಟರೆ, ಮುಂದೆ ಮಾಡುವ ಕೆಲಸಕ್ಕೆ ಅದು ಸಹಾಯವಾಗುತ್ತದೆ. ಹಾಗೆಯೇ, ಮುಂದಾಲೋಚನೆ ಮಾಡುವುದಾದರೆ ಸಮಯವನ್ನು ಸದುಪಯೋಗಿಸಲು ಸಾಧ್ಯವಾಗುತ್ತದೆ. ಒಂದು ಕೆಲಸ ಯಾವ ಪ್ರಯೋಜನಕ್ಕೂ ಬಾರದೆ, ಕೇವಲ ನಮ್ಮ ಸಮಯ, ಶಕ್ತಿಯನ್ನು ಹಾಳುಮಾಡುವಂಥದ್ದಾಗಿದ್ದರೆ ಅಂಥದನ್ನು ಬದಿಗಿಡಿ ಅಥವಾ ಬಿಟ್ಟುಬಿಡಿ. ನೀವು ಮಾಡಬೇಕೆಂದಿರುವ ಕೆಲಸ ಸಮಯಕ್ಕಿಂತ ಮುಂಚಿತವಾಗಿಯೇ ಮುಗಿದರೆ, ಉಳಿದ ಸಮಯವನ್ನು ಮುಂದಿನ ಕೆಲಸ ಮಾಡಲು ಯಾಕೆ ಉಪಯೋಗಿಸಿಕೊಳ್ಳಬಾರದು? ಮುಂದಾಲೋಚನೆ ಮಾಡುವುದಾದರೆ, ಕೊಡಲಿಯನ್ನು ಮೊನೆಮಾಡುವ ಬುದ್ಧಿವಂತ ಕೆಲಸಗಾರನಂತೆ, ನೀವು ಸಹ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.

ಜೀವನವನ್ನು ಸರಳವಾಗಿಡಿ. ಅಗತ್ಯವಿಲ್ಲದ ಅಥವಾ ಸಮಯವನ್ನು ಕಬಳಿಸುವ ವಸ್ತುಗಳಿಗೆ ವಿಮುಖರಾಗಿರಿ. ಮಿತಿಮೀರಿದ ಕೆಲಸ ಕಾರ್ಯಗಳು ಬೇಡದ ಒತ್ತಡವನ್ನು ಹೇರಬಹುದು ಮತ್ತು ನಿಮ್ಮ ಆನಂದವನ್ನು ಕಸಿದುಕೊಳ್ಳಬಹುದು.

 ಕಾರ್ಯವಿಧಾನ 2: ಸಮಯವನ್ನು ಕದಿಯುವ ವಿಷಯಗಳಿಂದ ದೂರವಿರಿ

ಕಾಲ ತಳ್ಳುವಿಕೆ ಮತ್ತು ಅನಿಶ್ಚಿತತೆ. “ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು.” (ಪ್ರಸಂಗಿ 11:4) ಇದರಿಂದೇನು ಪಾಠ? ಹವಾಮಾನದ ಬದಲಾವಣೆಗಾಗಿ ಕಾಯುತ್ತಾ ಕೂರುವ ರೈತ ಬೀಜ ಬಿತ್ತುವುದೂ ಇಲ್ಲ, ಬೆಳೆ ಬೆಳೆಯುವುದೂ ಇಲ್ಲ. ಹಾಗಾಗಿ ನಾವು ಸುಮ್ಮನೆ ಕಾಲ ತಳ್ಳಿದರೆ ಸಮಯವನ್ನೂ ಕಳೆದುಕೊಳ್ಳುತ್ತೇವೆ, ಜೊತೆಗೆ ಆಗಬೇಕಾದ ಕೆಲಸವೂ ಹಾಗೆ ಉಳಿದು ಹೋಗುತ್ತದೆ. ಜೀವನದಲ್ಲಿ ಮುಂದೇನಾಗುವುದೆಂದು ಗೊತ್ತಿಲ್ಲದ ಕಾರಣ ನಾವು ಯಾವುದೇ ನಿರ್ಧಾರಕ್ಕೆ ಬರದೆ ಅನಿಶ್ಚಿತರಾಗಬಹುದು. ಇಲ್ಲವೇ, ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅದಕ್ಕೆ ಸಂಬಂಧಪಟ್ಟ ಎಲ್ಲಾ ಚಿಕ್ಕಪುಟ್ಟ ವಿಷಯಗಳಿಗಾಗಿ ಕಾಯುತ್ತಾ ಕೂರಬಹುದು. ಒಂದು ಪ್ರಾಮುಖ್ಯ ನಿರ್ಧಾರಕ್ಕಾಗಿ ಸರಿಯಾದ ಮಾಹಿತಿ ಕಲೆಹಾಕಬೇಕು ಮತ್ತು ಆ ನಿರ್ಧಾರವನ್ನು ಸಾವಕಾಶದಿಂದ ತೆಗೆದುಕೊಳ್ಳಬೇಕು ಎನ್ನುವುದಂತು ನಿಜ. ಜ್ಞಾನೋಕ್ತಿ 14:15ರಲ್ಲೂ “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಎಂದಿದೆ. ಆದರೆ, ಅನೇಕ ನಿರ್ಧಾರಗಳಲ್ಲಿ ‘ಹೀಗೇ ಆಗುತ್ತೆ’ ಎಂದು ಹೇಳಲು ಸಾಧ್ಯವಿಲ್ಲ.—ಪ್ರಸಂಗಿ 11:6.

ಪರಿಪೂರ್ಣತೆಗಾಗಿ ಅಪೇಕ್ಷೆ. “ಮೇಲಣಿಂದ [ದೇವರಿಂದ] ಬರುವ ವಿವೇಕವು . . . ನ್ಯಾಯಸಮ್ಮತವಾದದ್ದು” ಎಂದು ಯಾಕೋಬ 3:17 ಹೇಳುತ್ತದೆ. ಖಂಡಿತವಾಗಿ, ನಾವು ಮಾಡುವ ಕೆಲಸ ಸರಿಯಿರಬೇಕೆಂಬ ಬಯಕೆ ಮೆಚ್ಚುವಂಥದ್ದೇ. ಆದರೆ ಕೆಲವೊಮ್ಮೆ, ಅತಿಯಾದ ಅಪೇಕ್ಷೆ ನಮ್ಮನ್ನು ನಿರಾಶೆಗೊಳಿಸಬಹುದು ಮತ್ತು ನಾವು ಸೋತು ಹೋಗುವಂತೆ ಮಾಡಬಹುದು. ಉದಾಹರಣೆಗೆ, ಒಬ್ಬನು ಹೊಸ ಭಾಷೆಯೊಂದನ್ನು ಕಲಿಯುವಾಗ, ‘ತಪ್ಪುಗಳನ್ನು ಮಾಡೇ ಮಾಡುತ್ತೇನೆ, ಹಾಗೆ ಮಾಡುವ ತಪ್ಪಿನಿಂದಲೇ ಕಲಿಯುತ್ತೇನೆ’ ಎಂದು ಅರಿತಿರಬೇಕು. ಅಕಸ್ಮಾತ್‌, ಪರಿಪೂರ್ಣತೆಯನ್ನು ಅಪೇಕ್ಷಿಸುವವನಾಗಿದ್ದರೆ ಏನಾಗಬಹುದೆಂದು ಯೋಚಿಸಿ. ಮಾತಾಡಿದರೆ ತಪ್ಪಾಗಬಹುದೆಂಬ ಭಯದಿಂದ ಅವನು ಆ ಹೊಸ ಭಾಷೆಯಲ್ಲಿ ಮಾತೇ ಆಡದಿರಬಹುದು. ಇದರಿಂದ ಅವನ ಪ್ರಗತಿಗೆ ಕೊಡಲಿ ಬೀಳಬಹುದು. ಹಾಗಾಗಿ, ಪರಿಪೂರ್ಣತೆಗಾಗಿ ಅಪೇಕ್ಷಿಸದೆ ಇರುವುದು ಬಹಳ ಒಳ್ಳೆಯದು. “ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ” ಎಂದು ಜ್ಞಾನೋಕ್ತಿ 11:2 ಹೇಳುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ, ವಿನಮ್ರ ಮತ್ತು ದೀನ ವ್ಯಕ್ತಿ ತನ್ನನ್ನು ತಾನೇ ಹೆಚ್ಚಾಗಿ ಪರಿಗಣಿಸದೆ, ತಪ್ಪಾದಾಗ ತನ್ನ ಕುರಿತು ತಾನೇ ನಗುತ್ತಾನೆ.

“ಕೆಲವೊಂದು ವಸ್ತುಗಳನ್ನು ಹಣದಿಂದ ಕೊಂಡುಕೊಳ್ಳಲಾಗುವುದಿಲ್ಲ, ಸಮಯದಿಂದ ಕೊಂಡುಕೊಳ್ಳಬಹುದು.”—ವಾಟ್‌ ಟು ಡು ಬಿಟ್ವಿನ್‌ ಬರ್ಥ್‌ ಆ್ಯಂಡ್ ಡೆತ್‌

 ಕಾರ್ಯವಿಧಾನ 3: ಸಮತೋಲನದಿಂದಿರಿ ಮತ್ತು ವಾಸ್ತವಿಕತೆಗೆ ಹತ್ತಿರವಾಗಿರಿ

ಕೆಲಸ-ಮನರಂಜನೆಯಲ್ಲಿ ಸಮತೋಲನ ಕಾಪಾಡಿ. “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.” (ಪ್ರಸಂಗಿ 4:6) ಯಾವಾಗಲೂ ಕೆಲಸದಲ್ಲೇ ಮುಳುಗಿಹೋಗುವ ವ್ಯಕ್ತಿ ತನ್ನ ‘ಪ್ರಯಾಸದ ಬೊಗಸೆಯಿಂದ’ ಸಿಗುವ ಫಲದಿಂದ ವಂಚಿತನಾಗುತ್ತಾನೆ. ಆ ಫಲವನ್ನು ಅನುಭವಿಸಲು ಸಮಯವಾಗಲಿ, ಸಾಮರ್ಥ್ಯವಾಗಲಿ ಅವನಲ್ಲಿ ಉಳಿದಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸೋಮಾರಿಯು ಏನೂ ಕೆಲಸ ಮಾಡದೆ ‘ಬೊಗಸೆಯಷ್ಟು’ ಆರಾಮದ ಜೀವನವನ್ನು ಹರಸುತ್ತಾ, ತನಗಿರುವ ಅಮೂಲ್ಯ ಸಮಯವನ್ನು ಪೋಲುಮಾಡುತ್ತಾನೆ. ಬೈಬಲ್‌ ಸಮತೂಕದ ನೋಟವನ್ನು ಕಾಪಾಡಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆಯಂತೆ ಕಷ್ಟಪಟ್ಟು ಕೆಲಸವನ್ನೂ ಮಾಡಬೇಕು ಮತ್ತು ಅದರ ಫಲವನ್ನೂ ಅನುಭವಿಸಬೇಕು. ನಮ್ಮ ಕೆಲಸದಿಂದ ಸಿಗುವ ಇಂಥ ಸುಖಸಂತೋಷವು ‘ದೇವರ ಅನುಗ್ರಹವಾಗಿದೆ’—ಪ್ರಸಂಗಿ 5:19.

ನಿದ್ದೆ ವಿಷಯದಲ್ಲಿ ಜಿಪುಣತನ ಮಾಡಬೇಡಿ. “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು.” (ಕೀರ್ತನೆ 4:8) ಶಾರೀರಿಕ ಹಾಗೂ ಭಾವಾನಾತ್ಮಕ ಆರೋಗ್ಯ ಉತ್ತಮವಾಗಿರಲು ಮತ್ತು ಮನಸ್ಸು ಚುರುಕಾಗಿರಲು ಹೆಚ್ಚಿನ ವಯಸ್ಕರು ಸುಮಾರು ಎಂಟು ಗಂಟೆ ನಿದ್ದೆ ಮಾಡಬೇಕು. ಮನಸ್ಸು ಚುರುಕಾಗಿದ್ದರೆ ಏಕಾಗ್ರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತವೆ. ಹೀಗೆ ನಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ನಿದ್ದೆಗಾಗಿ ಮಾಡುವ ಸಮಯದ ಹೂಡಿಕೆ ಭವಿಷ್ಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ತರುತ್ತದೆ. ಆದರೆ ನಿದ್ರಾಹೀನತೆ ನಮ್ಮ ಕಲಿಕಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ, ಕಿರಿಕಿರಿಯನ್ನು ಉಂಟುಮಾಡುತ್ತದೆಹಾಗೂ ಅಪಘಾತಗಳಿಗೆ, ತಪ್ಪುಗಳಿಗೆ ಎಡೆಮಾಡಿಕೊಡುತ್ತದೆ.

ವಾಸ್ತವಿಕವಾದ ಗುರಿಗಳನ್ನಿಡಿ. “ಬಗೆಬಗೆಯಾಗಿ ಆಶಿಸುವದಕ್ಕಿಂತ ಕಣ್ಣೆದುರಿಗಿರುವದನ್ನು ಅನುಭವಿಸುವದೇ ಲೇಸು” (ಪ್ರಸಂಗಿ 6:9) ಇದರರ್ಥ? ವಿವೇಕಿಯು ತನ್ನ ಕ್ಷುಲ್ಲಕ ಆಸೆಗಳಿಗೆ ಅದರಲ್ಲೂ, ಅವಾಸ್ತವಿಕವಾದ ಅಥವಾ ಸಂತೃಪ್ತಿಯನ್ನು ತರದ ಆಸೆಗಳಿಗೆ ದಾಸನಾಗಿರುವುದಿಲ್ಲ. ಹೀಗೆ ಅವನು ಚಾಲಾಕಿ ಜಾಹೀರಾತುಗಳಿಗಾಗಲಿ ಅಥವಾ ಸುಲಭವಾಗಿ ಸಿಗುವ ಸಾಲದ ಯೋಜನೆಗಳಿಗಾಗಲಿ ಬಲಿಬೀಳುವುದಿಲ್ಲ. ಬದಲಿಗೆ, ‘ತನ್ನ ಕಣ್ಣೆದುರಿಗಿರುವ’ ಗುರಿಗಳ ವಿಷಯದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚಲು ಕಲಿಯುತ್ತಾನೆ.

 ಕಾರ್ಯವಿಧಾನ 4: ಒಳ್ಳೆಯ ಮೌಲ್ಯಗಳು ನಿಮ್ಮನ್ನು ಮಾರ್ಗದರ್ಶಿಸಲಿ

ನಿಮ್ಮ ಮೌಲ್ಯಗಳನ್ನು ಪರಿಗಣಸಿ. ನಿಮ್ಮ ಮೌಲ್ಯಗಳು ಯಾವುದು ಒಳ್ಳೇದು, ಪ್ರಾಮುಖ್ಯವಾದದ್ದು ಮತ್ತು ಬೆಲೆಬಾಳುವಂಥದ್ದು ಎಂದು ಅಂದಾಜು ಮಾಡಲು ನಿಮ್ಮನ್ನು ಸಮರ್ಥರನ್ನಾಗಿ ಮಾಡುತ್ತವೆ. ನಿಮ್ಮ ಜೀವನವನ್ನು ಒಂದು ಬಾಣಕ್ಕೆ ಹೋಲಿಸುವುದಾದರೆ, ಅದನ್ನು ಸರಿಯಾದ ಗುರಿಯ ಕಡೆಗೆ ನಿರ್ದೇಶಿಸುವಂಥವುಗಳು ನಿಮ್ಮ ಮೌಲ್ಯಗಳೇ. ಹಾಗಾಗಿ, ಉತ್ತಮ ಮೌಲ್ಯಗಳು ಜೀವನದಲ್ಲಿ ಸರಿಯಾದ ಆದ್ಯತೆಗಳನ್ನಿಡುವಂತೆ ಮತ್ತು ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗಿಸಿಕೊಳ್ಳುವಂತೆ ಸಹಾಯ ಮಾಡುತ್ತವೆ. ಅಂಥ ಮುತ್ತಿನಂಥ ಮೌಲ್ಯಗಳನ್ನು ನೀವೆಲ್ಲಿ ಕಂಡುಕೊಳ್ಳಬಹುದು? ಉತ್ಕೃಷ್ಟ ವಿವೇಕದ ಭಂಡಾರವಾಗಿರುವ ಬೈಬಲ್‍ನಲ್ಲಿ ಅಂಥ ಮೌಲ್ಯಗಳಿವೆಯೆಂದು ಅನೇಕರು ಗುರುತಿಸಿ ಅದರ ಮೊರೆಹೋಗುತ್ತಿದ್ದಾರೆ.—ಜ್ಞಾನೋಕ್ತಿ 2:6, 7.

ಪ್ರೀತಿಯು ನಿಮ್ಮ ಪ್ರಧಾನ ಮೌಲ್ಯವಾಗಿರಲಿ. ಪ್ರೀತಿ “ಐಕ್ಯದ ಪರಿಪೂರ್ಣ ಬಂಧವಾಗಿದೆ” ಎಂದು ಕೊಲೊಸ್ಸೆ 3:14ರಲ್ಲಿ ತಿಳಿಸಲಾಗಿದೆ. ಪ್ರೀತಿ ಇಲ್ಲದಿದ್ದರೆ ನಿಜ ಸಂತೋಷವಾಗಲಿ, ಭಾವಾನಾತ್ಮಕ ಭದ್ರತೆಯಾಗಲಿ ಇರುವುದಿಲ್ಲ. ವಿಶೇಷವಾಗಿ ಕುಟುಂಬದಲ್ಲಿ ಪ್ರೀತಿ ಬಹಳ ಮುಖ್ಯ. ಬಹುಶಃ ಶ್ರೀಮಂತಿಕೆಯನ್ನು ಅಥವಾ ಐಹಿಕ ಉದ್ಯೋಗವನ್ನು ಬೆನ್ನಟ್ಟುವವರು ಈ ಸತ್ಯವನ್ನು ತಳ್ಳಿಹಾಕುತ್ತಾರೆ. ಪರಿಣಾಮ, ಅವರು ತಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಬೈಬಲ್‍ನಲ್ಲಿ ನೂರಾರೂ ಬಾರಿ ಪ್ರೀತಿಯ ಬಗ್ಗೆ ಉಲ್ಲೇಖಿಸುತ್ತಾ, ಅದನ್ನು ಸರ್ವೋತ್ಕೃಷ್ಟ ಮೌಲ್ಯವೆಂದು ಮಾನ್ಯಮಾಡಲಾಗಿದೆ.—1 ಕೊರಿಂಥ 13:1-3; 1 ಯೋಹಾನ 4:8.

ನಿಮ್ಮ ಆಧ್ಯಾತ್ಮಿಕತೆಗಾಗಿ ಸಮಯವನ್ನು ಬದಿಗಿಡಿ. ಜೆಫ್‌ ಎಂಬವರಿಗೆ ಪ್ರೀತಿಯ ಮಡದಿ, ಮುದ್ದಾದ ಎರಡು ಮಕ್ಕಳು, ಒಳ್ಳೆಯ ಸ್ನೇಹಿತರು ಮತ್ತು ವೈದ್ಯಕೀಯ ವಲಯದಲ್ಲಿ ಉತ್ತಮವಾದ ಕೆಲಸವಿತ್ತು. ಇಷ್ಟೆಲ್ಲಾ ಇದ್ದರೂ, ಅವರು ಆ ವೃತ್ತಿಯಲ್ಲಿ ಇದ್ದಿದ್ದರಿಂದ ರೋಗದಿಂದ ಬಳಲುವ, ಸಾಯುವ ದೃಶ್ಯಗಳನ್ನು ಕಣ್ಣಾರೆ ನೋಡಬೇಕಾಗುತ್ತಿತ್ತು. “ಜೀವನ ಹೀಗಿರಬೇಕಾ?” ಎಂದು ಅವರು ಪ್ರಶ್ನಿಸುತ್ತಿದ್ದರು. ನಂತರದ ದಿನಗಳಲ್ಲಿ ಅವರು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಬೈಬಲಾಧಾರಿತ ಸಾಹಿತ್ಯವನ್ನು ಓದಿ, ಸಂತೃಪ್ತಿಕರ ಉತ್ತರವನ್ನು ಕಂಡುಕೊಂಡರು.

ತಾವು ಕಲಿತ ವಿಷಯವನ್ನು ಜೆಫ್‌ ತಮ್ಮ ಮಡದಿ ಮತ್ತು ಮಕ್ಕಳಿಗೆ ವಿವರಿಸಿದಾಗ, ಅವರಿಗೂ ಇಷ್ಟವಾಯಿತು. ಹೀಗೆ ಆ ಕುಟುಂಬ ತಮ್ಮ ಆಧ್ಯಾತ್ಮಿಕ ಪಯಣವನ್ನು ಬೈಬಲ್‌ ಅಧ್ಯಯನದ ಮೂಲಕ ಆರಂಭಿಸಿತು. ಇದು ಅವರ ಜೀವನವನ್ನು ಉತ್ತಮಗೊಳಿಸಿದ್ದಲ್ಲದೆ, ಅವರು ತಮ್ಮ ಅಮೂಲ್ಯ ಸಮಯವನ್ನು ಸದುಪಯೋಗಿಸಿಕೊಳ್ಳುವಂತೆ ಸಹ ನೆರವಾಯಿತು. ಅವರಿಗೆ ನೋವಿನಿಂದ ಮತ್ತು ನಿರರ್ಥಕ ಜೀವನದಿಂದ ಮುಕ್ತವಾದ ಲೋಕದಲ್ಲಿ ಸದಾಕಾಲ ಜೀವಿಸುವ ನೀರಿಕ್ಷೆಯನ್ನು ಬೈಬಲ್‌ ಅಧ್ಯಯನವು ಕೊಟ್ಟಿತು.—ಪ್ರಕಟನೆ 21:3, 4.

ಜೆಫ್‌ರವರ ಅನುಭವ ಯೇಸು ಕ್ರಿಸ್ತನ ಈ ಮಾತುಗಳನ್ನು ಮನಸ್ಸಿಗೆ ತರುತ್ತದೆ: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3) ನೀವು ನಿಮ್ಮ ಆಧ್ಯಾತ್ಮಿಕತೆಗಾಗಿ ಸ್ವಲ್ಪ ಸಮಯವನ್ನು ಬದಿಗಿಡಲು ಸಿದ್ಧರಿದ್ದೀರೋ? ಹಾಗೆ ಮಾಡಿದರೆ, ಅದು ಕೇವಲ ಒಂದು ದಿನಕ್ಕಲ್ಲ ನಿಮ್ಮ ಜೀವನ ಪರ್ಯಂತಕ್ಕಾಗಿ ಪ್ರಯೋಜನ ತರುವ ಹೆಚ್ಚಿನ ವಿವೇಕವನ್ನು ಕೊಡುತ್ತದೆ. ಬೇರೆ ಯಾವುದೇ ವಿಷಯದಿಂದ ಇಂಥ ವಿವೇಕ ಸಿಗುವುದಿಲ್ಲ. ಹಾಗಾಗಿ ನಿಮ್ಮ ಸಮಯ ನಿಮ್ಮ ಕೈಯಲ್ಲಿದೆ. (g14-E 02)